ಗುರುವಾರ , ಅಕ್ಟೋಬರ್ 17, 2019
24 °C
ಸ್ವಂತ ಅಣ್ಣನಿಂದಲೇ ಹತ್ಯೆಗೊಳಗಾಗಿದ್ದ ನಟಿ

ಮರ್ಯಾದೆಗೇಡು ಹತ್ಯೆ: ಕಂದೀಲ್ ಬಲೋಚ್ ಅಣ್ಣನಿಗೆ ಜೀವಾವಧಿ ಶಿಕ್ಷೆ

Published:
Updated:
Prajavani

ಲಾಹೋರ್ : ಪಾಕಿಸ್ತಾನದ ನಟಿ ಮತ್ತು ರೂಪದರ್ಶಿ ಕಂದೀಲ್ ಬಲೋಚ್ ಅವರನ್ನು ಮರ್ಯಾದೆಗೇಡು ಹತ್ಯೆ ಮಾಡಿದ್ದ, ಬಲೋಚ್‌ನ ಸಹೋದರ ಮೊಹಮ್ಮದ್ ವಾಸೀಮ್‌ಗೆ ಶುಕ್ರವಾರ ಅಲ್ಲಿನ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿದೆ. 

‘ಕಂದೀಲ್ ಬಲೋಚ್‌’ ಹೆಸರಿನಿಂದ ಖ್ಯಾತಿಯಾಗಿದ್ದ ನಟಿ ಫೌಜಿಯಾ ಅಜೀಮ್ ಅವರು ಪಂಜಾಬ್ ಪ್ರಾಂತ್ಯದ ಮುಲ್ತಾನ್‌ನಲ್ಲಿರುವ ತಮ್ಮ ಮನೆಯಲ್ಲೇ 2016ರ ಜುಲೈ 15ರಂದು ಸ್ವಂತ ಅಣ್ಣನಿಂದಲೇ ಹತ್ಯೆಗೀಡಾಗಿದ್ದರು. 

ಹತ್ಯೆ ಪ್ರಕರಣದ ವಿಚಾರಣೆ ನಡೆಸಿದ ಮುಲ್ತಾನ್ ಸೆಷೆನ್ಸ್ ಕೋರ್ಟ್‌ನ ನ್ಯಾಯಾಧೀಶ ಇಮ್ರಾನ್ ಶಫಿ, ಶುಕ್ರವಾರ ಬಲೋಚ್‌ನ ಪೋಷಕರ ಸಮ್ಮುಖದಲ್ಲೇ ಮೊಹಮ್ಮದ್‌ ವಾಸೀಮ್‌ಗೆ ಜೀವಾವಧಿ ಶಿಕ್ಷೆ ಪ್ರಕಟಿಸಿದರು. ಹತ್ಯೆ ಪ್ರಕರಣದಲ್ಲಿ ಆರೋಪಿಗಳಾಗಿದ್ದ ಬಲೋಚ್‌ನ ಮತ್ತೊಬ್ಬ ಸಹೋದರ ಅಸ್ಲಂ ಶಾಹೀನ್, ಸಂಬಂಧಿಕರಾದ ಹಕ್ ನವಾಜ್, ಧಾರ್ಮಿಕ ಗುರು ಅಬ್ದುಲ್ ಖಾವಿಯನ್ನು ಖುಲಾಸೆಗೊಳಿಸಲಾಯಿತು.  ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ದಂತೆ ಒಟ್ಟು 35 ಸಾಕ್ಷಿಗಳ ಹೇಳಿಕೆಗಳನ್ನು ಕೋರ್ಟ್ ದಾಖಲಿಸಿಕೊಂಡಿದೆ. 

‘ತಂಗಿ ಕಂದೀಲ್ ಬಲೋಚ್‌ನನ್ನು ಕತ್ತು ಹಿಸುಕಿ ಸಾಯಿಸಿರುವುದನ್ನು ಒಪ್ಪಿಕೊಂಡಿರುವ ವಾಸೀಮ್, ಆಕೆ ಸಾಮಾಜಿಕ ಜಾಲತಾಣಗಳಲ್ಲಿ ಕುಟುಂಬಕ್ಕೆ ಅಗೌರವ ತರುವ ವಿಡಿಯೊ ಮತ್ತು ಪೋಸ್ಟ್‌ಗಳನ್ನು ಹಾಕುತ್ತಿದ್ದಳು’ ಎಂದು ಹೇಳಿದ್ದಾನೆ. 

Post Comments (+)