ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾರ್ಗಿಲ್‌ ವೀರ 'ಶೇರ್‌ಶಾ': ಹುತಾತ್ಮ ವಿಕ್ರಂ ಬಾತ್ರಾ ಕುರಿತು ತಂದೆಯ ನೆನಪು

Last Updated 26 ಜುಲೈ 2020, 17:39 IST
ಅಕ್ಷರ ಗಾತ್ರ
ADVERTISEMENT
""

ಕಾರ್ಗಿಲ್‌ ಯುದ್ಧದಲ್ಲಿ ವೀರೋಚಿತ ಹೋರಾಟ ನಡೆಸಿ ಹುತಾತ್ಮರಾದ 24 ವರ್ಷ ವಯಸ್ಸಿನ ವಿಕ್ರಂ ಬಾತ್ರಾ ಧೀರತ್ವದ ಬಗ್ಗೆ ಅವರ ತಂದೆ ಮಾತನಾಡಿದ್ದಾರೆ. ಸೇನಾ ಕಾರ್ಯಾಚರಣೆಗಳಲ್ಲಿ ಸದಾ ಮುಂದಿರುತ್ತಿದ್ದ ಪರಮವೀರ ಚಕ್ರ (ಮರಣೋತ್ತರ) ವಿಕ್ರಂ ಬಾತ್ರಾ 'ಶೇರ್‌ಶಾ' ಎಂದೇ ಹೆಸರಾಗಿದ್ದರು.

ಪಾಕಿಸ್ತಾನದ ಸೇನೆ ಆಕ್ರಮಿಸಿಕೊಂಡಿದ್ದ ಕಾರ್ಗಿಲ್‌ನ ಪ್ರದೇಶಗಳನ್ನು 21 ವರ್ಷಗಳ ಹಿಂದೆ, ಜುಲೈ 26ರಂದು ಭಾರತದ ಯೋಧರು ಮರಳಿ ವಶಕ್ಕೆ ಪಡೆದರು. ಅಂದಿನಿಂದ ಈ ದಿನವನ್ನು 'ಕಾರ್ಗಿಲ್‌ ದಿನ'ವಾಗಿ ಆಚರಿಸಲಾಗುತ್ತಿದೆ.

ಕಾರ್ಗಿಲ್‌ ಯುದ್ಧದಲ್ಲಿ 5,140 ಮೀಟರ್ ಎತ್ತರದ ಶಿಖರವನ್ನು ವಶಪಡಿಸಿಕೊಳ್ಳುವಲ್ಲಿ ಜಮ್ಮು ಮತ್ತು ಕಾಶ್ಮೀರ ರೈಫಲ್ಸ್‌ನ ಕ್ಯಾಪ್ಟನ್ ವಿಕ್ರಂ ಬಾತ್ರಾ ಪ್ರಮುಖ ಪಾತ್ರವಹಿಸಿದ್ದರು. ಕಾರ್ಯಾಚರಣೆಗೂ ಮುನ್ನ ತಮ್ಮ ತಂದೆಗೆ ಕರೆ ಮಾಡಿದ್ದ ಬಾತ್ರಾ, ಬಹುಶಃ ಇದು ತಮ್ಮ ಕೊನೆಯ ಕರೆ ಎಂದಿದ್ದರು. ಪಾಕಿಸ್ತಾನ ಭದ್ರತಾ ಪಡೆಗಳು 1999ರ ಮೇನಲ್ಲಿ ಕಾರ್ಗಿಲ್‌ ಸೇನಾ ಚೌಕಾ ವಶಪಡಿಸಿಕೊಂಡಿತು. ಪಾಕಿಸ್ತಾನ ಪಡೆಗಳನ್ನು ಹಿಮ್ಮೆಟ್ಟಿಸಲು ನಡೆಸಲಾದ 'ಆಪರೇಷನ್‌ ವಿಜಯ್‌'ನಲ್ಲಿ ಕ್ಯಾಪ್ಟನ್‌ ವಿಕ್ರಂ ಬಾತ್ರಾ ಮುಖಾಮುಖಿ ಹೋರಾಟದಲ್ಲಿ ಪಾಕಿಸ್ತಾನದ ಐವರು ಯೋಧರನ್ನು ಬಲಿ ಪಡೆದರು. ಗಾಯಗೊಂಡಿದ್ದರೂ ಶತ್ರು ಪಡೆಯ ವಿರುದ್ಧ ಹೋರಾಟ ಮುಂದುವರಿಸಿದ್ದರು. ಜುಲೈ 9ರಂದು ಅವರ ಎದೆಯ ಭಾಗಕ್ಕೆ ಗುಂಡು ನುಗ್ಗಿ ಹುತಾತ್ಮರಾದರು.

ಕಾರ್ಗಿಲ್‌ ವೀರರನ್ನು ಗೌರವಿಸುವ ಹಾಗೂ ಆಪರೇಷನ್‌ ವಿಜಯ್‌ ಸಂಭ್ರಮಾಚರಣೆಯ ದಿನದಂದು ಹುತಾತ್ಮ ವಿಕ್ರಂ ಬ್ರಾತ್ರಾ ಅವರ ತಂದೆ, ಸರ್ಕಾರಿ ಶಾಲೆಯ ನಿವೃತ್ತ ಮುಖ್ಯ ಶಿಕ್ಷಕ ಗಿರಿಧರ್‌ ಲಾಲ್‌ ಬಾತ್ರಾ ತಮ್ಮ ಮಗನ ಶೌರ್ಯದ ಕುರಿತು ಡೆಕ್ಕನ್‌ ಹೆರಾಲ್ಡ್‌ನೊಂದಿಗೆ ನೆನಪು ಹಂಚಿಕೊಂಡರು.

'ವಿಕ್ರಂ ರೀತಿ ಹುತಾತ್ಮರಾದವರಿಗೆ ಈ ದಿನ ಜನರು ಗೌರವ ಸಮರ್ಪಿಸುವುದನ್ನು ಕಂಡು ಮನಸ್ಸು ತುಂಬಿ ಬಂದಿದೆ ಹಾಗೂ ಹೆಮ್ಮೆಯಾಗುತ್ತಿದೆ. ವಿಕ್ರಂ ಒಬ್ಬ ಅದ್ಬುತ, ಅಸಾಧಾರಣ ಹುಡುಗ. ತುಂಬ ಬುದ್ಧಿವಂತ ಮತ್ತು ಶ್ರದ್ಧೆಯ ವ್ಯಕ್ತಿತ್ವ ಹೊಂದಿದ್ದ. ತಂದೆಯಾಗಿ ನನಗೆ ತಿಳಿದಿದೆ, ಅವನು ಸಾಮಾನ್ಯರಿಗಿಂತ ಬಹಳ ಮುಂದಿದ್ದ. ಅವನು ಬಹಳ ಧೈರ್ಯಶಾಲಿಯಾಗಿದ್ದರಿಂದಲೇ 'ಶೇರ್‌ಶಾ' ಎಂದು ಹೆಸರು ಪಡೆದಿದ್ದ' ಎಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತಲೇ ಗಿರಿಧರ್‌ ಲಾಲ್‌ ಅವರ ಧ್ವನಿ ಗದ್ಗದಿತವಾಯಿತು.

ಕಿರಿಯ ವಯಸ್ಸಿನಲ್ಲಿ ವಿಕ್ರಂ ಬಾತ್ರಾ

'ಕಾರ್ಗಿಲ್‌ ಯುದ್ಧದಲ್ಲಿ ವಿಕ್ರಂ ತನ್ನ ಕಿರಿಯ ಯೋಧರನ್ನು ಹಿಂದಕ್ಕೆ ಮರಳುವಂತೆ ಒತ್ತಾಯಿಸಿ, ಅವರ ಸ್ಥಾನದಲ್ಲಿ ನಿಂತು ಹೋರಾಡಿದ್ದ; ಅದು ಆತನನ್ನು ಸಾಮಾನ್ಯ ವ್ಯಕ್ತಿಗಿಂತ ಬೇರೆಯಾಗಿ ಕಾಣಿಸಿತ್ತು. ಯುದ್ಧದಲ್ಲಿ ಸಾಕಷ್ಟು ಸಾವು–ನೋವುಗಳನ್ನು ಕಂಡಿದ್ದರೂ ಮುನ್ನುಗ್ಗಿ ಹೋರಾಡುವುದರಿಂದ ಯಾವತ್ತಿಗೂ ಹಿಂದೆ ಸರಿದಿರಲಿಲ್ಲ. ಆತ ಸದಾ ಮುಂಚೂಣಿಯಲ್ಲಿ ನಿಂತು ಹೋರಾಡುತ್ತಿದ್ದ' ಎಂದು ವಿಕ್ರಂ ತಂದೆ ಹೇಳಿದರು.

ಹಿಮಾಚಲ ಪ್ರದೇಶದ ಪಾಲಂಪುರದಲ್ಲಿ ಜನಿಸಿದ ವಿಕ್ರಂಗೆ ಇಬ್ಬರು ಅಕ್ಕಂದಿರು, ಅವಳಿ ಸೋದರರಿದ್ದಾರೆ. ಡಿಎವಿ ಪಬ್ಲಿಕ್‌ ಶಾಲೆ ಹಾಗೂ ಸೆಂಟ್ರಲ್‌ ಸ್ಕೂಲ್‌ನಲ್ಲಿ ವಿಕ್ರಂ ವಿದ್ಯಾಭ್ಯಾಸ ನಡೆಸಿದ್ದರು. 'ಶಾಲೆಯಲ್ಲಿಯೂ ಸಹ ಅವನು ಓದು, ಕ್ರೀಡೆಗಳು ಹಾಗೂ ಪಠ್ಯೇತರ ಚಟುವಟಿಕೆಗಳಲ್ಲಿ ಮುಂದಿದ್ದ. ಕೆವಿಎಸ್‌ ರಾಷ್ಟ್ರೀಯ ಸ್ಪರ್ಧಿಗಳಲ್ಲಿ ಟೇಬಲ್‌ ಟೆನ್ನಿಸ್‌ ವಿಭಾಗದಲ್ಲಿ ಶಾಲೆಯನ್ನು ಪ್ರತಿನಿಧಿಸಿದ್ದ. ಇದರೊಂದಿಗೆ ಕರಾಟೆಯಲ್ಲಿ ಗ್ರೀನ್‌ ಬೆಲ್ಟ್‌ ಪಡೆದಿದ್ದ. ಚಂಡೀಗಢದ ಡಿಎವಿ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿರುವಾಗಲೇ ಎನ್‌ಸಿಸಿ ಏರ್‌ವಿಂಗ್‌ ಸೇರ್ಪಡೆಯಾದ. 40 ದಿನಗಳ ಪ್ಯಾರಾ ಟ್ರೂಪಿಂಗ್‌ ತರಬೇತಿ, ಏರ್‌ವಿಂಗ್‌ ಅತ್ಯುತ್ತಮ ಎನ್‌ಸಿಸಿ ಕೆಡೆಟ್‌ ಗೌರವ ಹಾಗೂ ಸಿ ಸರ್ಟಿಫಿಕೆಟ್‌ ಪಡೆದು ಎಸ್‌ಸಿಸಿ ಘಟಕದ ಸೀನಿಯರ್‌ ಅಂಡರ್‌ ಆಫೀಸರ್‌ ಆಗಿದ್ದ' ಎಂದು ಗಿರಿಧರ್‌ ಲಾಲ್‌ ನೆನಪಿಸಿಕೊಂಡರು.

ವಿಕ್ರಂಗೆ ಸೇನೆಯಲ್ಲಿ ತೀವ್ರವಾಗಿ ಆಸಕ್ತಿ ಇತ್ತು. ಆತನ ತಾತಾ ಹಾಗೂ ಹಿರಿಕರಲ್ಲಿ ಕೆಲವರು ಸೇನೆಯಲ್ಲಿ ಸೇವೆ ಸಲ್ಲಿಸಿದ್ದರು. ಸೇನೆ ಅಧಿಕಾರಿಗಳ ಶಿಸ್ತುಬದ್ಧ ಜೀವನದಿಂದಲೂ ಬಹಳಷ್ಟು ಪ್ರಭಾವಿತನಾಗಿದ್ದ. ಆ ಎಲ್ಲವೂ ಅವನಿಗೆ ಸೇನೆ ಸೇರುವ ಆಸಕ್ತಿ ಇಮ್ಮಡಿಗೊಳಿಸಿತ್ತು. ಪದವೀಧರನಾದ ನಂತರ ಮರ್ಚೆಂಟ್‌ ನೇವಿಗೆ ಆಯ್ಕೆಯಾಗಿದ್ದ. ಆದರೆ, ತರಬೇತಿಗೆ ತೆರಳಲು ಎರಡು ದಿನಗಳು ಇದ್ದಾಗ, ತನಗೆ ಮರ್ಚೆಂಟ್‌ ನೇವಿಗೆ ಸೇರಲು ಇಚ್ಛೆ ಇಲ್ಲ ಎಂದು ತನ್ನ ತಾಯಿಗೆ ತಿಳಿಸಿದ್ದ. ಅದಕ್ಕೆ ನನ್ನ ಪತ್ನಿ, ಅದು ಹೆಚ್ಚು ಹಣ ತಂದುಕೊಡುವ ಹುದ್ದೆ ಎಂದು ತಿಳಿಸಿದ್ದಳು. ವಿಕ್ರಂ, 'ಅಮ್ಮ, ಹಣವೇ ಎಲ್ಲವೂ ಅಲ್ಲ. ನನಗೆ ಜೀವನದಲ್ಲಿ ಮತ್ತೇನೋ ಆಗಬೇಕಿದೆ' ಎಂದಿದ್ದ.

ಮರ್ಚೆಂಟ್‌ ನೇವಿಗೆ ಸೇರುವುದರಿಂದ ಹಿಂದೆ ಸರಿದು, ಪಂಜಾಬ್‌ ಯೂನಿರ್ವಸಿಟಿಯಲ್ಲಿ ಎಂಎ ಇಂಗ್ಲಿಷ್‌ಗೆ ಸೇರ್ಪಡೆಯಾದ. ಅದರೊಂದಿಗೆ ಕಂಬೈನ್ಡ್‌ ಡಿಫೆನ್ಸ್‌ ಸರ್ವೀಸಸ್‌ (ಸಿಡಿಎಸ್‌) ಪರೀಕ್ಷೆಗೆ ಸಿದ್ಧತೆ ನಡೆಸಿದ. 1997ರಲ್ಲಿ ವಿಕ್ರಂ ಇಂಡಿಯನ್‌ ಮಿಲಿಟರಿ ಅಕಾಡೆಮಿಯಿಂದ ಉತ್ತೀರ್ಣನಾಗಿ '13 ಜಮ್ಮು ಮತ್ತು ಕಾಶ್ಮೀರ ರೈಫಲ್ಸ್‌'ನಲ್ಲಿ ಲೆಫ್ಟಿನೆಂಟ್‌ ಆಗಿ ನಿಯೋಜನೆಯಾದ. ಕರ್ನಾಟಕದಲ್ಲಿ ಕಮಾಂಡೊ ತರಬೇತಿ ಪೂರೈಸಿದ ಹಾಗೂ ನಿಯೋಜನೆಗೊಂಡ ಮೊದಲ ಸ್ಥಳ ಸೊಪೋರ್‌.

1999 ಮೇನಲ್ಲಿ ಯುದ್ಧ ಪರಿಸ್ಥಿತಿ ಸೃಷ್ಟಿಯಾದಾಗ, ನಮಗೆ ಕರೆ ಮಾಡಿದ ವಿಕ್ರಂ; ಅವರ ತಂಡ ಕಾರ್ಗಿಲ್‌ನ ದ್ರಾಸ್‌ ಸೆಕ್ಟರ್‌ಗೆ ತೆರಳುತ್ತಿರುವುದಾಗಿ ತಿಳಿಸಿದ. ಯುದ್ಧ ಎಂಬ ಶಬ್ದ ಕೇಳುತ್ತಿದ್ದಂತೆ ಯಾವುದೇ ಪಾಲಕರು ಗಲಿಬಿಲಿಯಾಗುತ್ತಾರೆ, ನಾನು ಅವನಿಗೆ ತನ್ನ ಕರ್ತವ್ಯ ಮಾಡುವಂತೆ ಹೇಳಿದೆ. ದ್ರಾಸ್‌ನಿಂದ ಅವರನ್ನು ಪಾಕಿಸ್ತಾನ ಪಡೆಗಳು ವಶಪಡಿಸಿಕೊಂಡಿದ್ದ 5,140 ಮೀಟರ್‌ ಎತ್ತರದ ಪ್ರದೇಶಕ್ಕೆ ಕಳುಹಿಸಲಾಯಿತು. ಬೇಸಿಗೆಯಲ್ಲಿಯೂ ಮಂಜಿನಿಂದ ಆವೃತ್ತವಾಗಿರುವ 17,000–18,000 ಅಡಿಗಳ ಎತ್ತರ ಪ್ರದೇಶ ಅದು. ವಿಕ್ರಂ ಯಾವುದಕ್ಕೂ ಎದೆಗುಂದದೆಯೇ ಶ್ರೇಣಿಯನ್ನು ತಮ್ಮ ವಶಕ್ಕೆ ತೆಗೆದುಕೊಂಡು ಅವರ ಕಮಾಂಡರ್‌ ಕರ್ನಲ್‌ ಜೋಶಿ ಅವರಿಗೆ 'ಏಹ್‌ ದಿಲ್‌ ಮಾಂಗೇ ಮೋರ್‌' ಎಂದು ಸಂದೇಶ ಕಳುಹಿಸಿದ್ದ. ಅವನಿಗೆ ಇನ್ನಷ್ಟು ಹೋರಾಟ ಮಾಡಿ, ಮತ್ತಷ್ಟು ಶ್ರೇಣಿಗಳನ್ನು ಮರಳಿ ವಶಕ್ಕೆ ಪಡೆಯಲು ಬಯಸಿದ್ದ ಎಂದು ಗಿರಿಧರ್‌ ಲಾಲ್‌ ಹೇಳಿದರು.

ನಂತರ ಬೆಳಿಗ್ಗೆ ಬೇಸ್‌ ಕ್ಯಾಂಪ್‌ಗೆ ಮರಳಿದ್ದ ವಿಕ್ರಂ ಜ್ವರದಿಂದ ನರಳುತ್ತಿದ್ದ. ಎದೆಯ ಭಾಗದಲ್ಲಿ ನೋವು ಹಾಗೂ ಕಣ್ಣು ಕೆಂಪಗಾಗಿದ್ದವು. ಪಾಯಿಂಟ್‌ 4875 ಅಲ್ಲಿ ಎರಡು ತಂಡ ಬೀಡು ಬಿಟ್ಟಿದ್ದವು. ಆದರೆ, ಅಲ್ಲಿಗೆ ಇನ್ನಷ್ಟು ಪಡೆಯ ಅವಶ್ಯಕತೆ ಇತ್ತು ಹಾಗೂ ವಿಕ್ರಂ ಸ್ವಯಂ ಪ್ರೇರಣೆಯಿಂದ ಅಲ್ಲಿಗೆ ತೆರಳಲು ಮುಂದಾದ. ಯೋಧರಿಗೂ ವಿಕ್ರಂ ಜೊತೆಗಿರುವುದನ್ನು ಬಯಸಿದ್ದರು, ಆತ ಇದ್ದರೆ ಅವರಿಗೆ ಸುರಕ್ಷತೆಯ ಭಾವನೆ ಮೂಡುತ್ತಿತ್ತು. ಯೋಧರಿಗೆ 'ಹೆದರಿಕೆ ಬೇಡ, ನನ್ನ ಹಿಂದೆ ಬನ್ನಿ, ಅಕಸ್ಮಾತ್‌ ಏನೇ ಆದರೂ ಅದು ನನಗೆ ಆಗುತ್ತದೆ' ಎಂದು ಹೇಳುತ್ತಿದ್ದನು. ಆ ಪರ್ವತ ಶ್ರೇಣಿಯಲ್ಲಿ ಬಹುದೊಡ್ಡ ಹೋರಾಟವೇ ನಡೆದಿತ್ತು. ನಮ್ಮ ಕಡೆಯ ಬಹಳಷ್ಟು ಯೋಧರು ಸಾವಿಗೀಡಾದರು.

ಗ್ರೆನೇಡ್‌ ಸ್ಫೋಟದಿಂದಾಗಿ ಜೂನಿಯರ್‌ ಆಫೀಸರ್‌ಗಳಲ್ಲಿ ಒಬ್ಬರಾದ ನವೀನ್‌ ನಾಗಪ್ಪ ತೀವ್ರ ಗಾಯಗೊಂಡಿದ್ದರು. ಮಧ್ಯರಾತ್ರಿಯಲ್ಲಿ ನೋವಿನಿಂದ ಅವರು ಅಳುತ್ತಿದ್ದಾಗ ಸುಬೇದಾರ್‌ ರಘುನಾಥ್‌ ಆ ಸ್ಥಳಕ್ಕೆ ತೆರಳಲು ಮುಂದಾಗಿದ್ದರು. ಆದರೆ ವಿಕ್ರಂ, 'ನೀವು ಹೋಗುವುದು ಬೇಡ, ನಾನು ತೆರಳುವೆ. ನಿಮಗೆ ಕುಟುಂಬವಿದೆ' ಎಂದು ಹೇಳಿ ಮುಂದೆ ಸಾಗಿ ಹೋರಾಟ ನಡೆಸಿದ ಎಂದು ಮಗನ ಅಂತಿಮ ಕ್ಷಣಗಳನ್ನು ನೆನಪಿಸಿಕೊಂಡು ಗಿರಿಧರ್‌ ಲಾಲ್‌ ಕಣ್ಣೀರಾದರು.

ಒಬ್ಬೊಂಟಿಯಾಗಿ ವಿಕ್ರಂ ಪಾಕಿಸ್ತಾನದ ಐದು ಯೋಧರನ್ನು ಮುಗಿಸಿದ್ದ. ಅದೇ ವೇಳೆ ಅಡಗಿ ಕುಳಿತಿದ್ದ ಶತ್ರು ಪಡೆಯ ಯೋಧನೊಬ್ಬ ವಿಕ್ರಂ ಮೇಲೆ ಗುಂಡಿನ ದಾಳಿ ನಡೆಸಿದ, ಗುಂಡು ಎದೆಗೆ ನಾಟಿತು. ಅದುವೇ ಅವನ ಅಂತಿಮ ಕ್ಷಣವಾಯಿತು.

ಕಳೆದ 10 ವರ್ಷಗಳ ಹಿಂದೆ ನಾನು ಕಾರ್ಗಿಲ್‌ಗೆ ಹೋಗಿದ್ದಾಗ ಲೆಫ್ಟಿನೆಂಟ್‌ ಜನರಲ್‌ ಜೋಶಿ, ಆತ ಎಲ್ಲ ಪ್ರಶಸ್ತಿಗಳಿಗಿಂತಲೂ ಮೇಲು ಎಂದಿದ್ದರು. ಇಂದು ದೇಶಕ್ಕೆ ಅವನು ಮಾದರಿಯಾಗಿದ್ದರೆ, ಅದಕ್ಕೆ ಇದುವೇ ಕಾರಣವೆಂದು ನಾನು ಹೇಳುವೆ ಎಂದರು ಗಿರಿಧರ್‌ ಲಾಲ್‌.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT