ಬುಧವಾರ, ಜನವರಿ 29, 2020
27 °C

ಅಫ್ಗಾನಿಸ್ತಾನ: ಎರಡನೇ ಬಾರಿ ಅಧ್ಯಕ್ಷರಾಗಿ ಘನಿ ಆಯ್ಕೆ ಬಹುತೇಕ ಖಚಿತ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕಾಬೂಲ್‌ (ಎಎಫ್‌ಪಿ): ಅಫ್ಗಾನಿಸ್ತಾನದ ಅಧ್ಯಕ್ಷೀಯ ಚುನಾವಣೆಯಲ್ಲಿ ಹಾಲಿ ಅಧ್ಯಕ್ಷ ಅಶ್ರಫ್‌ ಘನಿ ಬಹುಮತ ಗಳಿಸಿದ್ದಾರೆ ಎಂದು ಚುನಾವಣಾ ಅಧಿಕಾರಿಗಳು ಪ್ರಾಥಮಿಕ ಫಲಿತಾಂಶ ಘೋಷಿಸಿದ್ದು, ಎರಡನೇ ಅವಧಿಗೂ ಅವರು ಅಧ್ಯಕ್ಷರಾಗಿ ಆಯ್ಕೆಯಾಗುವುದು ಬಹುತೇಕ ಖಚಿತವಾಗಿದೆ.

ಸೆಪ್ಟೆಂಬರ್‌ 28 ರಂದು ಚುನಾವಣೆ ನಡೆದಿದ್ದು, ಘನಿ ಅವರು ಸ್ಪಷ್ಟ ಬಹುಮತ ಹೊಂದಿದ್ದರೂ, ಚುನಾವಣೆಯಲ್ಲಿ ಪ್ರಬಲ ಸ್ಪರ್ಧೆಯೊಡ್ಡಿದ್ದ ಅಬ್ದುಲ್ಲಾ ಅಬ್ದುಲ್ಲಾ ಅವರು ಫಲಿತಾಂಶವನ್ನು ಪ್ರಶ್ನಿಸುವುದಾಗಿ ಹೇಳಿದ್ದಾರೆ. ಇದರಿಂದ ಅಂತಿಮ ಫಲಿತಾಂಶವನ್ನು ಇನ್ನೂವರೆಗೆ ಪ್ರಕಟಿಸಿಲ್ಲ.  ‘ಸೆಪ್ಟೆಂಬರ್‌ 28 ಚುನಾವಣೆಯಲ್ಲಿ ಘನಿ ಶೇ 50.64 ರಷ್ಟು ಮತಗಳನ್ನು ಗಳಿಸಿದ್ದಾರೆ. ಅಬ್ದುಲ್ಲಾ ಅವರು ಕೇವಲ ಶೇ 39.52 ರಷ್ಟು ಮತ ಪಡೆದಿದ್ದಾರೆ. ಅಂತಿಮ ಫಲಿತಾಂಶ ಘೋಷಿಸುವ ಮೊದಲು ಅಭ್ಯರ್ಥಿಗಳು ಯಾವುದೇ ದೂರುಗಳನ್ನು ಸಲ್ಲಿಸುವ ಹಕ್ಕು ಹೊಂದಿದ್ದಾರೆ. ದೂರುಗಳು ಬಂದರೆ ಪರಿಶೀಲಿಸಿ ಕೆಲವೇ ವಾರಗಳಲ್ಲಿ ಫಲಿತಾಂಶ ಪ್ರಕಟಿಸಲಾಗುವುದು’ ಎಂದು ಸ್ವತಂತ್ರ ಚುನಾವಣಾ ಆಯೋಗ ಹೇಳಿದೆ.

ಫಲಿತಾಂಶ ಪ್ರಕಟವಾದ ಕೂಡಲೇ  ಅದನ್ನು ಪ್ರಶ್ನಿಸಲಾಗುವುದು ಎಂದು ಅಬ್ದುಲ್ಲಾ ಅವರ ಕಚೇರಿ ಹೇಳಿಕೆಯಲ್ಲಿ ತಿಳಿಸಿದೆ. ‘ಮತದಾನದ ಸಂದರ್ಭದಲ್ಲಿ ಮೋಸ ನಡೆದಿದೆ. ಆದ್ದರಿಂದ ನಮ್ಮ ಕಾನೂನುಬದ್ಧ ಬೇಡಿಕೆಗಳನ್ನು ಪರಿಹರಿಸದ ಹೊರತು, ಈ ಫಲಿತಾಂಶವನ್ನು ಒಪ್ಪಲು ಸಾಧ್ಯವಿಲ್ಲ. ಚುನಾವಣಾ ಆಯೋಗ, ಮತದಾರರು, ನಮ್ಮ ಬೆಂಬಲಿಗರು ಹಾಗೂ ನಮ್ಮ ಅಂತರರಾಷ್ಟ್ರೀಯ ಮಿತ್ರರಿಗೆ ಮತ್ತೊಮ್ಮೆ ಸ್ಪಷ್ಟಪಡಿಸಲು ಬಯಸುತ್ತೇನೆ’ ಎಂದು ಅಬ್ದುಲ್ಲಾ ಅವರು ಹೇಳಿಕೆಯಲ್ಲಿ ತಿಳಿಸಿದ್ದಾರೆ.

‘ಈ ಚುನಾವಣೆಯ ಪ್ರಾಥಮಿಕ ಫಲಿತಾಂಶ ಅಕ್ಟೋಬರ್‌ನಲ್ಲಿಯೇ ಪ್ರಕಟವಾಗಬೇಕಿತ್ತು. ಆದರೆ, ತಾಂತ್ರಿಕ ಕಾರಣಗಳು ಮತ್ತು ವಿವಿಧ ಅಭ್ಯರ್ಥಿಗಳ ಅದರಲ್ಲೂ, ಅಬ್ದುಲ್ಲಾ ಅವರ ವಂಚನೆ ಆರೋಪಗಳಿಂದ ವಿಳಂಬವಾಗಿದೆ. ನಾವು ಪ್ರಾಮಾಣಿಕ ಮತ್ತು ನಿಷ್ಠೆಯಿಂದ ಕರ್ತವ್ಯವನ್ನು ಪೂರ್ಣಗೊಳಿಸಿದ್ದೇವೆ. ಪ್ರಜಾಪ್ರಭುತ್ವದ ಅಸ್ತಿತ್ವಕ್ಕಾಗಿ ಪ್ರತಿಯೊಂದೂ ಮತಗಳನ್ನು ಗೌರವಿಸಿದ್ದೇವೆ’ ಎಂದು ಸ್ವತಂತ್ರ ಚುನಾವಣಾ ಆಯೋಗದ ಅಧ್ಯಕ್ಷೆ ಹವಾ ಆಲಂ ನುರಿಸ್ತಾನಿ ಹೇಳಿದ್ದಾರೆ.

ಅಕ್ರಮ ಹಾಗೂ ಒಂದಕ್ಕಿಂತ ಹೆಚ್ಚು ಬಾರಿ ಮತ ಚಲಾಯಿಸುವುದನ್ನು ತಡೆಯಲು ಚುನಾವಣೆಗೆ ಜರ್ಮನ್‌ ಕಂಪನಿಯ ಬಯೋಮೆಟ್ರಿಕ್‌ ಯಂತ್ರಗಳನ್ನು ಬಳಸಲಾಗಿದೆ ಎಂದು ಆಯೋಗ ತಿಳಿಸಿದೆ. ಅಮೆರಿಕ–ತಾಲಿಬಾನ್‌ ನಡುವಿನ ಮಾತುಕತೆಯ ಫಲಿತಾಂಶಕ್ಕಾಗಿ ಕಾತುರದಿಂದ ಕಾಯುತ್ತಿರುವ ಅಫ್ಗಾನಿಸ್ತಾನದ ಜನರ ಮೇಲೆ ಚುನಾವಣಾ ಫಲಿತಾಂಶ ಮತ್ತಷ್ಟು ಅನಿಶ್ಚಿತತೆಯನ್ನು ಹೆಚ್ಚಿಸಿದೆ. 

ಮುಖ್ಯಾಂಶಗಳು

ಸೆಪ್ಟೆಂಬರ್‌ನಲ್ಲಿ ನಡೆದ ಚುನಾವಣೆ

ಪ್ರಾಥಮಿಕ ಫಲಿತಾಂಶ ಪ್ರಕಟಣೆ

ಮತದಾನಕ್ಕೆ ಬಯೋಮೆಟ್ರಿಕ್‌ ಯಂತ್ರ ಬಳಕೆ

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು