ಸೋಮವಾರ, ಆಗಸ್ಟ್ 2, 2021
24 °C

'ಇಂಡಿಯಾ ಗ್ಲೋಬಲ್ ವೀಕ್ 2020' ಕಾರ್ಯಕ್ರಮದಲ್ಲಿ ಇಂದು ಮಧ್ಯಾಹ್ನ ಮೋದಿ ಭಾಷಣ

ಏಜೆನ್ಸಿಸ್ Updated:

ಅಕ್ಷರ ಗಾತ್ರ : | |

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಮಧ್ಯಾಹ್ನ 1.30 ಕ್ಕೆ 'ಇಂಡಿಯಾ ಗ್ಲೋಬಲ್ ವೀಕ್ 2020'ರ ಉದ್ಘಾಟನಾ ಭಾಷಣ ಮಾಡಲಿದ್ದಾರೆ.

ಕೊರೊನಾ ಸೋಂಕಿನಿಂದ ಕಂಗೆಟ್ಟಿರುವ ವಿಶ್ವದ ಹಲವು ರಾಷ್ಟ್ರಗಳಲ್ಲಿ ಆರ್ಥಿಕ ಪುನಶ್ಚೇತನಕ್ಕೆ ಈ ಕಾರ್ಯಕ್ರಮ ಉಪಯೋಗವಾಗಲಿದೆ. ಈ ಕಾರ್ಯಕ್ರಮದಲ್ಲಿ 30ಕ್ಕೂ ಹೆಚ್ಚು ರಾಷ್ಟ್ರಗಳ 5,000 ಪ್ರತಿನಿಧಿಗಳು ಭಾಗವಹಿಸಲಿದ್ದಾರೆ. ಭಾರತದ ಅತಿದೊಡ್ಡ ಅಂತರರಾಷ್ಟ್ರೀಯ ಕಾರ್ಯಕ್ರಮಗಳಲ್ಲಿ ಇದೂ ಒಂದು. ಮೂರು ದಿನಗಳ ಈ ಕಾರ್ಯಕ್ರಮದಲ್ಲಿ 'ಬಿ ದಿ ರಿವೈವಲ್: ಇಂಡಿಯಾ ಅಂಡ್ ಎ ಬೆಟರ್ ನ್ಯೂ ವರ್ಲ್ಡ್' ಎಂಬ ವಿಷಯದ ಕುರಿತು ಹಲವು ಪ್ರಮುಖರು ಭಾಷಣ ಮಾಡಲಿದ್ದಾರೆ. ಇದು ಕೊರೊನಾ ಸೋಂಕಿನಿಂದ ಅಸ್ತವ್ಯಸ್ತಗೊಂಡಿರುವ ಜಾಗತಿಕ ಆರ್ಥಿಕತೆಯು ಪುನಶ್ಚೇತನಗೊಳ್ಳಲು ನೆರವಾಗಬಹುದು ಎಂದು ನಿರೀಕ್ಷಿಸಲಾಗಿದೆ.

ಸುಮಾರು 250 ಭಾಷಣಕಾರರು ಭೌಗೋಳಿಕ ರಾಜಕೀಯ, ವ್ಯವಹಾರ, ತಂತ್ರಜ್ಞಾನ, ಬ್ಯಾಂಕಿಂಗ್ ಮತ್ತು ಹಣಕಾಸು,  ಔಷಧ, ರಕ್ಷಣಾ ಮತ್ತು ಭದ್ರತೆ,  ಕಲೆ ಮತ್ತು ಸಂಸ್ಕೃತಿ ವಿಷಯಗಳ ಕುರಿತು ಕಾರ್ಯಕ್ರಮದಲ್ಲಿ ಮಾತನಾಡಲಿದ್ದಾರೆ.

ಈ ಸಂಬಂಧ ಪ್ರಧಾನಿ ನರೇಂದ್ರಮೋದಿ ಟ್ವೀಟ್ ಮಾಡಿದ್ದು, ಮಧ್ಯಾಹ್ನ 1.30ಕ್ಕೆ 'ಇಂಡಿಯಾ ಇನ್‌ಕಾರ್ಪ್' ಆಯೋಜಿಸಿರುವ ಇಂಡಿಯಾ ಗ್ಲೋಬಲ್ ವೀಕ್ ಉದ್ದೇಶಿಸಿ ಮಾತನಾಡಲಿದ್ದೇವೆ. ಈ ವೇದಿಕೆಯು ಪ್ರಪಂಚದಲ್ಲಿ ಮುಂಚೂಣಿಯಲ್ಲಿರುವ ಉದ್ಯಮಿಗಳನ್ನು ಪರಸ್ಪರ ಒಂದುಗೂಡಿಸಲಿದೆ. ಅಲ್ಲದೆ, 'ಕೋವಿಡ್ 19' ನಂತರದ ವಿಶ್ವದ ಸ್ಥಿತಿಗತಿಯ ಕುರಿತು ಬೆಳಕು ಚಲ್ಲಲಿದೆ. ಅಲ್ಲದೆ ಭಾರತದಲ್ಲಿನ ಅವಕಾಶಗಳಿಗೆ ಸಂಬಂಧಿಸಿದ ಅಂಶಗಳು ಮತ್ತು ಜಾಗತಿಕ ಆರ್ಥಿಕ ಪುನರುಜ್ಜೀವನದ ಕುರಿತು ಪ್ರಮುಖರು ಚರ್ಚಿಸಲಿದ್ದಾರೆ. ಈ ಕಾರ್ಯಕ್ರಮದಿಂದ ಭಾರತದಲ್ಲಿ ಹೂಡಿಕೆಗೆ ಅವಕಾಶಗಳನ್ನು ಕಲ್ಪಿಸುವ ಸಾಧ್ಯತೆ ಇದೆ ಎನ್ನಲಾಗಿದೆ.

ಕಾರ್ಯಕ್ರಮದಲ್ಲಿ ವಿದೇಶಾಂಗ ಸಚಿವ ಎಸ್ ಜೈಶಂಕರ್, ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಪಿಯೂಷ್ ಗೋಯಲ್. ಅಲ್ಲದೆ, ಜಮ್ಮು ಮತ್ತು ಕಾಶ್ಮೀರದ ಲೆಫ್ಟಿನೆಂಟ್ ಗವರ್ನರ್ ಜಿ.ಸಿ.ಮರ್ಮು, ಇಶಾ ಫೌಂಡೇಶನ್ ಸ್ಥಾಪಕ ಸದ್ಗುರು ಜಗ್ಗಿ ವಾಸುದೇವ್, ಶ್ರೀ ಶ್ರೀ ರವಿಶಂಕರ್ ಅವರು ಸಭೆಯನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಬ್ರಿಟನ್ ವಿದೇಶಾಂಗ ಕಾರ್ಯದರ್ಶಿ ಡೊಮಿನಿಕ್ ರಾಬ್, ಗೃಹ ಕಾರ್ಯದರ್ಶಿ ಪ್ರೀತಿ ಪಟೇಲ್, ಭಾರತದ ಅಮೆರಿಕಾ ರಾಯಭಾರಿ ಕೆನ್ ಜಸ್ಟರ್ ಇತರರು ಭಾಗವಹಿಸಲಿದ್ದಾರೆ.

ಅಲ್ಲದೆ, ಸಿತಾರ್ ಮಾಂತ್ರಿಕ ಪಂಡಿತ್ ರವಿಶಂಕರ್ ಅವರ 100ನೇ ವರ್ಷದ ಹುಟ್ಟುಹಬ್ಬದ ಪ್ರಯುಕ್ತ ಅವರ ಮೂವರು ಶಿಷ್ಯರು ಸಂಗೀತ ಕಾರ್ಯಕ್ರಮ ನಡೆಸಿಕೊಡಲಿದ್ದಾರೆ. ಇದಲ್ಲದೆ, ಮಧು ನಟರಾಜ್ ಅವರು 'ಆತ್ಮನಿರ್ಭರ ಭಾರತ್' ಕುರಿತು ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಡಲಿದ್ದಾರೆ.

ಕೊರೊನಾ ಸೋಂಕು ಹಾಗೂ ಇದನ್ನು ತಡೆಗಟ್ಟಲು ಜಾರಿಗೆ ತಂದ ಲಾಕ್‌‌ಡೌನ್‌‌ನಿಂದ ವಿಶ್ವದಾದ್ಯಂತ ಆರ್ಥಿಕತೆಯ ಮೇಲೆ ದುಷ್ಪರಿಣಾಮ ಬೀರಿದೆ. ಜಾಗತಿಕ ಆರ್ಥಿಕತೆಯು ಮುಂದಿನ ಸಾಲಿಗೆ ಶೇಕಡಾ 5.2 ರಷ್ಟಕ್ಕೆ ಕುಸಿಯಲಿದೆ ಎಂದು ಅಂದಾಜಿಸಿದೆ. ಇದು 1930ರಲ್ಲಿ ಸಂಭವಿಸಿದ ಮಹಾ ಆರ್ಥಿಕ ಕುಸಿತದ ನಂತರದ ಕುಸಿತವಾಗಿದೆ ಎಂದು ವಿಶ್ವ ಬ್ಯಾಂಕ್ ಹೇಳಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು