ಶುಕ್ರವಾರ, ಫೆಬ್ರವರಿ 28, 2020
19 °C
ಕೊರೊನಾ ಈಗ ‘ಕೋವಿದ್‌–19’: ವಿಶ್ವ ಆರೋಗ್ಯ ಸಂಸ್ಥೆ ಘೋಷಣೆ

ಚೀನಾ | ಕೊರೊನಾ ವೈರಸ್‌ನಿಂದ ಒಂದೇ ದಿನ 108 ಸಾವು

ಎಪಿ/ಪಿಟಿಐ/ರಾಯಿಟರ್ಸ್‌ Updated:

ಅಕ್ಷರ ಗಾತ್ರ : | |

Prajavani

ಬೀಜಿಂಗ್‌/ಜಿನಿವಾ: ಮಾರಣಾಂತಿಕ ಕೊರೊನಾ ವೈರಸ್‌ ಬಗ್ಗೆ ಮತ್ತೆ ಎಚ್ಚರಿಕೆ ನೀಡಿರುವ ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯೂಎಚ್‌ಒ), ‘ಜಗತ್ತಿಗೆ ಇದು ಗಂಭೀರ ಬೆದರಿಕೆವೊಡ್ಡಿದೆ’ ಎಂದು ಹೇಳಿದೆ.

ಕೊರೊನಾಗೆ ‘ಕೋವಿದ್‌–19’ ಎಂದು ವಿಶ್ವ ಆರೋಗ್ಯ ಸಂಸ್ಥೆ ಈಗ ಅಧಿಕೃತವಾಗಿ ಹೆಸರಿಟ್ಟಿದೆ. ಈ ವೈರಸ್‌ ತಡೆಗಟ್ಟುವ ನಿಟ್ಟಿನಲ್ಲಿ ಲಸಿಕೆ ಮತ್ತು ಔಷಧಗಳ ಕುರಿತು ಸಂಶೋಧನೆಗಳನ್ನು ತ್ವರಿತವಾಗಿ ಕೈಗೊಳ್ಳಬೇಕಾದ ಅನಿವಾರ್ಯತೆ ಇದೆ ಎಂದು ಅದು ಹೇಳಿದೆ.

‘ಚೀನಾದಲ್ಲಿ ಶೇಕಡ 99ರಷ್ಟು ಪ್ರಕರಣಗಳು ಪತ್ತೆಯಾಗಿವೆ. ಚೀನಾದಲ್ಲಿ ಕಾಣಿಸಿಕೊಂಡಿರುವ ಈ ಕಾಯಿಲೆ ಜಗತ್ತಿನ ಉಳಿದ ದೇಶಗಳಿಗೂ ಮಾರಕವಾಗಿದೆ’ ಎಂದು ಡಬ್ಲ್ಯೂಎಚ್‌ಒ ಮಹಾ ನಿರ್ದೇಶಕ ಟೆಡ್ರೊಸ್‌ ಅಧಾನೊಮ್‌ ಘೆಬ್ರೆಯೆಸುಸ್‌ ಮಂಗಳವಾರ ಆತಂಕ ವ್ಯಕ್ತಪಡಿಸಿದ್ದಾರೆ.

ಕೊರೊನಾನಿಂದ ಚೀನಾದಲ್ಲಿ ಇದುವರೆಗೆ ಸಾವಿಗೀಡಾದವರ ಸಂಖ್ಯೆ 1,017ಕ್ಕೆ ಏರಿದೆ.

ಸೋಮವಾರ ಒಂದೇ ದಿನ 108 ಮಂದಿ ಸಾವಿಗೀಡಾಗಿದ್ದಾರೆ. ಜತೆಗೆ, ಹೊಸದಾಗಿ 2,478 ಮಂದಿಯಲ್ಲಿ  ಕೊರೊನಾ ವೈರಸ್‌ ಪತ್ತೆಯಾಗಿದೆ ಎಂದು ರಾಷ್ಟ್ರೀಯ ಆರೋಗ್ಯ ಆಯೋಗ ತಿಳಿಸಿದೆ. ಇದರಿಂದ ಚೀನಾದಲ್ಲಿ ಇದುವರೆಗೆ 42,708 ಮಂದಿಯಲ್ಲಿ ವೈರಸ್‌ ಸೋಂಕು ಇರುವುದು ದೃಢಪಟ್ಟಿದೆ. ವೈರಸ್‌ ಸೋಂಕಿನ ಲಕ್ಷಣಗಳಿರುವ 1.87 ಲಕ್ಷ ಮಂದಿ ಮೇಲೆ ನಿಗಾವಹಿಸಲಾಗಿದೆ.

ಈ ಸಾಂಕ್ರಾಮಿಕ ಕಾಯಿಲೆಯನ್ನು ತಡೆಗಟ್ಟುವ ನಿಟ್ಟಿನಲ್ಲಿ ವಿಶ್ವ ಆರೋಗ್ಯ ಸಂಸ್ಥೆಯ (ಡಬ್ಲ್ಯೂಎಚ್‌ಒ) ನೇತೃತ್ವದಲ್ಲಿ ಅಂತರರಾಷ್ಟ್ರೀಯ ತಜ್ಞರ ತಂಡವೊಂದು ಬೀಜಿಂಗ್‌ಗೆ ಬಂದಿದೆ. ಬ್ರ್ಯೂಸ್ ಅಯ್ಲ್‌ವಾರ್ಡ್‌ ಅವರು ಈ ತಂಡದ ನೇತೃತ್ವ ವಹಿಸಿದ್ದಾರೆ. ಚೀನಾದ ತಜ್ಞರ ಜತೆ ಜಂಟಿಯಾಗಿ ಈ ತಂಡ ಕಾರ್ಯನಿರ್ವಹಿಸಲಿದೆ.

ವೈರಸ್‌ ತಡೆಗಟ್ಟುವುದು ಮತ್ತು ನಿಯಂತ್ರಿಸುವ ಕುರಿತು ಈ ತಂಡಗಳು ಚೀನಾ ಮತ್ತು ಇತರ ದೇಶಗಳಿಗೆ ಸಲಹೆಗಳನ್ನು ನೀಡಲಿದೆ.ನೇಪಾಳ ಸಿದ್ಧತೆ: ವುಹಾನ್‌ ನಗರದಲ್ಲಿ ತನ್ನ 180 ನಾಗರಿಕರನ್ನು ವಾಪಸ್‌ ಕರೆತರಲು ನೇಪಾಳ ಸಿದ್ಧತೆ ನಡೆಸಿದೆ. 

ಆರೋಗ್ಯವಂತ ಮಗುವಿನ ಜನನ

ಕೊರೊನಾವೈರಸ್‌ ಸೋಂಕಿಗೆ ಒಳಗಾಗಿದ್ದ ಚೀನಾದ 33 ವರ್ಷದ ಮಹಿಳೆಯೊಬ್ಬರು, ಆರೋಗ್ಯವಂತ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ.

ಷಿಯಾನ್‌ ನಗರದಲ್ಲಿ ಜನಿಸಿರುವ ಈ ಮಗು 2.7 ಕೆ.ಜಿ. ತೂಕವಿದೆ. ಮುನ್ನೆಚ್ಚರಿಕೆ ಕ್ರಮವಾಗಿ, ತುರ್ತು ನಿಗಾ ಘಟಕದಲ್ಲಿರಿಸಿ ಮಗುವಿನ ಮೇಲೆ ನಿಗಾವಹಿಸಲಾಗಿದೆ. ತಾಯಿ ಮತ್ತು ಮಗುವಿನ ಆರೋಗ್ಯ ಸದ್ಯಕ್ಕೆ ಸ್ಥಿರವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಕಳೆದ ಬುಧವಾರ ವುಹಾನ್‌ ನಗರದ ಆಸ್ಪತ್ರೆಯಲ್ಲಿ ಕೇವಲ 30 ಗಂಟೆಗಳ ಹಿಂದೆ ಜನಿಸಿದ ನವಜಾತ ಶಿಶುವಿನಲ್ಲಿ ವೈರಸ್‌ ಸೋಂಕು ಕಾಣಿಸಿಕೊಂಡಿತ್ತು.

ಕೇರಳ ವಿದ್ಯಾರ್ಥಿನಿ ಸೋಂಕು ಮುಕ್ತ

ತ್ರಿಶೂರ್‌: ಕೊರೊನಾ ವೈರಸ್‌ ಕಾಣಿಸಿಕೊಂಡಿದ್ದ ಇಲ್ಲಿನ ವೈದ್ಯಕೀಯ ವಿದ್ಯಾರ್ಥಿನಿ ಈಗ ಸೋಂಕು ಮುಕ್ತರಾಗಿದ್ದು, ಆರೋಗ್ಯವು ಸ್ಥಿರವಾಗಿದೆ. ಇದರಿಂದ, ಕೇರಳದಲ್ಲಿ ಆತಂಕ ಸದ್ಯಕ್ಕೆ ದೂರವಾಗಿದೆ.

ಅಲಪ್ಪುಳದಲ್ಲಿನ ರಾಷ್ಟ್ರೀಯ ವೈರಾಣು ಸಂಸ್ಥೆಯಲ್ಲಿ ನಡೆಸಿದ ಪರೀಕ್ಷೆಯಲ್ಲಿ ಸೋಂಕು ಇಲ್ಲದಿರುವುದು ದೃಢಪಟ್ಟಿದೆ. ಪುಣೆಯಲ್ಲಿ ರಾಷ್ಟ್ರೀಯ ವೈರಾಣು ಸಂಸ್ಥೆಗೆ ಕಳುಹಿಸಿರುವ ರಕ್ತದ ಮಾದರಿಯ ಫಲಿತಾಂಶದ ಬಳಿಕ ಅಧಿಕೃತವಾಗಿ ಗೊತ್ತಾಗಲಿದೆ.

***

ಪರಿಸ್ಥಿತಿ ಗಂಭೀರವಾಗಿದೆ. ಆದರೂ, ಈ ಸಾಂಕ್ರಾಮಿಕ ಕಾಯಿಲೆ ವಿರುದ್ಧ ಗೆಲುವು ಸಾಧಿಸುವ ವಿಶ್ವಾಸವಿದೆ

-ಷಿ ಜಿನ್‌ಪಿಂಗ್‌, ಚೀನಾ ಅಧ್ಯಕ್ಷ

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು