ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಧೂಮಪಾನಿಗಳಿಗೆ ಕೋವಿಡ್ ಅಪಾಯ ಹೆಚ್ಚು: ಆರೋಗ್ಯ ಸಚಿವಾಲಯ

Last Updated 29 ಜುಲೈ 2020, 8:05 IST
ಅಕ್ಷರ ಗಾತ್ರ

ನವದೆಹಲಿ: ಧೂಮಪಾನದ ವೇಳೆ ಕೈಯಿಂದ ಬಾಯಿಗೆ ವೈರಸ್ ಹರಡುವ ಸಾಧ್ಯತೆ ಹೆಚ್ಚಿದ್ದು, ಧೂಮಪಾನಿಗಳು ಕೋವಿಡ್‌–19 ಅಪಾಯಕ್ಕೆ ಒಳಗಾಗುವ ಸಾಧ್ಯತೆ ಅಧಿಕ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಹೇಳಿದೆ.

‘ಕೋವಿಡ್ ಪಿಡುಗು ಹಾಗೂ ಭಾರತದಲ್ಲಿ ತಂಬಾಕು ಬಳಕೆ’ ಎಂಬ ವರದಿಯಲ್ಲಿ ‘ತಂಬಾಕು ಉತ್ಪನ್ನಗಳ ಬಳಕೆಯು ಉಸಿರಾಟದ ಸಮಸ್ಯೆಗೆ ಕಾರಣವಾಗಬಹುದು’ ಎಂದು ಸಚಿವಾಲಯ ಎಚ್ಚರಿಕೆ ನೀಡಿದೆ. ಧೂಮಪಾನಿಗಳಲ್ಲಿ ಸೋಂಕಿನ ಲಕ್ಷಣಗಳು ಬಹುಬೇಗ ಕಾಣಿಸಿಕೊಂಡು, ಅವರ ಶ್ವಾಸಕೋಶದ ಮೇಲೆ ದಾಳಿ ಮಾಡಬಹುದು ಎಂದು ತಿಳಿಸಿದೆ.

ಧೂಮಪಾನದ ವೇಳೆ ಕೈ ಬೆರಳುಗಳು, ಸಿಗರೇಟು ಹಾಗೂ ತುಟಿಗಳ ನಡುವೆ ಸಂಪರ್ಕ ಏರ್ಪಟ್ಟು ವೈರಸ್ ಬಹುಬೇಗ ಹರಡುವ ಅಪಾಯವಿರುತ್ತದೆ. ಹುಕ್ಕಾ ಸೇದುವುದು ಕೂಡಾ ವೈರಸ್ ಪ್ರಸರಣಕ್ಕೆ ಕಾರಣವಾಗುತ್ತದೆ ಎಂದು ಎಚ್ಚರಿಸಲಾಗಿದೆ.

ತಂಬಾಕು ಉತ್ಪನ್ನಗಳ ಬಳಕೆಯು ಸಾಂಕ್ರಾಮಿಕವಲ್ಲದ (ಎನ್‌ಸಿಡಿ) ನಾಲ್ಕು ಕಾಯಿಲೆಗಳಿಗೆ ದೂಡುತ್ತದೆ.ಹೃದಯ ರಕ್ತನಾಳದ ಕಾಯಿಲೆ, ಕ್ಯಾನ್ಸರ್, ದೀರ್ಘಕಾಲದ ಶ್ವಾಸಕೋಶದ ಕಾಯಿಲೆ ಮತ್ತು ಮಧುಮೇಹ ಉಂಟಾಗುತ್ತದೆ. ಕೋವಿಡ್ ಸೋಂಕು ತಗುಲಿದಾಗ ಈ ಅಪಾಯಗಳು ಇನ್ನಷ್ಟು ಕಾಡುತ್ತವೆ. ದೇಶದಲ್ಲಿ ಎನ್‌ಸಿಡಿಗಳಿಂದಲೇ ಶೇ 63ರಷ್ಟು ಸಾವುಗಳು ಸಂಭವಿಸುತ್ತಿವೆ.

ದೇಹದಲ್ಲಿ ರೋಗನಿರೋಧಕ ಚಟುವಟಿಕೆಯಲ್ಲಿ ತೊಡಗಿರುವ ಕೋಶಗಳನ್ನು ತಂಬಾಕಿನ ಹೊಗೆಯಲ್ಲಿರುವ ರಾಸಾಯನಿಕಗಳು ನಿಗ್ರಹಿಸುತ್ತವೆ. ಧೂಮಪಾನ, ಇ–ಸಿಗರೇಟ್, ಹೊಗೆರಹಿತ ತಂಬಾಕು, ಪಾನ್ ಮಸಾಲ ಸೇವನೆಯು ಶ್ವಾಸಕೋಶದ ಸೋಂಕು ತಂದೊಡ್ಡುತ್ತದೆ ಎಂದು ವರದಿ ಹೇಳಿದೆ.

ಈಗಾಗಲೇ ಸಾಂಕ್ರಾಮಿಕವಲ್ಲದ ರೋಗಗಳಿಂದ ಬಳಲುತ್ತಿರುವವರು ಕೋವಿಡ್‌ನ ತೀವ್ರ ತೊಂದರೆಗೆ ಸಿಲುಕಿಕೊಳ್ಳುವ ಸಾಧ್ಯತೆ ಇದೆ ಎಂದು ವಿವಿಧ ದೇಶಗಳ ಕೋವಿಡ್ ವರದಿಗಳು ಪುರಾವೆ ಒದಗಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT