ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಕಾರಾತ್ಮಕ ಪ್ರಚಾರವೇ ಲಿಬರಲ್‌ ಪಕ್ಷದ ಸೂತ್ರ!

Last Updated 19 ಮೇ 2019, 19:35 IST
ಅಕ್ಷರ ಗಾತ್ರ

ಮೆಲ್ಬೊರ್ನ್‌/ಸಿಡ್ನಿ: ಆಸ್ಟ್ರೇಲಿಯಾದ ಆಡಳಿತಾರೂಢ ಲಿಬರಲ್‌ ಪಕ್ಷ ನೇತೃತ್ವದ ಮೈತ್ರಿಕೂಟ ಪವಾಡದ ರೀತಿಯಲ್ಲಿ ಮತ್ತೆ ಅಧಿಕಾರದ ಗದ್ದುಗೆ ಹಿಡಿದಿದೆ.

ಲಿಬರಲ್‌ ಪಕ್ಷ ನೇತೃತ್ವದ ಮೈತ್ರಿಕೂಟ 74 ಹಾಗೂ ಲೇಬರ್‌ ಪಕ್ಷ 66 ಸ್ಥಾನಗಳಲ್ಲಿ ಜಯಗಳಿಸಿದೆ. ಒಟ್ಟು 151 ಸದಸ್ಯರನ್ನು ಹೊಂದಿರುವ ಆಸ್ಟ್ರೇಲಿಯಾದ ಜನಪ್ರತಿನಿಧಿಗಳ ಸಭೆಯಲ್ಲಿ ಬಹುಮತಕ್ಕೆ 76 ಸ್ಥಾನಗಳನ್ನು ಪಡೆಯುವುದು ಅಗತ್ಯವಿದೆ.

ಹಾಲಿ ಪ್ರಧಾನಿ ಸ್ಕಾಟ್‌ ಮಾರಿಸನ್‌ ಅವರು ಪಕ್ಷೇತರ ಸಂಸದರ ಬೆಂಬಲ ಪಡೆಯುವ ನಿರೀಕ್ಷೆ ಇದೆ. ಇಂದಿ ಕ್ಷೇತ್ರದಿಂದ ಜಯಗಳಿಸಿರುವ ಪಕ್ಷೇತರ ಅಭ್ಯರ್ಥಿ ಹೆಲೆನ್‌ ಹೈನ್ಸ್‌ ಮೈತ್ರಿಕೂಟದ ಜತೆ ಕಾರ್ಯನಿರ್ವಹಿಸುವುದಾಗಿ ತಿಳಿಸಿದ್ದಾರೆ

ಲೇಬರ್‌ ಪಕ್ಷದ ನೀತಿ, ಧೋರಣೆಗಳ ಬಗ್ಗೆ ನಕಾರಾತ್ಮಕ ಪ್ರಚಾರವನ್ನು ಪರಿಣಾಮಕಾರಿಯಾಗಿ ಮಾಡಿದ್ದರಿಂದ ಲಿಬರಲ್‌ ಪಕ್ಷಕ್ಕೆ ಜಯದ ಮಾರ್ಗ ಸುಲಭವಾಯಿತು ಎಂದು ವಿಶ್ಲೇಷಿಸಲಾಗುತ್ತಿದೆ.

ವಿರೋಧ ಪಕ್ಷದ ನಾಯಕ ಬಿಲ್‌ ಶಾರ್ಟನ್‌ ಮತದಾರರಲ್ಲಿ ಜನಪ್ರಿಯರಾಗಿರಲಿಲ್ಲ. ಜತೆಗೆ ಅತಿ ಸಂಕೀರ್ಣವಾದ ತೆರಿಗೆ ನೀತಿಗಳನ್ನು ಮತದಾರರಿಗೆ ವಿವರಿಸುವಲ್ಲಿ ವಿಫಲವಾಗಿದ್ದರು. ಇಂತಹ ವಿಷಯಗಳನ್ನೇ ಪ್ರಧಾನಿ ಸ್ಕಾಟ್‌ ಮಾರಿಸನ್‌ ಪರಿಣಾಮಕಾರಿ ಚುನಾವಣಾ ಪ್ರಚಾರಕ್ಕೆ ಬಳಸಿಕೊಂಡರು ಎಂದು ರಾಜಕೀಯ ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ.

ತೆರಿಗೆಗಳಲ್ಲಿ ವಿನಾಯಿತಿ ಕಡಿತಗೊಳಿಸುವುದು ಮತ್ತು ತಾಪಮಾನ ಬದಲಾವಣೆಗೆ ಪರಿಹಾರ ಸೂತ್ರ ರೂಪಿಸುವ ಲೇಬರ್‌ ಪಕ್ಷದ ಪ್ರಸ್ತಾವನೆಗಳನ್ನು ಮಾರ್ರಿಸನ್‌ ತಮ್ಮ ಲಾಭಕ್ಕೆ ಬಳಸಿಕೊಂಡರು. ಲೇಬರ್‌ ಪಕ್ಷದ ನೀತಿಗಳಿಂದ ಜನಸಾಮಾನ್ಯರಿಗೆ ಹೊರೆಯುತ್ತದೆ ಮತ್ತು ದೇಶದ ಆರ್ಥಿಕತೆಗೆ ಹಿನ್ನಡೆಯಾಗುತ್ತದೆ ಎಂದು ಮಾರ್ರಿಸನ್‌ ಪ್ರತಿಪಾದಿಸಿದ್ದರು.

’ಇಡೀ ಜಗತ್ತಿನಾದ್ಯಂತ ಬಲಪಂಥೀಯರೇ ಯಶಸ್ವಿಯಾಗುತ್ತಿದ್ದಾರೆ. ಯೋಜನೆಗಳನ್ನು ಸರಳವಾಗಿ ಮತದಾರರಿಗೆ ತಲುಪಿಸುವಲ್ಲಿ ಮತ್ತು ವಿವರಿಸುವಲ್ಲಿ ಎಡಪಂಥೀಯರು ವಿಫಲರಾಗುತ್ತಿದ್ದಾರೆ. ಹೀಗಾಗಿ, ಬದಲಾವಣೆ ಕಷ್ಟವಾಗುತ್ತಿದೆ’ ಎಂದು ಆಸ್ಟ್ರೇಲಿಯಾದ ನ್ಯಾಷನಲ್‌ ಯುನಿವರ್ಸಿಟಿಯ ಸಿನಿಯರ್‌ ಫೆಲೋ ಮಾರ್ಕ್‌ ಕೆನ್ನಿ ವಿಶ್ಲೇಷಿಸಿದ್ದಾರೆ.

ಶನಿವಾರ ಸಂಸತ್‌ ಮತ್ತು ಪ್ರಧಾನಿ ಆಯ್ಕೆಗೆ ನಡೆದ ಚುನಾವಣೆಯಲ್ಲಿ 1.6 ಕೋಟಿ ಮಂದಿ ಮತ ಚಲಾಯಿಸಿದ್ದರು. ಸಾರ್ವತ್ರಿಕ ಚುನಾವಣೆಯ ಮತಗಟ್ಟೆ ಸಮೀಕ್ಷೆಗಳನ್ನು ಸುಳ್ಳಾಗಿಸಿ ಲಿಬರಲ್‌ ಪಕ್ಷ ಅಧಿಕಾರಕ್ಕೆ ಬಂದಿದೆ. ತಾಪಮಾನ ಬದಲಾವಣೆ ವಿಷಯವು ಚುನಾವಣೆಯಲ್ಲಿ ಪ್ರಮುಖ ವಿಷಯವಾಗಿತ್ತು.

ಮತ್ತೆ ಮರು ಆಯ್ಕೆಯಾದರೆ ಸ್ಥಿರ ಆರ್ಥಿಕತೆ, ಹೆಚ್ಚು ಉದ್ಯೋಗ, ತೆರಿಗೆ ಕಡಿತಗಳನ್ನು ಮಾಡುವುದಾಗಿ ಚುನಾವಣೆ ಸಂದರ್ಭದಲ್ಲಿ ಮಾರ್ರಿಸನ್‌ ಭರವಸೆ ನೀಡಿದ್ದರು.

ಹಿಂದಿನ ಪ್ರಧಾನಿ ಮಾಲ್ಕಂ ಟರ್ನ್‌ಬುಲ್‌ ರಾಜೀನಾಮೆ ನೀಡಿದ ಬಳಿಕ ಕಳೆದ ಆಗಸ್ಟ್‌ನಲ್ಲಿ ಮಾರಿಸನ್‌ ಅಧಿಕಾರಕ್ಕೆ ಬಂದಿದ್ದರು. ಜತೆಗೆ ತಾಪಮಾನ ಬದಲಾವಣೆ ವಿಷಯಕ್ಕೆ ಆದ್ಯತೆ, ಕೌಟುಂಬಿಕ ದೌರ್ಜನ್ಯ ತಡೆ ಹಾಗೂ ಮಹಿಳೆಯರ ವೃತ್ತಿಗೆ ಅನುಕೂಲಗಳನ್ನು ಕಲ್ಪಿಸುವುದಾಗಿ ತಿಳಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT