ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಫ್ರಾನ್ಸ್‌ನಲ್ಲಿ 46 ಡಿಗ್ರಿ ಸೆಲ್ಸಿಯಸ್‌ ಉಷ್ಣಾಂಶ: ನಾಗರಿಕರು ತತ್ತರ

ಫ್ರಾನ್ಸ್‌ನಲ್ಲಿ 45 ಡಿಗ್ರಿ ದಾಟಿದ ಉಷ್ಣಾಂಶ: ಯುರೋಪ್‌ನಲ್ಲಿ ಬಿಸಿಗಾಳಿ
Last Updated 29 ಜೂನ್ 2019, 20:01 IST
ಅಕ್ಷರ ಗಾತ್ರ

ಕಾರ್ಪೆಂಟ್ರಾಸ್‌, ಫ್ರಾನ್ಸ್‌: ಫ್ರಾನ್ಸ್‌ನಲ್ಲಿ ತಾಪಮಾನ 45 ಡಿಗ್ರಿ ಸೆಲ್ಸಿಯಸ್‌ ದಾಟಿದ್ದು,ಸಾರ್ವಕಾಲಿಕ ಉಷ್ಣಾಂಶ ದಾಖಲಾಗಿದೆ.

ಯುರೋಪ್‌ನಲ್ಲಿ ಬೇಸಿಗೆ ಆರಂಭ ಕಾಲದಲ್ಲಿ ಇಷ್ಟೊಂದು ತಾಪಮಾನ ಏರಿರುವುದು ಇದೇ ಮೊದಲ ಬಾರಿ. ಬಿಸಿಗಾಳಿಗೆ ಸಾವನ್ನಪ್ಪಿದವರ ಸಂಖ್ಯೆ ಯೂ ಹೆಚ್ಚುತ್ತಿದೆ.

ಸ್ಪೇನ್‌, ಇಟಲಿ ಮತ್ತು ಕೇಂದ್ರ ಯುರೋಪ್‌ನ ಅನೇಕ ಭಾಗಗಳಲ್ಲಿ ತಾಪಮಾನ ಏರಿಕೆಯಾಗಿದ್ದು, ತಾಪ ಮಾನದ ಸಮಸ್ಯೆಗಳನ್ನು ಎದುರಿಸಲು ಮುನ್ನೆಚ್ಚರಿಕೆ ವಹಿಸಬೇಕು ಎಂದು ಜನರಿಗೆ ಸೂಚನೆ ನೀಡಲಾಗಿದೆ. ಪ್ರಸ್ತುತ ಫ್ರಾನ್ಸ್‌ನ ಗಲ್ಲಾರ್ಗಸ್‌ ಲೆ ಮಾಂಟೆಕ್ಸ್‌ ಎಂಬಲ್ಲಿ ಅತಿ ಹೆಚ್ಚಿನ 45.9 ಡಿಗ್ರಿ ಸೆಲ್ಸಿಯಸ್‌ ಉಷ್ಣಾಂಶ ದಾಖಲಾಗಿದೆ ಎಂದು ಫ್ರಾನ್ಸ್‌ನ ಹವಾಮಾನ ಇಲಾಖೆ ಹೇಳಿದೆ. 2003ರ ಆಗಸ್ಟ್‌ನಲ್ಲಿ ಇದೇ ಪ್ರದೇಶದಲ್ಲಿ 44.1 ಡಿಗ್ರಿ ಉಷ್ಣಾಂಶ ಏರಿಕೆಯಾಗಿದ್ದು, ಅದು ಅಂದಿನ ಅತೀ ಹೆಚ್ಚು ಉಷ್ಣಾಂಶ ದಾಖಲೆಯಾಗಿತ್ತು.

ಕಾರ್ಪೆಂಟ್ರಾಸ್‌ ಟೌನ್‌ನಲ್ಲಿ ಶುಕ್ರವಾರ 44 ಡಿಗ್ರಿ ಉಷ್ಣಾಂಶ ದಾಖಲಾದಾಗ, ಇಡೀ ನಗರವೇ ಬಿಕೋ ಎನ್ನುತ್ತಿತ್ತು. ಜನರು ಬೇಗ ಮನೆಯೊಳಗೆ ಸೇರಿಕೊಂಡರು. ಹೋಟೆಲ್‌, ಕೆಫೆಗಳ ಮಾಲೀಕರು ತಾರಸಿಯನ್ನು ತೆರವು ಮಾಡಲು ನಿರ್ಧರಿಸಿದರು. ಇತರ ದಿನಗಳಲ್ಲಿ ತಾರಸಿ ಮೇಲೆ ಜನಜಂಗುಳಿಯೇ ಕಾಣಿಸುತ್ತಿತ್ತು. ‘ಇಂತಹ ಬಿಸಿ ಹವಾಮಾನವನ್ನು ನಾವು ಕಂಡಿದ್ದೇ ಇಲ್ಲ‘ ಎಂದು ವ್ಯಕ್ತಿಯೊಬ್ಬರು ಆತಂಕ ವ್ಯಕ್ತಪಡಿಸಿದರು.

ಯುರೋಪ್‌ನಲ್ಲಿ 45 ಡಿಗ್ರಿ ಉಷ್ಣಾಂಶ ದಾಖಲಾದ ಐದನೇ ರಾಷ್ಟ್ರ ಫ್ರಾನ್ಸ್‌. ಬಲ್ಗೇರಿಯಾ, ಪೋರ್ಚುಗಲ್‌, ಇಟಲಿ, ಸ್ಪೇನ್‌, ಗ್ರೀಸ್‌, ಸ್ಪೇನ್‌ ಮತ್ತು ಉತ್ತರ ಮೆಸೆಡೊನಿಯಾದಲ್ಲಿ ಉಷ್ಣಾಂಶ ಈ ಗಡಿ ದಾಟಿತ್ತು ಎಂದು ಫ್ರಾನ್ಸ್‌ ಹವಾಮಾನ ಇಲಾಖೆ ಹೇಳಿದೆ.

ಸ್ಪೇನ್‌ನಲ್ಲಿ ಬಿಸಿಗಾಳಿಗೆ ಇಬ್ಬರು ಬಲಿಯಾಗಿದ್ದಾರೆ. ದಕ್ಷಿಣ ಅಂಡಾಲುಸಿಯಾ ಪ್ರದೇಶದಲ್ಲಿ ಗೋಧಿ ಹೊಲದಲ್ಲಿ ಕೆಲಸ ಮಾಡುತ್ತಿದ್ದ ಯುವಕಾರ್ಮಿಕರು ತಲೆಸುತ್ತು ಬಂದು ಬಳಲಿ ಬಿದ್ದಿದ್ದಾರೆ.

ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿದರೂ ಕಾರ್ಮಿಕನೊಬ್ಬ ಬದುಕುಳಿಯಲಿಲ್ಲ ಎಂದು ಪ್ರಾದೇಶಿಕ ಸರ್ಕಾರಿ ಆಸ್ಪತ್ರೆ ಹೇಳಿದೆ.

**

ಸರಿಯಾಗಿ ಮುನ್ನೆಚ್ಚರಿಕೆ ತೆಗೆದುಕೊಂಡರೆ ಬಿಸಿಗಾಳಿಯಿಂದಾಗುವ ಸಾವನ್ನು ತಪ್ಪಿಸಬಹುದು. ಆದ್ದರಿಂದ ನಾಗರಿಕರು ಜವಾಬ್ದಾರಿಯಿಂದ ವರ್ತಿಸಬೇಕು.
- ಎಡೌರ್ಡ್‌ ಫಿಲಿಪ್‌,ಫ್ರಾನ್ಸ್‌ ಪ್ರಧಾನಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT