ಶನಿವಾರ, ಫೆಬ್ರವರಿ 22, 2020
19 °C
18 ತಿಂಗಳ ಸಂಘರ್ಷದ ಬಳಿಕ ಅಮೆರಿಕ–ಚೀನಾ ನಡುವೆ ‘ಮೊದಲ ಹಂತ’ದ ವಾಣಿಜ್ಯ ಒಪ್ಪಂದಕ್ಕೆ ಸಹಿ

ಆಳ- ಅಗಲ| ಕೊನೆಯಾದೀತೇ ವ್ಯಾಪಾರ ಸಮರ?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹಲವು ತಿಂಗಳ ಸಮಾಲೋಚನೆ ಗಳ ಬಳಿಕ ಅಮೆರಿಕ ಮತ್ತು ಚೀನಾ, ‘ಮೊದಲ ಹಂತ’ದ ವ್ಯಾಪಾರ ಒಪ್ಪಂದಕ್ಕೆ ಸಹಿ ಹಾಕಿವೆ. ಎರಡೂ ದೇಶಗಳ ನಡುವೆ 2018ರಲ್ಲಿ ಆರಂಭವಾದ ವ್ಯಾಪಾರ ಸಮರವನ್ನು ಕೊನೆಗೊಳಿ ಸುವ ಉದ್ದೇಶವನ್ನು ಈ ಒಪ್ಪಂದ ಹೊಂದಿದೆ. ಆದರೆ, ಚೀನಾದ ಹಲವು ಸರಕುಗಳ ಮೇಲೆ ಅಮೆರಿಕ ಹೇರಿದ್ದ ಭಾರಿ ಸುಂಕದಲ್ಲಿ ಹೆಚ್ಚಿನವು ಹಾಗೆಯೇ ಉಳಿಯಲಿವೆ. ಜತೆಗೆ, ಒಪ್ಪಂದವನ್ನು ಚೀನಾ ಪಾಲಿಸದಿದ್ದರೆ ‘ಹೆಚ್ಚುವರಿ ಶಿಕ್ಷೆ’ ವಿಧಿಸುವ ಅವಕಾಶವನ್ನೂ ಅಮೆರಿಕಕ್ಕೆ ನೀಡಲಾಗಿದೆ. ವಾಣಿಜ್ಯ ಸಮರ ಶಮನಕ್ಕೆ ಈ ಒಪ್ಪಂದ ಯಶಸ್ವಿಯಾದರೂ ಅದರ ವ್ಯಾಪ್ತಿ ಸೀಮಿತ ಎಂಬ ವಿಶ್ಲೇಷಣೆಯೂ ಇದೆ

ಒಪ್ಪಂದದಲ್ಲಿ ಏನಿದೆ?

ಅಮೆರಿಕ– ಚೀನಾ ಮಧ್ಯದ ಮೊದಲ ಹಂತದ ಒಪ್ಪಂದ ಪತ್ರವು 86 ಪುಟಗಳದ್ದಾಗಿದ್ದು ಎಂಟು ಅಧ್ಯಾಯಗಳನ್ನು ಹೊಂದಿದೆ. ಸೈಬರ್‌ ಕಳ್ಳತನ, ಕೈಗಾರಿಕೆಗಳಿಗೆ ನೀಡುವ ಸಬ್ಸಿಡಿ, ಅಮೆರಿಕದ ಕಂಪನಿಗಳಿಗೆ ವಿಧಿಸುವ ತಂತ್ರಜ್ಞಾನದ ಅಡೆತಡೆಗಳಿಗೆ ಸಂಬಂಧಿಸಿದಂತೆ ಒಪ್ಪಂದದಲ್ಲಿ ಉಲ್ಲೇಖ ಇಲ್ಲದಿರುವುದರಿಂದ ಈ ಒಪ್ಪಂದವು ಉಭಯ ರಾಷ್ಟ್ರಗಳ ವ್ಯಾಪಾರ ಚಟುವಟಿಕೆಗಳಿಗೆ ಸಂಬಂಧಿಸಿದಂತೆ ಸೀಮಿತ ವ್ಯಾಪ್ತಿಯನ್ನು ಹೊಂದಿದೆ ಎಂದು ವಿಶ್ಲೇಷಿಸಲಾಗುತ್ತಿದೆ. ಆದರೆ, ಹಿಂದಿನ ಸರ್ಕಾರವು ಮಾಡಿದ್ದಕ್ಕಿಂತ ಹೆಚ್ಚಿನ ಸಾಧನೆಯನ್ನು ನಾವು ಮಾಡಿದ್ದೇವೆ ಎಂದು ಟ್ರಂಪ್‌ ಆಡಳಿತ ಹೇಳಿಕೊಂಡಿದೆ.

* ವ್ಯಾಪಾರ ರಹಸ್ಯಗಳನ್ನು ಕಳ್ಳತನ ಮಾಡುವವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲು ಅಮೆರಿಕದ ಸಂಸ್ಥೆಗಳಿಗೆ ಸಾಧ್ಯವಾಗಿಸುವ ನಿಟ್ಟಿನಲ್ಲಿ, ಬೌದ್ಧಿಕ ಆಸ್ತಿ ರಕ್ಷಣೆ ನಿಯಮಾವಳಿಯನ್ನು ಕಠಿಣಗೊಳಿಸಲು ಚೀನಾ ಒಪ್ಪಿದೆ. ಪೇಟೆಂಟ್‌, ಟ್ರೇಡ್‌ ಮಾರ್ಕ್‌ ನಿಯಮ ಉಲ್ಲಂಘನೆಯ ವಿಚಾರದಲ್ಲಿ ಕಠಿಣ ಕ್ರಮ ಕೈಗೊಳ್ಳುವ ವಿಚಾರವೂ ಇದರಲ್ಲಿದೆ (ಆದರೆ, ಈ ನಿಯಮಾವಳಿಗಳು 20ನೇ ಶತಮಾನದವು. ಈಗಿನ ಸವಾಲುಗಳನ್ನು ಎದುರಿಸಲು ಇವು ವಿಫಲವಾಗುತ್ತವೆ. ಸೈಬರ್‌ ಕಳ್ಳತನ ಹಾಗೂ ತಂತ್ರಜ್ಞಾನ ವರ್ಗಾವಣೆಯ ವಿಚಾರದಲ್ಲಿ ಚೀನಾ ಮೌನವಹಿಸಿದೆ ಎನ್ನಲಾಗಿದೆ)

* ತನ್ನ ಮಾರುಕಟ್ಟೆಯನ್ನು ಪ್ರವೇಶಿಸಬೇಕಾದರೆ ತಂತ್ರಜ್ಞಾನ ಹಸ್ತಾಂತರ ಮಾಡಬೇಕು ಎಂಬ ಒತ್ತಾಯವನ್ನು ಅಮೆರಿಕದ ಕಂಪನಿಗಳಿಗೆ ಮಾಡದಿರಲು ಚೀನಾ ಒಪ್ಪಿದೆ (ಈ ಒಪ್ಪಂದವನ್ನು ಹಿಂದೆಯೂ ಚೀನಾ ಮಾಡಿತ್ತು ಮತ್ತು ಹಲವು ಬಾರಿ ಅದನ್ನು ಉಲ್ಲಂಘಿಸಿತ್ತು ಎಂದು ಅಮೆರಿಕದ ಅಧಿಕಾರಿಗಳೇ ಹೇಳಿದ್ದಾರೆ)

* ಶಿಶು ಆಹಾರ, ಪಶು ಆಹಾರ, ಅಕ್ಕಿ ಮುಂತಾದ ಆಹಾರ ವಸ್ತುಗಳಿಗೆ ಸಂಬಂಧಿಸಿದಂತೆ ‘ಆರೋಗ್ಯ ಗುಣಮಟ್ಟ’ ನಿಯಮಗಳನ್ನು ಸಡಿಲಗೊಳಿಸಲು ಚೀನಾ ಒಪ್ಪಿದೆ. ಇದರಿಂದ ಅಮೆರಿಕದ ರೈತರು ಬೆಳೆದ ಉತ್ಪನ್ನಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಚೀನಾಕ್ಕೆ ರಫ್ತು ಮಾಡಲು ಸಾಧ್ಯವಾಗಬಹುದು

* ಬ್ಯಾಂಕಿಂಗ್‌ ಸೇವೆ, ಕ್ರೆಡಿಟ್‌ ರೇಟಿಂಗ್‌, ಇ–ಪಾವತಿ ಸೇವೆ, ವಿಮೆ ಸೇರಿದಂತೆ ಹಣಕಾಸು ಸೇವಾ ಕ್ಷೇತ್ರದಲ್ಲೂ ಅಮೆರಿಕದ ಕಂಪನಿಗಳಿಗೆ ಪ್ರವೇಶ ಕಲ್ಪಿಸಲು ಕ್ರಮ ಕೈಗೊಳ್ಳುವುದಾಗಿ ಚೀನಾ ಹೇಳಿದೆ. ಇದೇ ರೀತಿ ಚೀನಾದ ಕೆಲವು ಕಂಪನಿಗಳಿಗೆ ತನ್ನ ಮಾರುಕಟ್ಟೆಗೆ ಪ್ರವೇಶ ನೀಡಲು ಅಮೆರಿಕವೂ ಒಪ್ಪಿದೆ

* ರಫ್ತುದಾರರಿಗೆ ಅನುಕೂಲ ಕಲ್ಪಿಸುವುದಕ್ಕಾಗಿ ತಮ್ಮ ದೇಶದ ಕರೆನ್ಸಿಯನ್ನು ಅಪಮೌಲ್ಯಗೊಳಿಸುವುದಿಲ್ಲ ಎಂದು ಜಿ20 ಹಾಗೂ ಐಎಂಎಫ್‌ನಲ್ಲಿ ಮಾಡಿರುವ ಪ್ರತಿಜ್ಞೆಗೆ ಬದ್ಧರಾಗಿರಲು ಎರಡೂ ರಾಷ್ಟ್ರಗಳು ನಿರ್ಧರಿಸಿವೆ. ಇದನ್ನು ಉಲ್ಲಂಘಿಸಿದರೆ ಐಎಂಎಫ್‌ ಮೊರೆಹೋಗುವುದು ಅಥವಾ ಏಕಪಕ್ಷೀಯವಾಗಿ ಸುಂಕ ವಿಧಿಸುವುದಕ್ಕೂ ಅವಕಾಶ ಕಲ್ಪಿಸಲಾಗಿದೆ

* 2017ರಲ್ಲಿ ಅಮೆರಿಕದಿಂದ ಆಮದು ಮಾಡಿದ್ದಕ್ಕಿಂತ 20,000 ಕೋಟಿ ಡಾಲರ್‌ ಹೆಚ್ಚಿನ ಮೌಲ್ಯದ ಸರಕು ಖರೀದಿಸುವುದಾಗಿ ಚೀನಾ ಹೇಳಿದೆ

ಗೋಪ್ಯತೆಯನ್ನು ಕಾಯ್ದುಕೊಳ್ಳಲು ಎರಡೂ ರಾಷ್ಟ್ರಗಳು ಬದ್ಧತೆ ಪ್ರದರ್ಶಿಸಿದರೂ ಇದರ ಉಲ್ಲಂಘನೆಯಾದರೆ ಚೀನಾದ ವಿರುದ್ಧ ದೂರು ದಾಖಲಿಸಲು ಅಮೆರಿಕದ ಕಂಪನಿಗಳು ಹಿಂಜರಿಯಬಹುದು. ಹೀಗೆ ಮಾಡಿದರೆ ಮತ್ತೆ ವ್ಯಾಪಾರ ಸಮರ ಆರಂಭವಾಗಬಹುದೆಂಬ ಭೀತಿಯೇ ಇದಕ್ಕೆ ಕಾರಣ ಎಂದು ವಿಶ್ಲೇಷಿಸಲಾಗಿದೆ.

ಏನಿದು ವ್ಯಾಪಾರ ಸಮರ?

ವಿಶ್ವದ ಎರಡು ಅತಿದೊಡ್ಡ ಅರ್ಥ ವ್ಯವಸ್ಥೆಗಳಾದ ಅಮೆರಿಕ ಮತ್ತು ಚೀನಾ ನಡುವಿನ ವ್ಯಾಪಾರ ಸಮರವಿದು. ಒಂದು ದೇಶ, ಮತ್ತೊಂದು ದೇಶದ ಮೇಲೆ ಪೈಪೋಟಿಗೆ ಬಿದ್ದು, ಸರಕುಗಳ ಆಮದಿನ ಮೇಲೆ ಭಾರಿ ಸುಂಕ ವಿಧಿಸುತ್ತಿರುವ ಕಾರಣ ಇದು ‘ಸಮರ’ದ ಸ್ವರೂಪ ತಾಳಿದೆ. ಚೀನಾ ನಡೆಸುತ್ತಿರುವ ವಹಿವಾಟು ಅನ್ಯಾಯದಿಂದ ಕೂಡಿದ್ದು, ತನ್ನ ದೇಶದ ಕೃತಕ ಬುದ್ಧಿಮತ್ತೆಯನ್ನು ಅದು ಕದಿಯುತ್ತಿದೆ ಎಂದು ಅಮೆರಿಕ ಆರೋಪಿಸಿತ್ತು. ತಾನು ವಿಶ್ವದ ಅರ್ಥವ್ಯವಸ್ಥೆಯ ದೈತ್ಯನಾಗಿ ಬೆಳೆಯುತ್ತಿರುವುದನ್ನು ಅಮೆರಿಕಕ್ಕೆ ಸಹಿಸಲಾಗುತ್ತಿಲ್ಲ ಎಂದು ಚೀನಾ ದೂರಿತ್ತು.

ಅಮೆರಿಕ, ಚೀನಾದ ಮೇಲೆ 360 ಶತಕೋಟಿ ಡಾಲರ್‌ನಷ್ಟು (₹25.20 ಲಕ್ಷ ಕೋಟಿ)ಮೌಲ್ಯದ ಸರಕುಗಳ ಮೇಲೆ ಅಧಿಕ ಸುಂಕ ವಿಧಿಸಿದರೆ, ಚೀನಾ, ಅಮೆರಿಕದ 110 ಶತಕೋಟಿ ಡಾಲರ್‌ (₹7.70 ಲಕ್ಷ ಕೋಟಿ ) ಮೌಲ್ಯದ ಸರಕುಗಳ ಮೇಲೆ ಅಧಿಕ ಸುಂಕವನ್ನು ಹೇರಿತ್ತು. 18 ತಿಂಗಳುಗಳಿಂದ ನಡೆಯುತ್ತಿರುವ (2018ರಿಂದ) ಈ ಸಮರಕ್ಕೆ ಹೊಸ ಒಪ್ಪಂದ ತೆರೆ ಎಳೆಯುವ ಸಾಧ್ಯತೆ ಇದೆ ಎಂದು ಆಶಿಸಲಾಗಿದೆ.

ಭಾರತಕ್ಕೆ ಲಾಭವೇ ನಷ್ಟವೇ?

ಅಮೆರಿಕ ಮತ್ತು ಚೀನಾ ನಡುವೆ ಜುಲೈ 2018ರಲ್ಲಿ ವಾಣಿಜ್ಯ ಸಮರ ಆರಂಭವಾದಾಗಲೇ ಅದರ ಪ್ರಯೋಜನ ಭಾರತಕ್ಕೆ ದೊರೆಯಬಹುದು ಎಂಬ ಲೆಕ್ಕಾಚಾರ ಇತ್ತು. ಅಮೆರಿಕದ ಹಲವು ಕಂಪನಿಗಳು ಚೀನಾದಲ್ಲಿನ ತಮ್ಮ ತಯಾರಿಕಾ ಘಟಕಗಳನ್ನು ಬೇರೆಡೆಗೆ ಸ್ಥಳಾಂತರಿಸಲು ಯೋಜಿಸಿದ್ದವು. ಅಮೆರಿಕ ಮತ್ತು ಚೀನಾ, ಪರಸ್ಪರರ ಸರಕುಗಳ ಮೇಲೆ ಅತಿಯಾದ ಸುಂಕ ಹೇರಿದ್ದವು. ಹಾಗಾಗಿ, ಈ ದೇಶಗಳ ನಡುವೆ ವ್ಯಾಪಾರ ಅಸಾಧ್ಯ ಎನ್ನುವ ಸ್ಥಿತಿ ಇತ್ತು. 

ಇದರಿಂದಾಗಿ, ಭಾರತದಲ್ಲಿ ಬಂಡವಾಳ ಹೂಡಿಕೆಯನ್ನು ಹೆಚ್ಚಿಸಬಹುದು ಮತ್ತು ಭಾರತದ ರಫ್ತು ಪ್ರಮಾಣ ಏರಿಕೆ ಆಗಬಹುದು ಎಂದು ಭಾವಿಸಲಾಗಿತ್ತು. 

ಆದರೆ, ಇಂತಹ ಬೇಡಿಕೆಯನ್ನು ಪೂರೈಸಬಲ್ಲ ಮೂಲಸೌಕರ್ಯವನ್ನು ಭಾರತದ ತಯಾರಿಕಾ ವಲಯ ಹೊಂದಿರಲಿಲ್ಲ. ಹೂಡಿಕೆಯನ್ನು ಆಕರ್ಷಿಸುವ ವಿಚಾರದಲ್ಲಿಯೂ ಭಾರತ ಯಶಸ್ವಿ ಆಗಲಿಲ್ಲ. ಜಮೀನು ಮತ್ತು ಪರವಾನಗಿಗಳ ವಿಚಾರದಲ್ಲಿನ ಕಟ್ಟುನಿಟ್ಟು ನಿಯಮಗಳಿಂದಾಗಿ ಹೊಸ ತಯಾರಿಕಾ ಘಟಕಗಳು ಭಾರತದಲ್ಲಿ ಸ್ಥಾಪನೆಯಾಗುವುದು ಸಾಧ್ಯವಾಗಲಿಲ್ಲ. ಭಾರತದ ಆರ್ಥಿಕ ಪರಿಸ್ಥಿತಿಯೂ ವಾಣಿಜ್ಯ ಸಮರದ ಲಾಭ ಪಡೆಯುವ ಸ್ಥಿತಿಯಲ್ಲಿ ಇರಲಿಲ್ಲ ಎಂದು ಆರ್ಥಿಕ ತಜ್ಞರು ವಿಶ್ಲೇಷಿಸುತ್ತಾರೆ.

ಜಗತ್ತಿನ ಅತಿ ದೊಡ್ಡ ಎರಡು ಅರ್ಥ ವ್ಯವಸ್ಥೆಗಳ ಜಟಾಪಟಿಯ ಲಾಭವನ್ನು ವಿಯೆಟ್ನಾಂನಂತಹ ದೇಶಗಳು ಪಡೆದುಕೊಂಡವು. 

ವಾಣಿಜ್ಯ ಸಮರದಿಂದ ಯಾವುದೇ ಪ್ರಯೋಜನ ಪಡೆದುಕೊಳ್ಳದ ಕಾರಣ, ಅದು ಕೊನೆಯಾಗುವುದರಿಂದ ಭಾರತದ ಮೇಲೆ ನೇರ ಪರಿಣಾಮವೇನೂ ಆಗದು. ಅಮೆರಿಕ–ಚೀನಾ, ತಮ್ಮ ಒಪ್ಪಂದದ ಸ್ಫೂರ್ತಿಗೆ ಅನುಸಾರವಾಗಿ ನಡೆದುಕೊಂಡರೆ, ಅದು ಜಾಗತಿಕ ಅರ್ಥ ವ್ಯವಸ್ಥೆಯ ಮೇಲೆ ಸಕಾರಾತ್ಮಕ ಪರಿಣಾಮ ಬೀರಬಹುದು. ಜಾಗತಿಕ ಅರ್ಥ ವ್ಯವಸ್ಥೆಯ ಪ್ರಗತಿ ಪ್ರಮಾಣ ಏರಿಕೆಯಾಗಬಹುದು, ಸಕಾರಾತ್ಮಕ ವಾತಾವರಣ ಮೂಡಬಹುದು. ಅದರ ಪರಿಣಾಮ ಭಾರತದ ಮೇಲೆ ಆಗಬಹುದು ಎಂದು ವಿಶ್ಲೇಷಿಸಲಾಗುತ್ತಿದೆ.

ಚುನಾವಣೆ ಮೇಲೆ ಟ್ರಂಪ್‌ ಕಣ್ಣು?

ಅಮೆರಿಕ ಅಧ್ಯಕ್ಷ ಹುದ್ದೆಗೆ ಈ ನವೆಂಬರ್‌ನಲ್ಲಿ ಚುನಾವಣೆ ನಡೆಯಲಿದೆ. ವಾಣಿಜ್ಯ ಸಮರದಿಂದ ಅಮೆರಿಕದ ಮೇಲೆ ಪ್ರತಿಕೂಲ ಪರಿಣಾಮ ಆಗಿದೆ. ಇದು ತಮ್ಮ ಪುನರಾ‌ಯ್ಕೆಗೆ ತೊಡಕಾಗಬಹುದು ಎಂದು ಟ್ರಂಪ್‌ ಭಾವಿಸಿದ್ದಾರೆ. ಹಾಗಾಗಿ, ಮೊದಲ ಹಂತದ ಒಪ್ಪಂದ ಮಾಡಿಕೊಳ್ಳಲು ಅವರು ಮುಂದಾಗಿದ್ದಾರೆ ಎಂದು ಹೇಳಲಾಗುತ್ತಿದೆ.

ವಾಣಿಜ್ಯ ಸಮರದಿಂದಾಗಿ ಅಮೆರಿಕದ ಮತದಾರನಿಗೆ ಕಷ್ಟವಾಗಿದೆ. ಈ ಸಮರದ ಕಾರಣಕ್ಕಾಗಿ ಅಮೆರಿಕದ ಒಟ್ಟು ದೇಶೀ ಉತ್ಪನ್ನದಲ್ಲಿ ಶೇ 0.3ರಷ್ಟು ಇಳಿಕೆಯಾಗಬಹುದು ಎಂದು ಅಲ್ಲಿ ಆರ್ಥಿಕ ಸಚಿವಾಲಯವ ಅಂದಾಜಿಸಿದೆ. 2018ರ ಬಳಿಕ, ಅಮೆರಿಕನ್ನರ ಸರಾಸರಿ ಆದಾಯದಲ್ಲಿ 580 ಡಾಲರ್‌ (ಸುಮಾರು ₹42 ಸಾವಿರ) ಇಳಿಕೆಯಾಗಿದೆ ಎಂದೂ ಹೇಳಲಾಗಿದೆ. 

ವಾಣಿಜ್ಯ ಸಮರವು ಅಮೆರಿಕದ ಅರ್ಥ ವ್ಯವಸ್ಥೆಯನ್ನು ಬಾಧಿಸದು ಎಂಬ ಸಂದೇಶವನ್ನು ಸಾರುವುದು ಟ್ರಂಪ್‌ ಅವರ ಉದ್ದೇಶ ಎಂದು ತಜ್ಞರು ಹೇಳುತ್ತಿದ್ದಾರೆ. 

 

ಚೀನಾ ಒಪ್ಪಿದ್ದೇಕೆ?

‘ಅಮೆರಿಕ– ಚೀನಾ ಮಧ್ಯೆ ನಡೆದಿರುವ ಒಪ್ಪಂದವು ಹಲ್ಲಿಲ್ಲದ ಹಾವು. ಭವಿಷ್ಯದಲ್ಲಿ ಉಭಯ ರಾಷ್ಟ್ರಗಳ ಮಧ್ಯೆ ಇನ್ನೊಂದು ಹಂತದ ಒಪ್ಪಂದ ಆಗಬಹುದು. ಅಮೆರಿಕದಲ್ಲಿ ಚುನಾವಣೆ ಸಮೀಪಿಸುತ್ತಿರುವುದರಿಂದ ಏಷ್ಯಾದ ರಾಷ್ಟ್ರಗಳ ಜತೆಗಿನ ವ್ಯಾಪಾರ ಒಪ್ಪಂದವನ್ನು ಅಮೆರಿಕವು ಮರು ವಿಮರ್ಶೆಗೆ ಒಳಪಡಿಸುವ ಸಾಧ್ಯತೆಯೂ ಇದೆ’ ಎಂದು ಎಸ್‌ ಆ್ಯಂಡ್‌ ಪಿ ಗ್ಲೋಬಲ್‌ ಮಾರ್ಕೆಟ್‌ ಇಂಟೆಲಿಜನ್ಸ್‌ ಸಂಸ್ಥೆಯ ವಿಶ್ಲೇಷಕ ಕ್ರಿಸ್‌ ರೋಜರ್‌ ಹೇಳುತ್ತಾರೆ. ಒಪ್ಪಂದದ ಬಗ್ಗೆ ಅವರು ಹೇಳಿದ್ದು...

* ಚೀನಾ ತೀವ್ರವಾದ ಆರ್ಥಿಕ ಹಿಂಜರಿತ ಅನುಭವಿಸುತ್ತಿದೆ. ರಫ್ತು ಪ್ರಮಾಣವೂ ಕಡಿಮೆಯಾದರೆ, ಸಮಸ್ಯೆ ಹೆಚ್ಚಾಗುವ ಭೀತಿ ಇದೆ. ಆ ಕಾರಣಕ್ಕೆ, ಹೆಚ್ಚುತ್ತಿರುವ ಸುಂಕಕ್ಕೆ ತಡೆಯೊಡ್ಡುವ ಉದ್ದೇಶದಿಂದ ಒಪ್ಪಂದಕ್ಕೆ ಸಹಿ ಮಾಡಿದೆ

* ನೀತಿಯಲ್ಲಿ ಬದಲಾವಣೆ ಮಾಡುವುದೂ ಸೇರಿದಂತೆ ನೂರಾರು ಭರವಸೆಗಳನ್ನು ಚೀನಾ ಈ ಹಿಂದೆಯೂ ನೀಡಿತ್ತು. ಆದರೆ ಸಬ್ಸಿಡಿ ಮುಂತಾದ ಪ್ರಮುಖ ವಿಚಾರಗಳಲ್ಲಿ ಯಾವುದೇ ಬದಲಾವಣೆ ಆಗಿಲ್ಲ

* ಈ ಒಪ್ಪಂದದ ಹೊರತಾಗಿಯೂ ಕಂಪನಿಗಳು ಆಗ್ನೇಯ ಏಷ್ಯಾದಲ್ಲಿ ಹೂಡಿಕೆಗೆ ಮುಂದಾಗಲಾರವು. ವ್ಯಾಪಾರ ಸಮರ ಮತ್ತೆ ಆರಂಭವಾಗಬಹುದೆಂಬ ಭೀತಿಯೇ ಇದಕ್ಕೆ ಕಾರಣ. ಚುನಾವಣೆ ಸನ್ನಿಹಿತವಾಗಿರುವುದರಿಂದ ಟ್ರಂಪ್‌ ಅವರು ಹೊಸ ‘ಅನುಕೂಲಕರ’ ಶತ್ರುಗಳನ್ನು ಹುಡುಕಬಹುದು. ವಿಯೆಟ್ನಾಂ ಹಾಗೂ ಮಲೇಷ್ಯಾಗಳು ಈಗಾಗಲೇ ಈ ಭಯವನ್ನು ವ್ಯಕ್ತಪಡಿಸಿವೆ

* ಮೊದಲ ಹಂತದ ಒಪ್ಪಂದದಲ್ಲಿ ಪ್ರಮುಖ ವಿಚಾರಗಳ ಬಗ್ಗೆ ಉಲ್ಲೇಖವೇ ಆಗಿಲ್ಲ. ಎರಡನೇ ಹಂತದ ಒಪ್ಪಂದವು ಶೀಘ್ರದಲ್ಲೇ ನಡೆಯಬಹುದು ಎಂಬ ನಿರೀಕ್ಷೆಯೂ ಇಲ್ಲ

* ಚೀನಾಕ್ಕೆ ಟ್ರಂಪ್‌ ಭೇಟಿ ನೀಡಿದರೆ ಕೆಲವು ದೀರ್ಘಾವಧಿ ವ್ಯಾಪಾರ ಒಪ್ಪಂದಗಳಿಗೆ ಸಹಿ ಮಾಡಬಹುದೇ ವಿನಾ ಚೀನಾದ ವ್ಯಾಪಾರ ನೀತಿಯಲ್ಲಿ ಮೂಲಭೂತ ಬದಲಾವಣೆಯ ಒಪ್ಪಂದಗಳು ಆಗುವ ಸಾಧ್ಯತೆ ಇಲ್ಲ

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು