ಸೋಮವಾರ, ನವೆಂಬರ್ 18, 2019
26 °C
ಪಿಪಿಪಿ ನಾಯಕ ಬಿಲಾವಲ್‌ ಭುಟ್ಟೋ ಕರೆ

ಇಮ್ರಾನ್‌ ಸರ್ಕಾರದ ವಿರುದ್ಧ ಪ್ರತಿಭಟನೆ: ಬಿಲಾವಲ್‌ ಕರೆ

Published:
Updated:
Prajavani

ಕರಾಚಿ: ಇಮ್ರಾನ್‌ ಖಾನ್‌ ನೇತೃತ್ವದ ಸರ್ಕಾರದ ವಿರುದ್ಧ ರಾಷ್ಟ್ರವ್ಯಾಪಿ ಪ್ರತಿಭಟನೆಯನ್ನು ನಡೆಸುವುದಾಗಿ ಪಾಕಿಸ್ತಾನದ ವಿರೋಧ ಪಕ್ಷದ ನಾಯಕ ಬಿಲಾವಲ್‌ ಭುಟ್ಟೋ ಜರ್ದಾರಿ ಘೋಷಿಸಿದ್ದಾರೆ.

ಕರಾಚಿಯಲ್ಲಿ ಪಾಕಿಸ್ತಾನ್‌ ಪೀಪಲ್ಟ್‌ ಪಾರ್ಟಿ (ಪಿಪಿಪಿ) ಹಮ್ಮಿಕೊಂಡಿದ್ದ ಪ್ರತಿಭಟನಾ ರ್‍ಯಾಲಿಯಲ್ಲಿ ಮಾತನಾಡಿದ ಅವರು, ಒಗ್ಗಟ್ಟು ಪ್ರದರ್ಶಿಸುವಂತೆ ಎಲ್ಲ ವಿರೋಧ ಪಕ್ಷಗಳಿಗೂ ಕರೆ ನೀಡಿದ್ದಾರೆ. 

‘ಜನರಿಗೆ ನೀಡಿದ ಭರವಸೆಗಳನ್ನು ಈಡೇರಿಸಲು ಸರ್ಕಾರ ವಿಫಲವಾಗಿದ್ದು, ನಾಗರಿಕರ ನಂಬಿಕೆಯನ್ನು ಕಳೆದುಕೊಂಡಿದೆ. ಸಶಕ್ತ ಪ್ರಜಾಪ್ರಭುತ್ವವನ್ನು ದೇಶದಲ್ಲಿ ಮತ್ತೆ ಸ್ಥಾಪಿಸಲು ಪಿಪಿಪಿ ಜನರೊಂದಿಗೆ ಹೋರಾಟ ನಡೆಸಿದೆ’  ಎಂದು ಅವರು ಹೇಳಿದ್ದಾರೆ.  

‘ನಾಗರಿಕರಪ್ರಜಾಪ್ರಭುತ್ವ ಹಕ್ಕುಗಳನ್ನು ಖಾನ್‌ ಸರ್ಕಾರ ಕಸಿದಿದೆ. ಈಗಿರುವ ಅರೆ ಪ್ರಜಾಸತ್ತಾತ್ಮಕ ವ್ಯವಸ್ಥೆಯನ್ನು ನಾವು ಒಪ್ಪುವುದಿಲ್ಲ. ನಿಜವಾದ ಪ್ರಜಾಪ್ರಭುತ್ವ ನಮಗೆ ಬೇಕಿದೆ. ಇದಕ್ಕಾಗಿ ಹೋರಾಟ ನಡೆಸುತ್ತೇವೆ’ ಎಂದು ತಿಳಿಸಿದ್ದಾರೆ.

23ಕ್ಕೆ ಥಾರ್‌, 26ಕ್ಕೆ ಸಿಂಧ್‌ ಪ್ಯಾಂತ್ಯದ ಕಾಶ್ಮೋರ್‌ ಮತ್ತು ಪಂಜಾಬ್‌ ಪ್ರಾಂತ್ಯದಲ್ಲಿ ನ.1ಕ್ಕೆ ಪ್ರತಿಭಟನೆ ಆಯೋಜಿಸಲಾಗಿದೆ. ದೇಶದಾದ್ಯಂತ ಸರ್ಕಾರದ ವಿರುದ್ಧ ಚಳವಳಿ ನಡೆಸುತ್ತೇವೆ. ಇಮ್ರಾನ್‌ ಅಧಿಕಾರದಿಂದ ಇಳಿಯುವವರೆಗೂ ಹೋರಾಟ ನಿಲ್ಲದು. ಅವರ ಅಸಾಮರ್ಥ್ಯತೆಯನ್ನು ಎಲ್ಲಗೂ ಹೇಳುತ್ತೇವೆ ಎಂದು ಗುಡುಗಿದ್ದಾರೆ.

‘ನಾವು ದೇಶದ ಸಾಂವಿಧಾನಿಕ ಸಂಸ್ಥೆಗಳನ್ನು ಪ್ರಶ್ನಿಸುತ್ತಿಲ್ಲ. ಆದರೆ, ಮತದಾನ ಕೇಂದ್ರಗಳಲ್ಲಿ ಸೇನೆಯ ಮೂಲಕ ಹಸ್ತಕ್ಷೇಪ ನಡೆಸಿರುವ ಅವರು ಸಂಸ್ಥೆಗಳ ವಿಶ್ವಾಸಾರ್ಹತೆಯನ್ನು ಹಾಳು ಮಾಡಿದ್ದಾರೆ. ಸಂಸತ್‌ ಅನ್ನು ನಿರ್ಲಕ್ಷಿಸಿ ರಾಜಕಾರಣಿಗಳನ್ನು ಬೀದಿಗೆ ತಳ್ಳಿದ್ದಾರೆ’ ಎಂದು ವಾಗ್ದಾಳಿ ನಡೆಸಿದ್ದಾರೆ. 

ಸೇನೆ ನೆರವು ಪಡೆಯುವ ಸಾಧ್ಯತೆ
ವಿರೋಧ ಪಕ್ಷಗಳು ಕರೆ ನೀಡಿರುವ ರಾಷ್ಟ್ರವ್ಯಾಪಿ ಪ್ರತಿಭಟನೆಯನ್ನು ತಡೆಯಲು ಇಮ್ರಾನ್‌ ಖಾನ್‌ ಸರ್ಕಾರ ಸೇನೆಯ ನೆರವನ್ನು ಪಡೆಯುವ ಸಾಧ್ಯತೆ ಇದೆ ಎಂದು ಮಾಧ್ಯಮಗಳು ವರದಿ ಮಾಡಿವೆ. 

ಜಮಾತ್‌ ಉಲೇಮಾ ಎ ಇಸ್ಲಾಮ್‌ ಮುಖ್ಯಸ್ಥ ಮೌಲನಾ ಫಜಲ್‌ ಅ.31ರಂದು ಇಸ್ಲಾಮಾಬಾದ್‌ನಲ್ಲಿ ಪ್ರತಿಭಟನೆ ನಡೆಸಲಿದ್ದು, ಅವರ ‘ಆಜಾದಿ ನಡಿಗೆ’ಗೆ ಎಲ್ಲ ವಿರೋಧ ಪಕ್ಷಗಳು ಬೆಂಬಲ ಸೂಚಿಸಿವೆ. ಈ ಹಿನ್ನೆಲೆಯಲ್ಲಿ ಸರ್ಕಾರ ಸೇನೆಯ ನೆರವು ಪಡೆಯಬಹುದು ಎಂದು ‘ಎಕ್ಸ್‌ಪ್ರೆಸ್‌ ಟ್ರಿಬ್ಯೂನ್‌’ ಪತ್ರಿಕೆ ಹೇಳಿದೆ.

ಪ್ರತಿಕ್ರಿಯಿಸಿ (+)