ಚಿಕಿತ್ಸೆಗಾಗಿ ಸೋಂಕಿತರ ಪರದಾಟ..!

7
ಸಮಗ್ರ ಆಪ್ತ ಸಮಾಲೋಚನಾ ಹಾಗೂ ಪರೀಕ್ಷಾ ಕೇಂದ್ರದ ಬದಲಾವಣೆ

ಚಿಕಿತ್ಸೆಗಾಗಿ ಸೋಂಕಿತರ ಪರದಾಟ..!

Published:
Updated:
Deccan Herald

ದೇವರ ಹಿಪ್ಪರಗಿ: ಎಚ್‌ಐವಿ ಸೋಂಕಿತರ ಪಾಲಿನ ಆಶಾಕಿರಣವಾಗಿದ್ದ, ಪಟ್ಟಣದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿನ ಸಮಗ್ರ ಆಪ್ತ ಸಮಾಲೋಚನೆ ಹಾಗೂ ಪರೀಕ್ಷಾ ಕೇಂದ್ರ (ಐಸಿಟಿಸಿ)ವನ್ನು ಎಫ್ಐಸಿಟಿಸಿ ಕೇಂದ್ರವಾಗಿ ಬದಲಾವಣೆ ಮಾಡಿದ್ದರಿಂದ, ಸಕಾಲಕ್ಕೆ ಸೂಕ್ತ ಸಮಾಲೋಚನೆ, ಚಿಕಿತ್ಸೆ ದೊರೆಕದೆ 200ಕ್ಕೂ ಹೆಚ್ಚು ಸೋಂಕಿತರು ತ್ರಾಸು ಪಡುವಂತಾಗಿದೆ.

ಪಟ್ಟಣ ತಾಲ್ಲೂಕು ಕೇಂದ್ರವಾಗಿ ಬಡ್ತಿ ಪಡೆದಿದೆ. ಪ್ರಾಥಮಿಕ ಆರೋಗ್ಯ ಕೇಂದ್ರ ಸದ್ಯದಲ್ಲಿಯೇ ಸಾರ್ವಜನಿಕ ಆಸ್ಪತ್ರೆಯಾಗಿ ಮೇಲ್ದರ್ಜೆಗೇರಲಿದೆ. ಆದರೆ ಇಲ್ಲಿದ್ದ ಐಸಿಟಿಸಿ ಕೇಂದ್ರ ಎಚ್ಐವಿ ಸೋಂಕು ಖಾತ್ರಿ ಪಡಿಸುವ ಮೂರು ಪರೀಕ್ಷೆಗಳನ್ನು ಮಾಡುವುದರ ಜತೆ ಸೂಕ್ತ ಸಮಾಲೋಚನೆಯ ಮೂಲಕ ಸೋಂಕಿತರಿಗೆ ಮಾನಸಿಕ ಸ್ಥೈರ್ಯ ತುಂಬುವ ಕಾರ್ಯ ಮಾಡುತ್ತಿತ್ತು.

ಇದೀಗ ಈ ಕೇಂದ್ರವನ್ನು ಎಫ್ಐಸಿಟಿಸಿ ಕೇಂದ್ರವಾಗಿ ಪರಿವರ್ತಿಸಿದ ಬಳಿಕ ಸಮಾಲೋಚನೆ ಹಾಗೂ ಪರೀಕ್ಷೆ ಕೈಗೊಳ್ಳಲು ಅವಕಾಶವಿಲ್ಲ. ಇದು ಸೋಂಕಿತರು ಕಂಗಾಲಾಗುವಂತೆ ಮಾಡಿದೆ.

‘ಕರ್ನಾಟಕ ಏಡ್ಸ್ ನಿಯಂತ್ರಣ ಮಂಡಳಿ (ಕೆಸ್ಸಾಪ್ಸ್)ಯಡಿ ಐಸಿಟಿಸಿ ಕೇಂದ್ರಗಳು ಕಾರ್ಯ ನಿರ್ವಹಿಸುತ್ತಿದ್ದು, ಇದೀಗ ರಾಜ್ಯದಲ್ಲಿ ಒಟ್ಟು 86 ಕೇಂದ್ರಗಳನ್ನು ಸ್ಥಗಿತಗೊಳಿಸಲಾಗಿದೆ. ಇವುಗಳಲ್ಲಿ ದೇವರಹಿಪ್ಪರಗಿಯೂ ಸೇರಿದೆ. ಆದರೆ ಇಲ್ಲಿ 200ಕ್ಕೂ ಹೆಚ್ಚಿನ ಸೋಂಕಿತರಿದ್ದು, ಇನ್ನೂ ಕೆಲ ವರ್ಷಗಳವರೆಗೆ ಮುಂದುವರೆಸಬೇಕಿತ್ತು’ ಎಂದು ಸಮಾಲೋಚಕ ಎಸ್.ಬಿ.ಕಲ್ಲೂರ ಹಾಗೂ ಪರೀಕ್ಷಕಿ ಜಯಶ್ರೀ ಸುರಪುರ ಮಾಹಿತಿ ನೀಡಿದರು.

‘ಇಲ್ಲಿರುವ ಐಸಿಟಿಸಿ ಪರಿಣಾಮಕಾರಿಯಾಗಿ ಕಾರ್ಯ ನಿರ್ವಹಿಸಿದ್ದರಿಂದ, 2016ರಿಂದ ಸೋಂಕಿತರ ಸಂಖ್ಯೆ ಇಳಿಮುಖವಾಗುತ್ತಿದೆ. ಇದೀಗ ಏಕಾಏಕಿ ಕೇಂದ್ರ ಸ್ಥಗಿತಗೊಳಿಸುವುದರಿಂದ, ಸೋಂಕಿತರು ಬೇರೆ ಕಡೆ ಚಿಕಿತ್ಸೆಗಾಗಿ ಹೋಗುವ ಅನಿವಾರ್ಯತೆ ಎದುರಿಸುತ್ತಿದ್ದಾರೆ. ಇದರ ಜತೆಗೆ ಮಕ್ಕಳ ಪರೀಕ್ಷೆ ಮಾಡಿಸಲು ಸಮಸ್ಯೆಯಾಗುತ್ತಿದೆ’ ಎಂದು ಹೇಳಿದರು.

‘ದೇವರ ಹಿಪ್ಪರಗಿ ಪಟ್ಟಣ ಸೇರಿದಂತೆ ಬಹುತೇಕ ಗ್ರಾಮಗಳಲ್ಲಿ ಎಚ್ಐವಿ ಸೋಂಕಿತರ ಸಂಖ್ಯೆ ಇಳಿಮುಖವಾಗುತ್ತಿರುವುದು ನಿಜವಾಗಿಯೂ ಆಶಾದಾಯಕ ಬೆಳವಣಿಗೆ. ಈ ನಿಟ್ಟಿನಲ್ಲಿ 2006ರಿಂದ ಕಾರ್ಯ ನಿರ್ವಹಿಸುತ್ತಿರುವ ಐಸಿಟಿಸಿ ಕೇಂದ್ರ, ಸುತ್ತಲಿನ 20 ಗ್ರಾಮಗಳ ಜನರಲ್ಲಿ ಜಾಗೃತಿ ಮೂಡಿಸಿದೆ. ಆದ್ದರಿಂದ ಈ ಕೇಂದ್ರವನ್ನು ಮುಂದುವರೆಸುವುದು ಅಗತ್ಯವಾಗಿದೆ’ ಎಂದು ವೈದ್ಯರಾದ ವೈ.ಎಸ್.ಪಾಟೀಲ, ಮಂಜುನಾಥ ಮಠ, ಗುರುರಾಜ ಗಡೇದ ತಿಳಿಸಿದರು.
-ಅಮರನಾಥ ಹಿರೇಮಠ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !