ಸೋಮವಾರ, ಆಗಸ್ಟ್ 2, 2021
27 °C

ಆರ್ಥಿಕ ಬೆಳವಣಿಗೆಗೆ ಪ್ರಥಮ ಆದ್ಯತೆ: ಆರ್‌ಬಿಐ ಗವರ್ನರ್ ಶಕ್ತಿಕಾಂತ ದಾಸ್

ಏಜೆನ್ಸಿಸ್ Updated:

ಅಕ್ಷರ ಗಾತ್ರ : | |

ನವದೆಹಲಿ: ಸದ್ಯದ ಪರಿಸ್ಥಿತಿಯಲ್ಲಿ ಆರ್ಥಿಕ ಬೆಳವಣಿಗೆಗೆ ಕೇಂದ್ರ ರಿಸರ್ವ್ ಬ್ಯಾಂಕ್‌ ಪ್ರಥಮ ಆದ್ಯತೆ ನೀಡಲಿದೆ ಎಂದು ರಿಸರ್ವ್ ಬ್ಯಾಂಕ್ ಅಧ್ಯಕ್ಷ ಶಕ್ತಿಕಾಂತ್ ದಾಸ್ ಹೇಳಿದ್ದಾರೆ.

ಎಸ್‌ಬಿಐ ಬ್ಯಾಂಕಿಂಗ್ ಮತ್ತು ಆರ್ಥಿಕ ವ್ಯವಸ್ಥೆ ಕುರಿತ 7ನೇ ಸಮಾವೇಶದಲ್ಲಿ ವಿಡಿಯೋ ಕಾಲ್ ಮೂಲಕ ಸಂವಾದ ನಡೆಸಿದ ಸಂದರ್ಭದಲ್ಲಿ ಈ ವಿಷಯ ತಿಳಿಸಿದ್ದಾರೆ.

ದೇಶದಲ್ಲಿ ಕುಸಿಯುತ್ತಿರುವ ಆರ್ಥಿಕ ಸ್ಥಿತಿಯ ಪುನಶ್ಚೇತನಕ್ಕಾಗಿ ಸರ್ಕಾರ ಲಾಕ್‌ಡೌನ್ ನಿಯಮಗಳನ್ನು ಸಡಿಲಿಸಿದೆ. ಈ ಸಂದರ್ಭದಲ್ಲಿ ಆರ್‌ಬಿಐ ಗವರ್ನರ್ ಅವರ ಈ ಹೇಳಿಕೆ ದೇಶದ ಆರ್ಥಿಕ ಸ್ಥಿತಿಗೆ ಮತ್ತಷ್ಟು ಶಕ್ತಿ ತುಂಬಲಿದೆ ಎಂದು ಆರ್ಥಿಕ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಎಸ್‌ಬಿಐನ ಅಧ್ಯಕ್ಷ ರಜನೀಶ್ ಕುಮಾರ್ ಅವರು ಭಾಗವಹಿಸಿದ್ದ ಈ ಕಾರ್ಯಕ್ರಮದಲ್ಲಿ ಬ್ಯಾಂಕಿಂಗ್ ಕ್ಷೇತ್ರ ಹಾಗೂ ಆರ್ಥಿಕ ಬೆಳವಣಿಗೆಗೆ
ಪೂರಕವಾದ ಹಲವು ವಿಷಯಗಳನ್ನು ಪ್ರಸ್ತಾಪಿಸಿದ್ದಾರೆ. ಕೋವಿಡ್ 19ನಿಂದಾಗಿ ಆರೋಗ್ಯ ಹಾಗೂ ಆರ್ಥಿಕ ಕ್ಷೇತ್ರಗಳಲ್ಲಿ ಕಳೆದ 100 ವರ್ಷಗಳಲ್ಲಿಯೇ ಕಾಣಿಸಿಕೊಳ್ಳದಂತಹ ಅತ್ಯಂತ ಕೆಟ್ಟ ಸ್ಥಿತಿಯನ್ನು ಈಗ ನಾವು ಕಾಣುತ್ತಿದ್ದೇವೆ. ಈ ಕಾರಣಕ್ಕಾಗಿ ಹಣಕಾಸು ವ್ಯವಸ್ಥೆಯನ್ನು ರಕ್ಷಿಸಲು ಆರ್‌ಬಿಐ ಹಲವಾರು ಪ್ರಮುಖ ಐತಿಹಾಸಿಕ ಕ್ರಮಗಳನ್ನು ಕೈಗೊಂಡಿದೆ. ಆರ್‌ಬಿಐ ಜಾರಿಗೆ ತಂದಿರುವ ಕೆಲವು ನೀತಿ ನಿಯಮಗಳು ಇಲ್ಲಿಯವರೆಗೆ ಕೆಲಸ ಮಾಡಿವೆ ಎಂದಿದ್ದಾರೆ.

ಕೋವಿಡ್ ಪ್ರಾರಂಭವಾಗುವ ಮುನ್ನ ಆರ್‌ಬಿಐ ತೆಗೆದುಕೊಂಡ ಕೆಲವು ವಿತ್ತೀಯ ನೀತಿ, ಕ್ರಮಗಳಲ್ಲಿ ಪ್ರಮುಖವಾದವು ಎಂದರೆ, ಮಾರುಕಟ್ಟೆಯ ವಿಶ್ವಾಸವನ್ನು ಹೆಚ್ಚಿಸಲು, ದ್ರವ್ಯತೆ ಒತ್ತಡವನ್ನು ಕಡಿಮೆ ಮಾಡಲು ಸಾಂಪ್ರದಾಯಿಕ ಹಾಗೂ ಅಸಾಂಪ್ರದಾಯಿಕ ದ್ರವ್ಯತೆ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದಿದ್ದಾರೆ. ಅಲ್ಲದೆ, ಆರ್ಥಿಕ ಪುನಶ್ಚೇತನಕ್ಕೆ ಆರ್‌ಬಿಐ ಫೆಬ್ರವರಿಯಿಂದಲೇ ₹9.57 ಲಕ್ಷ ಕೋಟಿಗಳ ಲಿಕ್ವಿಡಿಟಿ ಕ್ರಮಗಳನ್ನು ಘೋಷಿಸಿದೆ, ಇದು 4.5 ಜಿಡಿಪಿಗೆ ಸಮವಾಗಿದೆ ಎಂದಿದ್ದಾರೆ. ಇದಲ್ಲದೆ, ಬ್ಯಾಂಕೇತರ ಹಣಕಾಸು ಸಂಸ್ಥೆಗಳು ಮತ್ತು ಮ್ಯೂಚುವಲ್ ಫಂಡ್‌ಗಳ ಮೇಲ್ವಿಚಾರಣೆಯನ್ನೂ ಮಾಡಬೇಕಾಗಿದೆ ಎಂದು ಅವರು ತಿಳಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು