ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬ್ರಿಟನ್ ಸಂಸತ್ ಚುನಾವಣೆ | ಕಾಶ್ಮೀರ ವಿಷಯ ಪ್ರಸ್ತಾಪಕ್ಕೆ ಆಕ್ಷೇಪ

ಭಾರತೀಯರ ಓಲೈಕೆಗೆ ಪೈಪೋಟಿ
Last Updated 10 ನವೆಂಬರ್ 2019, 19:36 IST
ಅಕ್ಷರ ಗಾತ್ರ

ಲಂಡನ್‌: ಜಮ್ಮು–ಕಾಶ್ಮೀರಕ್ಕೆ ನೀಡಿದ್ದ ವಿಶೇಷ ಸ್ಥಾನಮಾನ ರದ್ದು ಮಾಡಿರುವ ವಿಷಯವನ್ನು ಡಿಸೆಂಬರ್‌ನಲ್ಲಿ ನಡೆಯಲಿರುವ ಸಾರ್ವತ್ರಿಕ ಚುನಾವಣೆ ಪ್ರಚಾರಕ್ಕೆ ಬಳಸಿಕೊಳ್ಳುವುದಕ್ಕೆ ಕೆಲವು ಅಭ್ಯರ್ಥಿಗಳು ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಕಾಶ್ಮೀರ ವಿಷಯವನ್ನು ಎಳೆದು ತರುವ ಮೂಲಕ ಬ್ರಿಟನ್‌ನಲ್ಲಿ ನೆಲೆಸಿರುವ ಉಪಖಂಡದ ಜನರ ಮತಗಳನ್ನು ವಿಭಜಿಸುವ ಯತ್ನ ಕೈಬಿಡಬೇಕು ಎಂದೂ ಅವರು ಆಗ್ರಹಿಸಿದ್ದಾರೆ. ಅದರಲ್ಲೂ, ಜಮ್ಮು–ಕಾಶ್ಮೀರ ವಿಷಯದಲ್ಲಿ ಅಂತರರಾಷ್ಟ್ರೀಯ ಸಮುದಾಯ ಮಧ್ಯಪ್ರವೇಶಿಸಿ, ಸಮಸ್ಯೆ ಇತ್ಯರ್ಥಪಡಿಸಬೇಕು ಎಂಬುದಾಗಿ ನಿರ್ಣಯ ಅಂಗೀಕರಿಸಿರುವ ಲೇಬರ್‌ ಪಾರ್ಟಿ ಮತದಾರರ ಕೆಂಗಣ್ಣಿಗೆ ಗುರಿಯಾಗಿದೆ.

ಪಕ್ಷದ ಅಭ್ಯರ್ಥಿಗಳನ್ನೇ ಗುರಿಯಾಗಿಸಿಕೊಂಡು ಸಾಮಾಜಿಕ ಜಾಲತಾಣಗಳಲ್ಲಿ ಭಾರತ ಮೂಲದ ಮತದಾರರು, ಸಂಘಟನೆಗಳು ಸಂದೇಶಗಳನ್ನು ಹರಿಬಿಡುತ್ತಿರುವುದು ಲೇಬರ್‌ ಪಾರ್ಟಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ.

‘ನಮ್ಮವರನ್ನೇ ಈ ರೀತಿ ವಿಭಜಿಸುವುದು ಸರಿಯಲ್ಲ. ನಾವು ವಾಸ ಮಾಡುತ್ತಿರುವ ಬ್ರಿಟನ್‌ನ ಆಗುಹೋಗುಗಳ ಬಗ್ಗೆ ಯೋಚಿಸಬೇಕು. ಜಮ್ಮು–ಕಾಶ್ಮೀರ ವಿವಾದ ಆ ರಾಜ್ಯದ ಜನರಿಗೆ ಸಂಬಂಧಿಸಿದ್ದು. ಅದಕ್ಕೆ ಭಾರತದ ಸಂವಿಧಾನದ ಚೌಕಟ್ಟಿನೊಳಗೇ ಪರಿಹಾರ ಕಂಡುಕೊಳ್ಳಬೇಕು’ ಎಂದು ಭಾರತ ಮೂಲದ, ಲೇಬರ್‌ ಪಾರ್ಟಿಯ ಹಿರಿಯ ಸಂಸದ ವೀರೇಂದ್ರ ಶರ್ಮಾ ಹೇಳುತ್ತಾರೆ.

ಅವರು ಪಶ್ಚಿಮ ಲಂಡನ್‌ನ ಈಲಿಂಗ್‌ ಸೌಥಾಲ್‌ ಕ್ಷೇತ್ರವನ್ನು 2007ರಿಂದ ಪ್ರತಿನಿಧಿಸುತ್ತಿದ್ದು, ಈ ಬಾರಿಯೂ ಗೆಲ್ಲುವ ವಿಶ್ವಾಸವನ್ನು ವ್ಯಕ್ತಪಡಿಸುತ್ತಾರೆ.

‘ಪಕ್ಷವು ಕೈಗೊಂಡಿರುವ ನಿರ್ಣಯ ಭಾರತ ವಿರೋಧಿ ಅಲ್ಲ. ನಮ್ಮ ನಿಲುವನ್ನು ತಪ್ಪಾಗಿ ಅರ್ಥೈಸಲಾಗಿದೆ. ಪಕ್ಷವು ತನ್ನ ನಿರ್ಣಯದಲ್ಲಿ ಮಾನವ ಹಕ್ಕುಗಳ ರಕ್ಷಣೆ ಬಗ್ಗೆ ಹೆಚ್ಚು ಒತ್ತು ನೀಡಿದೆಯಷ್ಟೇ ’ ಎಂದು ಲೇಬರ್‌ ಪಾರ್ಟಿಯ ಮತ್ತೊಬ್ಬ ಸಂಸದ ತನ್ಮಂಜಿತ್‌ ಸಿಂಗ್‌ ಧೇಸಿ ಹೇಳುತ್ತಾರೆ.

ಭಾರತೀಯರ ಓಲೈಕೆಗೆ ಪೈಪೋಟಿ
ಬ್ರಿಟನ್‌ನಲ್ಲಿ ಲಕ್ಷಾಂತರ ಭಾರತೀ ಯರು ವಾಸ ಮಾಡುತ್ತಿದ್ದಾರೆ. ಈ ಪೈಕಿ ಮತದಾರರ ಸಂಖ್ಯೆ 10 ಲಕ್ಷಕ್ಕೂ ಅಧಿಕ. ಹೀಗಾಗಿ ಭಾರತೀಯ ಸಮು ದಾಯದ ಮತದಾರರನ್ನು ಓಲೈಸಲು ಎರಡೂ ಪಕ್ಷಗಳ ಅಭ್ಯರ್ಥಿಗಳಲ್ಲಿ ಪೈಪೋಟಿ ಇರುತ್ತದೆ. ಹಬ್ಬ ಹಾಗೂ ಇತರ ಸಂದರ್ಭಗಳಲ್ಲಿ ದೇವಸ್ಥಾನ, ಗುರುದ್ವಾರಕ್ಕೆ ಭೇಟಿ ನೀಡಿ, ಭಾರತೀಯರೊಂದಿಗೆ ಬೆರೆತು, ಅವರೊಂದಿಗೆ ಫೋಟೊ ಕ್ಲಿಕ್ಕಿಸಿಕೊಳ್ಳುವ ಅವಕಾಶವನ್ನು ಯಾವ ಅಭ್ಯರ್ಥಿಯೂ ಕಳೆದುಕೊಳ್ಳುವುದಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT