ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುಂಬೈ, ಕೊಂಕಣ ಕರಾವಳಿಯಲ್ಲಿ ಮಳೆ: 7 ಮಂದಿ ಸಾವು

Last Updated 4 ಆಗಸ್ಟ್ 2020, 13:58 IST
ಅಕ್ಷರ ಗಾತ್ರ

ಮುಂಬೈ: ಮುಂಬೈ ಮಹಾನಗರ ಪ್ರದೇಶ ಮತ್ತು ಮಹಾರಾಷ್ಟ್ರದ ಕೊಂಕಣ ಕರಾವಳಿ ಪ್ರದೇಶಗಳಲ್ಲಿ ಮಂಗಳವಾರ ಭಾರೀ ಮಳೆಯಾಗಿದ್ದು 7 ಮಂದಿ ಸಾವಿಗೀಡಾಗಿದ್ದಾರೆ. ಮುಂಬೈ ನಗರದಲ್ಲಿ ರಸ್ತೆಗಳು ಜಲಾವೃತವಾಗಿದ್ದು, ವಾಹನ, ರೈಲು ಸಂಚಾರಕ್ಕೆ ಅಡಚಣೆಯುಂಟಾಗಿದೆ. ಸೋಮವಾರ ಮಧ್ಯರಾತ್ರಿಯಿಂದ ಮಂಗಳವಾರ ಬೆಳಗ್ಗೆವರೆಗೆ 200 ಮಿಮೀ ಮಳೆಯಾಗಿದೆ.

ಹವಾಮಾನ ಇಲಾಖೆಯ ಪ್ರಕಾರ ಬುಧವಾರ ಮತ್ತು ಗುರುವಾರ ಇದೇ ರೀತಿ ಮಳೆ ಮುಂದುವರಿಯಲಿದೆ.

ಥಾಣೆಯ ಘೋಡ್‌ಬಂದರ್ ರಸ್ತೆಯ ಓವಲಾದಲ್ಲಿ ವಿದ್ಯುತ್ ಆಘಾತದಿಂದ 15ರ ಹರೆಯದ ಬಾಲಕನೊಬ್ಬ ಮೃತಪಟ್ಟಿದ್ದಾನೆ. ಅದೇ ವೇಳೆ ನವೀ ಮುಂಬೈನ ಘನ್‌ಸೋಲಿಯಲ್ಲಿ ಮಹಿಳೆಯೊಬ್ಬರು ಮುಳುಗಿ ಸತ್ತಿದ್ದಾರೆ.

ಮುಂಬೈಯ ಸಂತಾಕ್ರೂಜ್ ಪ್ರದೇಶದಲ್ಲಿ ಆವರಣ ಗೋಡೆ ಕುಸಿದ ಕಾರಣ ನಾಲ್ವರು ನಾಲೆಗೆ ಬಿದ್ದು ಮೃತಪಟ್ಟಿದ್ದಾರೆ. ಒಂದೂವರೆ ವರ್ಷದ ಹೆಣ್ಣು ಮಗುವಿನ ಮೃತದೇಹವನ್ನು ಹೊರತೆಗೆದಿದ್ದು ಮೂವರು ನೀರಿನಲ್ಲಿ ಕೊಚ್ಚಿ ಹೋಗಿದ್ದಾರೆ. ರತ್ನಗಿರಿಯಲ್ಲಿ ಒಬ್ಬ ವ್ಯಕ್ತಿ ನೀರಿನಲ್ಲಿ ಮುಳುಗಿ ಸಾವಿಗೀಡಾಗಿದ್ದಾರೆ.

ಮುಂಬೈ ಮಹಾನಗರ ಪ್ರದೇಶದಲ್ಲಿ ಭಾರೀ ಮಳೆಯಾಗುತ್ತಿರುವುದರಿಂದ ಮುಂಬೈ ನಗರ ಮತ್ತು ಮುಂಬೈ ಸಬ್‌ಅರ್ಬನ್ ಅವಳಿ ಜಿಲ್ಲೆಗಳಿಗೆ ಮಹಾರಾಷ್ಟ್ರ ಸರ್ಕಾರ ಸಾರ್ವಜನಿಕ ರಜೆ ಘೋಷಿಸಿದೆ. ಅದೇ ವೇಳೆ ಜನರು ಮನೆಯಿಂದ ಹೊರಗೆ ಬರಬೇಡಿ ಎಂದು ಸೂಚಿಸಿದೆ.

ಮುಂಬೈಯ ಕಾಂಡಿವಿಲಿಯ ಪಶ್ಚಿಮ ಎಕ್ಸ್‌ಪ್ರೆಸ್ ಹೆದ್ದಾರಿ ಭಾಗದಲ್ಲಿ ಮಣ್ಣು ಕುಸಿದಿದ್ದು ರಸ್ತೆ ಸಂಚಾರಕ್ಕೆ ಅಡಚಣೆಯಾಗಿದೆ. ಪೂರ್ವ ಎಕ್ಸ್‌ಪ್ರೆಸ್ ಹೆದ್ದಾರಿಯಲ್ಲಿ ವಾಹನ ಸಂಚಾರ ದಟ್ಟಣೆ ಕಂಡು ಬಂದಿದೆ.

ಸಿಯಾನ್, ಹಿಂದ್‌ಮಾತಾ, ಕಿಂಗ್ಸ್ ಸರ್ಕಲ್, ದಾದರ್, ಪೋಸ್ಟಲ್ ಕಾಲೊನಿ, ಅಂಧೇರಿ, ಮಲಾಡ್ ಸಬ್‌ವೇ, ಜೋಗೇಶ್ವರಿ ಮತ್ತು ದಹೀಸರ್‌ನಲ್ಲಿ ರಸ್ತೆಗಳು ಜಲಾವೃತವಾಗಿವೆ.

ಮಹಾರಾಷ್ಟ್ರದ ಪ್ರವಾಸೋದ್ಯಮ ಸಚಿವ ಆದಿತ್ಯ ಠಾಕ್ರೆ ಮತ್ತು ಮುಂಬೈ ಮೇಯರ್ ಕಿಶೋರಿ ಪಡ್ನೇಕರ್ ನಗರದ ಪ್ರಮುಖ ಪ್ರದೇಶಗಳಲ್ಲಿಗೆ ತೆರಳಿ ಅಲ್ಲಿನ ಪರಿಸ್ಥಿತಿ ಬಗ್ಗೆ ಪರಿಶೀಲಿಸಿದ್ದಾರೆ.

ಸಂಜಯ್ ಗಾಂಧಿ ರಾಷ್ಟ್ರೀಯ ಉದ್ಯಾನ, ತುಂಗೇಶ್ವರ್ ವನ್ಯಜೀವಿ ಅರಣ್ಯಧಾಮ ಮತ್ತು ತಾನ್ಸಾ ವನ್ಯಜೀವಿ ಅರಣ್ಯಧಾಮ ಪ್ರದೇಶಗಳಲ್ಲಿ ಭಾರೀ ಮಳೆಯಾಗಿದೆ. ರಸ್ತೆಗಳು ಜಲಾವೃತವಾಗಿರುವುದರಿಂದ ಮುಂಬೈನಲ್ಲಿ ಬಸ್ ಸಂಚಾರ, ಸೆಂಟ್ರಲ್ ರೈಲ್ವೆ ಮತ್ತು ಪಶ್ಚಿಮ ಸಬ್‌ಅರ್ಬನ್ ಸೇವೆಗಳು ಅಸ್ತವ್ಯಸ್ತಗೊಂಡಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT