ಭಾನುವಾರ, ಆಗಸ್ಟ್ 1, 2021
27 °C
ಶೀಘ್ರ ಅನುಮೋದನೆ ನೀಡುವಂತೆ ಅರಣ್ಯ ಇಲಾಖೆಗೆ ಸಚಿವ ಗಡ್ಕರಿ ಸೂಚನೆ

187 ಹೆದ್ದಾರಿ ಯೋಜನೆಗಳು ಬಾಕಿ; ಶೀಘ್ರ ಅನುಮೋದನೆ ನೀಡುವಂತೆ ಗಡ್ಕರಿ ಸೂಚನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ಅರಣ್ಯ ಇಲಾಖೆಯ ಅನುಮತಿ ದೊರಕದೆ ಸುಮಾರು 187 ಪ್ರಮುಖ ಹೆದ್ದಾರಿ ನಿರ್ಮಾಣ ಯೋಜನೆಗಳು ಬಾಕಿ ಉಳಿದಿದ್ದು, ಅನುಮೋದನೆ ಪ್ರಕ್ರಿಯೆಯನ್ನು ಶೀಘ್ರ ಪೂರ್ಣಗೊಳಿಸುವಂತೆ ಕೇಂದ್ರದ ಹೆದ್ದಾರಿ ಮತ್ತು ಭೂ ಸಾರಿಗೆ ಸಚಿವ ನಿತಿನ್‌ ಗಡ್ಕರಿ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ಮೂಲಸೌಕರ್ಯಗಳ ಕುರಿತು ಮಂಗಳವಾರ ನಡೆದ ಉನ್ನತ ಮಟ್ಟದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಅನೇಕ ಯೋಜನೆಗಳಿಗೆ ಅರಣ್ಯ ಇಲಾಖೆಯ ಎರಡನೇ ಹಂತದ ಅನುಮೋದನೆಗೆ ಇನ್ನೂ ಅರ್ಜಿ ಸಲ್ಲಿಸಿಲ್ಲ. ಈ ಕುರಿತ ಪ್ರಕ್ರಿಯೆಯನ್ನು ತ್ವರಿತವಾಗಿ ಆರಂಭಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ತಿಳಿಸಿದರು.

ಪರಿಸರ ಸಚಿವಾಲಯ ಹೊರಡಿಸಿರುವ ಸುತ್ತೋಲೆಗಳು ಮತ್ತು ಆದೇಶಗಳನ್ನು ಅನುಸರಿಸಲು ಮತ್ತು ಜಾರಿಗೆ ತರಲು ರಾಜ್ಯ ಅರಣ್ಯ ಅಧಿಕಾರಿಗಳಿಗೆ ನಿರ್ದೇಶನ ನೀಡುವಂತೆ ಪರಿಸರ ಸಚಿವ ಪ್ರಕಾಶ್ ಜಾವಡೇಕರ್ ಅವರಿಗೆ ಗಡ್ಕರಿ ಹೇಳಿದರು. 

ಅಪಘಾತಕ್ಕೆ ಕಾರಣವಾಗುತ್ತಿರುವ ರಾಷ್ಟ್ರೀಯ ಹೆದ್ದಾರಿಗಳಲ್ಲಿನ ಲೆವೆಲ್ ಕ್ರಾಸಿಂಗ್‌ಗಳನ್ನು ತೆಗೆದುಹಾಕುವ ಕುರಿತು ಸಭೆಯಲ್ಲಿ ಚರ್ಚಿಸಲಾಯಿತು. ಈ ಸಂಬಂಧ ಐದು ವರ್ಷಗಳ ಹಿಂದೆಯೇ ಒಪ್ಪಂದಗಳಿಗೆ ಸಹಿ ಹಾಕಲಾಗಿತ್ತು. ಆದರೆ, ಕೆಲಸ ಇನ್ನು ಪ್ರಾರಂಭವಾಗಿಲ್ಲ. ಈ ನಿಟ್ಟಿನಲ್ಲಿ ಕಾರ್ಯಕ್ಷಮತೆಯನ್ನು ಸುಧಾರಿಸುವುದರ ಜೊತೆಗೆ ಸೇತುಭಾರತಂ ಕಾರ್ಯಕ್ರಮದಡಿ ಮಾಸಿಕವಾಗಿ ಯೋಜನೆಗಳನ್ನು ಮೇಲ್ವಿಚಾರಣೆ ನಡೆಸಲು ಸಭೆಯಲ್ಲಿ ಒಪ್ಪಿಗೆ ಸೂಚಿಸಲಾಯಿತು.

30 ರಸ್ತೆ ಯೋಜನೆಗಳಿಗೆ ರೈಲ್ವೆ ಇಲಾಖೆಯ ಅನುಮತಿ ಅಗತ್ಯವಿದ್ದು, ಅದನ್ನು ಇನ್ನೆರಡು ದಿನಗಳಲ್ಲಿ ಬಗೆಹರಿಸುವುದಾಗಿ ರೈಲ್ವೆ ಸಚಿವರು ಭರವಸೆ ನೀಡಿದರು.

ರೈಲ್ವೆ ಸಚಿವ ಪೀಯೂಷ್‌ ಗೋಯಲ್, ಕೇಂದ್ರ ಪರಿಸರ ಸಚಿವ ಪ್ರಕಾಶ್‌ ಜಾವಡೇಕರ್, ಕೇಂದ್ರ ಸಚಿವ ಜನರಲ್ ವಿ.ಕೆ.ಸಿಂಗ್ ಅವರು ಸಭೆಯಲ್ಲಿ ಭಾಗವಹಿಸಿದ್ದರು. 

 

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು