ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬ್ರೆಕ್ಸಿಟ್‌ ಪ್ರಕ್ರಿಯೆ ಯಶಸ್ಸಿಗೆ ಆದ್ಯತೆ: ಬೋರಿಸ್‌ ಜಾನ್ಸನ್‌

ಭಾರತ ಮೂಲದ ಸಂಸದರಾದ ಪ್ರೀತಿ, ಸುನಕ್‌ಗೆ ಸಚಿವ ಸ್ಥಾನ ಸಾಧ್ಯತೆ
Last Updated 23 ಜುಲೈ 2019, 19:40 IST
ಅಕ್ಷರ ಗಾತ್ರ

ಲಂಡನ್‌: ತೀವ್ರ ಕುತೂಹಲ ಕೆರಳಿಸಿದ್ದ ಸ್ಪರ್ಧೆಯಲ್ಲಿಬೋರಿಸ್‌ ಜಾನ್ಸನ್‌ ಅವರು 92,153 ಮತಗಳನ್ನು ಪಡೆಯುವ ಮೂಲಕ, ಬ್ರಿಟನ್‌ನ ನೂತನ ಪ್ರಧಾನಿಯಾಗಿ ಆಯ್ಕೆಯಾಗಿದ್ದಾರೆ.

ಪ್ರತಿಸ್ಪರ್ಧಿ ಹಂಟ್‌ ಅವರು 46,656 ಮತಗಳನ್ನು ಪಡೆದರು. 1,59,320 ಮತಗಳು ಚಲಾವಣೆಯಾಗಿದ್ದು, 509 ತಿರಸ್ಕೃತಗೊಂಡವುಎಂದು ಕನ್ಸರ್ವೇಟಿವ್‌ ಪಕ್ಷದ 1922– ಸಮಿತಿ ಸಹ ಅಧ್ಯಕ್ಷ ಶೆರಿಲ್‌ ಗಿಲ್ಲನ್‌ ಘೋಷಿಸಿದರು.

ಫಲಿತಾಂಶ ಘೋಷಣೆಯಾದ ನಂತರ, ಸಂಸತ್‌ ಸಮೀಪವಿರುವ ಕ್ವೀನ್‌ ಎಲಿಜಬೆತ್‌–2 ಕೇಂದ್ರದಲ್ಲಿ ಟೋರಿ ಪಕ್ಷದ ಸದಸ್ಯರನ್ನು ಉದ್ದೇಶಿಸಿ ಮಾತನಾಡಿದ ಜಾನ್ಸನ್‌, ‘ದೇಶಕ್ಕೆ ನವ ಚೈತನ್ಯ ತುಂಬುವ ಜತೆಗೆ ಬ್ರೆಕ್ಸಿಟ್ ಪ್ರಕ್ರಿಯೆ
ಯನ್ನು ಯಶಸ್ವಿಗೊಳಿಸುವುದೇ ನನ್ನ ಆದ್ಯತೆ’ ಎಂದು ಹೇಳಿದರು.

ಜಾನ್ಸನ್‌ ಅವರ ಸಚಿವ ಸಂಪುಟದಲ್ಲಿ ಭಾರತ ಮೂಲದ ಸಂಸದರಾದ ಪ್ರೀತಿ ಪಟೇಲ್‌ ಮತ್ತು ರಿಷಿ ಸುನಕ್‌ ಸೇರುವ ಸಾಧ್ಯತೆ ಇದೆ. ತೆರೇಸಾ ಮೇ ಅವರು ಬುಧವಾರ ಸಂಸತ್‌ನಲ್ಲಿ ಕೊನೆಯ ಭಾಷಣ ಮಾಡಲಿದ್ದು, ಬಳಿಕ ಬಕಿಂಗ್‌ಹ್ಯಾಮ್‌ ಅರಮನೆಗೆ ತೆರಳಿ ರಾಣಿ ಎರಡನೇ ಎಲಿಜಬೆತ್‌ ಅವರಿಗೆ ಔಪಚಾರಿಕವಾಗಿ ರಾಜೀನಾಮೆ ಪತ್ರ ಸಲ್ಲಿಸಲಿದ್ದಾರೆ. ಅಲ್ಲಿಯವರೆಗೂ ಮೇ ಅವರೇ ಹಂಗಾಮಿ ಪ್ರಧಾನಿಯಾಗಿ ಕಾರ್ಯ ನಿರ್ವಹಿಸಲಿದ್ದಾರೆ.

ಭಾರತದ ಅಳಿಯ!

‘ನಾನು ಭಾರತದ ಅಳಿಯ. ಪರಿತ್ಯಕ್ತ ಪತ್ನಿ ಮರಿನಾ ವೀಲರ್‌ ತಾಯಿ ಭಾರತ ಮೂಲದವರು. ಪ್ರಧಾನಿ ಮೋದಿ ಅವರೊಂದಿಗೆ ಉತ್ತಮ ಸಂಬಂಧ ಹೊಂದಿದ್ದೇನೆ. ಉಭಯ ದೇಶಗಳ ಸಂಬಂಧ ವೃದ್ಧಿಗೆ ಇದು ಸಹಕಾರಿಯಾಗಲಿದೆ’ ಎಂದು ಜಾನ್ಸನ್‌ ಹೇಳಿದ್ದರು.

‘ನಾನು ಕನ್ಸರ್ವೇಟಿವ್ ಪಕ್ಷದ ನಾಯಕನಾಗಿ ಹಾಗೂ ಪ್ರಧಾನಿಯಾಗಿ ಆಯ್ಕೆಯಾದರೆ, ಭಾರತ ಸರ್ಕಾರದಲ್ಲಿರುವ ನಮ್ಮ ಸ್ನೇಹಿತರೊಂದಿಗೆ ವ್ಯಾಪಾರ ಮತ್ತು ಸಾಮಾಜಿಕ ಸಂಬಂಧ ವೃದ್ಧಿಯಾಗಲಿದೆ. ಬ್ರಿಟನ್‌– ಭಾರತ ನಡುವೆ ವಿಶೇಷ ಸಂಬಂಧ ಏರ್ಪಡಲಿದೆ’ ಎಂದು ಅವರು ಹೇಳಿದ್ದರು.

ವಿವಾದಕ್ಕೂ ಜಾನ್ಸನ್‌ಗೂ ನಂಟು

ಬೋರಿಸ್‌ ಜಾನ್ಸನ್‌, ವಿವಾದಗಳಿಂದಾಗಿಯೂ ಗಮನ ಸೆಳೆಯುತ್ತಾರೆ.

* ಆಕ್ಸ್‌ಫರ್ಡ್‌ ವಿ.ವಿಯಿಂದ ಪದವಿ ಪಡೆದ ನಂತರ ಬೋರಿಸ್‌ ಜಾನ್ಸನ್‌1987ರಲ್ಲಿ ದಿ ಟೈಮ್ಸ್‌ ಪತ್ರಿಕೆಯಲ್ಲಿ ಟ್ರೇನಿ ವರದಿಗಾರರಾಗಿ ಸೇರಿಕೊಂಡರು. ಲೇಖನವೊಂದರಲ್ಲಿ ರಾಜಾ 2ನೇ ಎಡ್ವರ್ಡ್‌ ಕುರಿತು ತಪ್ಪಾಗಿ ಮಾಹಿತಿ ಪ್ರಕಟಿಸಿದ ಕಾರಣ ಅವರನ್ನು ಕೆಲಸದಿಂದ ವಜಾ ಮಾಡಲಾಯಿತು.

* 2004ರಲ್ಲಿ ಸಂಸದರಾಗಿ ಆಯ್ಕೆಗೊಂಡರು. ಕನ್ಸರ್ವೇಟಿವ್‌ ಪಕ್ಷದ ಉಪಾಧ್ಯಕ್ಷರೂ ಆಗಿದ್ದರು. ವಿವಾಹೇತರ ಸಂಬಂಧದ ಬಗ್ಗೆ ಸುಳ್ಳು ಹೇಳಿದ್ದಕ್ಕಾಗಿ ಅವರನ್ನು ಪಕ್ಷದ ಎಲ್ಲಾ ಹುದ್ದೆಗಳಿಂದ ವಜಾ ಮಾಡಲಾಯಿತು. ನಂತರ ತನ್ನ ಎರಡನೇ ಪತ್ನಿಯನ್ನೇ ಅವರು ಮತ್ತೇ ಮದುವೆಯಾದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT