ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಡವರಿಗೆ ಸಿಗದ ‘ನಿವೇಶನ ಭಾಗ್ಯ’

Last Updated 28 ಫೆಬ್ರುವರಿ 2018, 6:34 IST
ಅಕ್ಷರ ಗಾತ್ರ

ದೇವನಹಳ್ಳಿ: ಸರ್ಕಾರದ ಆದೇಶದಂತೆ ಕಳೆದ 25 ವರ್ಷಗಳಿಂದ ಪ್ರತಿವರ್ಷ ಅರ್ಹ ಕಡುಬಡವರನ್ನು ಗುರುತಿಸಿ ಪಟ್ಟಿ ನೀಡಿ ಶಿಫಾರಸು ಮಾಡುತ್ತಲೇ ಇದ್ದೇವೆ. ನಿವೇಶನ ಮಾತ್ರ ಇದುವರೆಗೂ ಯಾರಿಗೂ ಸಿಕ್ಕಿಲ್ಲ ಎಂದು ಗ್ರಾಮ ಪಂಚಾಯಿತಿ ಅಧ್ಯಕ್ಷ ಎ.ದೇವರಾಜ್ ಬೇಸರ ವ್ಯಕ್ತಪಡಿಸಿದರು.

ಇಲ್ಲಿನ ಕಾರಹಳ್ಳಿ ಗ್ರಾಮ ಪಂಚಾಯಿತಿ ಆವರಣದಲ್ಲಿ ಮಂಗಳವಾರ ನಿವೇಶನ ಮತ್ತು ವಸತಿ ರಹಿತರ ಆಯ್ಕೆ ಗ್ರಾಮ ಸಭೆಯಲ್ಲಿ ಮಾತನಾಡಿದ ಅವರು, ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಯಾವುದೇ ಖಾಲಿ ಜಾಗವಿಲ್ಲ. ಕಂದಾಯ ಇಲಾಖೆಗೆ ಒಳಪಟ್ಟಿರುವ ಸರ್ಕಾರಿ ಜಾಗ ಬೇಕಾದಷ್ಟು ಇದೆ. ಇಲಾಖೆ ಅಧಿಕಾರಿಗಳು ಸಂಪುಟ ದರ್ಜೆ ಸಚಿವರಿಂದ ಒಪ್ಪಿಗೆ ಪಡೆದರೆ ಮಾತ್ರ ಜಾಗ ನೀಡಲು ಅವಕಾಶವಿದೆ ಎಂದರು.

ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಬೀರೇಶ್ ಮಾತನಾಡಿ, ನಿವೇಶನ ಪಡೆಯಲು ಸರ್ಕಾರ ಕಠಿಣ ಮಾನದಂಡ ವಿಧಿಸಿದೆ. ಒಬ್ಬ ಫಲಾನುಭವಿ ರಾಜ್ಯದ ಯಾವುದೇ ಮೂಲೆಯಲ್ಲಿ ನಿವೇಶನ ಮತ್ತು ವಸತಿ ಇದ್ದರೆ ‍ಪಡೆಯುವಂತಿಲ್ಲ. ಸ್ಥಳೀಯ ಗ್ರಾಮದಲ್ಲಿ ಕನಿಷ್ಠ 25 ವರ್ಷ ವಾಸವಾಗಿರಲೇಬೇಕು. ಸಾಮಾಜಿಕವಾಗಿ ಹಿಂದುಳಿದಿದ್ದು ವಾರ್ಷಿಕ ಆದಾಯ ₹32 ಸಾವಿರಕ್ಕಿಂತ ಕಡಿಮೆ ಇರಬೇಕು. ಅಂತಹವರಿಗೆ ಮಾತ್ರ ನಿವೇಶನ ಪಡೆಯಲು ಅರ್ಹರಾಗಿರುತ್ತಾರೆ ಎಂದರು.

ತಾಲ್ಲೂಕು ಪಂಚಾಯಿತಿ ಸದಸ್ಯ ಕಾರಹಳ್ಳಿ ಶ್ರೀನಿವಾಸ್ ಮಾತನಾಡಿ, ಗ್ರಾಮ ವ್ಯಾಪ್ತಿಯಲ್ಲಿರುವ ಕಂದಾಯ ಸರ್ಕಾರಿ ಭೂಮಿ ಸ್ವಾಧೀನ ಪಡಿಸಿಕೊಳ್ಳಲು ಪಂಚಾಯಿತಿಗೆ ಅವಕಾಶ ನೀಡಬೇಕು ಎಂದು ಅವರು ಒತ್ತಾಯಿಸಿದರು.

ಕಾರ್ಮಿಕ ಇಲಾಖೆ ಸಹಾಯಕ ನಿರ್ದೇಶಕ ರಾಜೇಶ್ ಮಾತನಾಡಿ, ಪಂಚಾಯಿತಿ ವ್ಯಾಪ್ತಿಯಲ್ಲಿ ಕಟ್ಟಡ ಹಾಗೂ ಇತರೆ ನಿರ್ಮಾಣ ಒಟ್ಟು 269 ಕಾರ್ಮಿಕರು ನೋಂದಣಿ ಮಾಡಿಕೊಂಡು ವಿಮೆ ಬಾಂಡ್ ಪ್ರಮಾಣ ಪತ್ರಕ್ಕೆ ಅರ್ಹರಾಗಿದ್ದಾರೆ. 260 ಅಂಗವಿಕಲರಿಗೆ ಅಧಿಕೃತ ಗುರುತಿನ ಚೀಟಿ ನೀಡಿ ಸಾಮಾಜಿಕ ಭದ್ರತೆ ಪ್ರೋತ್ಸಾಹಕ್ಕೆ ಅರ್ಹರಾಗಿದ್ದಾರೆ ಎಂದರು.

ತಾಲ್ಲೂಕು ಪಂಚಾಯಿತಿ ಸದಸ್ಯೆ ಶೈಲಜಾ ಜಗದೀಶ್, ಗ್ರಾಮ ಪಂಚಾಯಿತಿ ಸದಸ್ಯರಾದ ರಾಜೇಂದ್ರ, ಮಂಜುನಾಥ್, ರಾಜಣ್ಣ, ನಾರಾಯಣಸ್ವಾಮಿ, ನರಸಿಂಹಯ್ಯ, ಇಂದ್ರಮ್ಮ, ರೂಪ, ಅಂಬಿಕಾ, ಜಯಮ್ಮ, ಕಾರ್ಯದರ್ಶಿ ಸೀನಪ್ಪ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT