ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಯೋತ್ಪಾದಕರ ತವರು ಪಾಕಿಸ್ತಾನ: ವಿಶ್ವಸಂಸ್ಥೆಯ ಭಾರತ ಪ್ರತಿನಿಧಿ

Last Updated 4 ಆಗಸ್ಟ್ 2020, 5:26 IST
ಅಕ್ಷರ ಗಾತ್ರ

ನವದೆಹಲಿ: ಪಾಕಿಸ್ತಾನವು ಭಯೋತ್ಪಾದನೆಯ ಕೇಂದ್ರ ಎಂದು ವಿಶ್ವಸಂಸ್ಥೆಯಲ್ಲಿ ಭಾರತದ ಕಾಯಂ ಪ್ರತಿನಿಧಿ ಟಿ.ಎಸ್. ತಿರುಮೂರ್ತಿ ಹೇಳಿದ್ದಾರೆ.

ಪಾಕಿಸ್ತಾನ ಅತಿ ಹೆಚ್ಚು ಭಯೋತ್ಪಾದಕ ಸಂಘಟನೆಗಳ ತವರು. ಉಗ್ರ ಸಂಘಟನೆಗಳನ್ನು ಪೋಷಿಸುವ ರಾಷ್ಟ್ರ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಎಎನ್‌ಐ ಸುದ್ದಿಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಅವರು, ಜಮಾತ್ ಉದ್ ದಾವಾ, ಲಷ್ಕರ್ ಎ ತಯ್ಬಾ, ಜೈಷ್ ಎ ಮೊಹಮ್ಮದ್, ಹಿಜ್ಬುಲ್ ಮುಜಾಹಿದೀನ್‌ ಉಗ್ರ ಸಂಘಟನೆಗಳು ಪಾಕಿಸ್ತಾನದಲ್ಲಿ ಸಕ್ರಿಯವಾಗಿವೆ. ಜಾಗತಿಕ ಉಗ್ರರ ಪಟ್ಟಿಯಲ್ಲಿ ಗುರುತಿಸಿಕೊಂಡಿರುವ ಅನೇಕ ಭಯೋತ್ಪಾದಕರನ್ನು ಪಾಕಿಸ್ತಾನ ಪೋಷಿಸುತ್ತಿದೆ. ಬೇರೆ ದೇಶಗಳಲ್ಲಿನ ಉಗ್ರ ದಾಳಿಗಳಲ್ಲಿ ಪಾಕಿಸ್ತಾನದ ಕೈವಾಡ ಇರುವುದು ವಿಶ್ವಸಂಸ್ಥೆಯ 'ಅನಲಿಟಿಕಲ್ ಸಪೋರ್ಟ್ ಆ್ಯಂಡ್ ಸ್ಯಾಂಕ್ಷನ್ಸ್ ಮಾನಿಟರಿಂಗ್ ಟೀಮ್'ನ 26ನೇ ವರದಿಯಲ್ಲಿಯೂ ಉಲ್ಲೇಖವಾಗಿದೆ ಎಂದು ಅವರು ಹೇಳಿದ್ದಾರೆ.

ಅಲ್ ಖೈದಾ, ಐಎಸ್‌ಐಎಸ್‌ನಂತಹ ಉಗ್ರ ಸಂಘಟನೆಗಳಿಗೆ ಪಾಕಿಸ್ತಾನ ಹಣಕಾಸು ನೆರವು ನೀಡುತ್ತಿರುವುದಕ್ಕೆ ನೇರ ನಿದರ್ಶನಗಳನ್ನೂ ವರದಿಯಲ್ಲಿ ಉಲ್ಲೇಖಿಸಲಾಗಿದೆ ಎಂದೂ ಅವರು ತಿಳಿಸಿದ್ದಾರೆ.

ಭಯೋತ್ಪಾದಕ ಸಂಘಟನೆಗಳ ನಾಯಕರು ಪಾಕಿಸ್ತಾನದವರು ಎಂಬುದನ್ನು ವರದಿಯಲ್ಲಿ ಸ್ಪಷ್ಟವಾಗಿ ಉಲ್ಲೆಖಿಸಲಾಗಿದೆ. ಉದಾಹರಣೆಗೆ; ಅಲ್ ಖೈದಾ ನಾಯಕ ಪಾಕಿಸ್ತಾನದವ. ಐಎಸ್‌ಐಎಲ್ ಹಾಲಿ ಮತ್ತು ಮಾಜಿ ಮುಖ್ಯಸ್ಥ ಪಾಕಿಸ್ತಾನದವರು ಎಂಬುದು ವರದಿಯಲ್ಲಿದೆ ಎಂದು ಅವರು ಹೇಳಿದ್ದಾರೆ.

ಲಷ್ಕರ್ ಎ ತಯ್ಬಾ ಹಾಗೂ ಜೈಷ್ ಎ ಮೊಹಮ್ಮದ್ ಉಗ್ರರು ಅಫ್ಗಾನಿಸ್ತಾನದಲ್ಲಿ ಇರುವ ಮತ್ತು ಉಗ್ರ ಕೃತ್ಯಗಳನ್ನು ನಡೆಸುತ್ತಿರುವ ಬಗ್ಗೆ ಮೇ ತಿಂಗಳಲ್ಲಿ ಬಿಡುಗಡೆ ಮಾಡಲಾಗಿರುವ ವರದಿಯಲ್ಲಿಯೂ ಉಲ್ಲೇಖವಿದೆ ಎಂದೂ ಅವರು ತಿಳಿಸಿದ್ದಾರೆ.

ಪಾಕಿಸ್ತಾನದಲ್ಲಿ ಸದ್ಯ ಸುಮಾರು 40 ಸಾವಿರ ಉಗ್ರರು ಇರುವುದಾಗಿ ಅಲ್ಲಿನ ಪ್ರಧಾನಿ ಇಮ್ರಾನ್ ಖಾನ್ ಅವರೇ ಇತ್ತೀಚೆಗೆ ಒಪ್ಪಿಕೊಂಡಿದ್ದಾರೆ. ಪಾಕ್ ಉಗ್ರರು ನೆರೆ ರಾಷ್ಟ್ರಗಳಲ್ಲಿ ದಾಳಿ ನಡೆಸುತ್ತಿರುವುದನ್ನೂ ಅವರು ಒಪ್ಪಿಕೊಂಡಿದ್ದಾರೆ ಎಂದೂ ತಿರುಮೂರ್ತಿ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT