ಶನಿವಾರ, ಜೂನ್ 19, 2021
26 °C

ಸುಳ್ಳು ಹೇಳಿ ಪ್ರಿಯಕರನ ಜೊತೆಗೆ ಕ್ವಾರಂಟೈನ್‌ ಆದ ಮಹಿಳಾ ಕಾನ್‌ಸ್ಟೇಬಲ್‌

ಪಿಟಿಐ Updated:

ಅಕ್ಷರ ಗಾತ್ರ : | |

ನಾಗಪುರ (ಮಹಾರಾಷ್ಟ್ರ): ನಾಗಪುರದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಅವಿವಾಹಿತ ಮಹಿಳಾ ಕಾನ್‌ಸ್ಟೇಬಲ್‌ವೊಬ್ಬರು ತಾವು ಸಂಬಂಧ ಹೊಂದಿದ್ದ ವಿವಾಹಿತ ಪುರುಷನೊಂದಿಗೆ ಕ್ವಾರಂಟೈನ್‌ ಆಗಿದ್ದಾರೆ. ಇದಕ್ಕಾಗಿ ವ್ಯಕ್ತಿಯನ್ನು ತನ್ನ ಪತಿ ಎಂದು ಸ್ಥಳೀಯಾಡಳಿತದ ಬಳಿ ತಪ್ಪಾಗಿ ನಮೂದಿಸಿರುವುದು ಬಹಿರಂಗವಾಗಿದೆ.

‘ಮಹಿಳಾ ಕಾನ್‌ಸ್ಟೇಬಲ್‌ನ ಸಹೋದ್ಯೋಗಿಗೆ ಇತ್ತೀಚೆಗೆ ಕೊರೊನಾ ವೈರಸ್‌ ಸೋಂಕು ತಗುಲಿತ್ತು. ಪ್ರಾಥಮಿಕ ಸಂಪರ್ಕದ ಕಾರಣಕ್ಕೆ ಮಹಿಳಾ ಕಾನ್‌ಸ್ಟೇಬಲ್‌ ಅನ್ನು ಕ್ವಾರಂಟೈನ್‌ ಮಾಡಬೇಕಾಗಿ ಬಂದಿತ್ತು,’ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

‘ಈ ವಿಷಯ ಮಹಿಳಾ ಪೇದೆಗೆ ತಿಳಿಸಿದಾಗ ಆಕೆ, ‘ಅಂಚೆ ಇಲಾಖೆಯಲ್ಲಿ ಕೆಲಸ ಮಾಡುತ್ತಿರುವ ನನ್ನ ಪತಿಯನ್ನೂ ನನ್ನೊಂದಿಗೆ ಕ್ವಾರಂಟೈನ್‌ ಮಾಡಬೇಕು,’ ಎಂದು ಅಧಿಕಾರಿಗಳ ಬಳಿ ಹೇಳಿಕೊಂಡಿದ್ದರು. ಹೀಗಾಗಿ ಪೊಲೀಸ್‌ ತರಬೇತಿ ಕೇಂದ್ರದಲ್ಲಿ ಅವರಿಬ್ಬರನ್ನೂ ಕ್ವಾರಂಟೈನ್‌ ಮಾಡಲಾಗಿತ್ತು,’ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

‘ಮಹಿಳಾ ಪೇದೆಯೊಂದಿಗೆ ಕ್ವಾರಂಟೈನ್‌ ಆಗಿದ್ದ ವ್ಯಕ್ತಿಯು ಮೂರು ದಿನಗಳಾದರೂ ಮನೆಗೆ ಹೋಗದ ಹಿನ್ನೆಲೆಯಲ್ಲಿ ಆತನ ನಿಜವಾದ ಪತ್ನಿ ಆತಂಕಕ್ಕೆ ಒಳಗಾಗಿದ್ದಾರೆ. ಕೊನೆಗೆ ತನ್ನ ಪತಿ ಮಹಿಳಾ ಪೇದೆಯೊಬ್ಬರೊಂದಿಗೆ ಕ್ವಾರಂಟೈನ್‌ ಆಗಿರುವ ವಿಚಾರ ತಿಳಿದ ಮಹಿಳೆ, ಪೊಲೀಸ್‌ ತರಬೇತಿ ಕೇಂದ್ರದ ಬಳಿಗೆ ಬಂದಿದ್ದರು. ಆದರೆ, ಭದ್ರತಾ ಸಿಬ್ಬಂದಿ ಆಕೆಯನ್ನು ಒಳಗೆ ಬಿಟ್ಟಿರಲಿಲ್ಲ. ನಂತರ ಅವರು ಪತಿ ವಿರುದ್ಧ ಬಜಾಜ್ ನಗರ ಪೊಲೀಸರಿಗೆ ದೂರು ನೀಡಿದ್ದರು. ಇದೇ ವಿಷಯವಾಗಿ ಪೊಲೀಸ್ ಆಯುಕ್ತ ಡಾ.ಭೂಷಣಕುಮಾರ್ ಉಪಾಧ್ಯಾಯ ಅವರನ್ನೂ ಭೇಟಿಯಾಗಿದ್ದರು. ನಂತರ ಪ್ರಕರಣದ ತನಿಖೆಗೆ ಆದೇಶಿಸಲಾಯಿತು,’ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮಹಿಳಾ ಕಾನ್‌ಸ್ಟೆಬಲ್ ಮತ್ತು ವ್ಯಕ್ತಿ ಕಳೆದ ವರ್ಷ ಅಕ್ಟೋಬರ್‌ನಲ್ಲಿ ನಡೆದ ಸರ್ಕಾರಿ ಯೋಜನೆಯೊಂದರಲ್ಲಿ ಭೇಟಿಯಾಗಿದ್ದರು. ಆ ನಂತರ ಇಬ್ಬರ ನಡುವೆ ಸಂಬಂಧ ಬೆಳೆದಿತ್ತು ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.

ವಿಷಯ ತಿಳಿದ ನಂತರ ಮಹಿಳಾ ಪೇದೆಯೊಂದಿಗಿದ್ದ ವ್ಯಕ್ತಿಯನ್ನು ಮತ್ತೊಂದು ಕ್ವಾರಂಟೈನ್‌ ಕೇಂದ್ರಕ್ಕೆ ಸ್ಥಳಾಂತರಿಸಲಾಗಿದೆ ಎಂದು ಪ್ರಕರಣದ ತನಿಖೆ ನಡೆಸಿದ ಡಿಸಿಪಿ ವಿವೇಕ್ ಮಸಲ್ ತಿಳಿಸಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು