ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಚಿನ್‌ಗೆ ಶತಕವನ್ನು ದ್ವಿಶತಕವಾಗಿಸುವ ಕಲೆ ಕರಗತವಾಗಿರಲಿಲ್ಲ: ಕಪಿಲ್ ದೇವ್

Last Updated 29 ಜುಲೈ 2020, 7:57 IST
ಅಕ್ಷರ ಗಾತ್ರ

ನವದೆಹಲಿ: ಸಚಿನ್ ತೆಂಡೂಲ್ಕರ್‌ಗೆ ಶತಕಗಳಿಸುವುದು ಹೇಗೆ ಎಂದು ತಿಳಿದಿದ್ದರೂ, ದ್ವಿಶತಕ ಮತ್ತು ತ್ರಿಶತಕ ಗಳಿಸುವ ಕಲೆ ಕರಗತವಾಗಿರಲಿಲ್ಲ ಎಂದು 1983ರಲ್ಲಿ ವಿಶ್ವಕಪ್‌ ಗೆದ್ದ ಭಾರತ ಕ್ರಿಕೆಟ್‌ ತಂಡದ ನಾಯಕ ಕಪಿಲ್‌ ದೇವ್ ಹೇಳಿದ್ದಾರೆ.

ಸಚಿನ್‌ ಅವರಂತಹ ಪ್ರತಿಭಾವಂತ ಬ್ಯಾಟ್ಸ್‌ಮನ್ ಅನ್ನು ತಾವು ಇಲ್ಲಿಯವರೆಗೆ ನೋಡಿಲ್ಲ ಎಂದಿರುವ ಕಪಿಲ್, ಅವರು (ಸಚಿನ್)ಎಂದಿಗೂನಿರ್ದಯಿ ಬ್ಯಾಟ್ಸ್‌ಮನ್‌ ಆಗಿರಲಿಲ್ಲ ಎಂದಿದ್ದಾರೆ.‌

ಸಚಿನ್‌ ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅತಿಹೆಚ್ಚು(34,357) ರನ್‌ ಹಾಗೂ ನೂರು ಶತಕ ಗಳಿಸಿದ ಏಕೈಕ ಬ್ಯಾಟ್ಸ್‌ಮನ್‌ ಎನಿಸಿದ್ದಾರೆ. ಏಕದಿನ ಕ್ರಿಕೆಟ್‌ನಲ್ಲಿ 18,426, ಟೆಸ್ಟ್‌ನಲ್ಲಿ 15,921 ಮತ್ತು ಏಕೈಕ ಟಿ–20 ಪಂದ್ಯದಲ್ಲಿ 10 ರನ್‌ ಬಾರಿಸಿದ್ದಾರೆ.ಏಕದಿನ ಕ್ರಿಕೆಟ್‌ನಲ್ಲಿ ದ್ವಿಶತಕ ಭಾರಿಸಿದ ಮೊದಲ ಬ್ಯಾಟ್ಸ್‌ಮನ್‌ ಎಂಬ ಹೆಗ್ಗಳಿಕೆಯನ್ನೂ ಹೊಂದಿರುವ ಅವರು, ಟೆಸ್ಟ್‌ ಕ್ರಿಕೆಟ್‌ನಲ್ಲಿ 6 ದ್ವಿಶತಕಸಿಡಿಸಿದ್ದಾರೆ.

ಮಹಿಳೆಯದ ತಂಡದ ಮುಖ್ಯ ಕೋಚ್‌ ಆಗಿರುವ ಡಬ್ಲ್ಯೂವಿ ರಮನ್‌ ಅವರಿಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿರುವ ಕಪಿಲ್‌, ‘ಸಚಿನ್‌ ತುಂಬಾ ಪ್ರತಿಭಾವಂತರಾಗಿದ್ದು, ಅಂತಹ ಮತ್ತೊಬ್ಬ ಆಟಗಾರನನ್ನು ನಾನು ಈವರೆಗೆ ನೋಡಿಲ್ಲ. ಅವರಿಗೆ ಶತಕ ಗಳಿಸುವುದು ಹೇಗೆ ಎಂಬುದು ಗೊತ್ತಿತ್ತು. ಆದರೆ, ಅವುಗಳನ್ನು ದ್ವಿಶತಕ, ತ್ರಿಶತಕವಾಗಿ ಪರಿವರ್ತಿಸುವುದನ್ನು ಕರಗತ ಮಾಡಿಕೊಂಡಿರಲಿಲ್ಲ. ಅವರು ಎಂದಿಗೂ ನಿರ್ದಯವಾದ ಬ್ಯಾಟ್ಸ್‌ಮನ್‌ ಆಗಿರಲಿಲ್ಲ’ ಎಂದು ಹೇಳಿದ್ದಾರೆ.

‘ಸಚಿನ್‌ ತಮ್ಮ ವೃತ್ತಿ ಜೀವನದಲ್ಲಿ ಇನ್ನೂ ಐದು ತ್ರಿಶತಕಗಳನ್ನು ಹಾಗೂ 10 ದ್ವಿಶತಕಗಳನ್ನು ಕಲೆಹಾಕಬೇಕಿತ್ತು. ಏಕೆಂದರೆ, ಅವರು ವೇಗದ ಬೌಲರ್‌ಗಳನ್ನು ಮತ್ತು ಸ್ಪಿನ್ನರ್‌ಗಳ ಪ್ರತಿ ಓವರನಲ್ಲಿಯೂ ಬೌಂಡರಿ ಗಳಿಸಬಲ್ಲವರಾಗಿದ್ದರು’ ಎಂದೂ ಹೇಳಿದ್ದಾರೆ.

ಮುಂದುವರಿದು, ‘ಶತಕ ಗಳಿಸಿದ ಬಳಿಕ ಸಚಿನ್‌ ತಮ್ಮ ರನ್‌ ಗಳಿಕೆಯನ್ನು ಶೂನ್ಯದಿಂದ ಆರಂಭಿಸುವ ಮನಸ್ಥಿತಿ ಹೊಂದಿದ್ದರು. ನೀವು ಸ್ಫೋಟಕ ಬ್ಯಾಟ್ಸ್‌ಮನ್‌. ಬೌಲರ್‌ಗಳು ನಿಮಗೆ ಹೆದರಬೇಕು ಎಂದು ಆಗಲೇ ಹೇಳಿದ್ದೆ. ಅದಕ್ಕೆ ತಕ್ಕ ಪ್ರತಿಭೆಯೂ ಸಚಿನ್‌ರಲ್ಲಿತ್ತು. ಆದರೆ, ಅವರು ಶತಕದ ಬಳಿಕ ಒಂಟಿ ರನ್‌ ಗಳಿಸುತ್ತಿದ್ದರು, ನಿರ್ದಯವಾಗಿ ಬ್ಯಾಟ್‌ ಬೀಸುತ್ತಿರಲಿಲ್ಲ’ ಎಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT