ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಇದು ಉತ್ತರ ಪ್ರದೇಶವಲ್ಲ, ಹತ್ಯಾ ಪ್ರದೇಶ’, ಪ್ರತಿಪಕ್ಷಗಳ ಟೀಕೆ

ಗುಂಡಿನ ಚಕಮಕಿಯಲ್ಲಿ 8 ಪೊಲೀಸರು ಸಾವು ಪ್ರಕರಣ
Last Updated 3 ಜುಲೈ 2020, 7:53 IST
ಅಕ್ಷರ ಗಾತ್ರ

ಲಖನೌ: ಕಾನ್ಪುರದಲ್ಲಿ ದುಷ್ಕರ್ಮಿಗಳ ಜೊತೆಗಿನ ಗುಂಡಿನ ಚಕಮಕಿಯಲ್ಲಿ ಎಂಟು ಪೊಲೀಸರು ಮೃತ ಪಟ್ಟಿರುವ ಪ್ರಕರಣ ಸಂಬಂಧ ಕಾಂಗ್ರೆಸ್ ಮತ್ತು ಸಮಾಜವಾದಿ ಪಕ್ಷಗಳು ಉತ್ತರ ಪ್ರದೇಶ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿವೆ.

‘ಸಾಮಾನ್ಯ ಜನರಿಂದ ಪೊಲೀಸರವರೆಗೆ, ರಾಜ್ಯದಲ್ಲಿ ಯಾರೊಬ್ಬರೂ ಸುರಕ್ಷಿತವಾಗಿಲ್ಲ’ ಎಂದು ಕಾಂಗ್ರೆಸ್‍ ನಾಯಕಿ ಪ್ರಿಯಾಂಕಾ ಗಾಂಧಿ ಶುಕ್ರವಾರ ಟ್ವೀಟ್ ಮಾಡಿದ್ದಾರೆ.

ಕಾನ್ಪುರದಲ್ಲಿ ನಡೆದಿದ್ದ ಗುಂಡಿನ ಚಕಮಕಿಯಲ್ಲಿ ಡಿಎಸ್‌ಪಿ ಸೇರಿದಂತೆ ಎಂಟು ಪೊಲೀಸರು ಸತ್ತಿದ್ದು, ಇತರೆ ಏಳು ಮಂದಿ ಗಾಯಗೊಂಡಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

‘ದುಷ್ಕರ್ಮಿಗಳನ್ನು ಹಿಡಿಯಲು ಹೋಗಿದ್ದ ಎಂಟು ಪೊಲೀಸರು ಹುತಾತ್ಮರಾಗಿದ್ದಾರೆ. ಉತ್ತರ ಪ್ರದೇಶದಲ್ಲಿ ಕಾನೂನು ಪರಿಸ್ಥಿತಿ ತೀವ್ರ ಹದಗೆಟ್ಟಿದೆ. ಅಪರಾಧಿಗಳಿಗೆ ಯಾವುದೇ ಭಯ ಇಲ್ಲದಂತಾಗಿದೆ’ ಎಂದು ಪ್ರಿಯಾಂಕಾ ಹೇಳಿದ್ದಾರೆ.

ಇನ್ನೊಂದೆಡೆ ಸಮಾಜವಾದಿ ಪಕ್ಷವು, ‘ಉತ್ತರ ಪ್ರದೇಶ ಈಗ ಹತ್ಯಾ ಪ್ರದೇಶವಾಗಿದೆ. ಇದು, ರೋಗಿ ಸರ್ಕಾರ. ಜಂಗಲ್ ರಾಜ್‍ ಆಗಿದೆ’ ಎಂದು ಟ್ವೀಟ್‍ ಮಾಡಿ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದೆ.

ಮೃತರ ಕುಟುಂಬಗಳಿಗೆ ತಕ್ಷಣವೇ ತಲಾ ಒಂದು ಕೋಟಿ ರೂಪಾಯಿ ಪರಿಹಾರ ಘೋಷಿಸಬೇಕು ಎಂದು ಸಮಾಜವಾದಿ ಪಕ್ಷ ಒತ್ತಾಯಿಸಿದೆ.

ಬಿಎಸ್‍ಪಿ ನಾಯಕಿ ಮಾಯಾವತಿ, ಘಟನೆಯನ್ನು ನಾಚಿಕೆಗೇಡು ಮತ್ತು ದುರದೃಷ್ಟಕರ ಎಂದು ಬಣ್ಣಿಸಿದ್ದಾರೆ. ಕಾನೂನು ಮತ್ತು ಸುವ್ಯವಸ್ಥೆ ಕುರಿತು ಉತ್ತರ ಪ್ರದೇಶ ಸರ್ಕಾರ ಹೆಚ್ಚು ಜಾಗೃತವಾಗಿರಬೇಕು ಎಂಬುದಕ್ಕೆ ಈ ಕೃತ್ಯ ನಿದರ್ಶನ ಎಂದು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT