ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

3 ಗಂಟೆ ಚಾರ್ಮಾಡಿ ಘಾಟಿ ಸ್ಥಗಿತ

ಜಿಲ್ಲೆಯ ವಿವಿಧೆಡೆ ಧಾರಾಕಾರ ಮಳೆ– ಪರದಾಡಿದ ಪ್ರಯಾಣಿಕರು
Last Updated 28 ಮೇ 2018, 10:30 IST
ಅಕ್ಷರ ಗಾತ್ರ

ಮೂಡಿಗೆರೆ: ತಾಲ್ಲೂಕಿನಾದ್ಯಂತ ಭಾನುವಾರ ರಾತ್ರಿ ಗುಡುಗು ಸಿಡಿಲು ಸಹಿತ ಧಾರಾಕಾರ ಮಳೆ ಸುರಿಯಿತು. ರಾತ್ರಿ 7.30 ಕ್ಕೆ ಪ್ರಾರಂಭವಾದ ಮಳೆ, ತಡರಾತ್ರಿಯವರೆಗೂ ಬಿರುಸಿನಿಂದ ಸುರಿದು ಜನಜೀವನ ಅಸ್ತವ್ಯಸ್ತಗೊಳಿಸಿತು. ಮಳೆಯಿಂದಾಗಿ ತಾಲ್ಲೂಕಿನಾದ್ಯಂತ ತಡರಾತ್ರಿಯವರೆಗೂ ವಿದ್ಯುತ್‌ ಪೂರೈಕೆ ಸ್ಥಗಿತವಾಗಿತ್ತು.

ಮಳೆಯಿಂದಾಗಿ ರಾಷ್ಟ್ರೀಯ ಹೆದ್ದಾರಿ 234 ರ ಚೀಕನಹಳ್ಳಿ ಗೋಣಿಬೀಡಿನ ನಡುವೆ ಮರವೊಂದು ಉರುಳಿ ಹೆದ್ದಾರಿಗೆ ಬಿದ್ದ ಪರಿಣಾಮ ಒಂದು ಗಂಟೆಯ ಕಾಲ ಹೆದ್ದಾರಿಯ ಬೇಲೂರು– ಮೂಡಿಗೆರೆ ರಸ್ತೆಯಲ್ಲಿ ಸಂಚಾರ ಸ್ಥಗಿತವಾಗಿತ್ತು. ಬೇಲೂರು ತಲುಪುವ ವಾಹನಗಳು ಗೆಂಡೆಹಳ್ಳಿ ಮಾರ್ಗವಾಗಿ ಸಂಚರಿಸುತ್ತಿದ್ದವು.

ರಾಷ್ಟ್ರೀಯ ಹೆದ್ದಾರಿ 234ರ ಚಾರ್ಮಾಡಿ ಘಾಟಿಯಲ್ಲಿ ವಾಹನ ದಟ್ಟಣೆ ಹೆಚ್ಚಾಗಿದ್ದ ಪರಿಣಾಮ ಇಡೀ ದಿನ ಪದೇ ಪದೇ ಸಂಚಾರ ಸ್ಥಗಿತವಾಗುತ್ತಿತ್ತು. ಸಂಜೆ ವೇಳೆಗೆ ಮಂಜು ಸುರಿದಿದ್ದರಿಂದ ರಸ್ತೆ ಕಾಣದೇ ಚಾಲಕರು ಪರದಾಡುತ್ತಿದ್ದರು. ಆದರೆ, ರಾತ್ರಿ ಘಾಟಿಯಲ್ಲಿ ಪ್ರಾರಂಭವಾದ ಬಿರುಸಿನ ಮಳೆಯಿಂದ ಮೂರು ಗಂಟೆಗೂ ಅಧಿಕ ಕಾಲ ಹೆದ್ದಾರಿಯಲ್ಲಿ ವಾಹನ ಸಂಚಾರ ಸ್ಥಗಿತವಾಗಿತ್ತು. ಘಾಟಿಯಲ್ಲಿ ಸಿಲುಕಿದ ವಾಹನ ಸವಾರರು, ಮಕ್ಕಳು, ವೃದ್ಧರು ಊಟ, ನೀರಿಲ್ಲದೇ ಪರದಾಡುತ್ತಿದ್ದ ಬಗ್ಗೆ ಪ್ರತ್ಯಕ್ಷದರ್ಶಿಗಳು ದೂರವಾಣಿಯಲ್ಲಿ ಅಳಲು ತೋಡಿಕೊಂಡರು.

ಸಂಚಾರ ಸ್ಥಗಿತದಿಂದ ರಾತ್ರಿ 9 ಗಂಟೆಯ ಸುಮಾರಿಗೆ ಹೆದ್ದಾರಿಯ ಎರಡೂ ಬದಿಯಲ್ಲಿ 4 ಕಿ.ಮೀ. ಗೂ ಅಧಿಕ ದೂರದವರೆಗೂ ವಾಹನಗಳು ಸಾಲುಗಟ್ಟಿ ನಿಂತಿದ್ದವು. ತಡ ರಾತ್ರಿಯವರೆಗೂ ಕರಾವಳಿ ಭಾಗಕ್ಕೆ ತೆರಳುವ ವಾಹನಗಳನ್ನು ಕೊಟ್ಟಿಗೆಹಾರದಲ್ಲಿಯೇ ತಡೆದು ಸ್ಥಗಿತಗೊಳಿಸಲಾಗಿತ್ತು. ಸ್ಥಳೀಯ ಯುವಕರು ಘಾಟಿಯಲ್ಲಿ ಬೀಡುಬಿಟ್ಟು ವಾಹನಗಳನ್ನು ತೆರವು ಮಾಡುತ್ತಿದ್ದರು. ಕರಾವಳಿಯಿಂದ ತಾಲ್ಲೂಕಿಗೆ ಸಂಜೆ ಬರಬೇಕಾಗಿದ್ದ ಬಸ್‌ಗಳು ಸಂಚಾರ ಸ್ಥಗಿತದಿಂದ ನಾಲ್ಕು ಗಂಟೆ ತಡವಾಗಿ ಬಂದಿದ್ದು, ಮೂಡಿಗೆರೆ ಬಸ್‌ ನಿಲ್ದಾಣದಲ್ಲಿ ಪ್ರಯಾಣಿಕರು ಬಸ್ಸಿಲ್ಲದೇ ಪರದಾಡುತ್ತಿದ್ದ ದೃಶ್ಯ ಕಂಡು ಬಂದಿತು. ಕಳಸ ಹೊರನಾಡು ರಸ್ತೆಯಲ್ಲೂ ಕಾರು ಹಾಗೂ ಜೀಪಿನ ನಡುವೆ ಡಿಕ್ಕಿ ಸಂಭವಿಸಿದ್ದರಿಂದ ಕೆಲಕಾಲ ಸಂಚಾರ ಸ್ಥಗಿತವಾಗಿತ್ತು.

ಹೆದ್ದಾರಿ ಪ್ರಾಧಿಕಾರಕ್ಕೆ ಹಿಡಿಶಾಪ: ಘಾಟಿಯಲ್ಲಿ ಎಗ್ಗಿಲ್ಲದೇ ಘನ ವಾಹನಗಳು ಸಂಚರಿಸುತ್ತಿದ್ದು, ಹೆದ್ದಾರಿ ಪ್ರಾಧಿಕಾರ ಮಾತ್ರ ಯಾವುದೇ ಕ್ರಮ ಕೈಗೊಳ್ಳದೇ ಪ್ರಯಾಣಿಕರೊಂದಿಗೆ ಚೆಲ್ಲಾಟವಾಡುತ್ತಿದೆ ಎಂದು ಘಾಟಿಯಲ್ಲಿ ಸಿಲುಕಿದ್ದ ಪ್ರಯಾಣಿಕರು ಹೆದ್ದಾರಿ ಪ್ರಾಧಿಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ‌

ಘಾಟಿಯಲ್ಲಿ ಮೊಬೈಲ್‌ ನೆಟ್‌ವರ್ಕ್‌ ಇಲ್ಲದೇ ಇರುವುದರಿಂದ ಗಂಟೆಗಟ್ಟಲೆ ಘಾಟಿಯಲ್ಲಿ ಸಿಲುಕಿದರೂ ಹೊರ ಜಗತ್ತಿಗೆ ಮಾಹಿತಿ ನೀಡದ ಸ್ಥಿತಿ ಎದುರಾಗುತ್ತದೆ ಎಂದು ಪ್ರಯಾಣಿಕ ಪರಮೇಶ್‌ ಆಕ್ರೋಶ ವ್ಯಕ್ತ ಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT