ಭಾನುವಾರ, ಮೇ 16, 2021
22 °C
ಎಸಿಬಿಯಿಂದ ಎಫ್ಐಆರ್; ಸಿಬಿಐ ತನಿಖೆಗೆ ಆಗ್ರಹ

ಟೆಲಿಫೋನ್‍ ಸಂಭಾಷಣೆ | ಕದ್ದಾಲಿಕೆ ಆರೋಪ: ಕಾಂಗ್ರೆಸ್‍-ಬಿಜೆಪಿ ವಾಕ್ಸಮರ

ಪಿಟಿಐ Updated:

ಅಕ್ಷರ ಗಾತ್ರ : | |

ನವದೆಹಲಿ/ಜೈಪುರ: ರಾಜಸ್ಥಾನದಲ್ಲಿ ಅಶೋಕ್‌ ಗೆಹ್ಲೋಟ್‌ ಸರ್ಕಾರದ ಪತನಕ್ಕೆ ಸಂಚು ನಡೆಸಿರುವುದನ್ನು ಪುಷ್ಟೀಕರಿಸುವ ಆಡಿಯೊಗೆ ಸಂಬಂಧಿಸಿದ ತನಿಖೆಯನ್ನು ಸಿಬಿಐಗೆ ವಹಿಸಬೇಕೆಂದು ಬಿಜೆಪಿ ಒತ್ತಾಯಿಸಿರುವುದು, ಆ ಪಕ್ಷ ತಪ್ಪೊಪ್ಪಿಕೊಂಡಿರುವುದರ ಸಂಕೇತ ಎಂದು ಕಾಂಗ್ರೆಸ್‌ ಹೇಳಿದೆ.

ಸಚಿನ್‍ ಪೈಲಟ್ ಮತ್ತು ಇತರೆ ಶಾಸಕರ ಬಂಡಾಯದ ಹಿಂದೆ ಬಿಜೆಪಿ ಕೈವಾಡವಿರುವುದು ಈಗ ಸ್ಪಷ್ಟವಾಗಿದೆ ಎಂದು ಕಾಂಗ್ರೆಸ್‌ ಶನಿವಾರ ತಿಳಿಸಿದೆ. ರಾಜಸ್ಥಾನದ ಇತ್ತೀಚಿನ ಬೆಳವಣಿಗೆಗೆ ಸಂಬಂಧಿಸಿ ಪರ–ವಿರೋಧ ಹೇಳಿಕೆಗಳು ಮುಂದುವರಿದಿವೆ.

ಬಿಜೆಪಿ ಆಡಳಿತದ ಹರಿಯಾಣದಲ್ಲಿ ಪೈಲಟ್‌ ಮತ್ತು ಇತರ ಭಿನ್ನಮತೀಯ ಶಾಸಕರು ಆಶ್ರಯ ಪಡೆದಿದ್ದಾರೆ. ಶಾಸಕರ ಖರೀದಿಯಲ್ಲಿ ಬಿಜೆಪಿ ಕೈವಾಡವಿರುವುದನ್ನು ಇದು ತೋರಿಸುತ್ತದೆ ಎಂದು ಕಾಂಗ್ರೆಸ್‌ ಆರೋಪಿಸಿದೆ.

‘ರಾಜಸ್ಥಾನದಲ್ಲಿ ರಾಜಕೀಯ ಬಿಕ್ಕಟ್ಟು ತಲೆದೋರುವಲ್ಲಿ ಬಿಜೆಪಿಯ ನೇರ ಕೈವಾಡವಿದೆ ಎಂಬುದಕ್ಕೆ ದಿನಕ್ಕೊಂದು ಪುರಾವೆಗಳು ಸಿಗುತ್ತಿವೆ’ ಎಂದು ಕಾಂಗ್ರೆಸ್ ವಕ್ತಾರ ಪವನ್‍ ಖೇರಾ ದೆಹಲಿಯಲ್ಲಿ ಆನ್‌ಲೈನ್‌ ಪತ್ರಿಕಾಗೋಷ್ಠಿಯಲ್ಲಿ ವ್ಯಂಗ್ಯವಾಡಿದರು.

ಬಿಜೆಪಿ ಒತ್ತಾಯ: ಇದಕ್ಕೂ ಮುನ್ನ, ‘ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರವು ರಾಜಕಾರಣಿಗಳ ಫೋನ್‍ ಸಂಭಾಷಣೆಯನ್ನು ಕದ್ದಾಲಿಸಲು ಅಸಾಂವಿಧಾನಿಕ ಮಾರ್ಗಗಳನ್ನು ಅನುಸರಿಸುತ್ತಿದೆ. ಈ ಬಗ್ಗೆ ಸಿಬಿಐ ತನಿಖೆ ನಡೆಸಬೇಕು’ ಎಂದು ಬಿಜೆಪಿ ಒತ್ತಾಯಿಸಿತ್ತು.

‘ಫೋನ್‌ ಸಂಭಾಷಣೆ ಕದ್ದಾಲಿಕೆ ಮಾಡಲಾಗಿದೆಯೇ? ಒಂದೊಮ್ಮೆ ಕದ್ದಾಲಿಸಿದರೂ, ಅದಕ್ಕೆ ಸೂಚಿತ ನಿಯಮಗಳನ್ನು ಅನುಸರಿಸಲಾಗಿದೆಯೇ? ಸರ್ಕಾರಕ್ಕೆ ತೊಂದರೆಯಿದೆ ಎಂದು ಗೊತ್ತಾದಾಗ, ಅಧಿಕಾರವುಳಿಸಲು ಕಾಂಗ್ರೆಸ್‌ ಅಸಾಂವಿಧಾನಿಕ ಮಾರ್ಗ ಅನುಸರಿಸಿದೆಯೇ ಎಂಬ ಗಂಭೀರ ಪ್ರಶ್ನೆಗಳನ್ನು ಕಾಂಗ್ರೆಸ್‌ ಹೈಕಮಾಂಡ್‌ ಮತ್ತು ಅಶೋಕ್‌ ಗೆಹ್ಲೋಟ್‌ ಅವರಿಗೆ ನಾವು ಕೇಳಬಯಸುತ್ತೇವೆ’ ಎಂದು ಬಿಜೆಪಿ ವಕ್ತಾರ ಸಂಬಿತ್‌ ಪಾತ್ರಾ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಇದಕ್ಕೆ ತಿರುಗೇಟು ನೀಡಿರುವ ರಾಜಸ್ಥಾನದ ಸಚಿವ ಪ್ರತಾಪ್‍ ಸಿಂಗ್‍ ಖಚಾರಿಯವಸ್‍ ಅವರು, ‘ಪಾತ್ರಾ ಸುಳ್ಳುಗಳ ಜನರೇಟರ್‌’ ಎಂದು ಜರೆದಿದ್ದಾರೆ. ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಗೋವಿಂದ್ ಸಿಂಗ್ ದೊತಾಸ್ರಾ ಅವರು, ‘ಬಿಜೆಪಿ ಮುಖಭಂಗ ತಪ್ಪಿಸಲು ವಿಫಲ ಪ್ರಯತ್ನ ನಡೆಸುತ್ತಿದೆ’ ಎಂದಿದ್ದಾರೆ.

ರಾಷ್ಟ್ರಪತಿ ಆಡಳಿತಕ್ಕೆ ಆಗ್ರಹ: ರಾಜಸ್ಥಾನದಲ್ಲಿ ಮೂಡಿರುವ ರಾಜಕೀಯ ಅಸ್ಥಿರತೆಯ ಅವಲೋಕನ ನಡೆಸಿ ರಾಷ್ಟ್ರಪತಿ ಆಡಳಿತ ಹೇರಲು ಶಿಫಾರಸು ಮಾಡಬೇಕು ಎಂದು ಬಿಎಸ್‌ಪಿ ನಾಯಕಿ ಮಾಯಾವತಿ ಒತ್ತಾಯಿಸಿದರು.

ಆಡಿಯೊ ತುಣುಕು: ಎಫ್‍ಐಆರ್ ದಾಖಲು
ಜೈಪುರ: ಕಾಂಗ್ರೆಸ್ ಸರ್ಕಾರದ ಪದಚ್ಯುತಿಗೆ ಸಂಚು ನಡೆದಿರುವುದಕ್ಕೆ ಪುರಾವೆ ಎನ್ನಲಾದ ಎರಡು ಆಡಿಯೊ ತುಣುಕುಗಳಿಗೆ ಸಂಬಂಧಿಸಿ ರಾಜಸ್ಥಾನ ಪೊಲೀಸ್‍ನ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ಶನಿವಾರ ಎಫ್‍ಐಆರ್ ದಾಖಲಿಸಿದೆ.

‘ಮುಖ್ಯ ಸಚೇತಕ ಮಹೇಶ್ ಜೋಶಿ ಅವರು ಶುಕ್ರವಾರ ನೀಡಿದ ದೂರಿನ ಮೇರೆಗೆ ಎಫ್‌ಐಆರ್‌ ದಾಖಲಿಸಲಾಗಿದೆ’ ಎಂದು ಎಸಿಬಿ ಡಿಜಿ ಅಲೋಕ್ ತ್ರಿಪಾಠಿ ತಿಳಿಸಿದರು. ಬಂಡಾಯ ಶಾಸಕ ಭನ್ವರ್‌ಲಾಲ್‍ ಶರ್ಮಾ ಅವರು ಉದ್ಯಮಿ ಸಂಜಯ್‍ ಜೈನ್‍ ಮತ್ತು ಕೇಂದ್ರ ಸಚಿವ ಗಜೇಂದ್ರ ಸಿಂಗ್ ಜೊತೆ ನಡೆಸಿದ್ದಾರೆನ್ನಲಾದ ಸಂಭಾಷಣೆಯನ್ನು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು