ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜಸ್ಥಾನ ಬಂಡಾಯ ಶಾಸಕರಿಗೆ ಅನರ್ಹತೆಯ ನೋಟಿಸ್‌: 24ಕ್ಕೆ ಹೈಕೋರ್ಟ್‌ ತೀರ್ಪು

Last Updated 21 ಜುಲೈ 2020, 12:08 IST
ಅಕ್ಷರ ಗಾತ್ರ

ಜೈಪುರ: ರಾಜಸ್ಥಾನದ ಕಾಂಗ್ರೆಸ್‌ ಬಂಡಾಯ ಶಾಸಕರ ಅನರ್ಹತೆಯ ನೋಟಿಸ್‌ಗೆ ಸಂಬಂಧಿಸಿದ ತೀರ್ಪನ್ನು ಹೈಕೋರ್ಟ್ ಶುಕ್ರವಾರಕ್ಕೆ ಕಾಯ್ದಿರಿಸಿದೆ.

ತೀರ್ಪು ನೀಡುವವರೆಗೂ ಬಂಡಾಯ ಶಾಸಕರ ವಿರುದ್ಧ ಯಾವುದೇ ಕ್ರಮ ಕೈಗೊಳ್ಳದಂತೆ ಸ್ಪೀಕರ್‌ಗೆ ಸೂಚಿಸಲಾಗಿದೆ.

ಸಚಿನ್ ಪೈಲಟ್ ಸೇರಿದಂತೆ ಇತರ 18 ಬಂಡಾಯ ಶಾಸಕರಿಗೆ ಸ್ಪೀಕರ್‌ ಅನರ್ಹತೆಯ ನೋಟಿಸ್‌ ನೀಡಿದ್ದರು. ಇದನ್ನು ಪ್ರಶ್ನಿಸಿದ್ದ ಬಂಡಾಯ ಶಾಸಕರು ಹೈಕೋರ್ಟ್‌ ಮೊರೆ ಹೋಗಿದ್ದರು.

ಕೋವಿಡ್‌ನಂತಹ ಸಾಂಕ್ರಾಮಿಕದ ಮಧ್ಯೆ ನೋಟಿಸ್‌ಗೆ ಪ್ರತಿಕ್ರಿಯಿಸಲು ಶಾಸಕರಿಗೆ ಕೇವಲ ಮೂರು ದಿನಗಳ ಸಮಯ ನೀಡಲಾಗಿದೆ. ಇದನ್ನು ಗಮನಿಸಿದಾಗ, ಸ್ಪೀಕರ್ ಅವರು ಒತ್ತಡಕ್ಕೆ ಒಳಗಾಗಿ ಆತುರದ ನಿರ್ಧಾರ ತೆಗೆದುಕೊಂಡಿರುವುದು ಕಂಡುಬರುತ್ತಿದೆ ಎಂದು ಬಂಡಾಯ ಶಾಸಕರ ಪರ ವಕೀಲ ಮುಕುಲ್ ರೋಹಟಗಿ ವಾದ ಮಂಡಿಸಿದರು.

ಬಂಡಾಯ ಶಾಸಕರು ಸ್ವೀಕರ್‌ ನೀಡಿರುವ ನೋಟಿಸ್‌ ಅನ್ನು ನ್ಯಾಯಾಲಯದಲ್ಲಿ ಪ್ರಶ್ನಿಸಲು ಅವಕಾಶವೇ ಇಲ್ಲ. ಸ್ಪೀಕರ್‌ ನೋಟಿಸ್‌ ನೀಡಿದ್ದಾರೆಯೇ ಹೊರತು ಯಾವುದೇ ಕ್ರಮ ಕೈಗೊಂಡಿಲ್ಲ. ಒಂದು ವೇಳೆ ಸ್ಪೀಕರ್‌ ಕ್ರಮ ಕೈಗೊಂಡಿದ್ದರೆ ಅದನ್ನು ಪ್ರಶ್ನಿಸಲು ಮಾತ್ರ ಅವಕಾಶವಿದೆ ಎಂದು ಸ್ಪೀಕರ್ ಪರ ವಕೀಲ ಅಭಿಷೇಕ್ ಮನು ಸಿಂಗ್ವಿ ಸೋಮವಾರ ವಾದಿಸಿದ್ದರು.

ಬಂಡಾಯ ಶಾಸಕ ಸಚಿನ್ ಪೈಲಟ್ ಅವರನ್ನು ರಾಜಸ್ಥಾನದ ಉಪಮುಖ್ಯಮಂತ್ರಿ ಮತ್ತು ರಾಜ್ಯ ಕಾಂಗ್ರೆಸ್ ಘಟಕದ ಅಧ್ಯಕ್ಷ ಸ್ಥಾನದಿಂದ ಕಳೆದ ವಾರ ವಜಾ ಮಾಡಲಾಗಿತ್ತು. ಸಚಿನ್‌ ಪೈಲಟ್‌ರೊಂದಿಗೆ ಕಾಂಗ್ರೆಸ್‌ನ 18 ಶಾಸಕರು ಗುರುತಿಸಿಕೊಂಡಿದ್ದಾರೆ.

ಐಷಾರಾಮಿ ರೆಸಾರ್ಟ್‌ವೊಂದರಲ್ಲಿ ರಾಜಸ್ಥಾನ ಕಾಂಗ್ರೆಸ್ ಮಂಗಳವಾರ ಮತ್ತೊಂದು ಶಾಸಕಾಂಗ ಪಕ್ಷದ ಸಭೆ ನಡೆಸಿದೆ. ಶಾಸಕರನ್ನು ಉದ್ದೇಶಿಸಿ ಮಾತನಾಡಿರುವ ಮುಖ್ಯಮಂತ್ರಿ ಅಶೋಕ್‌ ಗೆಹ್ಲೋಟ್, 'ವಿಧಾನಸಭೆ ವಿಸರ್ಜಿಸಿ ಚುನಾವಣೆ ನಡೆಸಬೇಕೆಂದು ಕಾಂಗ್ರೆಸ್ ಅಥವಾ ಬಿಜೆಪಿ ಪಕ್ಷಗಳು ಬಯಸುವುದಿಲ್ಲ. ನಾವು ಹೋರಾಡುತ್ತಿರುವ ವಿಧಾನವನ್ನು ಇಡೀ ದೇಶ ನೋಡುತ್ತಿದೆ. ನಿಮ್ಮ ಬಗೆಗಿನ ಗೌರವವು ಮತ್ತಷ್ಟು ಹೆಚ್ಚಾಗಿದೆ. ಇದು ಸಾಮಾನ್ಯ ಸಂಗತಿಯಲ್ಲ. ನಿಮ್ಮೆಲ್ಲರ ಬಳಿ ಫೋನ್‌ಗಳಿವೆ. ಯಾರ ಮೇಲೂ ಯಾವುದೇ ಒತ್ತಡವಿಲ್ಲ' ಎಂದು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT