ಶನಿವಾರ, ಜುಲೈ 31, 2021
21 °C

ಕೋವಿಡ್‌ ಮರುದಾಳಿ ತಳ್ಳಿಹಾಕುವಂತಿಲ್ಲ: ಅಧ್ಯಯನ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ‘ಕೋವಿಡ್‌ನಿಂದ ಚೇತರಿಸಿಕೊಂಡವರಲ್ಲಿ ಸೃಷ್ಟಿಯಾಗಿರುವ ಪ್ರತಿಕಾಯಗಳು ಕೆಲವು ತಿಂಗಳ ಕಾಲ ಮಾತ್ರ ಅವರ ಶರೀರದಲ್ಲಿ ಇರಲಿವೆ ಎಂಬುದು ಇತ್ತೀಚಿನ ಅಧ್ಯಯನದಿಂದ ತಿಳಿದುಬಂದಿದೆ. ಆದ್ದರಿಂದ ಕೋವಿಡ್‌ ವಿರುದ್ಧ ದೀರ್ಘ ಕಾಲದವರೆಗೂ ರಕ್ಷಣೆ ಪಡೆಯುವುದು ಸಾಧ್ಯವಾಗದು’ ಎಂದು ವಿಜ್ಞಾನಿಗಳು ಹೇಳಿದ್ದಾರೆ.

ಆದರೆ, ಒಮ್ಮೆ ಕೊರೊನಾ ಸೋಂಕಿನಿಂದ ಪಾರಾದವರಿಗೆ ಪುನಃ ಸೋಂಕು ತಗಲುವ ಸಾಧ್ಯತೆ ಇದೆಯೇ ಎಂಬುದನ್ನು ಈಗಲೇ ಹೇಳಲಾಗದು. ರೋಗನಿರೋಧಕ ವ್ಯವಸ್ಥೆಯ ಕೆಲವು ವಿಶೇಷ ಜೀವಕೋಶಗಳು ವ್ಯಕ್ತಿಯು ಪುನಃ ಸೋಂಕಿಗೆ ಒಳಗಾಗುವುದರಿಂದ ರಕ್ಷಣೆ ಒದಗಿಸಬಲ್ಲವು ಎಂದು ಅವರು ಹೇಳಿದ್ದಾರೆ.

‘ಕೋವಿಡ್‌ನಿಂದ ಚೇತರಿಸಿಕೊಂಡ ನಂತರ, ವೈರಸ್‌ ಅನ್ನು ತಡೆಯುವ ಪ್ರತಿಕಾಯಗಳ ಮಟ್ಟವು ಕಡಿಮೆ ಇರುವ ಜನರು, ಪುನಃ ಸೋಂಕಿತರಾಗಿ, ಕೋವಿಡ್‌-19 ರೋಗಕ್ಕೆ ತುತ್ತಾಗುವ ಅಪಾಯವಿದೆಯೇ ಎಂಬುದನ್ನು ಈಗಲೇ ಹೇಳಲಾಗದು’ ಎಂದು ಪುಣೆಯ ಇಂಡಿಯನ್‌ ಇನ್‌ಸ್ಟಿಟ್ಯೂಟ್‌ ಆಫ್‌ ಸೈನ್ಸ್‌, ಎಜುಕೇಶನ್‌ ಆ್ಯಂಡ್‌ ರಿಸರ್ಚ್‌ನ ರೋಗನಿರೋಧಕ ಶಾಸ್ತ್ರ ತಜ್ಞೆ ವಿನೀತಾ ಬಲ ಹೇಳಿದ್ದಾರೆ.

‘ಈ ಪಿಡುಗು ಇನ್ನೂ ಆರೇಳು ತಿಂಗಳುಗಳಷ್ಟೇ ಹಳೆಯದು. ಆದರೂ ಎರಡನೇ ಬಾರಿ ಜನರು ಸೋಂಕಿತರಾಗಿರುವ ಬಗ್ಗೆ ವರದಿಗಳು ಬಂದಿವೆ. ಇವರಲ್ಲಿ ಹೆಚ್ಚಿನವರು ಜನವರಿ ತಿಂಗಳಲ್ಲಿ ಮೊದಲಬಾರಿ ಸೋಂಕಿಗೆ ಒಳಗಾದವರಾಗಿದ್ದರು’ ಎಂದು ಅವರು ವಿಡಿಯೊ ಸಂದರ್ಶನದಲ್ಲಿ ಹೇಳಿದ್ದಾರೆ.

ಕೋವಿಡ್‌–19ಗೆ ತುತ್ತಾಗಿ ಚೇತರಿಸಿಕೊಂಡವರಲ್ಲಿ 18ರಿಂದ 65 ದಿನಗಳ ಅವಧಿಯಲ್ಲಿ ಪ್ರತಿಕಾಯಗಳ ಪ್ರಮಾಣವು ಕ್ರಮವಾಗಿ ಎರಡು ಪಟ್ಟು ಮತ್ತು 23 ಪಟ್ಟು ಕಡಿಮೆಯಾಗಿರುವುದು ಕಂಡುಬಂದಿರುವುದು ಬ್ರಿಟನ್‌ನಲ್ಲಿ ನಡೆಸಿದ ಒಂದು ಅಧ್ಯಯನದಲ್ಲಿ ತಿಳಿದುಬಂದಿದೆ. ನೇಚರ್‌ ಮೆಡಿಸಿನ್‌ ಪತ್ರಿಕೆಯು ಕಳೆದ ತಿಂಗಳು ಪ್ರಕಟಿಸಿರುವ ಇನ್ನೊಂದು ಅಧ್ಯಯನ ವರದಿಯ ಪ್ರಕಾರ ಸೋಂಕಿನ ಲಕ್ಷಣ ಇಲ್ಲದವರೂ ಸೇರಿದಂತೆ ಕೋವಿಡ್‌–19ನಿಂದ ಚೇತರಿಸಿಕೊಂಡವರ ದೇಹದಲ್ಲಿ ಆನಂತರದ ಎರಡರಿಂದ ಮೂರು ತಿಂಗಳವರೆಗೆ ಮಾತ್ರ ಪ್ರತಿಕಾಯಗಳು ಇರುತ್ತವೆ.

ಕೋವಿಡ್‌ನಿಂದ ಚೇತರಿಸಿಕೊಂಡವರಲ್ಲಿ ಪ್ರತಿಕಾಯಗಳ ಪ್ರಮಾಣ ಕಡಿಮೆಯಾದರೂ, ಇತರ ರೋಗನಿರೋಧಕ ವ್ಯವಸ್ಥೆಯು ದೀರ್ಘಾವಧಿಯವರೆಗೆ ರೋಗದಿಂದ ರಕ್ಷಣೆ ನೀಡಬಲ್ಲದು. ಒಮ್ಮೆ ಸೋಂಕಿನಿಂದ ಚೇತರಿಸಿಕೊಂಡವರು ಮತ್ತೆ ಸೋಂಕಿಗೊಳಗಾದರೆ ಅವರ ಶರೀರದೊಳಗಿರುವ ಟಿ ಜೀವಕೋಶಗಳು ಇದರಿಂದ ರಕ್ಷಣೆ ಒದಗಿಸಬಲ್ಲವು ಎಂಬುದೂ ಕೆಲವು ಅಧ್ಯಯನಗಳಲ್ಲಿ ಕಂಡುಬಂದಿದೆ. ಎಂದು ಬಲ ತಿಳಿಸಿದ್ದಾರೆ.

‘ನಮ್ಮ ರೋಗನಿರೋಧಕ ವ್ಯವಸ್ಥೆಯು ಸಾಮಾನ್ಯ ನೆಗಡಿಯ ಸಂದರ್ಭದಲ್ಲಿ ಹೇಗೆ ಪ್ರತಿಕ್ರಿಯೆ ನೀಡುವುದೋ ಅದೇ ರೀತಿಯ ಪ್ರತಿಕ್ರಿಯೆಯನ್ನು ಕೊರೊನಾ ವಿರುದ್ಧವೂ ನೀಡುವುದು ಕಂಡುಬಂದಿದೆ. ಪ್ರತಿಕಾಯಗಳ ಮಟ್ಟ ಎಷ್ಟು ಶೀಘ್ರ ಉತ್ತುಂಗಕ್ಕೆ ಹೋಗುವುದೋ ಅಷ್ಟೇ ಶೀಘ್ರವಾಗಿ ಕಡಿಮೆಯಾಗುತ್ತದೆ’ ಎಂದು ದೆಹಲಿಯ ನ್ಯಾಷನಲ್‌ ಇನ್‌ಸ್ಟಿಟ್ಯೂಟ್‌ ಆಫ್‌ ಇಮ್ಯುನಾಲಜಿಯ ರೋಗನಿರೋಧಕ ತಜ್ಞ ಡಾ. ಸತ್ಯಜಿತ್‌ ರಥ್‌ ಹೇಳಿದ್ದಾರೆ.

‘ಒಮ್ಮೆ ಕೊರೊನಾ‌ ಸೋಂಕಿಗೆ ಒಳಗಾದವರಲ್ಲಿ ವೈರಸ್‌ ನಿರ್ದಿಷ್ಟ ಟಿ ಜೀವಕೋಶಗಳು ಕ್ರಿಯಾಶೀಲಗೊಂಡು, ರೋಗಿಯು ಪುನಃ ಸೋಂಕಿಗೆ ಒಳಗಾಗುವುದನ್ನು ತಡೆದಿರುವುದಕ್ಕೆ ಕೆಲವು ನಿದರ್ಶನಗಳಿವೆ’ ಎಂದು ಅವರು ತಿಳಿಸಿದ್ದಾರೆ.

‘ಎರಡು ಅಧ್ಯಯನಗಳು ಹೇಳಿರುವಂತೆ, ಕೋವಿಡ್‌ನಿಂದ ರಕ್ಷಣೆ ನೀಡುವಲ್ಲಿ ಪ್ರತಿಕಾಯಗಳೇ ಪ್ರಮುಖ ಪಾತ್ರ ವಹಿಸುತ್ತವೆ ಎನ್ನುವುದಾದರೆ, ವ್ಯಕ್ತಿಗಾಗಲಿ, ಸಮುದಾಯಕ್ಕಾಗಲಿ ಈ ರೋಗದಿಂದ ದೀರ್ಘಕಾಲಿಕ ರಕ್ಷಣೆ ಪಡೆಯುವುದು ಕಷ್ಟವಾಗಬಹುದು’ ಎಂದು ವಿಜ್ಞಾನಿಗಳು ಅಭಿಪ್ರಾಯಪಟ್ಟಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು