ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜಸ್ಥಾನ: ಶಾಸಕರ ಅರ್ಜಿ ಸಂಬಂಧ ಆದೇಶ ನೀಡಲು ಹೈಕೋರ್ಟ್‌ಗೆ 'ಸುಪ್ರೀಂ' ಸಮ್ಮತಿ

ಹೈಕೋರ್ಟ್ ಆದೇಶ ಸುಪ್ರೀಂ ತೀರ್ಪಿಗೆ ಬದ್ಧ
Last Updated 23 ಜುಲೈ 2020, 10:52 IST
ಅಕ್ಷರ ಗಾತ್ರ

ನವದೆಹಲಿ: ರಾಜಸ್ಥಾನ ವಿಧಾನಸಭೆಯ ಸ್ಪೀಕರ್‌ ನೀಡಿದ್ದ ಅನರ್ಹತೆ ನೋಟಿಸ್‍ ಕ್ರಮಬದ್ಧತೆಯನ್ನು ಪ್ರಶ್ನಿಸಿ ಸಚಿನ್‍ ಪೈಲಟ್ ಸೇರಿದಂತೆ 19 ಶಾಸಕರುಸಲ್ಲಿಸಿರುವ ಅರ್ಜಿ ಸಂಬಂಧ ಆದೇಶ ಪ್ರಕಟಿಸುವಂತೆ ಹೈಕೋರ್ಟ್‌ಗೆ ಸುಪ್ರೀಂ ಕೋರ್ಟ್ ಗುರುವಾರ ಸೂಚಿಸಿದೆ. ಆದರೆ, ಈ ಆದೇಶವು ತನ್ನ ತೀರ್ಪಿಗೆ ಬದ್ಧವಾಗಿರುತ್ತದೆ ಎಂದೂ ಸ್ಪಷ್ಟಪಡಿಸಿದೆ.

ಸಂವಿಧಾನದ 10ನೇ ಪರಿಚ್ಛೇದದ ಅನ್ವಯ ಶಾಸಕರ ಅನರ್ಹತೆಗೆ ಸಂಬಂಧಿಸಿ ಸ್ಪೀಕರ್ ಕಾರ್ಯ ಕುರಿತಂತೆ ಹೈಕೋರ್ಟ್ ಮಧ್ಯ ಪ್ರವೇಶಿಸುವಂತಿಲ್ಲ ಎಂದು ಪ್ರತಿಪಾದಿಸಿದ್ದ ಸ್ಪೀಕರ್ ಸಿ.ಪಿ.ಜೋಶಿ ಅವರು ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದರು. ಆದರೆ, ಅವರ ಅರ್ಜಿಗೆ ಸಂಬಂಧಿಸಿ ಸುಪ್ರಿಂಕೋರ್ಟಿನ ನ್ಯಾಯಪೀಠವುಯಾವುದೇ ಮಧ್ಯಂತರ ಆದೇಶ ನೀಡಿಲ್ಲ.

ನ್ಯಾಯಮೂರ್ತಿಗಳಾದ ಅರುಣ್‍ ಮಿಶ್ರಾ, ಕೃಷ್ಣ ಮುರಳಿ, ಬಿ.ಆರ್.ಗವಾಯಿ ಅವರಿದ್ದ ನ್ಯಾಯಪೀಠವು, ಪ್ರಕರಣ ಸಂಬಂಧ ಕೆಲವೊಂದು ಪ್ರಮುಖ ಪ್ರಶ‍್ನೆಗಳನ್ನೂ ಎತ್ತಿದ್ದು, ಈ ಸಂಬಂಧ ಸುದೀರ್ಘ ವಿಚಾರಣೆಯ ಅಗತ್ಯವಿದೆ ಎಂದು ಪ್ರತಿಪಾದಿಸಿತು.

‘ಆದೇಶ ನೀಡದಂತೆ ನಾವು ಹೈಕೋರ್ಟಿಗೆ ನಿರ್ಬಂಧ ಹೇರುತ್ತಿಲ್ಲ. ಆದರೆ, ಆ ಆದೇಶವು, ಸ್ಪೀಕರ್ ಅವರು ನಮಗೆ ಸಲ್ಲಿಸಿರುವ ಅರ್ಜಿ ಕುರಿತ ಅಂತಿಮ ತೀರ್ಪಿಗೆ ಒಳಪಟ್ಟಿರುತ್ತದೆ’ ಎಂದು ಹೇಳಿದ ಪೀಠವು, ವಿಚಾರಣೆಯನ್ನು ಜುಲೈ 27ಕ್ಕೆ ನಿಗದಿಪಡಿಸಿತು.

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಯಾವುದೇ ಪ್ರತಿರೋಧದ ಧ್ವನಿಯನ್ನು ಹತ್ತಿಕ್ಕಲಾಗದು ಎಂದು ಪೀಠವು ಇದೇ ಸಂದರ್ಭದಲ್ಲಿ ಅಭಿಪ್ರಾಯಪಟ್ಟಿತು.

‘ಅನರ್ಹತೆಗೊಳಿಸುವ ಪ್ರಕ್ರಿಯೆಗೆ ಅನುಮತಿ, ಇದೆಯೇ ಇಲ್ಲವೇ ಎಂಬುದನ್ನಷ್ಟೇ ನಾವು ಪರಿಶೀಲಿಸುತ್ತಿದ್ದೇವೆ’ ಎಂದ ಪೀಠವು, 19 ಶಾಸಕರನ್ನು ಅನರ್ಹಗೊಳಿಸಿದ್ದಕ್ಕೆ ಕಾರಣಗಳನ್ನು ಕೇಳಿತು.

ಸ್ಪೀಕರ್ ಪರವಾಗಿ ಹಾಜರಿದ್ದ ಹಿರಿಯ ವಕೀಲ ಕಪಿಲ್‍ ಸಿಬಲ್ ಅವರು, ಅನರ್ಹತೆಗೆ ಕಾರಣಗಳನ್ನು ತಿಳಿಸುತ್ತಾ ಈ ಶಾಸಕರು ಪಕ್ಷದ ಸಭೆಗೆ ಹಾಜರಾಗಿಲ್ಲ. ತಮ್ಮದೇ ಪಕ್ಷದ ಸರ್ಕಾರದ ಪದಚ್ಯುತಿಗೆ ಸಂಚು ನಡೆಸಿದ್ದಾರೆ ಎಂದರು.

ಇದಕ್ಕೆ ಪೀಠವು, ಇದು ಸರಳವಾದ ವಿಷಯವಲ್ಲ. ಅಲ್ಲದೆ, ಈ ಶಾಸಕರು ಚುನಾಯಿತ ಪ್ರತಿನಿಧಿಗಳು ಎಂದು ಹೇಳಿತು.

ಅನರ್ಹತೆ ನೋಟಿಸ್ ಪ್ರಶ‍್ನಿಸಿ 19 ಶಾಸಕರು ಸಲ್ಲಿಸಿದ ಅರ್ಜಿಗೆ ಸಂಬಂಧಿತ ಆದೇಶವನ್ನು ಇದೇ 24ರಂದು ಪ್ರಕಟಿಸಲಾಗುವುದು ಎಂದು ರಾಜಸ್ಥಾನ ಹೈಕೋರ್ಟ್ ಪ್ರಕಟಿಸಿದ್ದು, ಇದನ್ನು ಸ್ಪೀಕರ್ ಸುಪ್ರೀಂ ಕೋರ್ಟಿನಲ್ಲಿ ಪ್ರಶ‍್ನಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT