ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಡಿ ರಸ್ತೆಗೆ ಭಾರಿ ಹಣ: ಗಡಿ ರಸ್ತೆ ಸಂಘಟನೆ ಅನುದಾನ ಶೇ 50ರಷ್ಟು ಹೆಚ್ಚಳ ಸಾಧ್ಯತೆ

Last Updated 9 ಜುಲೈ 2020, 19:31 IST
ಅಕ್ಷರ ಗಾತ್ರ

ನವದೆಹಲಿ: ಗಡಿ ರಸ್ತೆ ಸಂಘಟನೆಯ (ಬಿಆರ್‌ಒ) ವಾರ್ಷಿಕ ಅನುದಾನದಲ್ಲಿ ಸುಮಾರು ಶೇ 50ರಷ್ಟು ಹೆಚ್ಚಳವಾಗುವ ಸಾಧ್ಯತೆ ಇದೆ. ದೇಶದ ಉತ್ತರ ಭಾಗದ ಗಡಿಯಲ್ಲಿ ಮೂಲಸೌಕರ್ಯಕ್ಕೆ ಒತ್ತು ನೀಡುವುದು ಇದರ ಉದ್ದೇಶ. ಗಡಿಯಲ್ಲಿ ಮೂಲಸೌಕರ್ಯ ನಿರ್ಮಾಣವು ಚೀನಾದ ಅಸಹನೆಗೆ ಕಾರಣವಾಗಿದೆ. ಗಡಿಯಲ್ಲಿ ಇತ್ತೀಚೆಗೆ ನಡೆದ ಸಂಘರ್ಷಕ್ಕೆ ಇದೂ ಒಂದು ಕಾರಣ ಎನ್ನಲಾಗುತ್ತಿದೆ. ಆದರೆ, ಮೂಲಸೌಕರ್ಯ ನಿರ್ಮಾಣದಿಂದ ಹಿಂದೆ ಸರಿಯದಿರಲು ಕೇಂದ್ರ ಸರ್ಕಾರ ನಿರ್ಧರಿಸಿದೆ ಎಂದು ತಿಳಿದು ಬಂದಿದೆ.

‘ಗಡಿ ಪ್ರದೇಶದ ಮೂಲಸೌಕರ್ಯಕ್ಕೆ ಒತ್ತು ನೀಡಿರುವ ಕಾರಣ 2020–21ನೇ ಸಾಲಿನಲ್ಲಿ ಬಿಆರ್‌ಒಕ್ಕೆ ದೊರಕುವ ಅನುದಾನವು ₹11,800 ಕೋಟಿಗೆ ಏರಿಕೆಯಾಗಬಹುದು. ರಕ್ಷಣೆಯ ದೃಷ್ಟಿಯಿಂದ ಮಹತ್ವದ್ದಾದ ರಸ್ತೆ, ಸೇತುವೆ, ಸುರಂಗಗಳ ನಿರ್ಮಾಣಕ್ಕೆ ವೇಗ ದೊರೆಯಲಿದೆ’ ಎಂದು ರಕ್ಷಣಾ ಸಚಿವಾಲಯದ ಹೇಳಿಕೆಯು ತಿಳಿಸಿದೆ. 2019–20ನೇ ಸಾಲಿನಲ್ಲಿ ಬಿಆರ್‌ಒಗೆ ₹8 ಸಾವಿರ ಕೋಟಿ ಅನುದಾನ ನೀಡಲಾಗಿತ್ತು.

ಮುಂದಿನ ಆರ್ಥಿಕ ವರ್ಷದ ಬಜೆಟ್‌ ತಯಾರಿ ಪ್ರಕ್ರಿಯೆ ಇನ್ನೂ ಆರಂಭ ಆಗಿಲ್ಲ. ಆದರೆ, ಬಿಆರ್‌ಒಗೆ ಮುಂದಿನ ವರ್ಷ ಎಷ್ಟು ಅನುದಾನ ದೊರೆಯಲಿದೆ ಎಂಬುದನ್ನು ಈಗಲೇ ಬಹಿರಂಗಪಡಿಸಿರುವುದರ ಹಿಂದೆ ಒಂದು ಉದ್ದೇಶ ಇದೆ. ಗಡಿ ಮೂಲಸೌಕರ್ಯ ನಿರ್ಮಾಣವನ್ನು ಕೈಬಿಡುವ ಪ್ರಶ್ನೆಯೇ ಇಲ್ಲ ಎಂದು ಚೀನಾಕ್ಕೆ ಸಂದೇಶ ನೀಡುವುದೇ ಆ ಉದ್ದೇಶ ಎಂದು ಹೇಳಲಾಗಿದೆ.

ರಕ್ಷಣಾ ಸಚಿವಾಲಯದ ಅಧೀನಕ್ಕೆ ಬಂದ ಬಳಿಕ,ಬಿಆರ್‌ಒದ ಅನುದಾನ ಹೆಚ್ಚಳವಾಗಿತ್ತು. 2018–19ಕ್ಕೆ ಹೋಲಿಸಿದರೆ 2019–20ನೇ ಸಾಲಿನಲ್ಲಿ ಬಿಆರ್‌ಒ ಪೂರ್ಣಗೊಳಿಸಿದ ಕಾಮಗಾರಿಗಳ ಪ್ರಮಾಣ ಶೇ 30ರಷ್ಟು ಹೆಚ್ಚಳವಾಗಿದೆ.

ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌ ಅವರು ಬಿಆರ್‌ಒ ನಿರ್ಮಿಸಿದ ಆರು ಸಣ್ಣ ಸೇತುವೆಗಳನ್ನು ಗುರುವಾರ ಉದ್ಘಾಟಿಸಿದ್ದಾರೆ. ಜಮ್ಮು–ಕಾಶ್ಮೀರದಲ್ಲಿ ನಿರ್ಮಾಣವಾಗಿರುವ ಈ ಸೇತುವೆಗಳು ಸಂಘರ್ಷಪೀಡಿತವಾದ ಈ ಪ್ರದೇಶದಲ್ಲಿ ಸೇನೆಯ ಸಂಚಾರವನ್ನು ತ್ವರಿತಗೊಳಿಸುತ್ತದೆ.

‘ಇನ್ನೂ 11 ಸೇತುವೆಗಳು ನಿರ್ಮಾಣವಾಗುತ್ತಿವೆ. ಅವುಗಳಲ್ಲಿ 5 ಮುಂದಿನ ತಿಂಗಳು ಪೂರ್ಣಗೊಳ್ಳಲಿವೆ.ಉಳಿದವು ಮುಂದಿನ ಮಾರ್ಚ್‌ಗೆ ಪೂರ್ಣಗೊಳ್ಳಲಿವೆ’ ಎಂದು ಬಿಆರ್‌ಒ ಮಹಾ ನಿರ್ದೇಶಕ ಲೆ. ಜ. ಹರಪಾಲ್‌ ಸಿಂಗ್‌ ಹೇಳಿದ್ದಾರೆ.

ಚೀನಾ ಹಕ್ಕು ಅಲ್ಲಗಳೆದ ಭಾರತ

ಗಾಲ್ವನ್‌ ಕಣಿವೆಯ ಮೇಲೆ ಚೀನಾದ ಹಕ್ಕು ಪ್ರತಿಪಾದನೆಯನ್ನು ಭಾರತ ಮತ್ತೆ ತಳ್ಳಿ ಹಾಕಿದೆ. ವಾಸ್ತವ ನಿಯಂತ್ರಣ ರೇಖೆಯ ನಿಯಮಗಳನ್ನು ಗೌರವಿಸುವುದು ಎರಡೂ ದೇಶಗಳ ನಡುವಣ ಸಾಮರಸ್ಯಕ್ಕೆ ನೆಲೆಗಟ್ಟು ಎಂದು ಭಾರತ ಗುರುವಾರ ಹೇಳಿದೆ.

ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್‌ ಡೊಭಾಲ್‌ ಮತ್ತು ಚೀನಾದ ವಿದೇಶಾಂಗ ಸಚಿವರ ನಡುವಣ ಸಭೆಯ ಬಗ್ಗೆ ವಿದೇಶಾಂಗ ಸಚಿವಾಲಯವು ಹೇಳಿಕೆ ಪ್ರಕಟಿಸಿತ್ತು. ಸಂಘರ್ಷದ ಸ್ಥಳದ ಮೇಲೆ ಭಾರತಕ್ಕೆ ಸಾರ್ವಭೌಮತ್ವ ಇದೆ ಎಂದು ಡೊಭಾಲ್‌ ಅವರು ಚೀನಾಕ್ಕೆ ಹೇಳಿದ್ದಾಗಿ ಈ ಹೇಳಿಕೆಯಲ್ಲಿ ತಿಳಿಸಿಲ್ಲ ಎಂದು ಕಾಂಗ್ರೆಸ್‌ ಸಂಸದ ರಾಹುಲ್‌ ಗಾಂಧಿ ಅವರು ಎರಡು ದಿನಗಳ ಹಿಂದೆ ಆರೋಪಿಸಿದ್ದರು.

ಇಂದು ಸಭೆ: ವಾಸ್ತವ ನಿಯಂತ್ರಣ ರೇಖೆಯಲ್ಲಿ ಬಿಕ್ಕಟ್ಟು ಶಮನಗೊಳಿಸುವ ದಿಸೆಯಲ್ಲಿ ರಾಜತಾಂತ್ರಿಕ ಮಟ್ಟದ ಇನ್ನೊಂದು ಸುತ್ತಿನ ಸಭೆಯು ಶುಕ್ರವಾರ ನಡೆಯುವ ಸಾಧ್ಯತೆ ಇದೆ ಎಂದು ವಿದೇಶಾಂಗ ಸಚಿವಾಲಯ ತಿಳಿಸಿದೆ. ಎರಡೂ ದೇಶಗಳ ಸೇನೆಯ ಕೋರ್ ಕಮಾಂಡರ್‌ಗಳ ಮಟ್ಟದ ಮಾತುಕತೆಯು ಎರಡು–ಮೂರು ದಿನಗಳಲ್ಲಿ ನಡೆಯಲಿದೆ.

ಸಂಘರ್ಷ ಸ್ಥಳದಿಂದ ಸೈನಿಕರು ವಾಪಸ್‌

ಗಾಲ್ವನ್‌ ಕಣಿವೆ, ಗೋಗ್ರಾ ಠಾಣೆ ಮತ್ತು ಹಾಟ್‌ ಸ್ಪ್ರಿಂಗ್ಸ್‌ ಪ್ರದೇಶಗಳಿಂದ ಭಾರತ ಮತ್ತು ಚೀನಾದ ಸೈನಿಕರನ್ನು ಹಿಂದಕ್ಕೆ ಕರೆಸಿಕೊಳ್ಳುವ ಪ್ರಕ್ರಿಯೆ ಗುರುವಾರ ಪೂರ್ಣಗೊಂಡಿದೆ. ಈ ಮೂರು ಸ್ಥಳಗಳು ಎರಡೂ ದೇಶಗಳ ನಡುವೆ ಸಂಘರ್ಷಕ್ಕೆ ಕಾರಣವಾಗಿದ್ದವು.

ಪಾಂಗಾಂಗ್‌ ಸರೋವರದ ಉತ್ತರ ದಂಡೆಯ ಫಿಂಗರ್‌ 4 ಪ್ರದೇಶದಿಂದಲೂ ಚೀನಾ ಸೈನಿಕರನ್ನು ಸುಮಾರು ಒಂದು ಕಿ.ಮೀ.ನಷ್ಟು ಹಿಂದಕ್ಕೆ ಕರೆಸಿಕೊಳ್ಳಲಾಗಿದೆ. ಈ ಪ್ರದೇಶದಲ್ಲಿ ಕೆಲವು ಸೈನಿಕರು ಇನ್ನೂ ಇದ್ದಾರೆ. ಆದರೆ, ಹೆಚ್ಚಿನವರು ಫಿಂಗರ್‌ 5 ಪ್ರದೇಶಕ್ಕೆ ಹೋಗಿದ್ದಾರೆ. ಏಪ್ರಿಲ್‌ನಲ್ಲಿ ಬಿಕ್ಕಟ್ಟು ಆರಂಭವಾದಾಗಿನಿಂದ ಚೀನಾವು ಈ ಪ್ರದೇಶದಿಂದ ಸೈನಿಕರನ್ನು ವಾಪಸ್‌ ಕರೆಸಿಕೊಂಡಿದ್ದು ಇದೇ ಮೊದಲು. ಹಾಗಾಗಿ, ಈ ಪ್ರಕ್ರಿಯೆಯು ಮಹತ್ವದ್ದಾಗಿದೆ. ಫಿಂಗರ್‌ 4 ಪ್ರದೇಶದಿಂದ ಫಿಂಗರ್‌ 5 ಪ್ರದೇಶಕ್ಕೆ ಒಂದು ಕಿ.ಮೀ. ದೂರವಿದೆ.

ಮತ್ತೆ ಸಂಘರ್ಷದ ಸಾಧ್ಯತೆ ತಪ್ಪಿಸಲು ಈ ಮೂರೂ ಪ್ರದೇಶಗಳ 3 ಕಿ.ಮೀ. ವ್ಯಾಪ್ತಿಯಲ್ಲಿ ‘ಬಫರ್‌ ವಲಯ’ ಸೃಷ್ಟಿಸಲಾಗಿದೆ. ಪಾಂಗಾಂಗ್‌ ಸರೋವರದ ದಂಡೆಯಿಂದ ಚೀನಾ ಸೈನಿಕರನ್ನು ಹಿಂದಕ್ಕೆ ಕಳಿಸುವುದರತ್ತ ಈಗ ಗಮನ ಕೇಂದ್ರೀಕೃತವಾಗಿದೆ ಎಂದು ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT