ಬುಧವಾರ, ನವೆಂಬರ್ 20, 2019
22 °C

ಆಸ್ಟ್ರೇಲಿಯಾದಲ್ಲಿ ಕಾಳ್ಗಿಚ್ಚು: ಇಬ್ಬರು ಆಹುತಿ

Published:
Updated:
Prajavani

ಸಿಡ್ನಿ: ಪೂರ್ವ ಆಸ್ಟ್ರೇಲಿಯಾದಲ್ಲಿ ಕಾಳ್ಗಿಚ್ಚಿಗೆ ಇಬ್ಬರು ಮೃತಪಟ್ಟಿದ್ದು, 100 ಮನೆಗಳು ಬೆಂಕಿಯ ಕೆನ್ನಾಲಿಗೆಗೆ ಭಸ್ಮವಾಗಿವೆ. 

ದಕ್ಷಿಣಾರ್ಧಗೋಳದಲ್ಲಿ ಬೇಸಿಗೆ ಇರುವುದರಿಂದ ಕಾಳ್ಚಿಚ್ಚಿನ ತೀವ್ರತೆ ಹೆಚ್ಚಿದೆ. ಬೆಂಕಿಯನ್ನು ನಿಯಂತ್ರಿಸಲು ಅಗ್ನಿಶಾಮಕ ದಳ ಸಿಬ್ಬಂದಿ ಹೋರಾಟ ನಡೆಸಿದ್ದಾರೆ. ನ್ಯೂ ಸೌತ್‌ ವೇಲ್ಸ್‌ನಲ್ಲಿ ಕಾರೊಂದು ಬೆಂಕಿಗೆ ಆಹುತಿಯಾಗಿದ್ದು, ವ್ಯಕ್ತಿಯೊಬ್ಬರು ಸುಟ್ಟು ಕರಕಲಾಗಿದ್ದಾರೆ. ಇದುವರೆಗೂ ಕನಿಷ್ಠ 35 ಮಂದಿ ಗಾಯಗೊಂಡಿದ್ದು, ಇವರಲ್ಲಿ ಹೆಚ್ಚಿನವರು ಅಗ್ನಿಶಾಮಕ ಸಿಬ್ಬಂದಿ ಆಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. 

ನ್ಯೂ ಸೌತ್‌ ವೇಲ್ಸ್‌ ಮತ್ತು ಕ್ವೀನ್ಸ್‌ಲ್ಯಾಂಡ್‌ ರಾಜ್ಯಗಳಲ್ಲಿ ಬೆಂಕಿಯ ಆರ್ಭಟ ಹೆಚ್ಚಿದೆ. ಕಾಡಿನ ಸಮೀಪದ ಗ್ರಾಮಗಳಿಗೂ ಬೆಂಕಿ ವ್ಯಾಪಿಸಿದೆ. 100 ಬೆಂಕಿ ವಲಯಗಳನ್ನು ಗುರುತಿಸಲಾಗಿದ್ದು, ಇವುಗಳಲ್ಲಿ 8 ಕಡೆ ತೀವ್ರತೆ ನಿಯಂತ್ರಿಸಲಾಗದ ಮಟ್ಟದಲ್ಲಿದೆ. ಪ್ರಧಾನಿ ಸ್ಕಾಟ್‌ ಮಾರಿಸನ್‌ ಅವರು ಬೆಂಕಿ ಹಬ್ಬುವುದನ್ನು ನಿಯಂತ್ರಿಸಲಾಗುತ್ತಿದ್ದು, ನಾಗರಿಕರು ಸುರಕ್ಷಿತ ಸ್ಥಳಗಳಿಗೆ ತೆರಳಲು ಸೂಚನೆ ನೀಡಿದ್ದಾರೆ. 

ಜಲಬಾಂಬ್‌ ವಿಮಾನಗಳು 1,000 ಕಿ.ಮೀ ಉದ್ದದ ಸಮುದ್ರತೀರದಿಂದ ನೀರನ್ನು ಹೊತ್ತು ಬೆಂಕಿ ನಂದಿಸಲು ಕಾರ್ಯಾಚರಣೆಗಳು ಇಳಿದಿವೆ. ಹೆಲಿಕಾಪ್ಟರ್‌ಗಳ ಮೂಲಕ ನಾಗರಿಕರನ್ನು ರಕ್ಷಿಸಲಾಗುತ್ತಿದೆ. ರೇಡಿಯೊ ಕೇಂದ್ರಗಳು ಸಂತ್ರಸ್ತರಿಗೆ ಸಹಾಯವಾಣಿ ತೆರೆದಿದ್ದು, ನಿರ್ದೇಶನಗಳನ್ನು ನೀಡುತ್ತಿವೆ. 

ಒಣ ಹವೆ ಆಸ್ಟ್ರೇಲಿಯಾದಾದ್ಯಂತ ವ್ಯಾಪಿಸಿದ್ದು, ಪ್ರಸಕ್ತ ವರ್ಷ ಮಳೆಯ ಪ್ರಮಾಣ ಕಡಿಮೆ ಆಗಿದೆ. ಪ್ರಧಾನಿ ಮಾರಿಸನ್‌ ಅವರು ರೈತರಿಗೆ ಇತ್ತೀಚೆಗೆ ₹ 4,925 ಕೋಟಿ ಬರ ಪರಿಹಾರ ಪ್ಯಾಕೇಜ್‌ ಘೋಷಿಸಿದ್ದರು. 

ಪ್ರತಿಕ್ರಿಯಿಸಿ (+)