ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚೀನಾದಿಂದ ಅಮೆರಿಕಕ್ಕೆ ಬಂದಿಳಿದ 4.3 ಲಕ್ಷ ಮಂದಿ!

ಕೊರೊನಾ ಸೋಂಕು ಹರಡಿದ ಬಳಿಕ ಪ್ರಯಾಣ
Last Updated 5 ಏಪ್ರಿಲ್ 2020, 20:51 IST
ಅಕ್ಷರ ಗಾತ್ರ

ನ್ಯೂಯಾರ್ಕ್‌: ಕೊರೊನಾ ವೈರಸ್‌ ಹಬ್ಬಿರುವುದನ್ನು ಚೀನಾ ಬಹಿರಂಗಪಡಿಸಿದ ಬಳಿಕವೂ ಸುಮಾರು 4,30000 ಮಂದಿ ಅಲ್ಲಿಂದ ನೇರ ವಿಮಾನಗಳಲ್ಲಿ ಅಮೆರಿಕಕ್ಕೆ ಬಂದಿರುವುದು ಗೊತ್ತಾಗಿದೆ.

ಮುಖ್ಯವಾಗಿ ಮೊದಲು ವೈರಸ್ ಕಾಣಿಸಿಕೊಂಡು ವ್ಯಾಪಕವಾಗಿ ಹಬ್ಬಿದ್ದ ವುಹಾನ್‌ ನಗರದಿಂದಲೇ ಸಾವಿರಾರು ಮಂದಿ ನೇರವಾಗಿ ಬಂದಿದ್ದಾರೆ.

ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ವಿಮಾನಗಳ ಸಂಚಾರಕ್ಕೆ ನಿರ್ಬಂಧ ವಿಧಿಸುವ ಮುನ್ನವೇ, 1,300 ವಿಮಾನಗಳಲ್ಲಿ ಚೀನಾದಿಂದ ಅಮೆರಿಕದ 17 ನಗರಗಳಿಗೆ ಇವರು ಬಂದಿದ್ದಾರೆ ಎಂದು ‘ನ್ಯೂಯಾರ್ಕ್‌ ಟೈಮ್ಸ್‌‘ ವರದಿ ಮಾಡಿದೆ.

ಆದರೆ, ವಿಮಾನ ನಿಲ್ದಾಣಗಳಲ್ಲಿ ಪರೀಕ್ಷೆ ಮತ್ತು ಅಮೆರಿಕಕ್ಕೆ ಬಂದ ಬಳಿಕ ಆರೋಗ್ಯ ತಪಾಸಣೆಗೆ ಕಠಿಣ ಕ್ರಮಗಳನ್ನು ಕೈಗೊಂಡಿರಲಿಲ್ಲ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಜನವರಿ ತಿಂಗಳ ಮಧ್ಯಭಾಗಕ್ಕೂ ಮುನ್ನ ಚೀನಾ ಅಧಿಕಾರಿಗಳು ವೈರಸ್‌ ಹಬ್ಬಿರುವುದನ್ನು ಗಂಭೀರವಾಗಿ ಪರಿಗಣಿಸಿರಲಿಲ್ಲ. ವೈರಸ್‌ನ ತೀವ್ರತೆಯ ಕುರಿತು ಇತರ ರಾಷ್ಟ್ರಗಳು ಕಟ್ಟೆಚ್ಚರ ವಹಿಸುವ ಬಗ್ಗೆ ಸಮರ್ಪಕ ಮಾಹಿತಿ ನೀಡಿರಲಿಲ್ಲ. ಹೀಗಾಗಿ, ಚೀನಾದಿಂದ ಬಂದವರು ವೈರಸ್‌ ಸೋಂಕಿಗೆ ಒಳಗಾಗಿರುವ ಬಗ್ಗೆ ಪರೀಕ್ಷೆಯನ್ನೇ ಮಾಡಿರಲಿಲ್ಲ.

ಜನವರಿ 15ರ ಬಳಿಕವೇ ಆರೋಗ್ಯ ಪರೀಕ್ಷೆ ಕೈಗೊಳ್ಳುವುದನ್ನು ಆರಂಭಿಸಲಾಯಿತು. ಅದು ಸಹ ಕೆಲವು ವಿಮಾನ ನಿಲ್ದಾಣಗಳಲ್ಲಿ ಮಾತ್ರ. ವುಹಾನ್‌ನಿಂದ ಬಂದವರನ್ನು ಮಾತ್ರ ಲಾಸ್‌ಏಂಜಲಿಸ್‌, ಸ್ಯಾನ್‌ಫ್ರಾನ್ಸಿಸ್ಕೊ ಮತ್ತು ನ್ಯೂಯಾರ್ಕ್‌ಗಳಲ್ಲಿ ಆರೋಗ್ಯ ಪರೀಕ್ಷೆಗೆ ಒಳಪಡಿಸಲಾಯಿತು. ಈ ಅವಧಿ ಒಳಗೆ ಸುಮಾರು 4,000 ಮಂದಿ ವುಹಾನ್‌ನಿಂದ ಅಮೆರಿಕ ಪ್ರವೇಶಿಸಿದ್ದರು ಎಂದು ಚೀನಾದ ‘ವಾರಿಫ್ಲೈಟ್‌’ ಕಂಪನಿ ತಿಳಿಸಿದೆ.

ಅಮೆರಿಕಕ್ಕೆ ಬಂದ 4ಲಕ್ಷ 30 ಸಾವಿರ ಮಂದಿಯಲ್ಲಿ ವಿವಿಧ ದೇಶಗಳ ನಾಗರಿಕರು ಸಹ ಸೇರಿದ್ದಾರೆ. ಫೆಬ್ರುವರಿಯಲ್ಲಿ ಚೀನಾದಿಂದ ಬಂದವರಲ್ಲಿ ಶೇಕಡ 60ರಷ್ಟು ಮಂದಿ ಅಮೆರಿಕ ನಾಗರಿಕರು ಅಲ್ಲ ಎನ್ನುವುದು ಸಹ ಗೊತ್ತಾಗಿದೆ. ಸಂಚಾರಕ್ಕೆ ನಿರ್ಬಂಧ ವಿಧಿಸಿದ್ದರಿಂದ ವೈರಸ್‌ ಹಬ್ಬುವುದನ್ನುನಿಯಂತ್ರಿಸಲಾಯಿತು ಎಂದು ಡೊನಾಲ್ಡ್‌ ಟ್ರಂಪ್‌ ಪ್ರತಿಪಾದಿಸಿದ್ದರು. ಆದರೆ, ವಿಮಾನಗಳ ಸಂಚಾರ ಮತ್ತು ಇತರ ಮಾಹಿತಿಗಳ ವಿಶ್ಲೇಷಣೆ ನಡೆಸಿದಾಗ ಟ್ರಂಪ್‌ ಅವರು ಬಹಳ ತಡವಾಗಿ ನಿರ್ಧಾರ ಕೈಗೊಂಡರು ಎಂದು ವರದಿ ತಿಳಿಸಿದೆ.

ಅಮೆರಿಕದ ಏರ್‌ಲೈನ್ಸ್‌ ಕಂಪನಿಗಳು ವಿಮಾನ ಸಂಚಾರ ಸ್ಥಗಿತಗೊಳಿಸಿದ ಬಳಿಕ ಚೀನಾದ ಏರ್‌ಲೈನ್ಸ್‌ಗಳು ಎಂದನಂತೆ ಸಂಚಾರ ಆರಂಭಿಸಿದ್ದವು. ಈ ವಿಮಾನಗಳ ಮೂಲಕ ಹಲವು ಮಂದಿ ಅಮೆರಿಕ ಪ್ರವೇಶಿಸಿದ್ದಾರೆ.

ಆದರೆ, ಅಮೆರಿಕದಲ್ಲಿ ವೈರಸ್‌ ಮೊದಲ ಬಾರಿ ಎಲ್ಲಿ ಕಾಣಿಸಿಕೊಂಡಿತು ಎನ್ನುವುದು ಇನ್ನೂ ಖಚಿತವಾಗಿ ಗೊತ್ತಾಗಿಲ್ಲ ಎಂದು ವರದಿ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT