ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾರತ ಕೋವಿಡ್ ಪರೀಕ್ಷಾ ಕಿಟ್ ತಿರಸ್ಕರಿಸಿದ್ದಕ್ಕೆ ಉರಿದು ಬಿದ್ದ ಚೀನಾ

Last Updated 28 ಏಪ್ರಿಲ್ 2020, 8:57 IST
ಅಕ್ಷರ ಗಾತ್ರ

ಬೀಜಿಂಗ್: ಕೋವಿಡ್ ಸೋಂಕಿತರನ್ನು ಪತ್ತೆ ಹಚ್ಚಲು ಬಳಸುವ ಚೀನಾ ನಿರ್ಮಿತ ರ್‍ಯಾಪಿಡ್ ಆ್ಯಂಟಿಬಾಡಿ ಟೆಸ್ಟ್ ಕಿಟ್‌ಗಳನ್ನು ಬಳಸದಂತೆ ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್) ಎಲ್ಲ ರಾಜ್ಯಗಳಿಗೆ ಸೂಚನೆ ನೀಡಿದ್ದಕ್ಕೆ ಚೀನಾ ಆಕ್ಷೇಪ ವ್ಯಕ್ತಪಡಿಸಿದೆ.

‘ಕೆಲವು ವ್ಯಕ್ತಿಗಳು ಚೀನಾ ಉತ್ಪನ್ನಗಳಿಗೆ ದೋಷಪೂರಿತ ಎಂದು ಹಣೆಪಟ್ಟಿ ಕಟ್ಟುವುದು ಮತ್ತು ಸಮಸ್ಯೆಗಳನ್ನು ಪೂರ್ವಾಗ್ರಹದಿಂದ ನೋಡುವುದು ಅನ್ಯಾಯ ಮತ್ತು ಬೇಜವಾಬ್ದಾರಿಯುತ’ ಎಂದು ದೆಹಲಿಯಲ್ಲಿರುವ ಚೀನಾ ರಾಯಭಾರ ಕಚೇರಿಯ ವಕ್ತಾರೆ ಜಿ ರೋಂಗ್ ಹೇಳಿದ್ದಾರೆ.

ಚೀನಾದ ಗುವಾಂಗ್‌ಝೌನ ವಾಂಡ್‌ಫೊ ಬಯೋಟೆಕ್ ಲಿಮಿಟೆಡ್ ಮತ್ತು ಝುವಾಹಿ ಲಿವ್‌ಝೋನ್ ಡಯಾಗ್ನಸ್ಟಿಕ್ಸ್‌ ಇಂಕ್‌ನಿಂದ ತರಿಸಿಕೊಂಡಿರುವ ಟೆಸ್ಟ್ ಕಿಟ್‌ಗಳನ್ನು ಬಳಸದಂತೆ ರಾಜ್ಯಗಳಿಗೆ ಐಸಿಎಂಆರ್ ಸೂಚಿಸಿದ್ದಕ್ಕೆ ಅವರು ಈ ರೀತಿ ಪ್ರತಿಕ್ರಿಯಿಸಿದ್ದಾರೆ.

ಚೀನಾದಿಂದ ತರಿಸಿಕೊಡಿರುವ ಟೆಸ್ಟ್‌ ಕಿಟ್‌ಗಳ ನಿಖರತೆಯಲ್ಲಿ ತುಂಬಾ ವ್ಯತ್ಯಾಸವಿದೆ. ಹೀಗಾಗಿ ಅವುಗಳನ್ನು ಬಳಸದೆ ವಾಪಸ್‌ ಕಳುಹಿಸುವಂತೆ ಐಸಿಎಂಆರ್ ನಿರ್ದೇಶನ ನೀಡಿತ್ತು.

ಸರ್ಕಾರ ನೀಡಿರುವ ಮಾರ್ಗಸೂಚಿಯನ್ನು ಟೆಸ್ಟ್ ಕಿಟ್‌ಗಳ ಸಂಗ್ರಹ, ಸಾಗಾಟದ ವೇಳೆ ಕಂಪನಿಗಳು ಉಲ್ಲಂಘಿಸಿದ್ದರಿಂದ ನಿಖರತೆಯ ಸಮಸ್ಯೆಯಾಗಿರಬಹುದು ಎಂದೂ ಚೀನಾ ರಾಯಭಾರ ಕಚೇರಿ ಹೇಳಿದೆ.

‘ಚೀನಾದ ಸದ್ಭಾವನೆ, ವಿಧೇಯತೆಯನ್ನು ಭಾರತದವರು ಗುರುತಿಸಬಹುದು ಮತ್ತು ಚೀನಾದ ಕಂಪನಿಗಳ ಜತೆ ಸಮಯೋಚಿತ ಮಾತುಕತೆ ಮೂಲಕ ವಾಸ್ತವ ಅರಿತು ಸಮಸ್ಯೆ ಬಗೆಹರಿಸಿಕೊಳ್ಳಬಹುದು ಎಂದು ಭಾವಿಸುತ್ತೇವೆ’ ಎಂದೂ ಜಿ ರೋಂಗ್ ಹೇಳಿದ್ದಾರೆ ಭರವಸೆ ವ್ಯಕ್ತಪಡಿಸಿದ್ದಾರೆ.

ಎರಡೂ ಕಂಪನಿಗಳು ಕೆಲವು ದಿನಗಳ ಹಿಂದೆ ಬಿಡುಗಡೆ ಮಾಡಿದ್ದ ಹೇಳಿಕೆಗಳನ್ನೂ ಚೀನಾ ರಾಯಭಾರ ಕಚೇರಿ ಉಲ್ಲೇಖಿಸಿದೆ.

‘ಚೀನಾದ ರಾಷ್ಟ್ರೀಯ ವೈದ್ಯಕೀಯ ಉತ್ಪನ್ನ ಆಡಳಿತ’ದ ಪ್ರಮಾಣಪತ್ರ ಪಡೆದಿರುವುದಾಗಿ ಎರಡೂ ಕಂಪನಿಗಳು ಹೇಳಿಕೊಂಡಿವೆ. ಚೀನಾ ಮತ್ತು ಉತ್ಪನ್ನ ರಫ್ತಾಗುವ ದೇಶಗಳು ಬಯಸುವ ಗುಣಮಟ್ಟ ಕಾಯ್ದುಕೊಳ್ಳುವ ಬಗ್ಗೆಯೂ ಅವು ಭರವಸೆ ನೀಡಿವೆ. ಪುಣೆಯ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ವೈರಾಲಜಿ ಮೂಲಕ ಟೆಸ್ಟ್‌ ಕಿಟ್‌ಗಳನ್ನು ತೃಪ್ತಿದಾಯಕ ಉತ್ಪನ್ನಗಳೆಂದುಐಸಿಎಂಆರ್‌ ಪರಿಗಣಿಸಿತ್ತು’ ಎಂದೂ ರಾಯಭಾರ ಕಚೇರಿ ಹೇಳಿದೆ.

‘ಚೀನಾದ ಎರಡು ಕಂಪನಿಗಳು ಪೂರೈಸುವ ಟೆಸ್ಟ್ ಕಿಟ್‌ಗಳನ್ನು ಯುರೋಪ್, ಏಷ್ಯಾ ಮತ್ತು ಲ್ಯಾಟಿನ್ ಅಮೆರಿಕದ ದೇಶಗಳಿಗೂ ಕಳುಹಿಸಲಾಗುತ್ತಿದ್ದು, ಆ ದೇಶಗಳು ಮಾನ್ಯ ಮಾಡಿವೆ’ ಎಂದೂ ಕಚೇರಿ ಹೇಳಿದೆ.

ಚೀನಾ ನಿರ್ಮಿತ ರ್‍ಯಾಪಿಡ್ ಆ್ಯಂಟಿಬಾಡಿ ಟೆಸ್ಟ್ ಕಿಟ್‌ಗಳು ದೋಷಪೂರಿತವಾಗಿವೆ ಎಂದು ರಾಜಸ್ಥಾನ ಹಾಗೂ ‍‍ಪಶ್ಚಿಮ ಬಂಗಾಳ ರಾಜ್ಯಗಳು ದೂರು ನೀಡಿದ್ದವು. ಹೀಗಾಗಿ ಕಿಟ್‌ಗಳನ್ನು ಬಳಸದಂತೆ ಐಸಿಎಂಆರ್ ಎಲ್ಲ ರಾಜ್ಯಗಳಿಗೆ ಸೂಚಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT