ಗುರುವಾರ , ನವೆಂಬರ್ 21, 2019
23 °C

ಜಪಾನ್‌: ಹರ್ಷೋದ್ಘಾರಗಳ ಮಧ್ಯೆ ಚಕ್ರವರ್ತಿ ನರುಹಿಟೊ ಮೆರವಣಿಗೆ

Published:
Updated:
Prajavani

ಟೊಕಿಯೊ: ಜಪಾನ್‌ನ ಹೊಸ ಚಕ್ರವರ್ತಿ ನರುಹಿಟೊ ಅವರ ತೆರೆದ ಕಾರಿನಲ್ಲಿ ಭಾನುವಾರ ನಡೆದ ಸಾಮ್ರಾಜ್ಯಶಾಹಿ ಮೆರವಣಿಗೆಯಲ್ಲಿ ಸಹಸ್ರಾರು ಜನರು ಧ್ವಜ ಬೀಸಿ, ಹರ್ಷೋಧ್ಗಾರಗಳನ್ನು ಮೊಳಗಿಸಿದರು. ಈ ಅಪರೂಪದ ಮೆರವಣಿಗೆ ವೀಕ್ಷಿಸಲು ಶನಿವಾರ ರಾತ್ರಿಯಿಂದಲೇ ಜನರು ಸೇರಿದ್ದರು.

ಈ ಮೆರವಣಿಗೆ ಅಕ್ಟೋಬರ್‌ 22 ರಂದು ನಡೆಯಬೇಕಿತ್ತು. ಆದರೆ, ಆ ಸಮಯದಲ್ಲಿ ಜಪಾನ್‌ನಲ್ಲಿ ಬಿರುಗಾಳಿ ಸಹಿತ ಭಾರಿ ಮಳೆ ಸುರಿದಿದ್ದರಿಂದ ಈ ಕಾರ್ಯಕ್ರಮವನ್ನು ಮುಂದೂಡಲಾಗಿತ್ತು. 

ನರುಹಿಟೊ ಅವರು ತಮ್ಮ ಪತ್ನಿ, ಸಾಮ್ರಾಜ್ಞಿ ಮಸಾಕೊ ಅವರೊಟ್ಟಿಗೆ ಮೆರವಣಿಗೆಯಲ್ಲಿ ಭಾಗವಹಿಸಿದ್ದರು. ಅರಮನೆಯಿಂದ ಆರಂಭವಾದ ಮೆರವಣಿಗೆ 30 ನಿಮಿಷಗಳವರೆಗೆ ಸಂಚರಿಸಿತು. 

ಜಪಾನ್‌ನ ನೂತನ ಚಕ್ರವರ್ತಿಯಾಗಿ ನರುಹಿಟೊ ಅವರು ಪ್ರತಿಷ್ಠಿತ ರಾಜಮನೆತನದ ಕ್ರಿಸಂಥೆಮಮ್‌ ಸಿಂಹಾಸನವನ್ನು ಇದೇ ಮೇ ತಿಂಗಳಿನಲ್ಲಿ ಅಲಂಕರಿಸಿದ್ದರು. 200 ವರ್ಷಗಳ ಇತಿಹಾಸ ಹೊಂದಿರುವ ಜಪಾನ್‌ನ ರಾಜಮನೆತನದ ಚಕ್ರವರ್ತಿ ಅಕಿಹಿಟೊ ಪದತ್ಯಾಗ ಮಾಡಿದ ನಂತರ ಅವರ ಪುತ್ರ ನರುಹಿಟೊ ಅಧಿಕಾರ ವಹಿಸಿಕೊಂಡಿದ್ದರು.

ನರುಹಿಟೊ ಅವರು ಸಿಂಹಾನ ಅಲಂಕರಿಸಿದ್ದನ್ನು ಅಧಿಕೃತ ಘೋಷಣೆಯನ್ನಾಗಿ ಸೂಚಿಸುವುದಕ್ಕಾಗಿ ಈ ಮೆರವಣಿಗೆ ನಡೆಯಿತು. 5 ಕಿ.ಮೀ ವರೆಗೆ ನಡೆದ ಮೆರವಣಿಗೆ ಸಂದರ್ಭದಲ್ಲಿ ಬಿಗಿ ಬಂದೋಬಸ್ತ್‌ ಮಾಡಲಾಗಿತ್ತು.

ಪ್ರತಿಕ್ರಿಯಿಸಿ (+)