ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾನೂನುಬಾಹಿರ ವೈದ್ಯಕೀಯ ಪದ್ಧತಿ: ವಂಶವಾಹಿ ಬದಲು, ವಿಜ್ಞಾನಿಗೆ ಜೈಲು ಶಿಕ್ಷೆ

ಚೀನಾದ ಶೆಂಝೆನ್‌ ನ್ಯಾಯಾಲಯ ತೀರ್ಪು
Last Updated 30 ಡಿಸೆಂಬರ್ 2019, 19:45 IST
ಅಕ್ಷರ ಗಾತ್ರ

ಬೀಜಿಂಗ್‌: ಜಗತ್ತಿನಲ್ಲೇ ಮೊದಲ ಬಾರಿ ವಂಶವಾಹಿಯನ್ನೇ ಬದಲಾಯಿಸಿ ಅವಳಿ ಮಕ್ಕಳನ್ನು ಸೃಷ್ಟಿಸಲಾಗಿದೆ ಎಂದು ಘೋಷಿಸಿದ್ದ ವಿಜ್ಞಾನಿಗೆ ಚೀನಾದ ನ್ಯಾಯಾಲಯ ಮೂರು ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ.

ವಂಶವಾಹಿ ಸಂಕಲನದ (ಜೀನ್‌ ಎಡಿಟಿಂಗ್‌) ಈ ತಂತ್ರಜ್ಞಾನ ಕಾನೂನುಬಾಹಿರ ವೈದ್ಯಕೀಯ ಪದ್ಧತಿಯಾಗಿದೆ ಎಂದು ನ್ಯಾಯಾಲಯ ತೀರ್ಪು ನೀಡಿದೆ. ವಿಜ್ಞಾನಿಗೆ 30 ಲಕ್ಷ ಯುವಾನ್‌ (₹3.06ಕೋಟಿ) ದಂಡವನ್ನು ವಿಧಿಸಲಾಗಿದೆ.

ಹೀ ಜಿಯಾಂಕಿ ಶಿಕ್ಷೆಗೊಳಗಾದ ವಿಜ್ಞಾನಿ. ವಂಶವಾಹಿ ಅಂಶಗಳನ್ನು ಬದಲಾಯಿಸುವ ತಂತ್ರಜ್ಞಾನ ಅಳವಡಿಸಿಕೊಂಡಿದ್ದ ಮಹಿಳೆಗೆ ಅವಳಿ ಹೆಣ್ಣು ಮಕ್ಕಳು ಜನಿಸಿವೆ. ಇದು ತಮ್ಮ ಸಂಶೋಧನೆಯ ಫಲ ಎಂದು ಹೀ ಕಳೆದ ವರ್ಷ ಘೋಷಿಸಿದ್ದರು. ಎಚ್‌ಐವಿ ಸೋಂಕಿಗೆ ತುತ್ತಾಗದಂತೆ ವಂಶವಾಹಿಯನ್ನೇ ಮಾರ್ಪಾಡು ಮಾಡಲಾಗಿದೆ ಎಂದು ತಿಳಿಸಿದ್ದರು. ಇದರಿಂದ, ವೈಜ್ಞಾನಿಕ ಸಮುದಾಯ ಅಚ್ಚರಿ ವ್ಯಕ್ತಪಡಿಸಿತ್ತು.

ಹೀ ಜತೆಗಿದ್ದ ಇಬ್ಬರು ಸಂಶೋಧಕರು ಸಹ ಶಿಕ್ಷೆಗೆ ಒಳಗಾಗಿದ್ದಾರೆ.

ಝಾಂಗ್‌ ರೆನ್ಲಿ ಎನ್ನುವವರಿಗೆ ಎರಡು ವರ್ಷ ಜೈಲು ಶಿಕ್ಷೆ ಮತ್ತು 10 ಲಕ್ಷ ಯುವಾನ್‌ (₹1ಕೋಟಿ)ಹಾಗೂ ಇನ್ನೊಬ್ಬ ಸಂಶೋಧಕ ಖ್ವಿನ್‌ ಜಿಂಝಾಹೌಗೆ 18 ತಿಂಗಳ ಜೈಲು ಶಿಕ್ಷೆ ಮತ್ತು 5 ಲಕ್ಷ ಯುವಾನ್‌ (₹51 ಲಕ್ಷ) ದಂಡ ವಿಧಿಸಲಾಗಿದೆ.

‘ಈ ಮೂವರು ವೈದ್ಯರಾಗಿ ಕಾರ್ಯನಿರ್ವಹಿಸಲು ಅಗತ್ಯವಿರುವ ಅರ್ಹತೆಯನ್ನು ಹೊಂದಿಲ್ಲ. ಜತೆಗೆ, ಉದ್ದೇಶಪೂರ್ವಕವಾಗಿ ಚೀನಾದ ನಿಯಮಗಳು ಮತ್ತು ನೈತಿಕತೆಯನ್ನು ಉಲ್ಲಂಘಿಸಿದ್ದಾರೆ’ ಎಂದು ಶೆಂಝೆನ್‌ ನ್ಯಾಯಾಲಯ ಹೇಳಿದೆ.

‘ವೈಯಕ್ತಿಕವಾಗಿ ಹೆಸರು ಗಳಿಸಲು ಮತ್ತು ಲಾಭ ಪಡೆಯುವ ಉದ್ದೇಶದಿಂದ ಇವರು ಈ ರೀತಿಯ ಕೃತ್ಯ ಮಾಡಿದ್ದಾರೆ ಮತ್ತು ವೈದ್ಯಕೀಯ ಕ್ಷೇತ್ರಕ್ಕೂ ಕಳಂಕ ತರುವ ಪ್ರಯತ್ನ ಮಾಡಿದ್ದಾರೆ’ ಎಂದು ತೀರ್ಪಿನಲ್ಲಿ ಉಲ್ಲೇಖಿಸಲಾಗಿದೆ.

ಈ ಮೂವರು ಜೀನ್‌ ಎಡಿಟಿಂಗ್‌ ಪ್ರಯೋಗಕ್ಕಾಗಿ ದಂಪತಿಯನ್ನು ನೇಮಿಸಿಕೊಂಡಿದ್ದರು. ಇವರಲ್ಲಿ ಪತಿ ಎಚ್‌ಐವಿ ಸೋಂಕಿಗೆ ಒಳಗಾಗಿದ್ದರು. ರಹಸ್ಯವಾಗಿ ಈ ಪ್ರಯೋಗ ಕೈಗೊಳ್ಳಲಾಗಿತ್ತು.

ಎಚ್‌ಐವಿ ಸೋಂಕು ತಗುಲದಂತೆ ವಂಶವಾಹಿಯ ಕೆಲವು ಅಂಶಗಳನ್ನು ‘ಸಿಆರ್‌ಐಎಸ್‌ಪಿಆರ್‌’ ತಾಂತ್ರಿಕತೆಯಿಂದ ತೆಗೆದುಹಾಕಲಾಯಿತು. ಜತೆಗೆ, ಅವಳಿ ಮಕ್ಕಳ ಡಿಎನ್‌ಎ ಮಾರ್ಪಾಡು ಮಾಡಲಾಯಿತು. ಇದರಿಂದ, ಎಚ್‌ಐವಿ ನಿರೋಧಕ ಹೆಣ್ಣುಮಕ್ಕಳು ಜನಿಸಿವೆ ಎಂದು ಹೀ ಜಿಯಾಂಕಿ ಕಳೆದ ವರ್ಷ ನವೆಂಬರ್‌ನಲ್ಲಿ ಘೋಷಿಸಿದ್ದರು.

ತೀವ್ರ ವಿರೋಧ ವ್ಯಕ್ತವಾಗಿದ್ದರಿಂದ, ಚೀನಾ ಸರ್ಕಾರ ತನಿಖೆಗೆ ಆದೇಶಿಸಿ ಸಂಶೋಧನಾ ಕಾರ್ಯಕ್ಕೆ ತಡೆ ನೀಡಿತು. ಚೀನಾದ ವಿಶ್ವವಿದ್ಯಾಲಯದಿಂದಲೂ ಹೀ ಜಿಯಾಂಕಿ ಅವರನ್ನು ಕೆಲಸದಿಂದ ತೆಗೆದು ಹಾಕಲಾಗಿತ್ತು.

ಏನಿದು ಜೀನ್‌ ಎಡಿಟಿಂಗ್‌?
ವಂಶವಾಹಿಯನ್ನು ಬದಲಾಯಿಸುವ ತಾಂತ್ರಿಕತೆ ಇದಾಗಿದೆ. ಇಲ್ಲಿ ತಮಗೆ ಬೇಕಾದಂತೆ ವಂಶವಾಹಿನಿ ಸೇರಿಸಬಹುದಾಗಿದೆ, ತೆಗೆಯಬಹುದಾಗಿದೆ ಮತ್ತು ಮಾರ್ಪಾಡು ಮಾಡಬಹುದಾಗಿದೆ ಎಂದು ವಿಜ್ಞಾನಿಗಳು ತಿಳಿಸಿದ್ದಾರೆ.

ಜಗತ್ತಿನೆಲ್ಲೆಡೆ ಈ ಪ್ರಯೋಗಕ್ಕೆ ಪರ ವಿರೋಧಗಳು ವ್ಯಕ್ತವಾಗಿವೆ. ನಿಸರ್ಗಕ್ಕೆ ವಿರುದ್ಧವಾದ ಪ್ರಕ್ರಿಯೆ ಎನ್ನುವ ಅಭಿಪ್ರಾಯವೂ ವ್ಯಕ್ತವಾಗಿದೆ.

ಬಹುತೇಕ ದೇಶಗಳಲ್ಲಿ ಜೀನ್‌ ಎಡಿಟಿಂಗ್‌ ನಿಷೇಧಿಸಲಾಗಿದೆ. ಚೀನಾದ ಆರೋಗ್ಯ ಸಚಿವಾಲಯ 2003ರಲ್ಲಿ ಮಾನವ ಅಂಡಾಶಯದ ಜೀನ್‌ ಎಡಿಟಿಂಗ್‌ ನಿಷೇಧಿಸಿತು. 2015ರಲ್ಲಿ ವಿಶ್ವಸಂಸ್ಥೆಯ ನೀತಿ ಸಂಹಿತೆ ಸಮಿತಿ ಸಹ ಮಾನವ ಅಂಡಾಶಯದ ಜೀನ್‌ ಎಡಿಟಿಂಗ್‌ ಸ್ಥಗಿತಗೊಳಿಸುವಂತೆ ಸೂಚಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT