ಮಂಗಳವಾರ, ಸೆಪ್ಟೆಂಬರ್ 21, 2021
21 °C

ಅಯೋಧ್ಯೆ ಶಿಲಾನ್ಯಾಸ ಕಾರ್ಯಕ್ರಮದಿಂದ ದೂರ ಉಳಿಯುವೆ: ಉಮಾ ಭಾರತಿ

ಏಜೆನ್ಸೀಸ್ Updated:

ಅಕ್ಷರ ಗಾತ್ರ : | |

prajavani

ಅಯೋಧ್ಯೆ: ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣಕ್ಕಾಗಿ ಹೋರಾಟ ನಡೆಸಿದವ ಪ್ರಮುಖರಲ್ಲಿ ಒಬ್ಬರಾದ ಬಿಜೆಪಿಯ ಹಿರಿಯ ನಾಯಕಿ ಉಮಾ ಭಾರತಿ ಅವರು ಕೊರೊನಾ ವೈರಸ್ ಕಾರಣದಿಂದಾಗಿ ಅಯೋಧ್ಯೆಯಲ್ಲಿ ಆಗಸ್ಟ್ 5ರಂದು ನಡೆಯುವ ಕಾರ್ಯಕ್ರಮದಿಂದ ದೂರ ಉಳಿಯುವುದಾಗಿ ಹೇಳಿದ್ದಾರೆ.

ಅಯೋಧ್ಯೆಯಲ್ಲಿ ನಡೆಯುವ ಭೂಮಿ ಪೂಜೆ ಕಾರ್ಯಕ್ರಮದಲ್ಲಿ ಭಾಗವಹಿಸುವುದಿಲ್ಲ ಎಂದು ಹೇಳಿರುವ ಅವರು, ತಾನು ಸರಯು ನದಿಯ ದಡದಲ್ಲಿ ಇರುತ್ತೇನೆ. ಭೂಮಿ ಪೂಜೆ ಕಾರ್ಯಕ್ರಮ ಮುಗಿದ ಬಳಿಕ 'ರಾಮ್ ಲಲ್ಲಾ'ಗೆ ಪ್ರಾರ್ಥನೆ ಸಲ್ಲಿಸುತ್ತೇನೆ ಎಂದಿದ್ದಾರೆ.

ಈ ಕುರಿತು ಟ್ವೀಟ್ ಮಾಡಿರುವ ಅವರು, ಗೃಹ ಸಚಿವ ಅಮಿತ್ ಶಾ ಮತ್ತು ಉತ್ತರ ಪ್ರದೇಶದ ಕೆಲ ನಾಯಕರಿಗೆ ಕೋವಿಡ್-19 ಸೋಂಕು ತಗುಲಿರುವುದು ದೃಢಪಟ್ಟಿರುವುದನ್ನು ನಾನು ಕೇಳಿದಾಗಿನಿಂದಲೂ ರಾಮ ಮಂದಿರ ನಿರ್ಮಾಣದ ಭೂಮಿ ಪೂಜೆ ಸಮಾರಂಭದಲ್ಲಿ ಪಾಲ್ಗೊಳ್ಳುವವರ ಬಗ್ಗೆ ನನಗೆ ಚಿಂತೆಯುಂಟಾಗಿದೆ. ಸಮಾರಂಭದ ದಿನದಂದು ಸರಯು ನದಿಯ ದಡದಲ್ಲಿ ಉಳಿಯುತ್ತೇನೆ ಎಂದು ನಾನು ದೇವಾಲಯದ ಅಧಿಕಾರಿಗಳಿಗೆ ತಿಳಿಸಿದ್ದೇನೆ ಎಂದಿದ್ದಾರೆ.

ಸೋಂಕಿತರೊಂದಿಗೆ ಸಂಪರ್ಕಕ್ಕೆ ಬರುವುದರ ಬಗ್ಗೆ ತನ್ನ ಭಯವನ್ನು ವ್ಯಕ್ತಪಡಿಸಿರುವ ಅವರು, ಸಮಾರಂಭದಿಂದ ದೂರ ಉಳಿಯುವುದೇ ಉತ್ತಮ ಎಂದು ಹೇಳಿದ್ದಾರೆ.

ನಾನು ಇಂದು ಭೋಪಾಲ್‌‌ನಿಂದ ಹೊರಡುತ್ತೇನೆ. ನಾಳೆ ಸಂಜೆ ಅಯೋಧ್ಯೆಯನ್ನು ತಲುಪುವವರೆಗೂ ಕೂಡ ನಾನು ಕೋವಿಡ್ ಸೋಂಕಿತರೊಂದಿಗೆ ಸಂಪರ್ಕ ಹೊಂದುವ ಸಾಧ್ಯತೆ ಹೆಚ್ಚಿರುತ್ತದೆ. ಇಂತಹ ಪರಿಸ್ಥಿತಿಯಲ್ಲಿ ಪ್ರಧಾನಿ ಮತ್ತು ಇತರರು ಭಾಗವಹಿಸುವ ಕಾರ್ಯಕ್ರಮದಿಂದ ನಾನು ದೂರವಿರುವುದು ಉತ್ತಮವಾಗಿದೆ. ಪ್ರಧಾನಿ ನರೇಂದ್ರ ಮೋದಿ ಮತ್ತು ಇತರರು ಕಾರ್ಯಕ್ರಮ ಮುಗಿಸಿಕೊಂಡು ತೆರಳಿದ ಬಳಿಕ ನಾನು ಅಯೋಧ್ಯೆಗೆ ತೆರಳಿ 'ರಾಮ ಲಲ್ಲಾ'ನ ದರ್ಶನ ಪಡೆಯುತ್ತೇನೆ ಎಂದು ತಿಳಿಸಿದ್ದಾರೆ.

ಈಮಧ್ಯೆ, 1990ರ ದಶಕದಲ್ಲಿ ರಾಮ ಜನ್ಮಭೂಮಿ ಚಳವಳಿಯ ನೇತೃತ್ವ ವಹಿಸಿದ್ದ ಎಲ್.ಕೆ. ಅಡ್ವಾಣಿ ಅವರು ಸಮಾರಂಭದ ಆಹ್ವಾನಕ್ಕಾಗಿ ಇನ್ನೂ ಕಾಯುತ್ತಿದ್ದರೆ, ಹಿರಿಯ ನಾಯಕ ಎಂ. ಎಂ. ಜೋಶಿ ಕೂಡ ಇನ್ನೂ ಆಹ್ವಾನವನ್ನು ಸ್ವೀಕರಿಸಿಲ್ಲ.

ವಿಎಚ್‌ಪಿಯ ನಂಬಲರ್ಹ ಮೂಲಗಳ ಪ್ರಕಾರ, ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್ ಅವರು ಅಡ್ವಾಣಿಗೆ ಆಹ್ವಾನವನ್ನು ನೀಡುವ ನಿರೀಕ್ಷೆಯಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು