ಗುರುವಾರ , ಜುಲೈ 29, 2021
21 °C
ಸೇನೆ ನಿಯೋಜಿಸುವ ಎಚ್ಚರಿಕೆ ಕೊಟ್ಟ ಟ್ರಂಪ್‌

ಫ್ಲಾಯ್ಡ್‌ ಸಾವು ಖಂಡಿಸಿ ಪ್ರತಿಭಟನೆ: ಕ್ಷಮೆ ಕೇಳಿದ ಪೊಲೀಸರು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ವಾಷಿಂಗ್ಟನ್‌: ಆಫ್ರಿಕಾ ಮೂಲದ ಅಮೆರಿಕನ್‌ ಪ್ರಜೆ ಜಾರ್ಜ್‌ ಫ್ಲಾಯ್ಡ್‌ ಅವರ ಸಾವನ್ನು ಖಂಡಿಸಿ ಅಮೆರಿಕದಲ್ಲಿ ಪ್ರತಿಭಟನೆ ನಡೆಸುತ್ತಿರುವವರ ಮುಂದೆ ಪೊಲೀಸರು ಮಂಡಿಯೂರಿ ಕ್ಷಮೆಯಾಚಿಸಿರುವುದು ಕೆಲವೆಡೆ ವರದಿಯಾಗಿದೆ.

ಜನಾಂಗೀಯ ದ್ವೇಷವನ್ನು ಖಂಡಿಸಿ ಒಂದು ವಾರದಿಂದ ಸಾವಿರಾರು ಜನರು ಅಮೆರಿಕದ ವಿವಿಧ ನಗರಗಳಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ. ಇದರ ಜತೆಗೆ ಸಾಮಾಜಿಕ ಮಾಧ್ಯಮಗಳಲ್ಲೂ ಪೊಲೀಸರ ದೌರ್ಜನ್ಯದ ವಿರುದ್ಧ ಭಾರಿ ಪ್ರತಿರೋಧ ವ್ಯಕ್ತವಾಗಿದೆ. ಇದನ್ನು ಗಮನಿಸಿದ ಕೆಲವು ಪೊಲೀಸರು ಸೋಮವಾರ ಪ್ರತಿಭಟನಕಾರರ ಜತೆ ಸೇರಿಕೊಂಡರೆ, ಇನ್ನೂ ಕೆಲವು ಕಡೆಗಳಲ್ಲಿ ಪ್ರತಿಭಟನಕಾರರ ಮುಂದೆ ಮಂಡಿಯೂರಿ ಕ್ಷಮೆ ಯಾಚಿಸಿದ್ದಾರೆ. ಪೊಲೀಸರು ಕ್ಷಮೆಯಾಚಿಸುತ್ತಿರುವ ಚಿತ್ರಗಳು ಹಾಗೂ ವಿಡಿಯೊಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿವೆ.

ಟ್ರಂಪ್‌ ಎಚ್ಚರಿಕೆ: ಶ್ವೇತಭವನದಿಂದ ರಾಷ್ಟ್ರವನ್ನುದ್ದೇಶಿಸಿ ಸೋಮವಾರ ಮಾತನಾಡಿದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌,  ಹಿಂಸಾತ್ಮಕ ಪ್ರತಿಭಟನೆಗಳನ್ನು ನಿಯಂತ್ರಿಸಲು ಅಗತ್ಯಬಿದ್ದರೆ ಸೇನೆಯನ್ನು ನಿಯೋಜಿಸುವುದಾಗಿ ಎಚ್ಚರಿಕೆ ನೀಡಿದ್ದಾರೆ. ‘ಹಿಂಸಾತ್ಮಕ ಪ್ರತಿಭಟನೆಯನ್ನು ಮಣಿಸಲು ರಾಜ್ಯಗಳು ವಿಫಲವಾದರೆ, ಎಲ್ಲಾ ನಗರಗಳಲ್ಲಿ ಸೇನೆಯನ್ನು ನಿಯೋಜಿಸಲಾಗುವುದು’ ಎಂದು ಅವರು ಹೇಳಿದ್ದಾರೆ.

ನ್ಯಾಯ ಒದಗಿಸುವೆ: ‘ಫ್ಲಾಯ್ಡ್‌ ಅವರ ಸಾವಿನಿಂದ ಜನರು ಗಾಸಿಗೊಂಡು, ಪ್ರತಿಭಟನೆ ನಡೆಸಿದ್ದರಲ್ಲಿ ತಪ್ಪಿಲ್ಲ. ಫ್ಲಾಯ್ಡ್‌ ಮತ್ತು ಅವರ ಕುಟುಂಬಕ್ಕೆ ನ್ಯಾಯ ಒದಗಿಸಲು ನನ್ನ ಆಡಳಿತ ಬದ್ಧವಾಗಿದೆ’ ಎಂದು ಟ್ರಂಪ್‌ ಭರವಸೆ ನೀಡಿದ್ದಾರೆ.

ಫ್ಲಾಯ್ಡ್‌ ಸಾವಿಗೆ ಕಾರಣವಾದ ಶ್ವೇತವರ್ಣೀಯ ಪೊಲೀಸ್‌ ಅಧಿಕಾರಿಯ ವಿರುದ್ಧ ಕೊಲೆ ಆರೋಪ ಹೊರಿಸಲಾಗಿದ್ದು, ಮುಂದಿನ ವಾರ ಅವರು ನ್ಯಾಯಾಲಯಕ್ಕೆ ಹಾಜರಾಗಲಿದ್ದಾರೆ. ಇತರ ಮೂವರು ಅಧಿಕಾರಿಗಳನ್ನು ವಜಾ ಮಾಡಲಾಗಿದೆ.

‘ಬಾಯಿ ಮುಚ್ಚಿಕೊಂಡು ಇರಿ’
ಮಿನಿಯಾಪೊಲೀಸ್‌ ನಗರದ ಪೊಲೀಸ್‌ ಮುಖ್ಯಸ್ಥ, ಆರ್ಟ್‌ ಅಸಿವಿಡೊ ಅವರು ‘ಬಾಯಿ ಮುಚ್ಚಿಕೊಂಡು ಇರಿ’ ಎಂದು ಅಧ್ಯಕ್ಷ ಟ್ರಂಪ್‌ ಅವರಿಗೆ ಸಲಹೆ ನೀಡಿದ್ದು ಭಾರಿ ಸುದ್ದಿಯಾಗಿದೆ. ಸುದ್ದಿ ಸಂಸ್ಥೆ ಸಿಎನ್‌ಎನ್‌ಗೆ ನೀಡಿದ ಸಂದರ್ಶನದಲ್ಲಿ ಅಸಿವಿಡೊ ಈ ಮಾತುಗಳನ್ನು ಆಡಿದ್ದಾರೆ.

ಪ್ರತಿಭಟನೆಯನ್ನು ಕುರಿತು ವಿವಿಧ ರಾಜ್ಯಗಳ ಗವರ್ನರ್‌ಗಳು ಮತ್ತು ಪೊಲೀಸ್‌ ಅಧಿಕಾರಿಗಳ ಜತೆ ವಿಡಿಯೊ ಸಂವಾದ ನಡೆಸಿದ್ದ ಟ್ರಂಪ್‌, ‘ನೀವೆಲ್ಲರೂ ದುರ್ಬಲರು, ಪ್ರತಿಭಟನಕಾರರ ವಿರುದ್ಧ ಕಠಿಣ ಕ್ರಮ ಕೈಗೊಳ್ಳದಿದ್ದರೆ ನೀವು ಸಮಯ ವ್ಯರ್ಥ ಮಾಡುತ್ತಿದ್ದೀರಿ ಎಂದು ಅರ್ಥ. ಪ್ರತಿಭಟನಕಾರರು ನಿಮ್ಮನ್ನು ತುಳಿದು ಮುಂದೆ ಹೋಗುತ್ತಾರೆ’ ಎಂದು ಟ್ರಂಪ್‌ ಹೇಳಿದ್ದರು.

ಈ ಹೇಳಿಕೆಗೆ ಟಿ.ವಿ. ಸಂದರ್ಶನದಲ್ಲಿ ಪ್ರತಿಕ್ರಿಯೆ ನೀಡಿದ ಅಸಿವಿಡೊ, ‘ದೇಶದ ಪೊಲೀಸ್‌ ಇಲಾಖೆಯ ಮುಖ್ಯಸ್ಥರ ಪರವಾಗಿ ಅಧ್ಯಕ್ಷರಿಗೆ ಒಂದು ಸಲಹೆಯನ್ನು ನೀಡಲು ಬಯಸುತ್ತೇನೆ. ರಚನಾತ್ಮಕವಾದ ಯಾವುದೇ ವಿಚಾರ ನಿಮ್ಮಲ್ಲಿ ಇಲ್ಲವಾಗಿದ್ದರೆ ದಯವಿಟ್ಟು ಬಾಯಿ ಮುಚ್ಚಿಕೊಂಡು ಇರಿ’ ಎಂದಿದ್ದಾರೆ.

‘ಇದು ಪ್ರಾಬಲ್ಯ ಸಾಧಿಸುವ ವಿಚಾರವಲ್ಲ, ಬದಲಿಗೆ ಮನಸ್ಸು ಮತ್ತು ಹೃದಯಗಳನ್ನು ಗೆಲ್ಲುವ ವಿಚಾರ. ಕನಿಕರವನ್ನು ದೌರ್ಬಲ್ಯ ಎಂದು ಬಣ್ಣಿಸುವುದು ಸರಿಯಲ್ಲ. ಪರಿಸ್ಥಿತಿಯನ್ನು ನಿಯಂತ್ರಿಸಲು ಈವರೆಗೆ ಮಾಡಿರುವ ಶ್ರಮವನ್ನು ವ್ಯರ್ಥಗೊಳಿಸಲು ನಾವು ಇಚ್ಛಿಸುವುದಿಲ್ಲ’ ಎಂದು ಅವರು ಟ್ರಂಪ್‌ಗೆ ಪ್ರತ್ಯುತ್ತರ ನೀಡಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು