ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಗರದೊಳಗಿನ ಹಳ್ಳಿಯ ಅನಾವರಣ..!

ಶ್ರೀ 1008 ಸಹಸ್ರಫಣಿ ಪಾರ್ಶ್ವನಾಥ ದಿಗಂಬರ ಜೈನ ಮಂದಿರವಿರುವ ವಾರ್ಡಿದು...
Last Updated 26 ಏಪ್ರಿಲ್ 2019, 19:45 IST
ಅಕ್ಷರ ಗಾತ್ರ

ವಿಜಯಪುರ:ಐತಿಹಾಸಿಕ ನಗರದ ಹೊರ ವಲಯದಲ್ಲಿನ ಬಡಾವಣೆಗಳನ್ನೇ ತನ್ನೊಡಲಲ್ಲಿಟ್ಟುಕೊಂಡಿರುವ ವಿಜಯಪುರ ಮಹಾನಗರ ಪಾಲಿಕೆಯ ವಾರ್ಡ್‌ ನಂಬರ್‌ 2, ಸರ್ವಾಂಗೀಣ ಪ್ರಗತಿಯಲ್ಲಿ ಇಂದಿಗೂ ಗಾವುದ ದೂರ ಹಿಂದುಳಿದಿದೆ.

ಹೆಸರಿಗಷ್ಟೇ ಇದು ನಗರ. ವಾರ್ಡ್‌ನೊಳಗಿನ ಹಲವು ಬಡಾವಣೆಗಳ ಒಳ ಹೊಕ್ಕರೆ ಗೋಚರಿಸುವ ಚಿತ್ರಣವೇ ಬೇರೆ. ಹಳ್ಳಿಗಳ ಚಿತ್ರಣಕ್ಕಿಂತಲೂ ನಿಕೃಷ್ಟವಾಗಿದೆ ಇಲ್ಲಿನ ಪ್ರಗತಿ. ಕಿಷ್ಕಿಂಧೆಯಂಥಹ ಇಕ್ಕಟ್ಟಾದ ರಸ್ತೆಗಳು, ಕಡಿ (ಜಲ್ಲಿ)ಯನ್ನೇ ಕಾಣದ ಮಣ್ಣಿನ ರಸ್ತೆಗಳು...

ವಿಜಯಪುರದಿಂದ ಜತ್ತ ಪಟ್ಟಣ ಸಂಪರ್ಕಿಸುವ ರಸ್ತೆ ಈ ವಾರ್ಡ್‌ನ ವ್ಯಾಪ್ತಿಯಲ್ಲೇ ಹಾದು ಹೋಗಿದ್ದರೂ; ಸುಗಮ ಸಂಚಾರಕ್ಕೆ ಸಂಚಕಾರ ತರುವಂತಿದೆ. ರಸ್ತೆಯುದ್ದಕ್ಕೂ ಗುಂಡಿಗಳದ್ದೇ ದರ್ಬಾರು. ಇನ್ನೂ ಹಲವೆಡೆ ರಸ್ತೆ ಮೇಲೆಯೇ ನೀರು ಹರಿಯುವ ಚಿತ್ರಣ ಗೋಚರಿಸಲಿದೆ.

ವಾರ್ಡ್‌ನ ಖಾಜಾಮಿನ್ ದರ್ಗಾ ಬಡಾವಣೆಯಲ್ಲಿ ಶೇ 60ಕ್ಕೂ ಹೆಚ್ಚು ಕುಟುಂಬಗಳು ಇಂದಿಗೂ ಬಯಲನ್ನೇ ಶೌಚಕ್ಕೆ ಅವಲಂಬಿಸಿವೆ. ಇದೊಂದೇ ಬಡಾವಣೆಯಲ್ಲ. ಬಹುತೇಕ ಬಡಾವಣೆಗಳಲ್ಲಿ ಇದೇ ಚಿತ್ರಣವಿದೆ. ಇಲ್ಲಿನ ಮಹಿಳೆಯರ ಗೋಳು ಹೇಳತೀರದು.

ನಿಸರ್ಗದ ಬಾಧೆ ಈಡೇರಿಸಿಕೊಳ್ಳಲು ಮಹಿಳೆಯರು ಹರ ಸಾಹಸ ನಡೆಸಬೇಕಿದೆ. ಕೆಲವೊಮ್ಮೆ ಅನಿವಾರ್ಯವಾಗಿ ಬಯಲಲ್ಲೇ ಕೂರಬೇಕಿದೆ. ಇದು ಸ್ಥಳೀಯ ಕಾರ್ಪೊರೇಟರ್, ಮಹಾನಗರ ಪಾಲಿಕೆಯ ಆಡಳಿತದ ಗಮನಕ್ಕಿದ್ದರೂ; ಪರ್ಯಾಯ ಕಂಡುಕೊಳ್ಳುವಲ್ಲಿ ಆಡಳಿತ ವ್ಯವಸ್ಥೆ ಸಂಪೂರ್ಣವಾಗಿ ವಿಫಲವಾಗಿದೆ ಎಂಬ ದೂರು ಸ್ಥಳೀಯರದ್ದಾಗಿದೆ.

ಸಾಮೂಹಿಕ ಶೌಚಾಲಯ ಕಟ್ಟಿಸಿಕೊಡಿ ಎಂಬ ಕೂಗು ಅರಣ್ಯ ರೋದನವಾಗಿದೆ. ಈಚೆಗಷ್ಟೇ ಸಾಮೂಹಿಕ ಮೂತ್ರಾಲಯ ನಿರ್ಮಾಣಗೊಂಡಿದೆ. ಶೌಚಾಲಯ ನಿರ್ಮಾಣವಾಗದಿರುವುದು ಸಮಸ್ಯೆಯನ್ನು ಜೀವಂತವಾಗಿಟ್ಟಿದೆ ಎಂದು ಸ್ಥಳೀಯ ನಿವಾಸಿಗಳು ಆಕ್ರೋಶ ವ್ಯಕ್ತಪಡಿಸುತ್ತಾರೆ.

ಪಾಠ ಕಲಿಸುತ್ತೇವೆ:

‘ನಮ್ಮ ವಾರ್ಡ್‌ನ ಕಾರ್ಪೊರೇಟರ್ ಮುಸ್ಲಿಂ. ನಾನೂ ಮುಸ್ಲಿಂ. ಈ ಹಿಂದೆ ಚುನಾವಣೆಯಲ್ಲಿ ಗೆಲುವಿಗಾಗಿ ಇವರ ಪರ ಕೆಲಸ ಮಾಡಿದ್ದೆವು. ಐದು ವರ್ಷದ ಅವಧಿ ಮುಗಿಯುತ್ತಾ ಬಂತು. ಜೈನ ಮಂದಿರದ ಬಳಿ ಕೆಟ್ಟು ಹೋಗಿದ್ದ ಬೀದಿ ದೀಪ ದುರಸ್ತಿ ಮಾಡಿಸಿಕೊಡಿ ಎಂದರೇ ಸ್ಪಂದಿಸಲಿಲ್ಲ. ನಾವ್ ಮಾಡಿಸಿಕೊಂಡಿದ್ದಾಯ್ತು. ನಮ್ಮ ಯಾವೊಂದು ಸಮಸ್ಯೆಗೆ ಕಿವಿಗೊಡಲಿಲ್ಲ. ಈ ಬಾರಿ ಚುನಾವಣೆಗೆ ಮತ ಕೇಳಲು ಬರಲಿ. ಚಲೋ ಪಾಠ ಕಲಿಸುತ್ತೇವೆ. ನಮ್ಮ ತಿಕೋಟಾ ಕುಟುಂಬದ ಮತಗಳೇ 105ಕ್ಕೂ ಹೆಚ್ಚಿವೆ’ ಎಂದು ಖಾಜಾಮಿನ್‌ ದರ್ಗಾ ನಿವಾಸಿ ಅಕ್ಬರ್ ತಿಕೋಟಾ, ವಾರ್ಡ್‌ನ ಕಾರ್ಪೊರೇಟರ್ ವಿರುದ್ಧ ಹರಿಹಾಯ್ದರು.

‘ನಮ್ಮ ವಾರ್ಡ್‌ನ ಎಲ್ಲಿಯೂ ಒಂದೇ ಒಂದು ಉದ್ಯಾನವಿಲ್ಲ. ಈ ಭಾಗದ ಸ್ಥಳೀಯರು ನಿತ್ಯ ಮುಂಜಾನೆ–ಮುಸ್ಸಂಜೆ ವಾಕಿಂಗ್‌ಗಾಗಿ ಸನಿಹದ ಅಡವಿ ಶಂಕರಲಿಂಗ ಗುಡಿಯತ್ತ ತೆರಳುತ್ತಾರೆ. ಕೊಂಚ ಹೊತ್ತು ಗುಡಿಯ ಹಸಿರು ಪರಿಸರದಲ್ಲಿ ವಿರಮಿಸಿಕೊಂಡು ಮನೆಗಳಿಗೆ ಮರಳುವುದಾಗಿದೆ. ಸ್ಥಳೀಯ ಜನಪ್ರತಿನಿಧಿ, ಮಹಾನಗರ ಪಾಲಿಕೆ ಆಡಳಿತ ಸ್ಥಳೀಯರ ಅನುಕೂಲಕ್ಕಾಗಿಯೇ ಉದ್ಯಾನವೊಂದನ್ನು ಅಭಿವೃದ್ಧಿಗೊಳಿಸಬೇಕಿದೆ’ ಎಂಬ ಆಗ್ರಹ ಸ್ಥಳೀಯ ನಿವಾಸಿಗಳದ್ದಾಗಿದೆ.

ಸದ್ಯ ಹತ್ತು ದಿನಕ್ಕೊಮ್ಮೆ ಕುಡಿಯುವ ನೀರು ಪೂರೈಸುತ್ತಿದ್ದಾರೆ. 24X7 ಕುಡಿಯುವ ನೀರಿನ ಯೋಜನೆಯಡಿ ಪೈಪ್‌ಲೈನ್‌ ಹಾಕಲಾಗಿದೆ ಹೊರತು, ನೀರು ಬರುತ್ತಿಲ್ಲ. ಈ ಭಾಗದ ಜನ ಯಾವಾಗ ನಿರಂತರ ನೀರು ಸರಬರಾಜು ನಡೆಯಲಿದೆ ಎಂಬ ನಿರೀಕ್ಷೆಯಲ್ಲೇ ದಿನ ಕಳೆಯುತ್ತಿದ್ದಾರೆ.

‘ಓಣಿಯೊಳಗಿನ ರಸ್ತೆಗಳನ್ನು ಪೈಪ್‌ಲೈನ್‌ಗಾಗಿ ಅಗೆದಿದ್ದಾರೆ. ಸಮರ್ಪಕವಾಗಿ ಮುಚ್ಚಿಲ್ಲ. ಹಸಿರು ಎಂಬುದು ಇಲ್ಲಿ ಗಗನ ಕುಸುಮವಾಗಿದೆ. ಜತ್ತ ಪಟ್ಟಣಕ್ಕೆ ಸಂಪರ್ಕ ಕಲ್ಪಿಸುವ ಮುಖ್ಯ ರಸ್ತೆ ಬದಿಯೇ ಒಂದೇ ಒಂದು ಮರವಿಲ್ಲ. ಉದ್ಯಾನ ಎಂಬುದು ಕಲ್ಪನೆಯಾಗಿದೆ.’

‘ಹೆಸರಿಗಷ್ಟೇ ಬೀದಿದೀಪಗಳಿವೆ. ರಾತ್ರಿ ವೇಳೆ ಬೆಳಕು ನೀಡದಾಗಿವೆ. ಇನ್ನೂ ಒಳಭಾಗದಲ್ಲಿ ಒಳಚರಂಡಿಯ ಕಲ್ಪನೆಯೇ ಇಲ್ಲವಾಗಿದೆ. ಒಟ್ಟಾರೆ ನಮ್ಮ ವಾರ್ಡ್‌ ಹಳ್ಳಿಗಿಂತ ನಿಕೃಷ್ಟವಾಗಿದೆ. ಯಾವೊಂದು ಮೂಲ ಸೌಕರ್ಯ ಇಲ್ಲಿ ಸಿಗದಾಗಿವೆ’ ಎಂದು ವ್ಯಾಪಾರಿ ರಾಜೇಂದ್ರಕುಮಾರ ಸಾವಳಗಿ ತಿಳಿಸಿದರು.

ವಾರ್ಡ್‌ ವೈಶಿಷ್ಟ್ಯ..!

ಆದಿಲ್‌ಶಾಹಿ ಅರಸರ ಆಳ್ವಿಕೆಯ ಸ್ಮಾರಕ ಇದೀಗ ಜಿಲ್ಲಾ ಕೇಂದ್ರ ಕಾರಾಗೃಹವಾಗಿದೆ. ದರ್ಗಾ ಜೈಲ್‌ ಎಂದೇ ಖ್ಯಾತಿ ಪಡೆದಿದೆ. ಈ ಜೈಲ್‌ ಇರೋದು ಸಹ ಇದೇ ವಾರ್ಡ್‌ನ ವ್ಯಾಪ್ತಿಯಲ್ಲಿ.

ದಿಗಂಬರ ಜೈನರ ಶ್ರೀ 1008 ಸಹಸ್ರಫಣಿ ಪಾರ್ಶ್ವನಾಥ ಮಂದಿರ ಇರೋದು ಇದೇ ವಾರ್ಡ್‌ನಲ್ಲಿ. ಪಾರ್ಶ್ವನಾಥನಿಗೆ ಕ್ಷೀರಾಭಿಷೇಕ, ಜಲಾಭಿಷೇಕ ನೆರವೇರಿಸಿದ ಸಂದರ್ಭ ಸಹಸ್ರಫಣಿಯ ಮೂಲಕ ಮೂರ್ತಿಯ ಮೇಲೆ ಹಾಲು, ನೀರು ಬೀಳುವುದನ್ನು ಕಣ್ತುಂಬಿಕೊಳ್ಳುವುದೇ ಒಂದು ಮಹಾದಾನಂದ.

ಖಾಜಾಮಿನ್‌ ದರ್ಗಾ, ಅಫ್ಜಲಪುರ ಟಕ್ಕೆ, ಇಟ್ಟಂಗಿಹಾಳ ರಸ್ತೆ, ಶಟಗಾರ ಓಣಿ, ಉರ್ದು ಶಾಲೆ ಪ್ರದೇಶ, ಬುರ್ಸಿ ಬಾವಿ, ವಿಠ್ಠಲ ಮಂದಿರದ ಆಸುಪಾಸಿನ ಬಡಾವಣೆಗಳು ವಾರ್ಡ್‌ ವ್ಯಾಪ್ತಿಯಲ್ಲಿವೆ. ಕೆಲವೆಡೆ ಅಭಿವೃದ್ಧಿ ಗೋಚರಿಸುತ್ತಿದೆ. ಹಲವೆಡೆ ಕಾಯಕಲ್ಪ ಬೇಕಿದೆ.

₹ 9 ಕೋಟಿ ಮೊತ್ತದ ಕಾಮಗಾರಿ

‘ನನ್ನ ಅಧಿಕಾರ ಅವಧಿಯ ಐದು ವರ್ಷದಲ್ಲಿ ₹ 9 ಕೋಟಿ ಮೊತ್ತದ ವಿವಿಧ ಕಾಮಗಾರಿ ನಡೆಸಿರುವೆ. ಅಫ್ಜಲಪುರ ಟಕ್ಕೆ, ಖಾಜಾಮಿನ್ ದರ್ಗಾ ಬಡಾವಣೆಗಳಲ್ಲಿ ಈಗಾಗಲೇ 24X7 ಯೋಜನೆಯಡಿ ನೀರು ಪೂರೈಸಲಿಕ್ಕಾಗಿ ಪೈಪ್‌ಲೈನ್‌ ಕಾಮಗಾರಿ ಪೂರ್ಣಗೊಂಡಿದೆ. ಉಳಿದೆಡೆ ನಡೆದಿದೆ.’

‘ಟಕ್ಕೆ ಭಾಗದಲ್ಲಿ 50% ಒಳಚರಂಡಿ ಕಾಮಗಾರಿ ಮುಗಿದಿದೆ. ದರ್ಗಾ ಭಾಗದಲ್ಲಿ 90% ಕಾಮಗಾರಿ ಆಗಿದೆ. ಉಳಿದೆಡೆ ನಡೆದಿದೆ. ಬಡಾವಣೆಯ ವಿವಿಧೆಡೆ ಸಮುದಾಯ ಭವನ ನಿರ್ಮಿಸಿರುವೆ. ಡಾಂಬರ್, ಕಾಂಕ್ರೀಟ್‌ ರಸ್ತೆ ಮಾಡಿಸಿರುವೆ. 300 ವಿದ್ಯುತ್‌ ಕಂಬ ಬದಲಾಯಿಸಿ, ಬೀದಿ ದೀಪ ಅಳವಡಿಸಿದ್ದೇನೆ’ ಎಂದು ವಾರ್ಡ್‌ನ ಕಾರ್ಪೊರೇಟರ್‌ ಬಿಜೆಪಿಯ ಅಲ್ತಾಫ್ ಇಟಗಿ ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT