ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಶೇಷ ಸ್ಥಾನಮಾನ | ‘ಸುಪ್ರೀಂ‘ ಮೇಲೆ ವಿಶ್ವಾಸ: ಫಾರೂಕ್ ಅಬ್ದುಲ್ಲಾ

ನ್ಯಾಷನಲ್‌ ಕಾನ್ಫರೆನ್ಸ್‌ ಪಕ್ಷದ ಅಧ್ಯಕ್ಷ ಫಾರೂಕ್ ಅಬ್ದುಲ್ಲಾ
Last Updated 26 ಜುಲೈ 2020, 11:08 IST
ಅಕ್ಷರ ಗಾತ್ರ

ನವದೆಹಲಿ:‘ಜಮ್ಮು ಮತ್ತು ಕಾಶ್ಮೀರ ರಾಜ್ಯಕ್ಕೆ ವಿಶೇಷ ಸ್ಥಾನಮಾನ ವಾಪಸ್‌ ಸಿಗುವವರೆಗೂನಮ್ಮ ಪಕ್ಷ ಪ್ರಜಾಪ್ರಭುತ್ವದ ಚೌಕಟ್ಟಿನಲ್ಲಿ ಹೋರಾಟ ಮುಂದುವರಿಸಲಿದೆ‘ ಎಂದು ನ್ಯಾಷನಲ್ ಕಾನ್ಫರೆನ್ಸ್‌ ಪಕ್ಷದ ಅಧ್ಯಕ್ಷ ಫಾರೂಕ್ ಅಬ್ದುಲ್ಲಾ ತಿಳಿಸಿದರು.

ಕೇಂದ್ರ ಸರ್ಕಾರ ಕಾಶ್ಮೀರಕ್ಕೆ ನೀಡಿದ್ದ ವಿಶೇಷ ಸ್ಥಾನಮಾನ ರದ್ದುಗೊಳಿಸಿ ಆಗಸ್ಟ್‌ 5ಕ್ಕೆ ಒಂದು ವರ್ಷ ತುಂಬುತ್ತಿರುವ ಹಿನ್ನೆಲೆಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ‘ವಿಶೇಷ ಸ್ಥಾನ ಮಾನ ರದ್ದುಗೊಳಿಸುವ ಸಂಸತ್ತಿನ ನಿರ್ಣಯದ ವಿರುದ್ಧ ಸುಪ್ರೀಂ ಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಲಾಗಿದ್ದು, ಖಂಡಿತಾ ನಮಗೆ ನ್ಯಾಯ ಸಿಗುತ್ತದೆ‘ ಎಂದು ವಿಶ್ವಾಸ ವ್ಯಕ್ತಪಡಿಸಿದರು.

‘ಕಾಶ್ಮೀರಕ್ಕೆ ನೀಡಿದ್ದ ವಿಶೇಷ ಸ್ಥಾನಮಾನ ರದ್ದುಗೊಳಿಸುವ ಮೂಲಕ ಅಲ್ಲಿನ ಜನರ ಸರ್ಕಾರದ ಮೇಲೆ ಇಟ್ಟಿದ್ದ ನಂಬಿಕೆಗೆ ದ್ರೋಹ ಬಗೆದಂತಾಗಿದೆ‘ ಎಂದು ಆರೋಪಿಸಿದ ಅವರು, ‘ಜನರ ನಂಬಿಕೆ ಉಳಿಯ ಬೇಕೆಂದರೆ, ರದ್ದುಪಡಿಸಿರುವ ವಿಶೇಷ ಸ್ಥಾನಮಾನವನ್ನು ಕಾಶ್ಮೀರಕ್ಕೆ ವಾಪಸ್‌ ಕೊಡಬೇಕು‘ ಎಂದು ಒತ್ತಾಯಿಸಿದರು.

‘ಈ ಬದಲಾವಣೆಯ ನಂತರ, ಕಾಶ್ಮೀರದಲ್ಲಿ ಶಿಕ್ಷಣ ವ್ಯವಸ್ಥೆ ಸುಧಾರಿಸುತ್ತದೆ. ಉಗ್ರರ ಉಪಟಳ ಕಡಿಮೆಯಾಗುತ್ತದೆ. ಕಣಿವೆ ರಾಜ್ಯ ಅಭಿವೃದ್ಧಿಯಲ್ಲಿ ಪ್ರಗತಿ ಕಾಣುತ್ತದೆ ಎಂದೆಲ್ಲ ಸರ್ಕಾರ ಹೇಳಿಕೊಂಡಿತ್ತು. ಆದರೆ, ವಿಶೇಷ ಸ್ಥಾನ ರದ್ದಾದ ನಂತರ, ಉಗ್ರರ ಉಪಟಳ ಕಡಿಮೆಯಾಗುವ ಬದಲು ಹೆಚ್ಚಾಗಿದೆ. ಅಭಿವೃದ್ಧಿಯಲ್ಲಿ ಯಾವುದೇ ಪ್ರಗತಿಯಾಗಿಲ್ಲ‘ ಎಂದು ದೂರಿದ್ದಾರೆ.

ಕಾಶ್ಮೀರದ ವಿಶೇಷ ಸ್ಥಾನ ರದ್ದುಗೊಳಿಸುವ ಸಂಸತ್ತಿನ ನಿರ್ಣಯ ಮತ್ತು ಅದನ್ನ ಅನುಮೋದಿಸಿದ ರಾಷ್ಟ್ರಪತಿ ಕ್ರಮ ‘ಅಸಂವಿಧಾನಿಕ‘ವಾಗಿದ್ದು, ಇದನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್‌ನ ಐವರು ಸದಸ್ಯರನ್ನೊಳಗೊಂಡ ಪೀಠಕ್ಕೆ ನಮ್ಮ ಪಕ್ಷ ಮೇಲ್ಮನವಿ ಸಲ್ಲಿಸಿದೆ‘ ಎಂದು ಅವರು ಹೇಳಿದರು.

‘ನಾವು ಪ್ರಜಾಪ್ರಭುತ್ವದ ಅನುಸಾರವೇ ನಮ್ಮ ಹಕ್ಕುಗಳಿಗಾಗಿ ಹೋರಾಡುತ್ತೇವೆ, ಆಂದೋಲನ ನಡೆಸುತ್ತೇವೆ. ಜನರಿಗೆ ಮಾಹಿತಿ ನೀಡುತ್ತೇವೆ. ಇದಕ್ಕಾಗಿ ನಾವು ಶಸ್ತ್ರಾಸ್ತ್ರಗಳನ್ನು ಹಿಡಿಯುವುದಿಲ್ಲ. ಅಸಂವಿಧಾನಿಕ ವಿಧಾನಗಳನ್ನು ಅನುಸರಿಸುವುದಿಲ್ಲ. ನಮ್ಮದು ಪ್ರಜಾಪ್ರಭುತ್ವದ ತಳಹದಿ ಮೇಲೆ ನಿರ್ಮಾಣವಾಗಿರುವ ಪಕ್ಷ‘ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT