ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅನ್‌ಲಾಕ್-3 | ತೆರೆಯಲಿವೆ ಯೋಗ ಕೇಂದ್ರ, ಜಿಮ್; ರಾತ್ರಿ ಸಂಚಾರಕ್ಕೆ ಮುಕ್ತ

ಗೃಹ ಸಚಿವಾಲಯ
Last Updated 29 ಜುಲೈ 2020, 14:57 IST
ಅಕ್ಷರ ಗಾತ್ರ

ನವದೆಹಲಿ: ಕೋವಿಡ್‌ ನಿಯಂತ್ರಿಸಲು ದೇಶದಾದ್ಯಂತ ವಿಧಿಸಲಾಗಿರುವ ಲಾಕ್‌ಡೌನ್‌ ಸಡಿಲಿಕೆಯ ಮೂರನೇ ಹಂತದ ಮಾರ್ಗಸೂಚಿಗಳನ್ನು ಗೃಹ ಸಚಿವಾಲಯ ಬುಧವಾರ ಬಿಡುಗಡೆ ಮಾಡಿದೆ. ರಾತ್ರಿ ವೇಳೆ ಜನರ ಸಂಚಾರಕ್ಕೆ ಇದ್ದ ನಿರ್ಬಂಧ ತೆರವುಗೊಳಿಸಲಾಗಿದೆ.

2020ರ ಆಗಸ್ಟ್‌ 5ರಿಂದ ಯೋಗ ಕೇಂದ್ರಗಳು ಹಾಗೂ ಜಿಮ್‌ಗಳನ್ನು ತೆರೆಯಲು ಅವಕಾಶ ನೀಡಲಾಗಿದೆ. ರಾತ್ರಿ ವೇಳೆ ಸಂಚಾರಕ್ಕೆ ವಿಧಿಸಲಾಗಿದ್ದ ಕರ್ಫ್ಯೂ ತೆರವುಗೊಳಿಸಲಾಗಿದೆ.

ಆಗಸ್ಟ್‌ 15ರಂದು ದೇಶದ ಸ್ವಾತಂತ್ರ್ಯೋತ್ಸವ ಕಾರ್ಯಕ್ರಮಗಳನ್ನು ನಡೆಸಬಹುದಾಗಿದ್ದು, ಅಂತರ ಕಾಯ್ದುಕೊಳ್ಳುವಂತೆ ಸೂಚಿಸಲಾಗಿದೆ. ಮಾಸ್ಕ್‌ ಧರಿಸುವುದು ಸೇರಿದಂತೆ ಆರೋಗ್ಯ ಸಂಬಂಧಿಸಿದ ನಿಯಮಗಳನ್ನು ಅನುಸರಿಸಬೇಕಾಗುತ್ತದೆ ಎಂದು ಗೃಹ ವ್ಯವಹಾರಗಳ ಸಚಿವಾಲಯ ಹೇಳಿದೆ.

ಶಾಲೆ, ಕಾಲೇಜುಗಳು ಹಾಗೂ ತರಬೇತಿ ಸಂಸ್ಥೆಗಳು ಆಗಸ್ಟ್‌ 31ರ ವರೆಗೂ ಮುಚ್ಚಿರಲಿವೆ. ಸಾಮಾಜಿಕ, ರಾಜಕೀಯ, ಕ್ರೀಡೆ, ಮನರಂಜನೆ, ಶೈಕ್ಷಣಿಕ, ಸಾಂಸ್ಕೃತಿಕ, ಧಾರ್ಮಿಕ ಸೇರಿದಂತೆ ಜನರು ಸೇರುವ ಸಭೆ–ಸಮಾರಂಭಗಳಿಗೆ ಅವಕಾಶ ನೀಡಲಾಗಿಲ್ಲ.

ಮೆಟ್ರೊ ರೈಲು ಕಾರ್ಯಾಚರಣೆ, ಸಿನಿಮಾ ಮಂದಿರಗಳು, ಈಜು ಕೊಳಗಳು, ಮನರಂಜನಾ ಪಾರ್ಕ್‌ಗಳು, ರಂಗ ಮಂದಿರಗಳು, ಬಾರ್‌ ಹಾಗೂ ಆಡಿಟೋರಿಯಂಗಳಿಗೆ ನಿರ್ಬಂಧ ಮುಂದುವರಿಸಲಾಗಿದೆ.

ವಯಸ್ಸಾದವರು ಹಾಗೂ ಮಕ್ಕಳು ಮನೆಯಲ್ಲಿಯೇ ಉಳಿಯುವಂತೆ ತಿಳಿಸಲಾಗಿದೆ. ಕಂಟೈನ್‌ಮೆಂಟ್‌ ವಲಯಗಳಲ್ಲಿ ಆಗಸ್ಟ್‌ 31ರ ವರೆಗೂ ಲಾಕ್‌ಡೌನ್‌ ಮುಂದುವರಿಯಲಿದೆ ಎಂದು ಮಾರ್ಗಸೂಚಿಯಲ್ಲಿ ಪ್ರಕಟಿಸಲಾಗಿದೆ.

ಎಲ್ಲ ಸಡಿಲಿಕೆಗಳು ಕಂಟೈನ್‌ಮೆಂಟ್‌ ವಲಯಗಳಿಗೆ ಅನ್ವಯವಾಗುವುದಿಲ್ಲ. ದೇಶದಲ್ಲಿ ಒಟ್ಟು ಕೊರೊನಾ ವೈರಸ್‌ ಸೋಂಕು ಪ್ರಕರಣಗಳ ಸಂಖ್ಯೆ 15 ಲಕ್ಷ ದಾಟಿದೆ, ನಿತ್ಯ ದೃಢಪಟ್ಟ ಪ್ರಕರಣಗಳ ಸಂಖ್ಯೆ 50,000 ಸಮೀಪಿಸಿದೆ. ಹಲವು ರಾಜ್ಯಗಳಲ್ಲಿ ದಿನೇ ದಿನೇ ಹೊಸ ಪ್ರಕರಣಗಳು ದಾಖಲಾಗುತ್ತಿರುವುದರಿಂದ ಸರ್ಕಾರಗಳು ನಿರ್ಬಂಧಗಳನ್ನು ಮುಂದುವರಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT