ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಚ್‌ಕೆಇ ಚುನಾವಣೆಗೆ ಪ್ರಾದೇಶಿಕ ಆಯುಕ್ತರ ಕಣ್ಗಾವಲು

ಸಂಸ್ಥೆಯ ಇತಿಹಾಸದಲ್ಲಿ ಇದೇ ಮೊದಲ ಬಾರಿ ಇಂತಹ ಕ್ರಮ, ಜಿಲ್ಲಾವಾರು ವೀಕ್ಷಕರ ನೇಮಕ
Last Updated 17 ಮಾರ್ಚ್ 2018, 6:21 IST
ಅಕ್ಷರ ಗಾತ್ರ

ಕಲಬುರ್ಗಿ: ಹೈದರಾಬಾದ್‌ ಕರ್ನಾಟಕ ಶಿಕ್ಷಣ ಸಂಸ್ಥೆ ಆಡಳಿತ ಮಂಡಳಿಯ ಚುನಾವಣೆಯು ಪ್ರಾದೇಶಿಕ ಆಯುಕ್ತರ ಕಣ್ಗಾವಲಿನಲ್ಲಿ ನಡೆಯುತ್ತಿದೆ. ವಿಧಾನಸಭೆ, ಲೋಕಸಭೆ ಚುನಾವಣೆಯ ಮಾದರಿಯಲ್ಲಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗಿದೆ.

ಅವಿಭಜಿತ ಕಲಬುರ್ಗಿ ಜಿಲ್ಲೆಯ ಮತದಾರರು ಕಲಬುರ್ಗಿಯಲ್ಲಿ ಮತ್ತು ಬೀದರ್‌, ರಾಯಚೂರು ಜಿಲ್ಲೆಗಳ ಮತದಾರರು ಆಯಾ ಜಿಲ್ಲೆಗಳಲ್ಲಿ ಮತದಾನ ಮಾಡಲಿದ್ದಾರೆ. ಈ ಮೂರು ಜಿಲ್ಲೆಗಳಿಗೆ ಉಪ ವಿಭಾಗಾಧಿಕಾರಿ ದರ್ಜೆಯ ಅಧಿಕಾರಿಗಳನ್ನು ವೀಕ್ಷಕರನ್ನಾಗಿ ನೇಮಿಸಲಾಗಿದೆ.

‘ಹಿಂದೆ ಆಡಳಿತ ಮಂಡಳಿಯಲ್ಲಿ ವಿವಾದ ಉಂಟಾಗಿ, ಸಂಸ್ಥೆಯ ಆಡಳಿತ ಕೆಲ ಸಮಯ ಸರ್ಕಾರದ ಸುಪರ್ದಿಗೆ ಒಳಪಟ್ಟಿತ್ತು. 1982ರಿಂದ ಪ್ರತಿ ಮೂರು ವರ್ಷಕ್ಕೊಮ್ಮೆ ಚುನಾವಣೆ ನಡೆಯುತ್ತಿದೆ. ಸಹಕಾರ ಇಲಾಖೆಯ ಅಧಿಕಾರಿಗಳ ಉಸ್ತುವಾರಿಯಲ್ಲಿ ಚುನಾವಣೆ ಪ್ರಕ್ರಿಯೆ ನಡೆಯುತ್ತಿತ್ತು. ಆದರೆ, ಪ್ರಾದೇಶಿಕ ಆಯುಕ್ತರ ನೇರ ಉಸ್ತುವಾರಿಯಲ್ಲಿ ಚುನಾವಣೆ ನಡೆಯುತ್ತಿರುವುದು ಸಂಸ್ಥೆಯ ಇತಿಹಾಸದಲ್ಲಿ ಇದೇ ಮೊದಲು’ ಎಂದು ಕೆಲ ಸದಸ್ಯರು ಹೇಳುತ್ತಿದ್ದಾರೆ.

‘ಚುನಾವಣೆ ಮುಕ್ತ ಮತ್ತು ನ್ಯಾಯ ಸಮ್ಮತವಾಗಿರಬೇಕು. ಪಾರದರ್ಶಕ ಮತ್ತು ಗೋಪ್ಯತೆ ಕಾಪಾಡಬೇಕು. ಹೀಗಾಗಿ ಈ ಚುನಾವಣೆಯ ಉಸ್ತುವಾರಿ ನೋಡಿಕೊಳ್ಳಿ ಎಂದು ಸಹಕಾರ ಸಂಘಗಳ ರಿಜಿಸ್ಟ್ರಾರ್‌ರಿಂದ ನನಗೆ ಪತ್ರ ಬಂದಿದೆ. ಅವರು ಕೆಲ ನಿರ್ದೇಶನಗಳನ್ನೂ ನೀಡಿದ್ದು, ಅದರಂತೆ ಚುನಾವಣಾ ಪ್ರಕ್ರಿಯೆ ನಡೆಸುತ್ತಿದ್ದೇವೆ’ ಎಂದು ಪ್ರಾದೇಶಿಕ ಆಯುಕ್ತ ಹರ್ಷಗುಪ್ತ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

‘ಮತಗಟ್ಟೆಗಳ ಒಳಗೆ ಮತ್ತು ಮತದಾನ ಕೇಂದ್ರದ ಎದುರು ನಿಂತು ಮತದಾರರ ಮೇಲೆ ಪ್ರಭಾವ ಬೀರುವುದು, ಮತದಾರರು ತಾವು ಮತದಾನ ಮಾಡಿದ ಮತಪತ್ರದ ಚಿತ್ರ ಮೊಬೈಲ್‌ನಲ್ಲಿ ಸೆರೆಹಿಡಿದು ಅಭ್ಯರ್ಥಿಗಳಿಗೆ ತೋರಿಸುವಂತಹ ಘಟನೆಗಳಿಗೆ ಅವಕಾಶ ಇಲ್ಲ’ ಎಂದು ಅವರು ಹೇಳಿದರು.

‘ಕಲಬುರ್ಗಿಯಲ್ಲಿ ಐದು, ಬೀದರ್‌ ಮತ್ತು ರಾಯಚೂರುಗಳಲ್ಲಿ ತಲಾ ಒಂದು ಮತಗಟ್ಟೆ ಸ್ಥಾಪಿಸಲಾಗಿದೆ. ಅಲ್ಲಿ ವೆಬ್‌ ಕ್ಯಾಮೆರಾ/ಸಿಸಿಟಿವಿ ಐಪಿ ಕ್ಯಾಮೆರಾಗಳನ್ನು ಅಳವಡಿಸಿ ಮತದಾನ ಪ್ರಕ್ರಿಯೆಯ ನೇರ ಪ್ರಸಾರ ಮಾಡಲಾಗುವುದು. ಮತಗಟ್ಟೆಗಳಲ್ಲಿ ಏನು ನಡೆಯುತ್ತಿದೆ ಎಂಬುದನ್ನು ಸಾರ್ವಜನಿಕರು ವೆಬ್‌ಸೈಟ್‌ ಮೂಲಕ ವೀಕ್ಷಿಸಬಹುದು. ಪಾರದರ್ಶಕತೆಗೆ ಈ ಕ್ರಮ ಕೈಗೊಳ್ಳಲಾಗಿದೆ’ ಎಂದು ತಿಳಿಸಿದರು.

ಒತ್ತಡಕ್ಕೆ ಇಲ್ಲ ಅವಕಾಶ: ‘ಚುನಾವಣೆ ಪ್ರಕ್ರಿಯೆ ಮುಗಿದ ನಂತರ ಮತಪತ್ರಗಳನ್ನು ಪರಿಶೀಲಿಸಿ ತಮಗೆ ಮತ ನೀಡದವರನ್ನು ಬೆದರಿಸುವ ಸಾಧ್ಯತೆ ಇರುತ್ತದೆ. ಹೀಗಾಗಿ ಮತಪತ್ರದಲ್ಲಿ ಕ್ರಮಸಂಖ್ಯೆ ಇರುವುದಿಲ್ಲ. ಆ ಮತಪತ್ರ ನೋಡಿದರೂ ಅದನ್ನು ಯಾರು ಚಲಾಯಿಸಿದ್ದಾರೆ ಎಂಬುದು ಗೊತ್ತಾಗುವುದಿಲ್ಲ. ಮತದಾನದ ಗೋಪ್ಯತೆ ಕಾಪಾಡಲು ಈ ನೀತಿ ಅನುಸರಿಸಲಾಗುತ್ತಿದೆ’ ಎಂದು ಅವರು ಮಾಹಿತಿ ನೀಡಿದರು.

ಈ ಎಲ್ಲ ಷರತ್ತುಗಳಿಗೆ ಚುನಾವಣಾಧಿಕಾರಿ ಡಾ.ಪಿ.ಎಸ್‌.ಶಂಕರ ಒಪ್ಪಿದ್ದು, ಇವುಗಳ ನಿರ್ವಹಣೆಯನ್ನು ಸಹಕಾರ ಸಂಘಗಳ ಉಪ ನಿಬಂಧಕರು ನೋಡಿಕೊಳ್ಳುತ್ತಿದ್ದಾರೆ ಎಂದು ಅವರು ತಿಳಿಸಿದರು.

ವೀಕ್ಷಕರು: ಕಲಬುರ್ಗಿ ಮತ್ತು ಯಾದಗಿರಿ ಜಿಲ್ಲೆಗಳಿಗೆ ಕಲಬುರ್ಗಿಯ ಸಣ್ಣ ಮತ್ತು ಮಧ್ಯಮ ನೀರಾವರಿ ಇಲಾಖೆ ವಿಶೇಷ ಭೂಸ್ವಾಧೀನ ಅಧಿಕಾರಿ
ಡಾ.ಬಿ.ಶರಣಪ್ಪ, ರಾಯಚೂರು ಜಿಲ್ಲೆಗೆ ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದ ರಾಯಚೂರು ಜಿಲ್ಲಾ ವ್ಯವಸ್ಥಾಪಕ ವೈ.ಬಿ. ಕಾಳೆ ಹಾಗೂ ಬೀದರ್‌ ಜಿಲ್ಲೆಗೆ ಕಾರಂಜಾ ನೀರಾವರಿ ಯೋಜನೆಯ ವಿಶೇಷ ಭೂಸ್ವಾಧೀನ ಅಧಿಕಾರಿ ದಿನೇಶ್‌ ಕುಮಾರ್‌ ಅವರನ್ನು ವೀಕ್ಷಕರನ್ನಾಗಿ ನೇಮಿಸಲಾಗಿದೆ.

ಸರ್ಕಾರಿ ಸಿಬ್ಬಂದಿ ಬಳಕೆ
‘ಮತದಾನದ ನಂತರ ಮತಪೆಟ್ಟಿಗೆಗಳನ್ನು ಸಂಸ್ಥೆಯ ಕಟ್ಟಡಗಳಲ್ಲಿ ಇಡಲಾಗುತ್ತಿತ್ತು. ಈಗ ಅದಕ್ಕೆ ಅವಕಾಶ ಇಲ್ಲ. ಮತಪೆಟ್ಟಿಗೆಗಳನ್ನು ತಾಲ್ಲೂಕು ಖಜಾನೆಯಲ್ಲಿ ಇಡಲಾಗುವುದು’ ಎಂದು ಹರ್ಷಗುಪ್ತ ಹೇಳಿದರು.

‘ಮತದಾನ ಮತ್ತು ಮತ ಎಣಿಕೆ ಪ್ರಕ್ರಿಯೆಗೆ ಹೈದರಾಬಾದ್‌ ಕರ್ನಾಟಕ ಶಿಕ್ಷಣ ಸಂಸ್ಥೆಯ ಸಿಬ್ಬಂದಿಯನ್ನು ಈ ಬಾರಿ ಬಳಸಿಕೊಳ್ಳುತ್ತಿಲ್ಲ. ಬೇರೆ ಸಿಬ್ಬಂದಿಯನ್ನು ನಿಯೋಜಿಸುತ್ತೇವೆ’ ಎಂದರು.

*
ಚುನಾವಣೆಯಲ್ಲಿ ಪಾರದರ್ಶಕತೆ ಮತ್ತು ಮತದಾನದ ಗೋಪ್ಯತೆ ಕಾಪಾಡಲು ಕಟ್ಟುನಿಟ್ಟಿನ ಕ್ರಮ ಕೈಗೊಂಡಿದ್ದೇವೆ. ಜಿಲ್ಲಾವಾರು ವೀಕ್ಷಕರು ಮತ್ತು ಬೂತ್‌ಗಳಿಗೆ ಮೈಕ್ರೊ ವೀಕ್ಷಕರನ್ನು ನೇಮಿಸಿದ್ದೇವೆ.
–ಹರ್ಷ ಗುಪ್ತ, ಪ್ರಾದೇಶಿಕ ಆಯುಕ್ತ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT