ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನವಜಾತ ಶಿಶುವಿಗೆ ತಾಯಿಯ ಹಾಲನ್ನು ಕಳುಹಿಸಲು ಪ್ರತಿದಿನ 1000 ಕಿ.ಮೀ ಪ್ರಯಾಣ

Last Updated 22 ಜುಲೈ 2020, 2:16 IST
ಅಕ್ಷರ ಗಾತ್ರ

ನವದೆಹಲಿ: ಸುಮಾರು ಒಂದು ತಿಂಗಳಿನ ಮಗುವಿಗೋಸ್ಕರ 33 ವರ್ಷದ ಜಿಕ್ಮೆಟ್ ವಾಂಗ್ಡಸ್ ಮತ್ತು ಅವರ ಸೋದರ ಮಾವ ದೆಹಲಿಯ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಪ್ರತಿದಿನ ಲೇಹ್‌ನಿಂದ ಬರುವ ಪೆಟ್ಟಿಗೆಯನ್ನು ಸಂಗ್ರಹಿಸಲು ಹೋಗುತ್ತಾರೆ. ಆದರೆ ಪ್ಯಾಕೇಜ್ ಸಾಮಾನ್ಯದ್ದಲ್ಲ.

ಪೆಟ್ಟಿಗೆಯಲ್ಲಿ ಏಳು ಸಣ್ಣ ಪಾತ್ರೆಗಳಿದ್ದು, ಪ್ರತಿಯೊಂದೂ ಕೂಡ ತಮ್ಮ ನವಜಾತ ಶಿಶುವಿಗೆ ವಾಂಗ್ಡಸ್ ಅವರ ಹೆಂಡತಿಯಿಂದ ಪಡೆದ ಅಮೂಲ್ಯವಾದ ಎದೆ ಹಾಲನ್ನು ಹೊತ್ತೊಯ್ಯುತ್ತದೆ.ಜೂನ್ 16 ರಂದು ಲೇಹ್‌ನ ಸೋನಮ್ ನರ್ಬೂ ಸ್ಮಾರಕ ಆಸ್ಪತ್ರೆಯಲ್ಲಿ ಜನಿಸಿದ್ದ ತನ್ನ ಮಗುವಿಗೆ 30 ವರ್ಷದ ಡೋರ್ಜೆ ಪಾಮೋ ಹಾಲುಣಿಸಲು ಪ್ರಯತ್ನಿಸಿದಾಗ ಅವನಿಗೆ ಎಳೆದುಕೊಳ್ಳಲು ಸಾಧ್ಯವಾಗಲಿಲ್ಲ ಎಂದು ತಿಳಿದುಬಂದಿದೆ.

ಲೇಹ್‌ನಲ್ಲಿರುವ ನನ್ನ ಕುಟುಂಬ ನನ್ನನ್ನು ಸಂಪರ್ಕಿಸಿದಾಗ ನಾನು ಮೈಸೂರಿನಲ್ಲಿದ್ದೆ ಮತ್ತು ವೈದ್ಯರಾದ ನನ್ನ ಗುರುಜಿಯ ಕುಟುಂಬ ಸದಸ್ಯರು ಮಗುವನ್ನು ತಕ್ಷಣ ದೆಹಲಿ ಅಥವಾ ಚಂಡೀಗಢದ ದೊಡ್ಡ ಆಸ್ಪತ್ರೆಗೆ ಕಳುಹಿಸಲು ಸೂಚಿಸಿದರು. ಆದ್ದರಿಂದ, ನನ್ನ ಹೆಂಡತಿಯ ಸಹೋದರ ಜಿಗ್ಮತ್ ಗಯಾಲ್ಪೊ ಅವರು ಲೇಹ್‌ನಿಂದ ವಿಮಾನ ತೆಗೆದುಕೊಂಡು ಜೂನ್ 18 ರಂದು ಬೆಳಿಗ್ಗೆ ನನ್ನ ಮಗುವನ್ನು ದೆಹಲಿಗೆ ಕರೆತಂದರು ಎಂದು ಮಗುವಿನ ತಂದೆ ವಾಂಗ್ಡಸ್ ತಿಳಿಸಿದ್ದಾರೆ.

ಮೈಸೂರಿನ ಶಿಕ್ಷಣ ಸಂಸ್ಥೆಯಲ್ಲಿ ವ್ಯವಸ್ಥಾಪಕರಾಗಿ ಕೆಲಸ ಮಾಡುತ್ತಿರುವ ವಾಂಗ್ಡಸ್ ಕೂಡ ವಿಮಾನದಲ್ಲಿ ಅದೇ ದಿನ ಮುಂಜಾನೆ ದೆಹಲಿಗೆ ತಲುಪಿದರು.ರಸ್ತೆಯ ಮೂಲಕ ಲೇಹ್‌ನಿಂದ ದೆಹಲಿಗೆ 1000 ಕಿ.ಮೀ ದೂರದಲ್ಲಿದೆ ಮತ್ತು ವಿಮಾನ ಹಾರಾಟವು ಒಂದು ಗಂಟೆ 15 ನಿಮಿಷಗಳನ್ನು ತೆಗೆದುಕೊಳ್ಳತ್ತದೆ.

'ನನ್ನ ಮಗು ಎರಡು ದಿನ ವಯಸ್ಸಿನವನಾಗಿದ್ದಾಗ ಒಮ್ಮೆ ಮಾತ್ರ ನಾನು ನನ್ನ ಕೈಯಲ್ಲಿ ಮಗುವನ್ನು ಹಿಡಿದುಕೊಂಡಿದ್ದೆ. ನಾನು ಕರ್ನಾಟಕದಿಂದ ಪ್ರಯಾಣಿಸಿದ್ದರಿಂದಾಗಿ ಕೋವಿಡ್-19ನ ಹೆದರಿಕೆ ತುಂಬಾ ಇತ್ತು. ಆದ್ದರಿಂದ ನಾನು ಅವನನ್ನು ಹೆಚ್ಚು ಮುಟ್ಟಲಿಲ್ಲ. ನನ್ನ ಸೋದರ ಮಾವ ಅವನನ್ನು ಕರೆದೊಯ್ದರು' ಎಂದು ಪಿಟಿಐ ಸುದ್ದಿಸಂಸ್ಥೆಗೆ ತಿಳಿಸಿದರು.

ದೆಹಲಿ ವಿಮಾನ ನಿಲ್ದಾಣಕ್ಕೆ ಬಂದಿಳಿದ ನಂತರ, ಮಗುವನ್ನು ಅವರ ತಂದೆ ಮತ್ತು ಚಿಕ್ಕಪ್ಪ ಆಂಬ್ಯುಲೆನ್ಸ್‌ನಲ್ಲಿ ಶಾಲಿಮಾರ್ ಬಾಗ್‌‌ನ ಮ್ಯಾಕ್ಸ್ ಆಸ್ಪತ್ರೆಗೆ ಕರೆದೊಯ್ದುರು. ಬಳಿಕ ಎನ್‌ಐಸಿಯು (ನವಜಾತ ತೀವ್ರ ನಿಗಾ ಘಟಕ) ದಲ್ಲಿ ದಾಖಲಿಸಲಾಗಿದೆ ಎಂದು ಆಸ್ಪತ್ರೆ ಅಧಿಕಾರಿಗಳು ತಿಳಿಸಿದ್ದಾರೆ.

ಅನ್ನನಾಳದ ಅಟ್ರೆಸಿಯಾದೊಂದಿಗೆ ಟ್ರಾಕಿಯೊಸೊಫೇಜಿಲ್ ಫಿಸ್ಟುಲಾವನ್ನು ಮಗು ಹೊಂದಿದ್ದು, ಇದು'ಪ್ರತಿ ಸಾವಿರ ಮಕ್ಕಳಲ್ಲಿ ಮೂರು ಮಕ್ಕಳಿಗೆ' ಉಂಟಾಗಬಹುದು. ಸಾಮಾನ್ಯವಾಗಿ ಈ ಸ್ಥಿತಿಯಲ್ಲಿ, ಮಗುವಿನ ಆಹಾರ ನಾಳ ಮತ್ತು ಶ್ವಾಸನಾಳವು ಒಂದಕ್ಕೊಂದು ಜೋಡಿಸಿಕೊಂಡಿರುತ್ತವೆ. ಹೀಗಾಗಿ ಮಗುವಿಗೆ ಆಹಾರವನ್ನು ನೀಡಲು ಸಾಧ್ಯವಾಗುವುದಿಲ್ಲ. ಮಗುವನ್ನು ನಮ್ಮ ಆಸ್ಪತ್ರೆಗೆ ಕರೆತಂದಾಗ ಉಸಿರಾಟದ ಸೋಂಕು ಕೂಡ ಇತ್ತು. ಆದ್ದರಿಂದ ನಾವು ಮೊದಲು ಅವನನ್ನು ಸ್ಥಿರಗೊಳಿಸಬೇಕಾಗಿತ್ತು ಎಂದು ಆಸ್ಪತ್ರೆಯ ಮಕ್ಕಳ ವಿಭಾಗದ ಪ್ರಧಾನ ಸಲಹೆಗಾರ ಡಾ.ಹರ್ಷವರ್ಧನ್ ತಿಳಿಸುತ್ತಾರೆ.

ಸುಮಾರು ಮೂರು ಗಂಟೆಗಳ ಕಾಲ ನಾವು ಶಸ್ತ್ರಚಿಕಿತ್ಸೆ ನಡೆಸಿದ್ದೇವೆ. ಕೇವಲ ನಾಲ್ಕು ದಿನಗಳ ಮಗುವಾಗಿದ್ದರಿಂದಾಗಿ ಶಸ್ತ್ರಚಿಕಿತ್ಸೆ ಸಂಕೀರ್ಣವಾಗಿತ್ತು. ಆದರೆ, ಶಸ್ತ್ರಚಿಕಿತ್ಸೆ ಯಶಸ್ವಿಯಾಗಿದೆ. ಮಗುವನ್ನು ಮೂರು ದಿನಗಳ ಕಾಲ ಎನ್‌ಐಸಿಯುನಲ್ಲಿ ಇರಿಸಲಾಯಿತು ಮತ್ತು ಮೂಗಿಗೆ ಅಳವಡಿಸಿದ್ದ ಟ್ಯೂಬ್ ಮೂಲಕ ಆಹಾರವನ್ನು ನೀಡಲಾಯಿತು. ಆಗ ತಾಯಿಯ ಹಾಲಿನ ಅವಶ್ಯಕತೆ ಬಗ್ಗೆ ತಂದೆಗೆ ಸೂಚಿಸಲಾಯಿತು.

ಲೇಹ್ ವಿಮಾನ ನಿಲ್ದಾಣದಲ್ಲಿರುವ ಅವರ ಸ್ನೇಹಿತರು, ಪ್ರತಿದಿನ ಉಚಿತವಾಗಿ ಪೆಟ್ಟಿಗೆಯನ್ನು ಸಾಗಿಸುವ ಅತ್ಯಂತ ಉದಾರವಾದ ಖಾಸಗಿ ವಿಮಾನಯಾನ ಸಂಸ್ಥೆ ಮತ್ತು 'ಸಹೃದಯಿ ಪ್ರಯಾಣಿಕರು' ಶಸ್ತ್ರಚಿಕಿತ್ಸೆಯಿಂದ ಚೇತರಿಸಿಕೊಳ್ಳುತ್ತಿರುವ ಮಗುವನ್ನು ಬಲಪಡಿಸಲು ಲೇಹ್‌ನಿಂದ ದೆಹಲಿಗೆ ತಾಯಿಯ ಹಾಲನ್ನು ಪ್ರತಿದಿನ ಪೂರೈಸಲು ಕುಟುಂಬಕ್ಕೆ ಸಹಾಯ ಮಾಡಿದರು ಎಂದು ವಾಂಗ್ಡಸ್ ಹೇಳಿದರು.

ಕೊರೊನಾ ವೈರಸ್ ಹಿನ್ನೆಲೆಯಲ್ಲಿ ನನ್ನ ಪತ್ನಿಯು ದಿನನಿತ್ಯ ದೆಹಲಿಗೆ ಓಡಾಡಲು ಸಾಧ್ಯವಿಲ್ಲವಾದ್ದರಿಂದ ನಾವು ಈ ರೀತಿಯಲ್ಲಿ ಕಾರ್ಯನಿರ್ವಹಿಸಬೇಕಾಯಿತು. ಜೂನ್ ಅಂತ್ಯದಿಂದ ಪರ್ಯಾಯ ದಿನಗಳಲ್ಲಿ ಇದು ನಮ್ಮ ದಿನಚರಿ ಮತ್ತು ನಾನು ಮತ್ತು ನನ್ನ ಸೋದರ ಮಾವ ದೆಹಲಿಯ ಟಿ 3 ಟರ್ಮಿನಲ್‌ಗೆ ಹೋಗಿ ಬಾಕ್ಸ್‌ಗಾಗಿ ಕಾಯುತ್ತೇವೆ, ಅದರಲ್ಲಿ ನಮ್ಮ ಸಂಪರ್ಕ ಸಂಖ್ಯೆಗಳಿವೆ ಎಂದು ತಿಳಿಸಿದರು.

ಎರಡು ದಿನಗಳ ಹಿಂದೆ, ನನ್ನ ಗುರೂಜಿ ನನ್ನ ಮಗುವಿಗೆ ರಿಗ್ಜಿನ್ ವಾಂಗ್‌ಚುಕ್ ಎಂದು ಹೆಸರಿಟ್ಟರು. ನಮ್ಮ ವಿಮಾನ ಟಿಕೆಟ್‌ಗಳನ್ನು ಶುಕ್ರವಾರ ಕಾಯ್ದಿರಿಸಲಾಗಿದೆ ಮತ್ತು ನಾವೆಲ್ಲರೂ ಅಂತಿಮವಾಗಿ ಮನೆಗೆ ಹೋಗುತ್ತೇವೆ ಎಂದು ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT