ಶನಿವಾರ, ಜುಲೈ 31, 2021
26 °C
ಖಾಸಗಿ ಆಸ್ಪತ್ರೆಗಳಲ್ಲಿ ಕೋವಿಡ್‌ ಚಿಕಿತ್ಸಾ ವೆಚ್ಚಕ್ಕೆ ಮಿತಿ ಹೇರಲು ನಕಾರ

ಕೋವಿಡ್‌ ಚಿಕಿತ್ಸೆಗೆ ನ್ಯಾಯೋಚಿತ ದರ: ‘ಸುಪ್ರೀಂ’ ಸೂಚನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೋವಿಡ್‌ ಚಿಕಿತ್ಸೆ– ಸಾಂದರ್ಭಿಕ ಚಿತ್ರ

ನವದೆಹಲಿ: ಖಾಸಗಿ ಆಸ್ಪತ್ರೆಗಳಲ್ಲಿ ಕೋವಿಡ್–19 ಚಿಕಿತ್ಸಾ ವೆಚ್ಚಕ್ಕೆ ಮಿತಿ ನಿಗದಿಪಡಿಸಲು ಸುಪ್ರೀಂ ಕೋರ್ಟ್ ಮಂಗಳವಾರ ನಿರಾಕರಿಸಿದೆ. ಆದರೆ ಚಿಕಿತ್ಸೆಗೆ ತಗಲುವ ವೆಚ್ಚ ದುಬಾರಿ ಆಗಿರಬಾರದು ಎಂದು ಸೂಚಿಸಿದ ಕೋರ್ಟ್, ಚಿಕಿತ್ಸೆ ಸಿಗುವುದಿಲ್ಲ ಎಂಬ ಕಾರಣಕ್ಕೆ ಯಾವ ರೋಗಿಯೂ ಆಸ್ಪತ್ರೆಯಿಂದ ಹಿಂದಿರುಗಬಾರದು ಎಂದೂ ತಾಕೀತು ಮಾಡಿದೆ. 

ಮುಖ್ಯನ್ಯಾಯಮೂರ್ತಿ ಎಸ್‌.ಎ. ಬೊಬಡೆ, ನ್ಯಾಯಮೂರ್ತಿಗಳಾದ ಆರ್. ಸುಭಾಷ್ ರೆಡ್ಡಿ ಮತ್ತು ಎ.ಎಸ್. ಬೋಪಣ್ಣ ಅವರ ಪೀಠವು ಸಚಿನ್ ಜೈನ್ ಎಂಬುವರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ನಡೆಸಿತು. ಚಿಕಿತ್ಸಾ ವೆಚ್ಚ ರಾಜ್ಯದಿಂದ ರಾಜ್ಯಕ್ಕೆ ಬದಲಾದರೂ, ಅದು ನ್ಯಾಯೋಚಿತವಾಗಿರಬೇಕು ಎಂದು ತಿಳಿಸಿತು.

ದರ ನಿಗದಿಯಲ್ಲಿ ಗುಜರಾತ್ ರಾಜ್ಯದ ಮಾದರಿ ಸೂಕ್ತವಾಗಿದ್ದು, ಉಳಿದ ರಾಜ್ಯಗಳು ಅನುಸರಿಸಬಹುದು ಎಂದು ಪೀಠ ಸಲಹೆ ನೀಡಿತು. ಆದರೆ ಶೇ 80ರಷ್ಟು ಹಾಸಿಗೆಗಳನ್ನು ಕೋವಿಡ್–19 ರೋಗಿಗಳಿಗೆಂದೇ ಕಾಯ್ದಿರಿಸಲಾಗಿರುವ ಮಹಾರಾಷ್ಟ್ರದಲ್ಲಿ ಇದು ಸಾಧ್ಯವಾಗದು ಎಂದು ಪೀಠ ಹೇಳಿತು.

ದರ ನಿಗದಿ ವಿಚಾರದಲ್ಲಿ ಉನ್ನತಾಧಿಕಾರ ಸಮಿತಿಯು ಈಗಾಗಲೇ ಪರಿಶೀಲನೆ ನಡೆಸುತ್ತಿದೆ ಎಂದು ಕೇಂದ್ರ ಸರ್ಕಾರದ ಪರ ಹಾಜರಿದ್ದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರು ಮಾಹಿತಿ ನೀಡಿದರು. 

‘ಖಾಸಗಿ ಆಸ್ಪತ್ರೆಗಳಲ್ಲಿ ಕೋವಿಡ್ ಚಿಕಿತ್ಸೆ ಹೇಗೆ ನಡೆಯುತ್ತಿದೆ ಎಂದು ನಾವು ನಿರ್ಧರಿಸುವುದು ಸರಿಯಲ್ಲ. ಅದು ಖಾಸಗಿ ಆಸ್ಪತ್ರೆಗಳಿಗೆ ಸಂಬಂಧಪಟ್ಟ ವಿಚಾರ. ಆರ್ಥಿಕವಾಗಿ ಸಬಲರಾದವರು ಖಾಸಗಿ ಆಸ್ಪತ್ರೆಗಳನ್ನು ಅರಸಿ ಹೋಗುತ್ತಾರೆ’ ಪೀಠ ಅಭಿಪ್ರಾಯಪಟ್ಟಿತು.  

‘ದೇಶದಾದ್ಯಂತ ಸಮಾನ ದರ ನಿಗದಿಪಡಿಸುವುದು ಸರಿಯಲ್ಲ. ಏಕೆಂದರೆ ಆಸ್ಪತ್ರೆಯ ವೈದ್ಯಕೀಯ ಉಪಕರಣ ಸೌಲಭ್ಯಗಳು ಹಾಗೂ ಸ್ಥಳೀಯ ಪರಿಸ್ಥಿತಿಗಳು ಬೇರೆ ಬೇರೆಯಾಗಿರುತ್ತವೆ’ ಎಂಬುದಾಗಿ ಖಾಸಗಿ ಆಸ್ಪತ್ರೆಗಳ ಪರ ವಕೀಲರಾದ ಹರೀಶ್ ಸಾಳ್ವೆ ಮತ್ತು ಮುಕುಲ್ ರೋಹಟಗಿ ಅವರು ವಾದ ಮಂಡಿಸಿದರು. ವಾದಕ್ಕೆ ಮನ್ನಣೆ ನೀಡಿದ ಕೋರ್ಟ್, ಆರ್ಥಿಕವಾಗಿ ದುರ್ಬಲ ವರ್ಗದವರಿಗೆ ಸರ್ಕಾರದ ಆಯುಷ್ಮಾನ್ ಭಾರತ್ ಯೋಜನೆಯಡಿ ಉಚಿತ ಚಿಕಿತ್ಸೆ ಲಭ್ಯವಿದೆ ಎಂದೂ ಹೇಳಿತು. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು