ಬುಧವಾರ, ಸೆಪ್ಟೆಂಬರ್ 29, 2021
19 °C

ಸುಶಾಂತ್‌ ಸಾವು: ಮುಂಬೈ–ಪಟ್ನಾ ಪೊಲೀಸರ ಜಟಾಪಟಿ, ತನಿಖಾಧಿಕಾರಿಗೆ ಕ್ವಾರಂಟೈನ್

ಪಿಟಿಐ Updated:

ಅಕ್ಷರ ಗಾತ್ರ : | |

ಸುಶಾಂತ್‌ ಸಿಂಗ್‌

ಮುಂಬೈ/ಪಟ್ನಾ: ನಟ ಸುಶಾಂತ್ ಸಿಂಗ್ ರಜಪೂತ್‌ ಅವರ ಅಸಹಜ ಸಾವಿಗೆ ಸಂಬಂಧಿಸಿದ ತನಿಖೆಯು ಮುಂಬೈ ಪೊಲೀಸರು ಮತ್ತು ಪಟ್ನಾ ಪೊಲೀಸರ ಜಟಾಪಟಿಗೆ ಕಾರಣವಾಗಿದೆ.

ಸುಶಾಂತ್‌ ಅವರ ಗೆಳತಿ ರಿಯಾ ಚಕ್ರವರ್ತಿ ಅವರನ್ನು ವಿಚಾರಣೆಗೆ ಒಳಪಡಿಸಲು ಮುಂಬೈಗೆ ಬಂದಿದ್ದ ಪಟ್ನಾ ಪೊಲೀಸರನ್ನು ಮುಂಬೈನಲ್ಲಿ ಒತ್ತಾಯ ಪೂರ್ವಕವಾಗಿ ಕ್ವಾರಂಟೈನ್‌ಗೆ ಹಾಕಿರುವುದಕ್ಕೆ ಟೀಕೆ ವ್ಯಕ್ತವಾಗಿದೆ. ಇದರ ಬೆನ್ನಲ್ಲೇ, ಸುಶಾಂತ್ ಅವರು ಮಾನಸಿಕ ಸಮಸ್ಯೆಯಿಂದ ಬಳಲುತ್ತಿದ್ದರು ಎಂದು ಮುಂಬೈ ಪೊಲೀಸರು ಹೇಳಿಕೆ ನೀಡಿದ್ದಾರೆ.

ಸುಶಾಂತ್ ಸಿಂಗ್ ಅವರ ತಂದೆ ಕೆ.ಕೆ. ಸಿಂಗ್ ಅವರು ನೀಡಿರುವ ದೂರಿನ ಅನ್ವಯ ರಿಯಾ ಅವರನ್ನು ವಿಚಾರಣೆಗೆ ಒಳಪಡಿಸಲು ಪಟ್ನಾ ಪೊಲೀಸರು ಭಾನುವಾರ ಮುಂಬೈಗೆ ಬಂದಿಳಿದಿದ್ದರು. ಈ ಪ್ರಕರಣದ ತನಿಖೆ ನಡೆಸುತ್ತಿರುವ ಬಿಹಾರದ ಎಸ್‌ಐಟಿ ಮುಖ್ಯಸ್ಥ, ಐಪಿಎಸ್ ಅಧಿಕಾರಿ ವಿನಯ್ ತಿವಾರಿ ಅವರನ್ನೂ ಕ್ವಾರಂಟೈನ್‌ಗೆ ಒಳಪಡಿಸಿದ್ದಕ್ಕೆ ತೀವ್ರ ಟೀಕೆ ವ್ಯಕ್ತವಾಗಿದೆ.  

‘ಬಿಹಾರದ ಪಟ್ನಾ ಪೊಲೀಸರನ್ನು ಮುಂಬೈನಲ್ಲಿ ಒತ್ತಾಯಪೂರ್ವಕವಾಗಿ ಕ್ವಾರಂಟೈನ್‌ಗೆ ಒಳಪಡಿಸಲಾಗಿದೆ. ನಮ್ಮ ಅಧಿಕಾರಿಯನ್ನು ನಡೆಸಿಕೊಂಡಿರುವ ರೀತಿ ಸರಿಯಲ್ಲ’ ಎಂದು ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಬಿಹಾರದ ಪೊಲೀಸರನ್ನು ಕ್ವಾರಂಟೈನ್‌ನಿಂದ ಬಿಡುಗಡೆ ಮಾಡುವ ಬಗ್ಗೆ ಬಿಹಾರ ಪೊಲೀಸ್ ಮಹಾ ನಿರ್ದೇಶಕ ಗುಪ್ತೇಶ್ವರ್ ಪಾಂಡೆ ಅವರು ಬೃಹನ್‌ ಮುಂಬೈ ನಗರ ಪಾಲಿಕೆ ಅಧಿಕಾರಿಗಳ ಜತೆ ಮಾತನಾಡಿದ್ದಾರೆ ಎಂದು ನಿತೀಶ್ ಮಾಹಿತಿ ನೀಡಿದ್ದಾರೆ.

‘ತಮ್ಮ ಮಾಜಿ ಮ್ಯಾನೇಜರ್ ದಿಶಾ ಸಿಂಗ್ ಅವರ ಸಾವಿನ ಜತೆ ತಮ್ಮ ಹೆಸರು ತಳಕು ಹಾಕಿಕೊಂಡದ್ದರ ಬಗ್ಗೆ ಸುಶಾಂತ್ ತಲೆಕೆಡಿಸಿಕೊಂಡಿದ್ದರು. ಸಾವಿಗೂ ಮುನ್ನ ಅವರು ಗೂಗಲ್‌ನಲ್ಲಿ ತಮ್ಮ ಹೆಸರು, ತಮ್ಮ ಹೆಸರಿನ ಜತೆ ಪ್ರಕಟವಾಗಿರುವ ವರದಿಗಳನ್ನು ಹುಡುಕಾಡಿದ್ದರು. ಅಲ್ಲದೆ, ನೋವಿಲ್ಲದೆ ಸಾಯುವ ವಿಧಾನದ ಬಗ್ಗೆಯೂ ಗೂಗಲ್‌ನಲ್ಲಿ ಹುಡುಕಾಡಿದ್ದರು’ ಎಂದು ಮುಂಬೈ ಪೊಲೀಸ್ ಆಯುಕ್ತ ಪರಮವೀರ್ ಸಿಂಗ್ ಹೇಳಿದ್ದಾರೆ.‘ಸುಶಾಂತ್ ಸಾವಿನ ತನಿಖೆಯಲ್ಲಿ ಯಾವ ರಾಜಕಾರಣಿಯ ಹೆಸರೂ ಇಲ್ಲ. ಯಾವುದೇ ರಾಜಕಾರಣಿ ವಿರುದ್ಧವಾಗಿ ಯಾವುದೇ ಸಾಕ್ಷ್ಯ ಈವರೆಗೆ ಲಭ್ಯವಾಗಿಲ್ಲ. ನಮ್ಮ ತನಿಖೆಯಲ್ಲಿ ಯಾವುದೇ ಲೋಪವಾಗಿಲ್ಲ’ ಎಂದು ಪರಮವೀರ್ ಸಿಂಗ್ ಹೇಳಿದ್ದಾರೆ.

‘ನನ್ನ ಮಗನ ಜೀವಕ್ಕೆ ಅಪಾಯವಿದೆ ಎಂದು ಫೆಬ್ರುವರಿಯಲ್ಲೇ ನಾನು ಮುಂಬೈನ ಬಾಂದ್ರಾ ಪೊಲೀಸರಿಗೆ ತಿಳಿಸಿದ್ದೆ. ಆದರೆ ಅವರು ಯಾವ ಕ್ರಮವನ್ನೂ ತೆಗೆದುಕೊಳ್ಳಲಿಲ್ಲ. ಹೀಗಾಗಿ ನಾನು ಪಟ್ನಾ ಪೊಲೀಸರಿಗೆ ದೂರು ನೀಡಬೇಕಾಯಿತು. ಈಗಲಾದರೂ ಸತ್ಯ ಹೊರಗೆ ಬರುತ್ತದೆ ಎಂದುಕೊಂಡಿದ್ದೇನೆ’ ಎಂದು ಸುಶಾಂತ್ ಅವರ ತಂದೆ ಕೆ.ಕೆ.ಸಿಂಗ್ ಹೇಳಿದ್ದಾರೆ.

* ಸುಶಾಂತ್ ಅವರ ಬ್ಯಾಂಕ್ ಖಾತೆಯಿಂದ ರಿಯಾ ಚಕ್ರವರ್ತಿ ಅವರು ತಮ್ಮ ಖಾತೆಗೆ ₹15 ಕೋಟಿ ವರ್ಗಾವಣೆ ಮಾಡಿಕೊಂಡಿದ್ದಾರೆ. ಈ ಹಣವನ್ನು ಹೂಡಿಕೆ ಮಾಡಲಾಗಿದೆ.

-ಪಟ್ನಾ ಪೊಲೀಸರ ಎಫ್‌ಐಆರ್

* ಸುಶಾಂತ್ ಅವರ ಖಾತೆಯಲ್ಲಿ ₹18 ಕೋಟಿ ಇತ್ತು. ಈಗ ಅದರಲ್ಲಿ ₹ 4.5 ಕೋಟಿ ಉಳಿದಿದೆ. ರಿಯಾ ಅವರ ಖಾತೆಗೆ ಹಣ ನೇರವಾಗಿ ವರ್ಗಾವಣೆ ಆಗಿರುವುದು ಪತ್ತೆಯಾಗಿಲ್ಲ.

-ಪರಮವೀರ್ ಸಿಂಗ್, ಮುಂಬೈ ಪೊಲೀಸ್ ಆಯುಕ್ತ

* ಸುಶಾಂತ್ ಅವರು ‘ಬೈಪೋಲ್ ಡಿಸಾರ್ಡರ್’ ಎಂಬ ಕಾಯಿಲೆಯಿಂದ ಬಳಲುತ್ತಿದ್ದರು. ಅವರ ಸಾವಿಗೆ ಕಾರಣ ಏನು ಎಂಬುದಷ್ಟೇ ನಮ್ಮ ತನಿಖೆಯ ಗುರಿ

- ಮುಂಬೈ ಪೊಲೀಸರು

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು