ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಮ ಮಂದಿರ ನಿರ್ಮಾಣಕ್ಕೆ ಆಗಸ್ಟ್‌ 5ರಂದು ಪ್ರಧಾನಿ ಮೋದಿ ಶಿಲಾನ್ಯಾಸ

Last Updated 21 ಜುಲೈ 2020, 17:21 IST
ಅಕ್ಷರ ಗಾತ್ರ

ನವದೆಹಲಿ: ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣ ಕಾರ್ಯಕ್ಕೆ ಆಗಸ್ಟ್ 5ರಂದು ಪ್ರಧಾನಿ ನರೇಂದ್ರ ಮೋದಿ ಶಿಲಾನ್ಯಾಸ ನೆರವೇರಿಸುವರು.

‘ಮಧ್ಯಾಹ್ನ 12.15ಕ್ಕೆ ಭೂಮಿಪೂಜೆ ನೆರವೇರಿಸಲಾಗುವುದು. ಇದೇ ಸಮಯದಲ್ಲಿ ಶ್ರೀರಾಮ ಜನಿಸಿದ್ದು. ಹೀಗಾಗಿ ಮಂದಿರ ನಿರ್ಮಾಣದ ವಿಧಿಗಳಿಗೆ ಈ ಸಮಯದಲ್ಲಿಯೇ ಚಾಲನೆ ನೀಡಲು ನಿರ್ಧರಿಸಲಾಗಿದೆ’ ಎಂದು ಶ್ರೀರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್‌ ಮಂಗಳವಾರ ತಿಳಿಸಿದೆ.

ವೇದ ಮಂತ್ರ ಘೋಷಗಳ ನಡುವೆ, ಬೆಳ್ಳಿಯಿಂದ ತಯಾರಿಸಿರುವ ಇಟ್ಟಿಗೆಯನ್ನು ಅಡಿಗಲ್ಲಾಗಿ ಇಡುವ ಮೂಲಕ ಪ್ರಧಾನಿ ಮೋದಿ ನಿರ್ಮಾಣ ಕಾರ್ಯಕ್ಕೆ ಚಾಲನೆ ನೀಡುವರು. 40 ಕೆ.ಜಿ ಬೆಳ್ಳಿಯಿಂದ ಈ ಇಟ್ಟಿಗೆ ತಯಾರಿಸಲಾಗಿದೆ.

ಈ ಮೊದಲು ಸಿದ್ಧಪಡಿಸಿದ್ದ ವಿನ್ಯಾಸದಲ್ಲಿ ಮಂದಿರದ ಎತ್ತರ 121 ಅಡಿಗಳು. ಪರಿಷ್ಕೃತ ವಿನ್ಯಾಸದಲ್ಲಿ ಈ ಎತ್ತರವನ್ನು 161 ಅಡಿಗಳಿಗೆ ಹೆಚ್ಚಿಸಲಾಗಿದೆ. ಅದರಂತೆ, ಮೂರರ ಬದಲಾಗಿ ಐದು ಗೋಪುರಗಳನ್ನು ಹೊಂದಿರಲಿದೆ.

ವಿವಾದ: ರಾಮ ಮಂದಿರ ನಿರ್ಮಾಣ ಕಾರ್ಯಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಶಿಲಾನ್ಯಾಸ ನೆರವೇರಿಸುವರು ಎಂಬುದು ಸಹ ವಿವಾದಕ್ಕೆ ಕಾರಣವಾಗಿದ್ದು, ರಾಜಕೀಯ ನಾಯಕರಿಂದ ಆರೋಪ–ಪ್ರತ್ಯಾರೋಪ ಕೇಳಿಬಂದಿವೆ.

‘ರಾಮ ಮಂದಿರವನ್ನು ನಿರ್ಮಿಸಿದ ಕೂಡಲೇ ಕೋವಿಡ್‌–19 ಪಿಡುಗು ನಿರ್ಮೂಲನೆಯಾಗುವುದಾಗಿ ಕೆಲವರು ಭಾವಿಸಿದಂತಿದೆ’ ಎನ್ನುವ ಮೂಲಕ ಎನ್‌ಸಿಪಿ ವರಿಷ್ಠ ಶರದ್‌ಪವಾರ್‌, ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಪರೋಕ್ಷವಾಗಿ ಟೀಕಿಸಿದ್ದರು.

ಆದರೆ, ಎನ್‌ಸಿಪಿ– ಕಾಂಗ್ರೆಸ್–ಶಿವಸೇನಾ ಮೈತ್ರಿಕೂಟ ಸರ್ಕಾರದ ಮುಖ್ಯಮಂತ್ರಿಯಾಗಿರುವ ಉದ್ಧವ್‌ ಠಾಕ್ರೆ ಆಗಸ್ಟ್‌ 5ರಂದು ನಡೆಯುವ ಶಿಲಾನ್ಯಾಸ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ನಿರೀಕ್ಷೆ ಇದೆ.

ಕೇಂದ್ರ ಸರ್ಕಾರದ ವಿರುದ್ಧ ಕಾಂಗ್ರೆಸ್‌ನ ಹಿರಿಯ ನಾಯಕ ದಿಗ್ವಿಜಯ ಸಿಂಗ್‌ ಕೂಡ ವಾಗ್ದಾಳಿ ನಡೆಸಿದ್ದಾರೆ. ‘ಶ್ರೀರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್‌ನಲ್ಲಿ ಶಂಕರಾಚಾರ್ಯರಿಗೆ ಪ್ರಾತಿನಿಧ್ಯ ನೀಡಿಲ್ಲ. ವಿಶ್ವಹಿಂದೂ ಪರಿಷತ್‌ ಹಾಗೂ ಬಿಜೆಪಿಯವರನ್ನೇ ಟ್ರಸ್ಟ್‌ನ ಸದಸ್ಯರನ್ನಾಗಿ ಮಾಡಲಾಗಿದೆ’ ಎಂದು ಕಿಡಿಕಾರಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT