ಶನಿವಾರ, ನವೆಂಬರ್ 16, 2019
21 °C

ಭಾರತದ ಆರ್ಥಿಕತೆಯ ಸ್ಥಿತಿ ಶೋಚನೀಯ: ನೊಬೆಲ್‌ ಪುರಸ್ಕೃತ ಅಭಿಜಿತ್‌ ಬ್ಯಾನರ್ಜಿ

Published:
Updated:

ವಾಷಿಂಗ್ಟನ್: ಭಾರತದ ಆರ್ಥಿಕತೆಯ ಸ್ಥಿತಿ ಶೋಚನೀಯವಾಗಿದೆ ಎಂದು ಅರ್ಥಶಾಸ್ತ್ರದ ನೊಬೆಲ್‌ ಪುರಸ್ಕೃತ ಅಭಿಜಿತ್‌ ಬ್ಯಾನರ್ಜಿ ಹೇಳಿದ್ದಾರೆ. ಕುಟುಂಬದ ಉಪಭೋಗದ ಮಾಹಿತಿ ಉಲ್ಲೇಖಿಸಿದ ಅವರು ಆರ್ಥಿಕತೆ ತೀವ್ರವಾಗಿ ಕುಸಿಯುತ್ತಿದೆ ಎಂದಿದ್ದಾರೆ.

ಜಾಗತಿಕ ಮಟ್ಟದಲ್ಲಿ ಬಡತನ ನಿರ್ಮೂಲನೆ ಮಾಡಲು ತೋರಿಸಿಕೊಟ್ಟ ಪ್ರಾಯೋಗಿಕ ಧೋರಣೆಗಾಗಿ ಇವರು ನೊಬೆಲ್‌ಗೆ ಪಾತ್ರರಾಗಿದ್ದಾರೆ. ಪತ್ನಿ ಎಸ್ತರ್‌ ಡಫ್ಲೊ ಮತ್ತು ಹಾರ್ವರ್ಡ್‌ನ ಪ್ರಾಧ್ಯಾಪಕ ಮೈಖೆಲ್‌ ಕ್ರೆಮರ್‌ ಜತೆ ಅಭಿಜಿತ್ ಅವರು ಪ್ರಶಸ್ತಿಯನ್ನು ಹಂಚಿಕೊಂಡಿದ್ದಾರೆ.

ಇದನ್ನೂ ಓದಿ: ಒಂದೇ ದಿನ ಚಲನಚಿತ್ರ ಗಳಿಕೆ ₹120 ಕೋಟಿ, ಎಲ್ಲಿದೆ ಆರ್ಥಿಕ ಹಿಂಜರಿತ?: ರವಿಶಂಕರ ಪ್ರಸಾದ್

ಮಾಧ್ಯಮ ಪ್ರತಿನಿಧಿಗಳನ್ನು ಉದ್ದೇಶಿಸಿ ಮಾತನಾಡಿದ ಅಭಿಜಿತ್ ಭಾರತೀಯ ಆರ್ಥಿಕತೆಗೆ ಸಂಬಂಧಿಸಿದ ಪ್ರಶ್ನೆಯೊಂದಕ್ಕೆ ಉತ್ತರಿಸಿ, ‘ನನ್ನ ಪ್ರಕಾರ ಆರ್ಥಿಕತೆಯ ಸ್ಥಿತಿ ಶೋಚನೀಯವಾಗಿದೆ’ ಎಂದು ಹೇಳಿದ್ದಾರೆ. 2014–15 ಮತ್ತು 2017–18ನೇ ಸಾಲಿನ ಅವಧಿಯಲ್ಲಿ ನಗರ ಹಾಗೂ ಗ್ರಾಮೀಣ ಪ್ರದೇಶದಲ್ಲಿನ ಸರಾಸರಿ ಗೃಹ ಬಳಕೆ ವಸ್ತುಗಳ ಖರೀದಿಗೆ ಸಂಬಂಧಿಸಿದ ಎನ್‌ಎಸ್ಎಸ್ (ನ್ಯಾಷನಲ್‌ ಸ್ಯಾಂಪಲ್‌ ಸರ್ವೆ) ದತ್ತಾಂಶ ಉಲ್ಲೇಖಿಸಿದ ಅವರು, ಬಹಳ ವರ್ಷಗಳ ಬಳಿಕ ಈ ರೀತಿಯಾಗುತ್ತಿದೆ. ಇದು ಎಚ್ಚರಿಕೆಯ ಸಂಕೇತ ಎಂದೂ ಹೇಳಿದ್ದಾರೆ.

ಆರ್ಥಿಕತೆ ಕುರಿತು ಭಾರತದಲ್ಲಿ ನಡೆಯುವ ಚರ್ಚೆಗಳ ಬಗ್ಗೆಯೂ ಪ್ರತಿಕ್ರಿಯಿಸಿರುವ ಅವರು, ಯಾವ ದತ್ತಾಂಶ ಮತ್ತು ಅಂಕಿಅಂಶಗಳನ್ನು ಆರ್ಥಿಕತೆಯ ಆರೋಗ್ಯದ ಸೂಚಕ ಅಥವಾ ಸಂಕೇತಗಳೆಂದು ಪರಿಗಣಿಸಬೇಕೋ ಅವುಗಳನ್ನು ತಮಗೆ ವಿರುದ್ಧವಾಗಿವೆ ಎಂಬ ಕಾರಣಕ್ಕಾಗಿ ಸರ್ಕಾರ ತಪ್ಪು ಎಂದು ಪರಿಗಣಿಸಿದ್ದನ್ನು ಟೀಕಿಸಿದ್ದಾರೆ.

ಇದನ್ನೂ ಓದಿ: ಭಾರತ ಮೂಲದ ಅಭಿಜಿತ್‌ಗೆ ನೊಬೆಲ್‌

ಆರ್ಥಿಕ ಹಿಂಜರಿತದ ಬಗ್ಗೆ ಸರ್ಕಾರಕ್ಕೆ ಅರಿವಿದೆ ಎಂದೂ ಅಭಿಜಿತ್ ಹೇಳಿದ್ದಾರೆ. ಆದರೆ, ಈ ಸಮಸ್ಯೆಯ ನಿವಾರಣೆಗೆ ಏನು ಕ್ರಮ ಕೈಗೊಳ್ಳಬೇಕು ಎಂದು ಸಲಹೆ ನೀಡಲು ಅವರು ನಿರಾಕರಿಸಿದ್ದಾರೆ ಎಂದು ಹಿಂದೂಸ್ತಾನ್ ಟೈಮ್ಸ್ ವರದಿ ಮಾಡಿದೆ. ಸರ್ಕಾರವು ಎಲ್ಲರನ್ನೂ ಮೆಚ್ಚಿಸುವ ಉದ್ದೇಶ ಹೊಂದಿರುವುದು ನಿಜ. ಆದರೆ, ಕೆಲವು ಬಜೆಟ್ ಗುರಿಗಳು ಮತ್ತು ವಿತ್ತೀಯ ಗುರಿಗಳನ್ನು ಸಾಧಿಸುತ್ತಿರುವಂತೆ ಬಿಂಬಿಸುತ್ತಿದೆಯಷ್ಟೆ ಎಂದು ಅವರು ಹೇಳಿದ್ದಾರೆ.

ಬಂಗಾಳಿ ಸುದ್ದಿವಾಹಿನಿಯೊಂದರ ಪ್ರತಿನಿಧಿಗಳ ಪ್ರಶ್ನೆಗೆ ಉತ್ತರಿಸಿದ ಅವರು, ‘ವಿತ್ತೀಯ ಸ್ಥಿರತೆ ಬಗ್ಗೆ ನೀವು ಹೆಚ್ಚು ಚಿಂತಿಸಬೇಡಿ. ಬೇಡಿಕೆ ಬಗ್ಗೆ ಯೋಚಿಸಿ. ಸದ್ಯ ಬೇಡಿಕೆ ಕುಸಿತವೇ ಆರ್ಥಿಕತೆಗೆ ದೊಡ್ಡ ಸವಾಲಾಗಿ ಪರಿಣಮಿಸಿದೆ’ ಎಂದು ಹೇಳಿದ್ದಾರೆ.

ಇನ್ನಷ್ಟು...

ಅಮ್ಮ–ಮಗನ ಮಾತಿನಲ್ಲೂ ಅರ್ಥಶಾಸ್ತ್ರ...

ಜಿಡಿಪಿ: 5 ವರ್ಷಗಳ ಕನಿಷ್ಠ ಮಟ್ಟಕ್ಕೆ

45 ವರ್ಷಗಳಲ್ಲೇ ಅತಿ ಹೆಚ್ಚು ನಿರುದ್ಯೋಗ: ಎನ್‌ಎಸ್‌ಎಸ್‌ಒ ವರದಿ

ಪ್ರತಿಕ್ರಿಯಿಸಿ (+)