ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸು‍ಪ್ರೀಂ ಕೋರ್ಟ್ ಅಂಗಳಕ್ಕೆ ರಾಜಸ್ಥಾನ ರಾಜಕೀಯ

Last Updated 22 ಜುಲೈ 2020, 18:58 IST
ಅಕ್ಷರ ಗಾತ್ರ

ನವದೆಹಲಿ: ರಾಜಸ್ಥಾನದ ರಾಜಕೀಯ ಬಿಕ್ಕಟ್ಟು ಸುಪ್ರೀಂ ಕೋರ್ಟ್‌ ಅಂಗಳ ತಲುಪಿದೆ. ಸಚಿನ್‌ ಪೈಲಟ್‌ ಮತ್ತು ಇತರ 18 ಕಾಂಗ್ರೆಸ್‌ ಶಾಸಕರ ಅನರ್ಹತೆ ಪ್ರಕ್ರಿಯೆಯನ್ನು ತಡೆ ಹಿಡಿಯುವಂತೆ ಹೈಕೋರ್ಟ್‌ ನಿರ್ದೇಶನ ನೀಡಿರುವುದನ್ನು ಪ್ರಶ್ನಿಸಿ ರಾಜಸ್ಥಾನ ವಿಧಾನಸಭೆ ಸ್ಪೀಕರ್‌ ಸಿ.ಪಿ. ಜೋಶಿ ಅವರು ಸುಪ್ರೀಂ ಕೋರ್ಟ್‌ಗೆ ಬುಧವಾರ ಅರ್ಜಿ ಸಲ್ಲಿಸಿದ್ದಾರೆ.

ಹೈಕೋರ್ಟ್‌ ಮಂಗಳವಾರ ನೀಡಿದ ಸೂಚನೆಯು ಶಾಸಕಾಂಗದ ಅಧಿಕಾರಕ್ಕೆ ಮಾಡಿದ ನೇರ ಅವಮಾನ ಎಂದು ಅರ್ಜಿಯಲ್ಲಿ ಹೇಳಲಾಗಿದೆ. ಹಿರಿಯ ವಕೀಲರಾದ ಕಪಿಲ್‌ ಸಿಬಲ್‌ ಮತ್ತು ವಿವೇಕ್‌ ತಂಕಾ ಅವರು ಸ್ಪೀಕರ್‌‍ಪರವಾಗಿ ಈ ಅರ್ಜಿ ಸಲ್ಲಿಸಿದ್ದಾರೆ.

ಸಂವಿಧಾನದ 10ನೇ ಶೆಡ್ಯೂಲ್‌ (ಪಕ್ಷಾಂತರ ನಿಷೇಧ) ಪ್ರಕಾರ ಕ್ರಮ ಕೈಗೊಳ್ಳುವುದನ್ನು ತಡೆಯುವಂತೆ ಹೈಕೋರ್ಟ್‌ ನೀಡಿದ ಆದೇಶವು ತಪ‍್ಪು. ಸಾಂವಿಧಾನಿಕವಾಗಿ ಕೆಲಸ ಮಾಡುವ ಯಾವುದೇ ಸಂಸ್ಥೆ ಲಕ್ಷ್ಮಣ ರೇಖೆ ದಾಟದಂತೆ ಸುಪ್ರೀಂ ಕೋರ್ಟ್‌ ನೋಡಿಕೊಳ್ಳಬೇಕು ಎಂದು ಅರ್ಜಿಯಲ್ಲಿ ಕೋರಲಾಗಿದೆ.

ಈ ಅರ್ಜಿಯನ್ನು ತುರ್ತಾಗಿ ವಿಚಾರಣೆಗೆ ಎತ್ತಿಕೊಳ್ಳಬೇಕು ಎಂದು ಮುಖ್ಯ ನ್ಯಾಯಮೂರ್ತಿ ಎಸ್‌.ಎ.ಬೊಬಡೆ ಅವರ ಪೀಠವನ್ನು ಸಿಬಲ್‌ ವಿನಂತಿಸಿದ್ದಾರೆ.

ಮಂಗಳವಾರದ ಆದೇಶಕ್ಕೆ ತಡೆ ನೀಡಬೇಕು ಮತ್ತು ಹೈಕೋರ್ಟ್‌ನಲ್ಲಿ ನಡೆಯುತ್ತಿರುವ ಪ್ರಕ್ರಿಯೆಗೂ ತಡೆ ನೀಡಬೇಕು ಎಂದು ಸ್ಪೀಕರ್‌ ಕೋರಿದ್ದಾರೆ.

ರಾಜಸ್ಥಾನ ಹೈಕೋರ್ಟ್‌ ಮುಂದೆ ಇರುವ ಪ್ರಕರಣವನ್ನು ಸುಪ್ರೀಂ ಕೋರ್ಟ್‌ಗೆ ವರ್ಗಾಯಿಸುವಂತೆ ಕೋರಿ ಸ್ಪೀಕರ್‌ ಅವರು ಇನ್ನೊಂದು ಅರ್ಜಿ ಸಲ್ಲಿಸುವ ಸಾಧ್ಯತೆಯೂ ಇದೆ ಎನ್ನಲಾಗಿದೆ. ಪೈಲಟ್‌ ಮತ್ತು ಅವರ ಬಣದ ಶಾಸಕರು ಕೂಡ ಸುಪ್ರೀಂ ಕೋರ್ಟ್‌ಗೆ ಮನವಿ ಸಲ್ಲಿಸಿದ್ದು, ತಮ್ಮ ವಾದವನ್ನು ಆಲಿಸದೆ ಆದೇಶ ನೀಡಬಾರದು ಎಂದು ಕೋರಿದ್ದಾರೆ.

ಗೆಹ್ಲೋಟ್‌ ಸಹೋದರನ ವಿರುದ್ಧ ಇ.ಡಿ. ತನಿಖೆ

ರಾಜಸ್ಥಾನ ಮುಖ್ಯಮಂತ್ರಿ ಅಶೋಕ್‌ ಗೆಹ್ಲೋಟ್‌ ಅವರ ಸಹೋದರ ಅಗ್ರಸೇನ ಗೆಹ್ಲೋಟ್‌ ಅವರಿಗೆ ಸಂಬಂಧಿಸಿದ 13 ಸ್ಥಳಗಳಲ್ಲಿ ಜಾರಿ ನಿರ್ದೇಶನಾಲಯದ (ಇ.ಡಿ.) ಅಧಿಕಾರಿಗಳು ಬುಧವಾರ ಶೋಧ ನಡೆಸಿದ್ದಾರೆ.

ಕಸ್ಟಮ್ಸ್‌ ಪ್ರಕರಣವೊಂದರಲ್ಲಿ ಅಗ್ರಸೇನ ಅವರ ಕಂಪನಿಗೆ ₹7 ಕೋಟಿ ದಂಡವನ್ನು ಈ ಹಿಂದೆ ವಿಧಿಸಲಾಗಿತ್ತು. ಅದಕ್ಕೆ ಸಂಬಂಧಿಸಿ ಇ.ಡಿ. ಎಫ್‌ಐಆರ್‌ ದಾಖಲಿಸಿಕೊಂಡಿದೆ. ಅದರ ಭಾಗವಾಗಿ ಶೋಧ ನಡೆದಿದೆ ಎನ್ನಲಾಗಿದೆ.

ಸಚಿನ್‌ ಪೈಲಟ್‌ ಅವರ ಬಂಡಾಯದ ಬಳಿಕ ಕೇಂದ್ರದ ತನಿಖಾ ಸಂಸ್ಥೆಯಿಂದ ನಡೆಯುತ್ತಿರುವ ಮೂರನೇ ಕಾರ್ಯಾಚರಣೆ ಇದು.ಗೆಹ್ಲೋಟ್‌ ಅವರಿಗೆ ಆಪ್ತರಾದ ಕಾಂಗ್ರೆಸ್‌ನ ಇಬ್ಬರು ಮುಖಂಡರಿಗೆ ಸಂಬಂಧಿಸಿದ ಸ್ಥಳಗಳಲ್ಲಿ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಇದೇ 13ರಂದು ಶೋಧ ನಡೆಸಿದ್ದರು. ಪೊಲೀಸ್‌ ಅಧಿಕಾರಿಯೊಬ್ಬರ ಅತ್ಮಹತ್ಯೆ ಪ್ರಕರಣದಲ್ಲಿ ಗೆಹ್ಲೋಟ್‌ ಅವರ ವಿಶೇಷ ಕರ್ತವ್ಯಾಧಿಕಾರಿ ದೇವರಾಮ್‌ ಸೈನಿ ಮತ್ತು ಕಾಂಗ್ರೆಸ್ ಶಾಸಕಿ ಕೃಷ್ಣಾ ಪೂನಿಯಾ ಅವರವನ್ನು ಸಿಬಿಐ ತನಿಖೆಗೆ ಒಳಪಡಿಸಿದೆ.

ರಾಜಸ್ಥಾನ ಸರ್ಕಾರವನ್ನು ಉರುಳಿಸುವ ‘ತಂತ್ರಗಳು’ ವಿಫಲವಾದ ಬಳಿಕ ಪ್ರಧಾನಿ ನರೇಂದ್ರ ಮೋದಿ ಅವರು ‘ರೈಡ್‌ ರಾಜ್‌’ ಮೂಲಕ ಬೆದರಿಸಲು ಹೊರಟಿದ್ದಾರೆ. ಆದರೆ, ಇಂತಹ ಪ್ರಯತ್ನಗಳಿಗೆ ಹೆದರುವುದಿಲ್ಲ ಎಂದು ಕಾಂಗ್ರೆಸ್‌ನ ಮುಖ್ಯ ವಕ್ತಾರ ರಣದೀಪ್‌ ಸುರ್ಜೇವಾಲಾ ಹೇಳಿದ್ದಾರೆ.

ರೈತರಿಗೆ ಸಬ್ಸಿಡಿ ದರದಲ್ಲಿ ರಸಗೊಬ್ಬರ ಪೂರೈಸಿದ್ದರಲ್ಲಿ ಅವ್ಯವಹಾರ ನಡೆದಿತ್ತು ಎಂದು ಕಸ್ಟಮ್ಸ್‌ ಇಲಾಖೆಯು 2007–09ರಲ್ಲಿ ಪ್ರಕರಣ ದಾಖಲಿಸಿತ್ತು. ತನಿಖೆಯ ಬಳಿಕ ದಂಡ ವಿಧಿಸಿ 2013ರಲ್ಲಿ ಪ್ರಕರಣವನ್ನು ಮುಕ್ತಾಯ ಮಾಡಲಾಗಿತ್ತು. ಆದರೆ, ಆ ಪ್ರಕರಣದಲ್ಲಿ ಹಣ ಅಕ್ರಮ ವರ್ಗಾವಣೆ ನಡೆದಿದೆ ಎಂದು ಈಗ ಇ.ಡಿ. ತನಿಖೆ ಆರಂಭಿಸಿದೆ.

ಗೆಹ್ಲೋಟ್‌ ಅವರ ಮಗ ವೈಭವ್‌ ಜತೆಗೆ ವ್ಯಾಪಾರ ಸಂಬಂಧ ಹೊಂದಿರುವ ಉದ್ಯಮಿ ರತನ್‌ ಕಾಂತ್‌ ಶರ್ಮಾ ಅವರ ವಿರುದ್ಧ ವಿದೇಶಿ ವಿನಿಮಯ ಕಾನೂನು ಉಲ್ಲಂಘನೆಯ ಪ್ರಕರಣದ ತನಿಖೆಯನ್ನೂ ಇ.ಡಿ. ನಡೆಸುತ್ತಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT