ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜಸ್ಥಾನ ರಾಜಕೀಯ | ಜುಲೈ 31ರಿಂದಲೇ ಅಧಿವೇಶನಕ್ಕೆ ಪಟ್ಟು

ರಾಜಸ್ಥಾನ: ವಿಶ್ವಾಸ ಮತಯಾಚನೆ ಬಗ್ಗೆ ಉಲ್ಲೇಖ ಇಲ್ಲ: ರಾಜ್ಯಪಾಲರಿಗೆ ಇನ್ನೊಂದು ಪ್ರಸ್ತಾವನೆ
Last Updated 28 ಜುಲೈ 2020, 21:13 IST
ಅಕ್ಷರ ಗಾತ್ರ

ಜೈಪುರ : ವಿಧಾನಸಭೆಯ ಅಧಿವೇಶನ ನಡೆಸಲು ಅನುಮತಿ ಕೋರಿ ರಾಜಸ್ಥಾನ ಸರ್ಕಾರವು ರಾಜ್ಯಪಾಲ ಕಲ್‌ರಾಜ್‌ ಮಿಶ್ರಾ ಅವರಿಗೆ ಮಂಗಳವಾರ ಹೊಸ ಪ್ರಸ್ತಾವನೆಯನ್ನು ಕಳುಹಿಸಿದೆ. ಆದರೆ 31ರಿಂದಲೇ ಅಧಿವೇಶನ ನಡೆಸುವ ತನ್ನ ಹಿಂದಿನ ನಿರ್ಧಾರದಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ.

ಅಧಿವೇಶನಕ್ಕೆ ಅನುಮತಿ ಕೋರಿ ಸರ್ಕಾರವು ಸಲ್ಲಿಸಿದ್ದ ಪ್ರಸ್ತಾವನೆಯನ್ನು ಕಳೆದ ಐದು ದಿನಗಳಲ್ಲಿ ರಾಜ್ಯಪಾಲರು ಎರಡು ಬಾರಿ ತಿರಸ್ಕರಿಸಿದ್ದರು. 21 ದಿನ ಮುಂಚಿತವಾಗಿ ನೋಟಿಸ್‌ ನೀಡಬೇಕು, ಕೋವಿಡ್‌ ಕಾರಣದಿಂದ ಆಸನ ವ್ಯವಸ್ಥೆ
ಯಲ್ಲಿ ಅಗತ್ಯ ಬದಲಾವಣೆಗಳನ್ನು ಮಾಡಬೇಕು ಹಾಗೂ ವಿಶ್ವಾಸಮತ ನಿರ್ಣಯ ಮಂಡಿಸುವುದಾದರೆ ಆ ಬಗ್ಗೆ ಮಾಹಿತಿ ನೀಡಬೇಕು ಮತ್ತು ಅದರ ನೇರ ಪ್ರಸಾರಕ್ಕೆ ವ್ಯವಸ್ಥೆ ಮಾಡಬೇಕು ಎಂಬ ಷರತ್ತುಗಳನ್ನು ರಾಜ್ಯಪಾಲರು ವಿಧಿಸಿದ್ದರು.

ಮಂಗಳವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ವಿಚಾರವನ್ನು ಚರ್ಚಿಸಲಾಗಿದೆ. 31ರಿಂದಲೇ ಅಧಿವೇಶನ ನಡೆಸುವ ತೀರ್ಮಾನವನ್ನು ಸಚಿವ ಸಂಪುಟವು ಕೈಗೊಂಡಿದೆ. ಸರ್ಕಾರವು ಮಂಗಳವಾರ ಸಲ್ಲಿಸಿದ ಪ್ರಸ್ತಾವನೆಯಲ್ಲೂ ಅಧಿವೇಶನದ ಸಂದರ್ಭದಲ್ಲಿ ವಿಶ್ವಾಸ ಮತಯಾಚನೆ ಮಾಡಲಿದೆಯೇ ಎಂಬ ವಿಚಾರವಾಗಿ ಸ್ಪಷ್ಟತೆ ಇಲ್ಲ ಎಂದು ತಿಳಿದುಬಂದಿದೆ.

‘ನಾವು ಅಧಿವೇಶನ ಕರೆಯಲು ಬಯಸುತ್ತೇವೆ, ಅದು ನಮ್ಮ ಹಕ್ಕು. ರಾಜ್ಯಪಾಲರ ಜತೆ ಯಾವುದೇ ಸಂಘರ್ಷ ನಮಗೆ ಬೇಕಾಗಿಲ್ಲ. ಈ ವಿಚಾರವಾಗಿ ಪ್ರಶ್ನೆಗಳನ್ನು ಕೇಳುವ ಅಧಿಕಾರ ರಾಜ್ಯಪಾಲರಿಗೆ ಇರುವುದಿಲ್ಲ. ಆದರೂ ನಾವು ಅವರಿಗೆ ಸ್ಪಷ್ಟನೆಗಳನ್ನು ನೀಡುತ್ತಿದ್ದೇವೆ. ಈಗಲಾದರೂ ಅವರು ಅನುಮತಿ ನೀಡಬಹುದು ಎಂದು ಭಾವಿಸಿದ್ದೇವೆ’ ಎಂದು ಸಾರಿಗೆ ಸಚಿವ ಪ್ರತಾಪ್‌ ಸಿಂಗ್‌ ಹೇಳಿದ್ದಾರೆ.

ರಾಜ್ಯಪಾಲರ ವಿರುದ್ಧ ಅಭಿಯಾನ: ಈ ನಡುವೆ ಕಾಂಗ್ರೆಸ್‌ನ ರಾಜಸ್ಥಾನ ಘಟಕವು ರಾಜ್ಯಪಾಲರ ವಿರುದ್ಧ ಸಾಮಾಜಿಕ ಮಾಧ್ಯಮದಲ್ಲಿ ‘ಗೆಟ್‌ವೆಲ್‌ ಸೂನ್‌’ ಅಭಿಯಾನ ಆರಂಭಿಸಿದೆ.

ಈ ಬಗ್ಗೆ ಸರಣಿ ಟ್ವೀಟ್‌ ಮಾಡಿರುವ ಕಾಂಗ್ರೆಸ್‌ನ ರಾಜ್ಯ ಘಟಕದ ಕಾರ್ಯದರ್ಶಿ ಅವಿನಾಶ್‌ ಪಾಂಡೆ, ‘ಬಿಜೆಪಿ
ಯ ಪಕ್ಷಪಾತಿ ಧೋರಣೆ ಮತ್ತು ದಬ್ಬಾಳಿಕೆಯ ಚಿಂತನೆಯ ಕಾಯಿಲೆಯು ರಾಜ್ಯಪಾಲರಿಗೂ ಅಂಟಿದಂತೆ ಕಾಣಿಸುತ್ತಿದೆ. ಅವರು ಶೀಘ್ರ ಗುಣಮುಖರಾಗಲಿ’ ಎಂದು ವ್ಯಂಗ್ಯವಾಡಿದ್ದಾರೆ. ‘ಗೆಟ್‌ವೆಲ್‌ಸೂನ್‌ ಗವರ್ನರ್‌’ ಎಂಬ ಹ್ಯಾಷ್‌ಟ್ಯಾಗ್‌ನಲ್ಲಿ ಟ್ವೀಟ್‌ ಮಾಡಿದ್ದಾರೆ.

ಪಾಠ ಕಲಿಸುತ್ತೇವೆ: ಮಾಯಾವತಿ

‘ರಾಜಸ್ಥಾನದ ಮುಖ್ಯಮಂತ್ರಿ ಅಶೋಕ್‌ ಗೆಹ್ಲೋಟ್‌ ಹಾಗೂ ಕಾಂಗ್ರೆಸ್ ಪಕ್ಷಕ್ಕೆ ಪಾಠ ಕಲಿಸಲು ಪಕ್ಷ ತೀರ್ಮಾನಿಸಿದೆ’ ಎಂದು ಬಿಎಸ್‌ಪಿ ಮುಖ್ಯಸ್ಥೆ ಮಾಯಾವತಿ ಹೇಳಿದ್ದಾರೆ.

ರಾಜಸ್ಥಾನ ಬಿಎಸ್‌ಪಿ ಘಟಕವನ್ನು ಕಾಂಗ್ರೆಸ್‌ನಲ್ಲಿ ವಿಲೀನ ಮಾಡಿದ್ದನ್ನು ವಿರೋಧಿಸಿ ಬಿಜೆಪಿ ಶಾಸಕ ಮದನ್‌ ದಿಲಾವರ್‌ ಸಲ್ಲಿಸಿರುವ ಅರ್ಜಿಯಲ್ಲಿ ತಮ್ಮನ್ನೂ ವಾದಿಯಾಗಿಸಬೇಕು ಎಂದು ಕೋರಿ ಕೋರ್ಟ್‌ಗೆಬಿಎಸ್‌ಪಿ ಮಂಗಳವಾರ ಅರ್ಜಿ ಸಲ್ಲಿಸಿದೆ. ಈ ಕುರಿತು ಹೇಳಿಕೆ ಬಿಡುಗಡೆ ಮಾಡಿರುವ ಮಾಯಾವತಿ, ‘ಕೋಮುವಾದಿ ಶಕ್ತಿಯನ್ನು ದೂರವಿಡುವ ಉದ್ದೇಶದಿಂದ ರಾಜಸ್ಥಾನ ವಿಧಾನಸಭಾ ಚುನಾವಣೆಯ ನಂತರ ಬಿಎಸ್‌ಪಿಯು ಕಾಂಗ್ರೆಸ್‌ಗೆ ಬೆಂಬಲ ನೀಡಿತ್ತು. ಆದರೆ ಗೆಹ್ಲೋಟ್‌ ಅವರು ಅಸಾಂವಿಧಾನಿಕವಾಗಿ ನಮ್ಮ ಪಕ್ಷವನ್ನು ಕಾಂಗ್ರೆಸ್‌ನಲ್ಲಿ ವಿಲೀನ ಮಾಡಿಕೊಂಡರು. ಇಂಥ ಹೆಜ್ಜೆ ಇಟ್ಟಿರುವ ಕಾಂಗ್ರೆಸ್‌ಗೆ ಪಾಠ ಕಲಿಸಲು ಸೂಕ್ತ ಸಮಯಕ್ಕಾಗಿ ಕಾಯುತ್ತಿದ್ದೆ. ಈಗ ಅದು ಒದಗಿಬಂದಿದೆ’ ಎಂದಿದ್ದಾರೆ. ವಿಧಾನಸಭೆಯಲ್ಲಿ ವಿಶ್ವಾಸ ಮತಯಾಚನೆಯ ಸಂದರ್ಭ ಬಂದರೆ ಕಾಂಗ್ರೆಸ್‌ ವಿರುದ್ಧ ಮತ ಚಲಾಯಿಸುವಂತೆ ಬಿಎಸ್‌ಪಿ ತನ್ನ ಶಾಸಕರಿಗೆ ಭಾನುವಾರ ವಿಪ್‌ ಜಾರಿ ಮಾಡಿದೆ.

ಸ್ಪೀಕರ್‌ ವಿರುದ್ಧ ಹೈಕೋರ್ಟ್‌ಗೆ ಮೊರೆ

ಬಿಎಸ್‌ಪಿಯ ಆರು ಶಾಸಕರು ಕಾಂಗ್ರೆಸ್‌ನಲ್ಲಿ ವಿಲೀನ ಆಗಿರುವುದನ್ನು ಪ್ರಶ್ನಿಸಿ ಮಾರ್ಚ್‌ ತಿಂಗಳಲ್ಲಿ ಸಲ್ಲಿಸಿದ್ದ ದೂರನ್ನು ತಿರಸ್ಕರಿಸಿರುವ ಸ್ಪೀಕರ್‌ ಸಿ.ಪಿ.ಜೋಶಿ ಅವರ ತೀರ್ಮಾನದ ವಿರುದ್ಧ ಬಿಜೆಪಿ ಶಾಸಕ ಮದನ್‌ ದಿಲಾವರ್‌ ಅವರು ರಾಜಸ್ಥಾನ ಹೈಕೋರ್ಟ್‌ಗೆ ಮಂಗಳವಾರ ಎರಡು ಅರ್ಜಿಗಳನ್ನು ಸಲ್ಲಿಸಿದ್ದಾರೆ.

‘ನಿಮ್ಮ ಆರ್ಜಿಯನ್ನು ಸ್ಪೀಕರ್‌ ಅವರು ತಿರಸ್ಕರಿಸಿದ್ದಾರೆ ಎಂದು ಸಚಿವಾಲಯವು ಸೋಮವಾರ ಮದನ್‌ ಅವರಿಗೆ ತಿಳಿಸಿತ್ತು. ಇದನ್ನು ಪ್ರಶ್ನಿಸಿ ಮಂಗಳವಾರ ಬೆಳಗ್ಗೆ ಹೈಕೋರ್ಟ್‌ಗೆ ಒಂದು ಅರ್ಜಿ
ಯನ್ನು ಸಲ್ಲಿಸಿದ್ದರು. ಇದಾಗಿ ಸ್ವಲ್ಪ ಹೊತ್ತಿನಲ್ಲೇ ಸ್ಪೀಕರ್‌ ಅವರ ಆದೇಶದ ಪ್ರತಿಯೂ ಕೈಸೇರಿತು. ಆ ಬಳಿಕ ಆದೇಶವನ್ನು ಪ್ರಶ್ನಿಸಿ ಇನ್ನೊಂದು ಅರ್ಜಿ ಸಲ್ಲಿಸಿದ್ದಾರೆ’ ಎಂದು ಮದನ್‌ ಅವರ ವಕೀಲರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT