ಮುಗಿಯುತ್ತ ಬಂತು ಪಾಕ್‌ ಚುನಾವಣೆ, ಗರಿಗೆದರಿತು ಭಾರತದ ನಿರೀಕ್ಷೆಗಳು

7

ಮುಗಿಯುತ್ತ ಬಂತು ಪಾಕ್‌ ಚುನಾವಣೆ, ಗರಿಗೆದರಿತು ಭಾರತದ ನಿರೀಕ್ಷೆಗಳು

Published:
Updated:

ಬೆಂಗಳೂರು: 70 ವರ್ಷಗಳ ಇತಿಹಾಸದಲ್ಲಿ ಬಹುಪಾಲು ಸೇನೆಯೇ ಆಡಳಿತ ನಡೆಸಿರುವ ಪಾಕಿಸ್ತಾನದಲ್ಲಿ ಬುಧವಾರ ಸಾರ್ವತ್ರಿಕ ಚುನಾವಣೆಯ ಮತದಾನ ನಡೆಯುತ್ತಿದೆ. 

ಬಲಿಷ್ಠವಾಗಿರುವ ಸೇನೆಯು ಚುನಾವಣೆಯಲ್ಲಿ ಹಸ್ತಕ್ಷೇಪ ನಡೆಸುತ್ತಿರುವುದು ಮತ್ತು ಇಸ್ಲಾಂ ಮೂಲಭೂತವಾದಿಗಳು ಅತಿ ಹೆಚ್ಚಿನ ಸಂಖ್ಯೆಯಲ್ಲಿ ಸ್ಪರ್ಧಿಸಿರುವ ಬಗ್ಗೆ ಆತಂಕ ವ್ಯಕ್ತವಾಗಿದೆ. ಚುನಾವಣಾ ಆಯೋಗಕ್ಕಿಂತ, ಸೇನೆಯೇ ಮುಂದಾಗಿ ಭದ್ರತಾ ಪಡೆಗಳನ್ನು ಮತಗಟ್ಟೆಗಳಿಗೆ ನಿಯೋಜಿಸುತ್ತಿರುವುದಕ್ಕೆ ರಾಜಕೀಯ ಪಕ್ಷಗಳು ಅಸಮಾಧಾನ ವ್ಯಕ್ತಪಡಿಸಿವೆ.

ಬೆಳಿಗ್ಗೆ 8ರಿಂದ ಸಂಜೆ 6ರವರೆಗೆ ಮತದಾನ ನಡೆಯಲಿದೆ. ಸ್ಥಳದಲ್ಲಿಯೇ ಮತ ಎಣಿಕೆ ನಡೆಯಲಿದ್ದು, 24 ಗಂಟೆಯೊಳಗೆ ಫಲಿತಾಂಶ ಘೋಷಿಸಲಾಗುತ್ತದೆ.

ನ್ಯಾಷನಲ್ ಅಸೆಂಬ್ಲಿ ಚುನಾವಣೆ... 

ಪಾಕಿಸ್ತಾನ ನ್ಯಾಷನಲ್ ಅಸೆಂಬ್ಲಿಯ 342 ಸ್ಥಾನಗಳಿವೆ. 272 ಸ್ಥಾನಗಳಿಗೆ ನೇರ ಚುನಾವಣೆ ನಡೆಯುತ್ತಿದೆ. 60 ಸ್ಥಾನಗಳು ಮಹಿಳಿಯರಿಗೆ, 10 ಸ್ಥಾನಗಳು ಧಾರ್ಮಿಕ ಅಲ್ಪ ಸಂಖ್ಯಾತರಿಗೆ ಮೀಸಲಾಗಿವೆ. 172 ಸ್ಥಾನಗಳನ್ನು ಪಡೆದ ಪಕ್ಷ ಅಧಿಕಾರಕ್ಕೆ ಬರಲಿದೆ. ಈ ಬಾರಿ 20ಕ್ಕೂ ಹೆಚ್ಚು ರಾಜಕೀಯ ಪಕ್ಷಗಳು ಸ್ಪರ್ಧೆ ಮಾಡಿವೆ. ಪ್ರಮುಖವಾಗಿ 4 ಪಕ್ಷಗಳ ನಡುವೆ ಜಿದ್ದಾಜಿದ್ದಿನ ಪೈಪೋಟಿ ನಡೆಯಲಿದೆ ಎಂದು ಮತದಾನ ಪೂರ್ವ ಸಮೀಕ್ಷೆಗಳು ತಿಳಿಸಿವೆ. 

ರಾಜಕೀಯ ಪಕ್ಷಗಳು ಮತ್ತು ಪ್ರಧಾನಮಂತ್ರಿ ಅಭ್ಯರ್ಥಿಗಳು...

ಪ್ರಮುಖವಾಗಿ 4 ಪಕ್ಷಗಳು ಆಡಳಿತದ ಚುಕ್ಕಾಣಿ ಹಿಡಿಯಲು ಪೈಪೋಟಿ ನಡೆಸುತ್ತಿವೆ. ಪದಚ್ಯುತ ಪ್ರಧಾನಿ ನವಾಜ್‌ ಷರೀಫ್‌ ನೇತೃತ್ವದ ಆಡಳಿತರೂಢ ಪಾಕಿಸ್ತಾನ ಮುಸ್ಲಿಂ ಲೀಗ್‌ (ಪಿಎಂಎಲ್‌–ಎನ್‌), ಮಾಜಿ ಕ್ರಿಕೆಟಿಗ ಇಮ್ರಾನ್‌ ಖಾನ್‌ ಅವರ ‘ಪಾಕಿಸ್ತಾನ ತೆಹ್ರೀಕ್‌–ಐ–ಇನ್ಸಾಫ್‌’ (ಪಿಟಿಐ), ಮಾಜಿ ಪ್ರಧಾನಿ ಜುಲ್ಪಿಕರ್ ಅಲಿ ಭುಟ್ಟೊ ಮೊಮ್ಮಗ ಬಿಲಾವಲ್ ಭುಟ್ಟೊ ಜರ್ದಾರಿ ಮುಖಂಡತ್ವದ ಪಾಕಿಸ್ತಾನ್ ಪೀಪಲ್ಸ್ ಪಾರ್ಟಿ (ಪಿಪಿಪಿ), ಅಬ್ದುಲ್ ಗಫಾರ್ ಖಾನ್ ಅವರ ಮೊಮ್ಮಗ ಅಸ್ಪಾಂದ್ಯಾರ್ ವಾಲಿ ಖಾನ್ ಅವರ ಅವಾಮಿ ನ್ಯಾಷನಲ್ ಪಾರ್ಟಿ (ಎಎನ್‌ಪಿ) ಪ್ರಮುಖ ಪಕ್ಷಗಳಾಗಿವೆ. 

ಪಿಟಿಐ ಮತ್ತು  ಪಿಎಂಎಲ್‌–ಎನ್‌ ಪಕ್ಷಗಳು ನಡುವೆ ತೀವ್ರ ಪೈಪೋಟಿ ಏರ್ಪಡಲಿದೆ ಎಂದು ಚುನಾವಣಾ ಪೂರ್ವ ಸಮೀಕ್ಷೆಗಳು ತಿಳಿಸಿವೆ. ನವಾಜ್‌ ಷರೀಫ್‌ ಹಾಗೂ ಅವರ ಪುತ್ರಿ ಮರಿಯಂ ಜೈಲು ಸೇರಿರುವುದರಿಂದ ಪಿಎಂಎಲ್‌–ಎನ್‌ ಪಕ್ಷಕ್ಕೆ ಹಿನ್ನಡೆಯಾಗಲಿದ್ದು ಇಮ್ರಾನ್‌ ಖಾನ್‌ ಅವರ ಪಿಟಿಐ ಪಕ್ಷ ಅಧಿಕಾರ ಹಿಡಿಯುವ ಸಾಧ್ಯತೆಗಳಿವೆ ರಾಜಕೀಯ ವಿಶ್ಲೇಷಕರು ಹೇಳುತ್ತಾರೆ. ಭುಟ್ಟೊ ಕುಟುಂಬದ ಪಿಪಿಪಿ ಪಕ್ಷವು ಕೆಲವು ಕ್ಷೇತ್ರಗಳಲ್ಲಿ ಬಿಗಿ ಹಿಡಿತ ಹೊಂದಿದೆ. ಭುಟ್ಟೊ ಅವರ ಮೊಮ್ಮಗ ಬಿಲಾವಲ್ ಭುಟ್ಟೊ ಜರ್ದಾರಿ ಪಿಪಿಪಿ ಪಕ್ಷದ ಅಧ್ಯಕ್ಷರಾಗಿದ್ದಾರೆ. ಇವರು ದೇಶದ ಅತಿ ಕಿರಿಯ ರಾಜಕಾರಣಿ ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ. 

ಮುಂಬೈ ಭಯೋತ್ಪಾದಕ ದಾಳಿ ಸಂಚುಕೋರ ಹಫೀಜ್ ಸಯೀದ್‌ ನೇತೃತ್ವದ ಜಮಾತ್‌-ಉದ್-ದವಾ ಸಂಘಟನೆ (ಜೆಯುಡಿ) ಸಾರ್ವತ್ರಿಕ ಮತ್ತು ಪ್ರಾಂತೀಯ ಚುನಾವಣೆಯಲ್ಲಿ 200ಕ್ಕೂ ಹೆಚ್ಚು ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ. ಆದರೆ ಹಫೀಜ್ ಚುನಾವಣೆಯಲ್ಲಿ ಸ್ಪರ್ಧಿಸುತ್ತಿಲ್ಲ.

ಪಿಟಿಐ ಪಕ್ಷದಿಂದ ಇಮ್ರಾನ್‌ ಖಾನ್‌, ಪಿಎಂಎಲ್‌–ಎನ್‌ ಪಕ್ಷದಿಂದ ಶಾಹಬಾಜ್ ಷರೀಪ್‌, ಪಿಪಿಪಿ ಪಕ್ಷದಿಂದ ಬಿಲಾವಲ್ ಭುಟ್ಟೊ ಜರ್ದಾರಿ ಪ್ರಧಾನಮಂತ್ರಿ ಹುದ್ದೆಯ ಆಕಾಂಕ್ಷಿಗಳಾಗಿದ್ದಾರೆ. 

ಮತದಾರರು, ಅಭ್ಯರ್ಥಿಗಳು ಮತ್ತು ಮತಗಟ್ಟೆಗಳು...

10.59 ಕೋಟಿ ಮತದಾರರ ಈ ಸಲದ ಸಾರ್ವತ್ರಿಕ ಚುನಾವಣೆಯಲ್ಲಿ ಮತದಾನ ಮಾಡುತ್ತಿದ್ದಾರೆ. ವಿವಿಧ ರಾಜಕೀಯ ಪಕ್ಷಗಳಿಂದ 3,459 ಅಭ್ಯರ್ಥಿಗಳು ನ್ಯಾಷನಲ್‌ ಅಸೆಂಬ್ಲಿಗೆ ಸ್ಪರ್ಧೆ ಮಾಡಿದ್ದಾರೆ. ಪಾಕಿಸ್ತಾನ ಚುನಾವಣಾ ಆಯೋಗವು ಮತದಾನಕ್ಕಾಗಿ 85 ಸಾವಿರ ಚುನಾವಣಾ ಮತಗಟ್ಟೆಗಳನ್ನು ಸ್ಥಾಪಿಸಿದೆ. ಚುನಾವಣಾ ಕಾರ್ಯಕ್ಕೆ 16 ಲಕ್ಷ ಸಿಬ್ಬಂದಿಗಳನ್ನು ನೇಮಕ ಮಾಡಲಾಗಿದೆ. ಭದ್ರತೆಗಾಗಿ  3,71, 388 ಪೊಲೀಸ್ ಸಿಬ್ಬಂದಿಗಳನ್ನು  ನಿಯೋಜಿಸಲಾಗಿದೆ. ಸೇನೆಯ ಬಿಗಿ ಬಂದೋಬಸ್ತ್‌ನಲ್ಲಿ ಚುನಾವಣೆ ನಡೆಯುತ್ತಿದೆ. ಮಧ್ಯಾಹ್ನ 2 ಗಂಟೆ ಸಮಯಕ್ಕೆ ಶೇ 43 ರಷ್ಟು ಮತದಾನವಾಗಿರುವ ಬಗ್ಗೆ ’ದಿ ಡಾನ್’ ಸುದ್ದಿ ತಾಣ ವರದಿ ಮಾಡಿದೆ. 

ರಾಜಕೀಯ ಪಕ್ಷಗಳ ಪ್ರಣಾಳಿಕೆ... 

ಪಿಎಂಎಲ್‌–ಎನ್‌, ಪಿಪಿಪಿ ಮತ್ತು ಪಿಟಿಐ ಪಕ್ಷಗಳು ತಮ್ಮ ಪ್ರಣಾಳಿಕೆಯಲ್ಲಿ ಪಾಕಿಸ್ತಾನ ಅಭಿವೃದ್ಧಿಗೆ ಒತ್ತು ನೀಡುವಂತಹ ಯೋಜನೆಗಳನ್ನು ಜಾರಿ ಮಾಡುವುದಾಗಿ ತಿಳಿಸಿವೆ. ಬಡತನ ನಿವಾರಣೆ, ಉದ್ಯೋಗ ಸೃಷ್ಟಿ, ಭಯೋತ್ಪಾದನೆ ನಿಗ್ರಹಕ್ಕೆ ಪ್ರಣಾಳಿಕೆಯಲ್ಲಿ ಆದ್ಯತೆ ನೀಡಲಾಗಿದೆ. ಈ ಬಾರಿ ಮೂರು ಪಕ್ಷಗಳು ತಮ್ಮ ಪ್ರಣಾಳಿಕೆಯಲ್ಲಿ ಕಾಶ್ಮೀರದ ನಿಲುವಿನ ಬಗ್ಗೆ ನಿರ್ಲಕ್ಷ್ಯ ತೋರಿವೆ. 

ಸಾಮಾಜಿಕ ಮಾಧ್ಯಮಗಳ ಪಾತ್ರ...

ಈ ಬಾರಿಯ ನ್ಯಾಷನಲ್ ಅಸೆಂಬ್ಲಿ ಚುನಾವಣೆ ತುಸು ಭಿನ್ನವಾಗಿದೆ. ಇದಕ್ಕೆ ಕಾರಣ ಸಾಮಾಜಿಕ ಮಾಧ್ಯಮಗಳು ಪಾತ್ರ. ಬಹುತೇಕ ಎಲ್ಲಾ ರಾಜಕೀಯ ಪಕ್ಷಗಳು ಸಾಮಾಜಿಕ ಮಾಧ್ಯಮಗಳನ್ನು ಪರಿಣಾಮಕಾರಿಯಾಗಿ ಬಳಸಿಕೊಂಡಿವೆ. ವಾಟ್ಸ್ಆ್ಯಪ್‌ ಗ್ರೂಪ್‌, ಫೇಸ್‌ಬುಕ್‌ ಪೇಜ್ ಮತ್ತು ಇನ್‌ಸ್ಟಾಗ್ರಾಮ್‌ ಮೂಲಕ ಭರ್ಜರಿಯಾಗಿ ಪ್ರಚಾರ ಮಾಡಿದ್ದಾರೆ. ಸ್ಥಳೀಯ ಮಟ್ಟದಲ್ಲಿ ಗ್ರೂಪ್‌ಗಳನ್ನು ರಚಿಸಿಕೊಂಡು ಪ್ರಚಾರ ಮಾಡಲಾಗಿದೆ. ಪಿಪಿಪಿ ಮತ್ತು ಪಿಟಿಐ ಪಕ್ಷಗಳು ಯುವಕರ ಮತ ಸೆಳೆಯಲು ವಿಡಿಯೊಗಳ ಮೂಲಕವು ಪ್ರಚಾರ ಮಾಡಿವೆ. 

’50 ಸಾವಿರ ಜನರನ್ನು ಸೇರಿಸಿ ಚನಾವಣಾ ಪ್ರಚಾರ ಸಭೆ ನಡೆಸಲು ಸಾಕಷ್ಟು ಹಣ ಖರ್ಚು ಮಾಡಬೇಕು. ಅದೇ ವಾಟ್ಸ್‌ಆ್ಯಪ್‌, ಇನ್‌ಸ್ಟಾಗ್ರಾಮ್‌ ಅಥವಾ ಫೇಸ್‌ಬುಕ್‌ನಲ್ಲಿ 50 ಸಾವಿರ ಫಾಲೋವರ್ಸ್ ಇದ್ದರೆ ಸಾಕು ಸಮಾವೇಶ ಮಾಡುವುದೇ ತಪ್ಪುತ್ತದೆ’ ಎಂದು ಎಎನ್‌ಪಿ ಪಕ್ಷದ ಮುಖಂಡ ವಾಲಿ ಖಾನ್ ಹೇಳುತ್ತಾರೆ. 

ಪಾಕಿಸ್ತಾನದಲ್ಲಿ ಇದೇ ಮೊದಲ ಬಾರಿಗೆ ಸಾಮಾಜಿಕ ಮಾಧ್ಯಮಗಳ ಮೂಲಕ ಚುನಾವಣಾ ಪ್ರಚಾರ ನಡೆಸಲಾಗುತ್ತಿದೆ.  

ಭಾರತದ ಮೇಲಿನ ಪರಿಣಾಮ...

ಪಾಕಿಸ್ತಾನದಲ್ಲಿ ಯಾವ ಪಕ್ಷ ಅಧಿಕಾರಕ್ಕೆ ಬಂದರೆ ದ್ವಿಪಕ್ಷಿಯ ಸಂಬಂಧಗಳು ಬಲಗೊಳ್ಳಲಿವೆ ಹಾಗೂ ಕಾಶ್ಮೀರ ಸಮಸ್ಯೆ ಬಗೆಹರಿಯಬಹುದೇ ಎಂಬ ಚರ್ಚೆಗಳು ನಡೆಯುತ್ತಿವೆ. 

ಪ್ರಜಾಸತಾತ್ಮಕ ನಿಲುವು ಹಾಗೂ ಪ್ರಗತಿಪರ ದೋರಣೆಗಳನ್ನು ಹೊಂದಿರುವ ಮಾಜಿ ಕ್ರಿಕೆಟಿಗೆ ಇಮ್ರಾನ್ ಖಾನ್‌ ಅವರ ಪಿಟಿಐ ಪಕ್ಷ ಅಧಿಕಾರಕ್ಕೆ ಬಂದರೆ ಭಾರತಕ್ಕೆ ಅನುಕೂಲವಾಗಲಿದೆ ಎಂದು ರಾಜಕೀಯ ವಿಶ್ಲೇಷಕರು ಅಭಿಪ್ರಾಯಪಡುತ್ತಾರೆ. ಭಾರತದೊಂಗಿನ ಗಡಿ ಮತ್ತು ಕಾಶ್ಮೀರ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಬೇಕು ಎಂದು ಚುನಾವಣಾ ಪ್ರಚಾರ ಸಭೆಗಳಲ್ಲಿ ಇಮ್ರಾನ್‌ ಖಾನ್‌ ಹಲವು ಬಾರಿ ಹೇಳಿದ್ದಾರೆ. ಇದು ಇಮ್ರಾನ್ ಖಾನ್‌ ಅವರು ಭಾರತದ ಜೊತೆ ಉತ್ತಮ ಸಂಬಂಧ ಹೊಂದಬೇಕು ಎಂದು ಬಯಸಿರುವುದಕ್ಕೆ ಪುಷ್ಠಿ ನೀಡುತ್ತದೆ  ಎಂದು ವಿಶ್ಲೇಷಕರು ಹೇಳುತ್ತಾರೆ. 

ಈಗಾಗಲೇ ಆಡಳಿತ ನಡೆಸಿರುವ ಪಿಪಿಪಿ ಮತ್ತು ಪಿಎಂಎಲ್‌–ಎನ್‌ ಪಕ್ಷಗಳ ಆಡಳಿತದಿಂದ  ಭಾರತಕ್ಕೆ ಲಾಭವೇನು ಆಗಿಲ್ಲ. ಈ ಎರಡು ಪಕ್ಷಗಳು ಭಾರತ ವಿರೋಧಿ ನಿಲುವನ್ನು ತಳೆದಿದ್ದವು.  ಪಿಪಿಪಿ ಮತ್ತು ಪಿಎಂಎಲ್‌–ಎನ್‌ ಪಕ್ಷಗಳಿಗೆ ಪ್ರಬಲ ಪೈಪೋಟಿ ನೀಡಿರುವ ಪಿಟಿಐ ಪಕ್ಷ ಬಹುಮತ ಪಡೆದರೆ ಇಮ್ರಾನ್‌ ಖಾನ್‌ ಪ್ರಧಾನಿಯಾಗಲಿದ್ದಾರೆ. ಆ ಮೂಲಕ ಪಾಕಿಸ್ತಾನದಲ್ಲಿ ಪಿಟಿಐ ಪಕ್ಷ ಮೊಟ್ಟ ಮೊದಲ ಬಾರಿಗೆ ಅಧಿಕಾರ ಹಿಡಿಯಲಿದೆ. ಸುಧಾರಣವಾದಿಯಾಗಿರುವ ಇಮ್ರಾನ್ ಖಾನ್‌ ಅಧಿಕಾರಕ್ಕೆ ಬಂದರೆ ಭಾರತದೊಂದಿಗಿನ ರಾಜತಾಂತ್ರಿಕ ಸಂಬಂಧವನ್ನು ಬಲಪಡಿಸಲಿದ್ದಾರೆ ಎಂಬ ನಿರೀಕ್ಷೆಗಳು ಹುಟ್ಟಿಕೊಂಡಿವೆ. 

ಬರಹ ಇಷ್ಟವಾಯಿತೆ?

 • 18

  Happy
 • 1

  Amused
 • 0

  Sad
 • 0

  Frustrated
 • 2

  Angry

Comments:

0 comments

Write the first review for this !