ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೊದಲ ಮಹಾಯುದ್ಧ ಮುಕ್ತಾಯಕ್ಕೆ ಶತಮಾನ: ಯೋಧರ ಸ್ಮರಣೆ

ಪ್ಯಾರಿಸ್‌ನಲ್ಲಿ ಶಾಂತಿ ಮಂತ್ರ ಜಪಿಸಿದ ಜಾಗತಿಕ ನಾಯಕರು
Last Updated 11 ನವೆಂಬರ್ 2018, 20:15 IST
ಅಕ್ಷರ ಗಾತ್ರ

ಪ್ಯಾರಿಸ್‌: ವಿಶ್ವದ ಮೊದಲ ಮಹಾಯುದ್ಧ ಮುಗಿದು ನೂರು ವರ್ಷ ಪೂರೈಸಿದ ಸ್ಮರಣಾರ್ಥ ಜಾಗತಿಕ ನಾಯಕರು ಪ್ಯಾರಿಸ್‌ನಲ್ಲಿ ಒಗ್ಗೂಡಿ ಶಾಂತಿ ಮಂತ್ರ ಜಪಿಸಿದರು.

ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಮತ್ತು ರಷ್ಯಾ ಅಧ್ಯಕ್ಷ ವ್ಲಾಡಿಮಿರ್‌ ಪುಟಿನ್‌ ಸೇರಿದಂತೆ ಸುಮಾರು 70 ದೇಶಗಳ ನಾಯಕರು ಇಲ್ಲಿ ಸೇರಿ ಯುದ್ಧದಲ್ಲಿ ಮಡಿದ ಲಕ್ಷಾಂತರ ಯೋಧರಿಗೆ ಶ್ರದ್ಧಾಂಜಲಿ ಸಲ್ಲಿಸಿದರು.

ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಭಾರತವನ್ನು ಪ್ರತಿನಿಧಿಸಿದ್ದಾರೆ. ಮಹಾಯುದ್ಧ ಮುಗಿದ ಸ್ಮರಣಾರ್ಥ ಪ್ಯಾರಿಸ್‌ನ ಆರ್ಕ್ ಡಿ ಟ್ರಯೊಂಫ್‌ನಲ್ಲಿ ನಿರ್ಮಿಸಿರುವ ಸ್ಮಾರಕದ ಬಳಿ ನಡೆದ ಕಾರ್ಯಕ್ರಮದಲ್ಲಿ ಜರ್ಮನಿ, ಫ್ರಾನ್ಸ್‌ ಮತ್ತು ಬ್ರಿಟನ್‌ನ ಸೈನಿಕರು ಯುದ್ಧದ ಸಂದರ್ಭದಲ್ಲಿ ಬರೆದ ಪತ್ರಗಳನ್ನು ಮಕ್ಕಳು ಓದಿದರು.

ಮೊದಲ ಮಹಾಯುದ್ಧದಲ್ಲಿ ಹೋರಾಡಿ ಮಡಿದ ಭಾರತೀಯ ಯೋಧರಿಗೆ ಪ್ರಧಾನಿ ನರೇಂದ್ರ ಮೋದಿ ನವದೆಹಲಿಯಲ್ಲಿ ಶ್ರದ್ಧಾಂಜಲಿ ಸಲ್ಲಿಸಿದರು.

ಲಂಡನ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಬ್ರಿಟನ್‌ ಪ್ರಧಾನಿ ಥೆರೆಸಾ ಮೇ ಮತ್ತು ರಾಣಿ ಎಲಿಜಬೆತ್‌ ಪಾಲ್ಗೊಂಡಿದ್ದರು. ನ್ಯೂಜಿಲೆಂಡ್‌ ಮತ್ತು ಆಸ್ಟ್ರೇಲಿಯಾದಲ್ಲಿ ಸಹ ಪ್ರತ್ಯೇಕವಾಗಿ ಕಾರ್ಯಕ್ರಮಗಳು ನಡೆದವು.

1914ರಲ್ಲಿ ಆರಂಭವಾಗಿದ್ದ ಈ ಸಮರ 1918ರ ನ.18ರಂದು ಮುಕ್ತಾಯಗೊಂಡಿತ್ತು. ಏಷ್ಯಾ, ಆಫ್ರಿಕಾ ಖಂಡದ ರಾಷ್ಟ್ರಗಳು ಸೇರಿದಂತೆ ವಸಾಹತುಶಾಹಿಗೆ ಒಳಗಾಗಿದ್ದ ಈಗಿನ ಸುಮಾರು 70 ರಾಷ್ಟ್ರಗಳ ಯೋಧರು ಈ ಯುದ್ಧದಲ್ಲಿ ಪಾಲ್ಗೊಂಡಿದ್ದರು. ಸುಮಾರು ಒಂದು ಕೋಟಿ ಯೋಧರು ಯುದ್ಧದಲ್ಲಿ ಮಡಿದಿದ್ದರು. ಅಲ್ಲದೆ ಒಂದು ಕೋಟಿ ನಾಗರಿಕರು ಈ ಸಂಘರ್ಷದಲ್ಲಿ ಸಾವಿಗೀಡಾಗಿದ್ದರು ಎಂದು ಅಂದಾಜಿಸಲಾಗಿದೆ.

ಪೋಪ್‌ ಎಚ್ಚರಿಕೆ: ಯುದ್ಧದ ಸಂಸ್ಕೃತಿ ತಿರಸ್ಕರಿಸಬೇಕು ಎನ್ನುವ ಸಂದೇಶವನ್ನು ಮೊದಲ ಮಹಾಯುದ್ಧ ನೀಡಿದೆ ಎಂದು ಪೋಪ್‌ ಫ್ರಾನ್ಸಿಸ್‌ ಹೆಳಿದರು.

ಆದರೆ, ಇದುವರೆಗಿನ ಯುದ್ಧಗಳು ನೀಡಿರುವ ಎಚ್ಚರಿಕೆಯನ್ನು ಪದೇ ಪದೇ ಕಡೆಗಣಿಸಲಾಗಿದೆ. ಈ ಯುದ್ಧಗಳಿಂದ ಯಾರೂ ಪಾಠ ಕಲಿತಿಲ್ಲ ಎಂದರು.

ಭಾರತೀಯ ಯೋಧರಿಗಾಗಿ ಪ್ರತಿಮೆ

ಮೊದಲ ಮಹಾಯುದ್ಧದಲ್ಲಿ ಭಾರತೀಯ ಯೋಧರು ನಿರ್ವಹಿಸಿದ ಪಾತ್ರಕ್ಕಾಗಿ ಹೊಸ ಪ್ರತಿಮೆಯನ್ನು ಫ್ರಾನ್ಸ್‌ನ ಲ್ಯಾವೆಂಟಿ ನಗರದಲ್ಲಿ ಭಾನುವಾರಅನಾವರಣಗೊಳಿಸಲಾಯಿತು.

ಬ್ರಿಟಿಷರ ಪರ ಭಾರತೀಯ ಯೋಧರು ಹೋರಾಟ ನಡೆಸಿದ ನೆನಪಿಗಾಗಿ ಏಳು ಅಡಿ ಎತ್ತರದ ಪ್ರತಿಮೆಯನ್ನು ಇಲ್ಲಿ ಸ್ಥಾಪಿಸಲಾಗಿದೆ.

39ನೇ ರಾಯಲ್‌ ಗಡವಾಲ್‌ ರೈಫಲ್ಸ್‌ನ ಇಬ್ಬರು ಸೈನಿಕರ ದೇಹದ ಕುರುಹುಗಳು ಇಲ್ಲಿ ಪತ್ತೆಯಾಗಿದ್ದವು. ಕಳೆದ ವರ್ಷ ಸೇನಾ ಗೌರವದೊಂದಿಗೆ ಈ ಅವಶೇಷಗಳನ್ನು ಮತ್ತೆ ಸಮಾಧಿ ಮಾಡಲಾಗಿತ್ತು.

‘ಯೋಧರ ನೆನಪಿಗಾಗಿ ಫ್ರಾನ್ಸ್‌ನಲ್ಲಿ ಒಟ್ಟು 57 ಪ್ರತಿಮೆಗಳನ್ನು ಸ್ಥಾಪಿಸಲು ಯೋಜನೆ ರೂಪಿಸಲಾಗಿದೆ. ಇದು ಮೊದಲ ಪ್ರತಿಮೆಯಾಗಿದೆ’ ಎಂದು ನಿವೃತ್ತ ಕರ್ನಲ್‌ ದೀಪಕ್‌ ದಹಿಯಾ ತಿಳಿಸಿದ್ದಾರೆ.ದೀಪಕ್‌ ದಹಿಯಾ ಭಾರತೀಯ ಸೇನೆಯಲ್ಲಿ 23 ವರ್ಷ ಕಾರ್ಯನಿರ್ವಹಿಸಿದ್ದು, ಪ್ರಸ್ತುತ ಪ್ರತಿಮೆಗಳ ಸ್ಥಾಪನೆಯ ಹೊಣೆ ವಹಿಸಿಕೊಂಡಿರುವ ಶಹೀದಿ ಸ್ಮಾರಕ ಸಂಘಟನೆಯ (ಐಎಫ್‌ಎಸ್‌ಸಿ) ಉಪಾಧ್ಯಕ್ಷರಾಗಿದ್ದಾರೆ.

ಭಾರತೀಯರ ಕೊಡುಗೆ ನೆನಪಿಸುವ ಪುಸ್ತಕ

ನವದೆಹಲಿ ವರದಿ: ಮೊದಲ ಮಹಾಯುದ್ಧದಲ್ಲಿ ಭಾರತೀಯ ಯೋಧರು ಸಲ್ಲಿಸಿದ ಸೇವೆಯನ್ನು ಪುಸ್ತಕ ರೂಪದಲ್ಲಿ ದಾಖಲಿಸುವ ಪ್ರಯತ್ನ ಮಾಡಲಾಗಿದೆ.

‘ದಿ ಇಂಡಿಯನ್‌ ಎಂಪೈರ್‌ ಆ್ಯಟ್‌ ವಾರ್‌: ಫ್ರಾಮ್‌ ಜಿಹಾದ್‌ ಟು ವಿಕ್ಟರಿ, ದಿ ಅನ್‌ಟೋಲ್ಡ್‌ ಸ್ಟೋರಿ ಆಫ್‌ ದಿ ಇಂಡಿಯನ್‌ ಆರ್ಮಿ ಇನ್‌ ದಿ ಫಸ್ಟ್‌ ವಾರ್‌ ವರ್ಲ್ಡ್’ ಹೆಸರಿನ ಪುಸ್ತಕವನ್ನು ಬ್ರಿಟಿಷ್‌ ಇತಿಹಾಸಕಾರ ಜಾರ್ಜ್‌ ಮಾರ್ಟನ್‌ ಜಾಕ್‌ ಬರೆದಿದ್ದಾರೆ.

ಭಾರತೀಯ ಸೈನಿಕರು ಕೈಗೊಂಡ ಅಪಾಯಕಾರಿ ಕಾರ್ಯಾಚರಣೆಗಳು, ಬೇಹುಗಾರಿಕೆ, ವಿದೇಶಿ ಸಂಸ್ಕೃತಿ ಅನುಭವಗಳು ಮತ್ತು ಯುದ್ಧ ಕೈದಿಯಾಗಿ ಅನುಭವಿಸಿರುವ ಕ್ರೂರ ಅನುಭವಗಳನ್ನು ಈ ಪುಸ್ತಕದಲ್ಲಿ ಪ್ರಸ್ತಾಪಿಸಿದ್ದಾರೆ. ಭಾರತದ ಸುಮಾರು 34 ಸಾವಿರ ಯೋಧರು ಈ ಯುದ್ಧದಲ್ಲಿಸಾವಿಗೀಡಾಗಿದ್ದರು ಎಂದು ಜಾರ್ಜ್‌ ಅಭಿಪ್ರಾಯಪಟ್ಟಿದ್ದಾರೆ.

*****

ಮೊದಲ ಮಹಾಯುದ್ಧದಲ್ಲಿ ಭಾರತ ನೇರವಾಗಿ ಪಾಲ್ಗೊಂಡಿರಲಿಲ್ಲ. ಆದರೆ, ಶಾಂತಿ ಸ್ಥಾಪಿಸುವ ಉದ್ದೇಶದಿಂದ ನಮ್ಮ ರಾಷ್ಟ್ರದ ಸೈನಿಕರು ಭಾಗಿಯಾಗಿದ್ದರು.

– ನರೇಂದ್ರ ಮೋದಿ, ಪ್ರಧಾನಿ

ಇದು ಕೇವಲ ಸ್ಮರಣೆಯ ದಿನಕ್ಕೆ ಸೀಮಿತವಲ್ಲ. ನಾವು ಸಕಾರಾತ್ಮಕ ಕ್ರಿಯೆಯಲ್ಲಿ ತೊಡಗಿಸಿಕೊಳ್ಳಲು ಚಿಂತನೆ ನಡೆಸಬೇಕಾಗಿದೆ.

–ಏಂಜೆಲಾ ಮರ್ಕೆಲ್‌, ಜರ್ಮನಿಯ ಚಾನ್ಸಲರ್‌

ನಮ್ಮ ಭವಿಷ್ಯಕ್ಕಾಗಿ ಯೋಧರು ತಮ್ಮ ಬದುಕನ್ನೇ ಸಮರ್ಪಿಸಿದ್ದಾರೆ.

– ಸ್ಕಾಟ್‌ ಮಾರಿಸ್ಸನ್‌,ಆಸ್ಟ್ರೇಲಿಯಾ ಪ್ರಧಾನಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT