ಶುಕ್ರವಾರ, ಆಗಸ್ಟ್ 14, 2020
26 °C

ಉತ್ತರಪ್ರದೇಶ ಕೋವಿಡ್ | ಹೆಚ್ಚುತ್ತಿರುವ ಸೋಂಕು, ಸೋಮವಾರದವರೆಗೆ ಲಾಕ್‌‌ಡೌನ್

ಏಜೆನ್ಸಿಸ್ Updated:

ಅಕ್ಷರ ಗಾತ್ರ : | |

ನವದೆಹಲಿ: ಉತ್ತರಪ್ರದೇಶದಲ್ಲಿ ಹೆಚ್ಚುತ್ತಿರುವ ಕೊರೊನಾ ಸೋಂಕು ನಿಯಂತ್ರಿಸಲು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಶುಕ್ರವಾರದಿಂದ ಸೋಮವಾರದವರೆಗೆ ಲಾಕ್‌ಡೌನ್ ಜಾರಿ ಮಾಡಿ ಆದೇಶ ಹೊರಡಿಸಿದ್ದಾರೆ.

ಈ ಸಂದರ್ಭದಲ್ಲಿ ಅಗತ್ಯ ವಸ್ತುಗಳ ಸರಬರಾಜು ಹೊರತುಪಡಿಸಿ ಉಳಿದ ಎಲ್ಲಾ ವಹಿವಾಟನ್ನು ಬಂದ್ ಮಾಡಲಾಗುವುದು. ಶುಕ್ರವಾರ ರಾತ್ರಿಯಿಂದ ಸೋಮವಾರ ಬೆಳಿಗ್ಗೆ 5ರವರೆಗೆ ಈ ಆದೇಶ ಜಾರಿಯಲ್ಲಿರುತ್ತದೆ. ಇದು ಲಾಕ್‌ಡೌನ್ ಅಲ್ಲ, ಕೊರೊನಾ ಸೋಂಕು ಹೇಗೆ, ಎಲ್ಲಿ ಹರಡುತ್ತಿದೆ ಎಂಬುದನ್ನು ಪತ್ತೆ ಹಚ್ಚಿ ನಿಯಂತ್ರಿಸಲು ಕೈಗೊಂಡಿರುವ ಕ್ರಮಗಳು ಎಂದು ಸರ್ಕಾರ ತನ್ನ ಆದೇಶದಲ್ಲಿ ತಿಳಿಸಿದೆ.

ಈ ಲಾಕ್‌ಡೌನ್ ವೇಳೆಯಲ್ಲಿ ಯಾವುದು ನಿರ್ಬಂಧ ಇಲ್ಲ, ಯಾವುದಕ್ಕೆ ನಿರ್ಬಂಧ ಇದೆ ಎಂಬುದನ್ನು ಇಲ್ಲಿ ನೀಡಲಾಗಿದೆ.

ಇವುಗಳಿಗೆ ನಿರ್ಬಂಧ ಇಲ್ಲ

* ವೈದ್ಯಕೀಯ ಹಾಗೂ ಆರೋಗ್ಯ ಸೇವೆಗಳು, ಅಗತ್ಯ ಸೇವೆಗಳು ಮೊದಲಿನಂತೆ ಮುಂದುವರಿಯುತ್ತವೆ.

* ಪೆಟ್ರೋಲ್ ಪಂಪ್‌ಗಳು, ಹೆದ್ದಾರಿ ಡಾಬಾಗಳು (ಸಾಮಾನ್ಯವಾಗಿ ಹೆದ್ದಾರಿಗಳಲ್ಲಿರುವ ತಿನಿಸುಗಳು) ಸಹ ತೆರೆದಿರುತ್ತವೆ.

* ಅಗತ್ಯ ಸೇವೆಗಳಲ್ಲಿ ಕೆಲಸ ಮಾಡುವವರು, ಕೊರೋನಾ ಯೋಧರು, ನೈರ್ಮಲ್ಯ ಮತ್ತು ಮನೆ ಮನೆಗೆ ವಸ್ತುಗಳನ್ನು ವಿತರಣೆ ಮಾಡುವ ಸಿಬ್ಬಂದಿಗಳಿಗೆ ಯಾವುದೇ ನಿರ್ಬಂಧವಿಲ್ಲ.

* ರೈಲು ಸಂಚಾರ ಮುಂದುವರಿಯುತ್ತದೆ. ರೈಲು ನಿಲ್ದಾಣಗಳಿಗೆ ಬರುವ ಪ್ರಯಾಣಿಕರನ್ನು ಕರೆದೊಯ್ಯಲು ಉತ್ತರ ಪ್ರದೇಶ ರಸ್ತೆ ಸಾರಿಗೆ ನಿಗಮವು ಬಸ್ಸುಗಳ ವ್ಯವಸ್ಥೆ ಮಾಡಲಿದೆ.

* ವಿಮಾನ ಸೇವೆಗಳು (ದೇಶೀಯ ಮತ್ತು ಅಂತರರಾಷ್ಟ್ರೀಯ ಎರಡೂ) ಮೊದಲಿನಂತೆ ಮುಂದುವರಿಯುತ್ತವೆ. ವಿಮಾನ ನಿಲ್ದಾಣಗಳಿಂದ ಜನರು ತಮ್ಮ ಸ್ಥಾನಕ್ಕೆ ತೆರಳುವುದಕ್ಕೆ ಯಾವುದೇ ನಿರ್ಬಂಧಗಳಿಲ್ಲ.

* ಸರಕು ಸಾಗಾಣಿಕೆ ವಾಹನಗಳಿಗೆ ಯಾವುದೇ ನಿರ್ಬಂಧ ಇಲ್ಲ. ರಾಷ್ಟ್ರೀಯ ಮತ್ತು ರಾಜ್ಯ ಹೆದ್ದಾರಿಗಳಲ್ಲಿನ ಸಂಚಾರವೂ ಮುಂದುವರಿಯುತ್ತದೆ.

* ವೈದ್ಯಕೀಯ ತಪಾಸಣೆ ಮತ್ತು ಕಣ್ಗಾವಲು ನಡೆಯುತ್ತಿರುವ ಅಭಿಯಾನವು ಯಾವುದೇ ಅಡೆತಡೆಯಿಲ್ಲದೆ ಮುಂದುವರಿಯುತ್ತದೆ.

* ಕೈಗಾರಿಕಾ ಘಟಕಗಳು ನಿರಂತರವಾಗಿ ಕಾರ್ಯನಿರ್ವಹಿಸುತ್ತವೆ, ಇದು ಗ್ರಾಮೀಣ ಪ್ರದೇಶಗಳಲ್ಲಿ ತೆರೆದಿರುತ್ತದೆ.

* ಎಕ್ಸ್‌ಪ್ರೆಸ್‌ ವೇ, ಸೇತುವೆಗಳು, ರಸ್ತೆಗಳು ಮತ್ತು ಖಾಸಗಿ ಯೋಜನೆಗಳ ಎಲ್ಲಾ ದೊಡ್ಡ ನಿರ್ಮಾಣ ಕಾರ್ಯಗಳು ಸಹ ಮುಂದುವರಿಯುತ್ತವೆ.

ಇವುಗಳಿಗೆ ನಿರ್ಬಂಧ

* ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿನ ಎಲ್ಲಾ ಕಚೇರಿಗಳು ಮತ್ತು ಮಾರುಕಟ್ಟೆಗಳು ಈ ಅವಧಿಯಲ್ಲಿ ಮುಚ್ಚಲ್ಪಡುತ್ತವೆ.

* ಪ್ರಯಾಣಿಕರನ್ನು ರೈಲ್ವೆ ನಿಲ್ದಾಣಗಳಿಗೆ ಕರೆದೊಯ್ಯುವುದನ್ನು ಹೊರತುಪಡಿಸಿ ಬಸ್ ಸೇವೆಗಳನ್ನು ಈ ಅವಧಿಯಲ್ಲಿ ನಿಷೇಧಿಸಲಾಗಿದೆ.

* ನಿರಂತರವಾಗಿ ಕೆಲಸ ಮಾಡುವ ಕೈಗಾರಿಕಾ ಘಟಕಗಳನ್ನು ಹೊರತುಪಡಿಸಿ, ನಗರ ಪ್ರದೇಶಗಳಲ್ಲಿನ ಇತರ ಘಟಕಗಳು ಬಂದ್ ಆಗಿರುತ್ತವೆ.

ಕೊರೊನಾ ಸೋಂಕು ತಡೆಯಲು ಸಾರ್ವಜನಿಕ ಸ್ಥಳಗಳಲ್ಲಿ ಜಾಗೃತಿ ಮೂಡಿಸುವ ಕಾರ್ಯಕ್ರಮಗಳು ಮುಂದುವರಿಯುತ್ತವೆ. ಮ್ಯಾಜಿಸ್ಟ್ರೇಟರು ಮತ್ತು ಪೊಲೀಸ್ ಅಧಿಕಾರಿಗಳು ಜಂಟಿ ಗಸ್ತು ತಿರುಗಲಿದ್ದು, ಯುಪಿ -112 ತಂಡಗಳು ಬಂದ್ ಉಸ್ತುವಾರಿ ವಹಿಸಲಿವೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು