ಭಾನುವಾರ, ಆಗಸ್ಟ್ 1, 2021
27 °C
ಇಂತಹ ಕ್ರಮಗಳ ಉದ್ದೇಶ ಅತ್ಯಂತ ಸೀಮಿತ: ಭಾರತೀಯ ವಿಜ್ಞಾನಿಗಳ ಪ್ರತಿಪಾದನೆ

ಕೋವಿಡ್–19 | ‘ಕಿರು ಲಾಕ್‌ಡೌನ್‌ ಅಪ್ರಯೋಜಕ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ಕೋವಿಡ್–19 ಹರಡುವುದನ್ನು ತಡೆಯಲು ಹಲವು ರಾಜ್ಯಗಳು ಕಡಿಮೆ ಅವಧಿಯ ಲಾಕ್‌ಡೌನ್ ಜಾರಿ ಮಾಡುತ್ತಿವೆ. ಆದರೆ, ಕಿರು ಅವಧಿಯ ಈ ಲಾಕ್‌ಡೌನ್‌ನಿಂದ ಕೋವಿಡ್ ಹರಡುವಿಕೆಯನ್ನು ನಿಯಂತ್ರಿಸುವುದು ಸಾಧ್ಯವಿಲ್ಲ. ಇದರಿಂದ ಉಪಯೋಗವಿಲ್ಲ ಎಂದು ವಿಜ್ಞಾನಿಗಳು ಹೇಳಿದ್ದಾರೆ.

ದೇಶದ ವಿವಿಧ ವೈಜ್ಞಾನಿಕ ಸಂಸ್ಥೆಗಳಲ್ಲಿ ಕೆಲಸ ಮಾಡುತ್ತಿರುವ 500ಕ್ಕೂ ಹೆಚ್ಚು ವಿಜ್ಞಾನಿಗಳು ‘ಇಂಡಿಯನ್ ಸೈಂಟಿಸ್ಟ್‌ ರೆಸ್ಪಾನ್ಸ್‌ ಎಗೇನ್ಸ್ಟ್ ಕೋವಿಡ್–19’ ಎಂಬ ತಂಡವನ್ನು ಕಟ್ಟಿಕೊಂಡಿದ್ದಾರೆ. ಭಾರತದಲ್ಲಿ ಕೋವಿಡ್‌ ಹರಡುವಿಕೆಯ ಸ್ವರೂಪದ ಮೇಲೆ ಈ ತಂಡವು ಅಧ್ಯಯನ ನಡೆಸುತ್ತಿದೆ. ಕಿರು ಅವಧಿಯ ಲಾಕ್‌ಡೌನ್‌ನಿಂದ ಯಾವುದೇ ಉಪಯೋಗವಿಲ್ಲ ಎಂದು ಈ ತಂಡದ ಹಲವು ವಿಜ್ಞಾನಿಗಳು ಹೇಳಿದ್ದಾರೆ.

ದೇಶದಾದ್ಯಂತ 25ಕ್ಕೂ ಹೆಚ್ಚು ರಾಜ್ಯಗಳು ಕಿರು ಅವಧಿಯ ಮತ್ತು ವಾರಾಂತ್ಯದ ಲಾಕ್‌ಡೌನ್ ಜಾರಿ ಮಾಡಿವೆ. ಕರ್ನಾಟಕವೂ ಆಯ್ದ ಜಿಲ್ಲೆಗಳಲ್ಲಿ ಒಂದು ವಾರದ ಲಾಕ್‌ಡೌನ್‌ ಜಾರಿ ಮಾಡಲಿದೆ. ಇದೇ ಸಂದರ್ಭದಲ್ಲಿ ಈ ಅಭಿಪ್ರಾಯ ವ್ಯಕ್ತವಾಗಿದೆ.

‘ಸೋಂಕು ತಗಲುವುದು ಮತ್ತು ಆಸ್ಪತ್ರೆಗೆ ದಾಖಲಾಗುವುದನ್ನು ಕಿರು ಲಾಕ್‌ಡೌನ್‌ ಕೆಲಕಾಲ ಮುಂದೂಡಬಹುದು ಅಷ್ಟೆ. ಆದರೆ, ಸೋಂಕನ್ನು ಪರಿಣಾಮಕಾರಿಯಾಗಿ ನಿಯಂತ್ರಣಕ್ಕೆ ತರಲು ತಪಾಸಣೆಯೇ ಏಕೈಕ ಮಾರ್ಗ. ತಪಾಸಣೆಗಳ ಸಂಖ್ಯೆಯನ್ನು ಭಾರಿ ಸಂಖ್ಯೆಯಲ್ಲಿ ಏರಿಕೆ ಮಾಡಬೇಕು. ಸೋಂಕಿತರ ಸಂಪರ್ಕಕ್ಕೆ ಬಂದವರನ್ನು ಪತ್ತೆ ಮಾಡುವ ಕ್ರಿಯೆಗೆ ವೇಗ ದೊರೆಯಬೇಕು. ಅಂತಹವರನ್ನು ಕ್ಷಿಪ್ರವಾಗಿ ಪತ್ತೆ ಮಾಡಿ, ಕ್ವಾರಂಟೈನ್‌ ಮಾಡುವುದು ಮಾತ್ರವೇ ಪರಿಣಾಮಕಾರಿ ಮಾರ್ಗ’ ಎಂದು ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆಯಲ್ಲಿ ಪ್ರಾಧ್ಯಾಪಕರಾಗಿರುವ ವಿಶ್ವೇಶ ಗುತ್ತಾಳ್‌ ಹೇಳಿದ್ದಾರೆ.

‘ಕೋವಿಡ್‌ ಪ್ರಕರಣಗಳ ಏರಿಕೆ ಮತ್ತು ಸಕ್ರಿಯ ಪ್ರಕರಣಗಳ ಏರಿಕೆಯನ್ನು ನಿಯಂತ್ರಿಸುವುದರ ಮೇಲೆ ಕಿರು ಅವಧಿಯ ಈ ಲಾಕ್‌ಡೌನ್‌ಗಳು ಗಣನೀಯ ಪರಿಣಾಮ ಬೀರುವುದಿಲ್ಲ. ಕಿರು ಲಾಕ್‌ಡೌನ್‌ನ ವಿಚಾರದಲ್ಲಂತೂ ಇದು ಅಪ್ಪಟ ಸತ್ಯ’ ಎಂದು ಅವರು ಪ್ರತಿಪಾದಿಸಿದ್ದಾರೆ.

‘ಲಾಕ್‌ಡೌನ್‌ನ ಪರಿಣಾಮಗಳನ್ನು ನಿಖರವಾಗಿ ಅಂದಾಜಿಸಲು ಸಾಧ್ಯವಿಲ್ಲ. ಏಕೆಂದರೆ, ಲಾಕ್‌ಡೌನ್‌ನ ನಿಯಮಗಳನ್ನು ಜನರು ಎಷ್ಟರಮಟ್ಟಿಗೆ ಪಾಲಿಸುತ್ತಾರೆ ಎಂಬುದು ತಿಳಿದಿಲ್ಲ. ಇದನ್ನು ಜಾರಿಗೆ ತರಬೇಕಾದ ಸಂಸ್ಥೆಗಳೂ ಎಷ್ಟರಮಟ್ಟಿಗೆ ಇವನ್ನು ಪರಿಣಾಮಕಾರಿಯಾಗಿ ಅನುಷ್ಠಾನಕ್ಕೆ ತರುತ್ತವೆ ಎಂಬುದು ಗೊತ್ತಾಗುವುದಿಲ್ಲ’ ಎಂದು ವಿಜ್ಞಾನಿಗಳು ಹೇಳಿದ್ದಾರೆ.

‘ಪ್ರಾದೇಶಿಕ ಲಾಕ್‌ಡೌನ್‌ಗಳ ಉದ್ದೇಶ ಅತ್ಯಂತ ಸೀಮಿತವಾಗಿರುತ್ತದೆ. ಸೋಂಕಿತರ ಸಂಖ್ಯೆ ಏರಿಕೆ ಆಗುವುದನ್ನು ತಾತ್ಕಾಲಿಕವಾಗಿ ಕಡಿಮೆ ಮಾಡುವುದು ಮತ್ತು ಆ ಮೂಲಕ ನಿರ್ವಹಣೆ ಮಾಡಬಹುದಾದ ಪ್ರಮಾಣದಲ್ಲೇ ಸೋಂಕಿತರ ಸಂಖ್ಯೆಯನ್ನು ನಿಯಂತ್ರಣದಲ್ಲಿ ಇರಿಸಿಕೊಳ್ಳುವುದು ಇಂತಹ ಲಾಕ್‌ಡೌನ್‌ಗಳ ಉದ್ದೇಶ. ಲಾಕ್‌ಡೌನ್‌ಗಳ ಮೂಲಕ ಮಾತ್ರ ಸೋಂಕು ಹರಡುವಿಕೆಯ ಸರಪಳಿಯನ್ನು ತುಂಡರಿಸುವುದು ಸಾಧ್ಯವಿಲ್ಲ. ಇದು ಈಗ ಸಾಬೀತಾಗಿರುವ ವಿಚಾರ’ ಎಂದು ಚೆನ್ನೈನ ಇನ್‌ಸ್ಟಿಟ್ಯೂಟ್‌ ಆಫ್ ಮ್ಯಾಥಮೆಟಿಕಲ್ ಸೈನ್ಸಸ್‌ನ ಪ್ರಾಧ್ಯಾಪಕ ಸಿತಾಭ್ರ ಸಿನ್ಹಾ ಹೇಳಿದ್ದಾರೆ.

ರಿಪ್ರೊಡಕ್ಟಿವ್‌ ಸಂಖ್ಯೆಯಲ್ಲಿ ಇಳಿಕೆ: ಒಬ್ಬ ವ್ಯಕ್ತಿಯಿಂದ ಎಷ್ಟು ವ್ಯಕ್ತಿಗೆ ಸೋಂಕು ಹರಡುತ್ತದೆ ಎಂಬುದನ್ನು ಆರ್‌ (ರಿಪ್ರೊಡಕ್ಟೀವ್‌ ನಂಬರ್) ಸಂಖ್ಯೆಯಿಂದ ಗುರುತಿಸಲಾಗುತ್ತದೆ. ಭಾರತದಲ್ಲಿ ಈ ಸಂಖ್ಯೆ ಏಪ್ರಿಲ್‌ ತಿಂಗಳಿನಲ್ಲಿ 1.82ರಷ್ಟು ಇತ್ತು.
ಈಗ ‘ಆರ್‌’ ಸಂಖ್ಯೆ 1.11ಕ್ಕೆ ಇಳಿಕೆಯಾಗಿದೆ. ಜುಲೈ 2ರಿಂದ 5ರ ನಡುವೆ ಈ ಸಂಖ್ಯೆ 1.19ಕ್ಕೆ ಏರಿಕೆಯಾಗಿತ್ತು. ಈಗ ಇದು ಇಳಿಕೆಯಾಗಿದೆ. ಇದು ಶುಭ ಸುದ್ದಿ ಎಂದು ವಿಜ್ಞಾನಿಗಳು ತಿಳಿಸಿದ್ದಾರೆ.

**

ಲಾಕ್‌ಡೌನ್‌ ಅವಧಿಯಲ್ಲಿ ತಪಾಸಣೆ, ಸೋಂಕಿತರ ಪತ್ತೆ ಮತ್ತು ಕ್ವಾರಂಟೈನ್‌ಗೆ ಅಗತ್ಯವಿರುವ ಮೂಲಸೌಕರ್ಯ ಹೆಚ್ಚಿಸಿಕೊಳ್ಳದಿದ್ದರೆ, ಲಾಕ್‌ಡೌನ್‌ನಿಂದ ಉಪಯೋಗವಿಲ್ಲ.
-ವಿಶ್ವೇಶ ಗುತ್ತಾಳ್, ಪ್ರಾಧ್ಯಾಪಕ, ಭಾರತೀಯ ವಿಜ್ಞಾನ ಸಂಸ್ಥೆ

ವಿಜ್ಞಾನಿಗಳು ಹೇಳಿದ್ದು...
* ಕಿರು ಲಾಕ್‌ಡೌನ್‌ನಿಂದ ಸೋಂಕಿನ ಗರಿಷ್ಠಮಟ್ಟ ಮುಂದೂಡುವುದಷ್ಟೇ ಸಾಧ್ಯ
* ಲಾಕ್‌ಡೌನ್‌ನಿಂದ ಗಣನೀಯ ಉಪಯೋಗವಿಲ್ಲ ಎಂಬುದು ಸಾಬೀತಾಗಿದೆ
* ಮೂಲಸೌಕರ್ಯ ಹೆಚ್ಚಿಸಲು ಲಾಕ್‌ಡೌನ್ ಬಳಸಿಕೊಂಡರಷ್ಟೇ ಉಪಯೋಗ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು