ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊರೊನಾ ವೈರಸ್‌ ಸೋಂಕು: ಸಂಕಷ್ಟದಲ್ಲಿ ಭಾರತದ 250 ವಿದ್ಯಾರ್ಥಿಗಳು

ಚೀನಾದಲ್ಲಿ ಸಾವಿಗೀಡಾದವರ ಸಂಖ್ಯೆ 41ಕ್ಕೆ: 9 ರಾಷ್ಟ್ರಗಳಿಗೆ ವ್ಯಾಪಿಸಿದ ಸೋಂಕು
Last Updated 25 ಜನವರಿ 2020, 19:41 IST
ಅಕ್ಷರ ಗಾತ್ರ

ಬೀಜಿಂಗ್‌: ಕೊರೊನಾ ವೈರಸ್‌ ಸೋಂಕು ತಗುಲಿದ ಚೀನಾದ ಪ್ರಮುಖ ನಗರ ವುಹಾನ್‌ನಲ್ಲಿ ಭಾರತದ 250 ವಿದ್ಯಾರ್ಥಿಗಳಿಗೆ ಸಂಕಷ್ಟಕ್ಕೆ ಸಿಲುಕಿದ್ದಾರೆ. ಈ ವಿದ್ಯಾರ್ಥಿಗಳು ಸ್ವದೇಶಕ್ಕೆ ಮರಳಲು ಅವಕಾಶ ಕಲ್ಪಿಸುವಂತೆ ಚೀನಾಗೆ ಭಾರತ ಮನವಿ ಮಾಡಿದೆ.

ವುಹಾನ್‌, ಹುಬೇ ಪ್ರಾಂತ್ಯದ ವಿಶ್ವವಿದ್ಯಾಲಯಗಳಲ್ಲಿ 700ಕ್ಕೂ ಅಧಿಕ ಭಾರತೀಯ ವಿದ್ಯಾರ್ಥಿಗಳಿದ್ದರು.ಚೀನಾದ ನೂತನ ವರ್ಷದ ರಜೆ ಹಿನ್ನೆಲೆಯಲ್ಲಿ ಇವರಲ್ಲಿನ ಬಹುತೇಕ ವಿದ್ಯಾರ್ಥಿಗಳು ಸ್ವದೇಶಕ್ಕೆ ಈಗಾಗಲೇ ಮರಳಿದ್ದಾರೆ. ಆದರೆ, 250ರಿಂದ 300 ವಿದ್ಯಾರ್ಥಿಗಳು ಇನ್ನೂ ವುಹಾನ್‌ ನಗರದಲ್ಲಿ ಉಳಿದಿದ್ದಾರೆ. ಆದರೆ, ಅಧಿಕಾರಿಗಳು ವುಹಾನ್‌ ನಗರದಿಂದ ತೆರಳಲು ಯಾರಿಗೂ ಅವಕಾಶ ನೀಡುತ್ತಿಲ್ಲ. ಹೀಗಾಗಿ, ಈ ವಿದ್ಯಾರ್ಥಿಗಳು ಸ್ವದೇಶಕ್ಕೆ ಮರಳಲು ಅವಕಾಶ ನೀಡುವಂತೆ ಭಾರತ ಮನವಿ ಮಾಡಿದೆ.

ಈ ವಿದ್ಯಾರ್ಥಿಗಳ ಆರೋಗ್ಯ ಸ್ಥಿತಿಗತಿಯನ್ನು ಗಮನಿಸಲು ಭಾರತೀಯ ರಾಯಭಾರ ಕಚೇರಿ ‘ಹಾಟ್‌ಲೈನ್‌’ ಸಂಪರ್ಕದಲ್ಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಭಾರತದ ಕೋರಿಕೆಯ ಬಗ್ಗೆ ಪರಿಶೀಲನೆ ನಡೆಸಲಾಗುತ್ತಿದೆ ಎಂದು ಚೀನಾದ ವಿದೇಶಾಂಗ ಇಲಾಖೆ ತಿಳಿಸಿದೆ.

1300 ಮಂದಿಗೆ ಸೋಂಕು: ಚೀನಾದಲ್ಲಿ ಮಾರಕ ಕೊರೊನಾ ವೈರಸ್‌ಗೆ ಬಲಿಯಾದವರ ಸಂಖ್ಯೆ 41ಕ್ಕೆ ಏರಿದೆ. 1300 ಜನರು ಸೋಂಕು ಪೀಡಿತರಾಗಿರುವುದು ದೃಢಪಟ್ಟಿದೆ. ಈ ಪೈಕಿ 237 ಜನರ ಸ್ಥಿತಿ ಗಂಭೀರವಾಗಿದೆ.

ಇನ್ನಷ್ಟು ನಗರಗಳಿಗೆ ಸೋಂಕು ವ್ಯಾಪಿಸಿದ್ದು, ಮುಂಜಾಗ್ರತೆ ಕ್ರಮಗಳಿಗೆ ಒತ್ತು ನೀಡಲಾಗಿದೆ.ವೈರಸ್‌ ಪತ್ತೆ ನಂತರದ ಬೆಳವಣಿಗೆಗಳನ್ನು ಹಾಂಗ್‌ಕಾಂಗ್‌ ‘ತುರ್ತು ಪರಿಸ್ಥಿತಿ‘ ಎಂದು ಘೋಷಿಸಿದೆ.

ಕೊರೊನಾ ವೈರಸ್‌ ಜಾಗತಿಕವಾಗಿ ವಿವಿಧ ರಾಷ್ಟ್ರಗಳಿಗೂ ವ್ಯಾಪಿಸುತ್ತಿದ್ದು, ಭೀತಿಯೂ ಹೆಚ್ಚಿದೆ. ಆಸ್ಟ್ರೇಲಿಯಾ, ಫ್ರಾನ್ಸ್ ಮತ್ತು ಅಮೆರಿಕದಲ್ಲಿ ಇನ್ನಷ್ಟು ಪ್ರಕರಣಗಳು ದೃಢಪಟ್ಟಿವೆ.

ಹಾಂಗ್‌ಕಾಂಗ್‌, ದಕ್ಷಿಣ ಕೊರಿಯ, ನೇಪಾಳ, ಜಪಾನ್‌. ಸಿಂಗಪುರ, ಥೈಲ್ಯಾಂಡ್, ವಿಯೆಟ್ನಾಂಗಳಿಗೂ ಸೋಂಕು ವ್ಯಾಪಿಸಿದೆ. ಇನ್ನಷ್ಟು ವ್ಯಾಪಿಸುವುದರ ತಡೆಗೆ ತುರ್ತು ವೈದ್ಯಕೀಯ ಕ್ರಮಗಳನ್ನು ಕೈಗೊಳ್ಳಲಾಗಿದೆ.

ವೈದ್ಯ ಸೇರಿ 41 ಸಾವು: ಚೀನಾದ ಹುಬೇ ಪ್ರಾಂತ್ಯದ ನಗರಗಳಲ್ಲಿ ಸೋಂಕಿನ ಪರಿಣಾಮ ತೀವ್ರವಾಗಿದೆ. 41 ಪ್ರಕರಣಗಳಲ್ಲಿ 39 ಸಾವು ಈ ಭಾಗದಲ್ಲಿಯೇ ಆಗಿದೆ.ಕ್ಸಿಹುಹಾ ಆಸ್ಪತ್ರೆಯಲ್ಲಿ ಸರ್ಜನ್‌ ಆಗಿದ್ದ ಲಿಯಾಂಗ್‌ ವುಡೊಂಡ್ ಮೃತರಲ್ಲಿ ಸೇರಿದ್ದು, ಇವರು ಕಳೆದವಾರ ಸೋಂಕು ಪೀಡಿತರಾಗಿದ್ದರು.

ಸೋಂಕು ಪೀಡಿತರನ್ನು ಗುರುತಿಸಿ ನಿಯಂತ್ರಣ ಕ್ರಮ ಕೈಗೊಳ್ಳಲು ಚೀನಾದಾದ್ಯಂತ ರೈಲು, ವಿಮಾನ ಮತ್ತು ಬಸ್‌ಗಳಲ್ಲಿ ತಪಾಸಣೆಯನ್ನು ಇನ್ನಷ್ಟು ಚುರುಕುಗೊಳಿಸಲಾಗಿದೆ.

ವಿಮಾನ, ರೈಲ್ವೆ, ಬಸ್‌ ನಿಲ್ದಾಣಗಳಲ್ಲಿ ಕಡ್ಡಾಯವಾಗಿ ನಿಯಂತ್ರಣ ಕ್ರಮಗಳನ್ನು ಇಲಾಖೆಗಳು ವಹಿಸಬೇಕು. ಸಿಬ್ಬಂದಿ ಕಡ್ಡಾಯವಾಗಿ ಮುಖಗವಸು ಧರಿಸಬೇಕು ಎಂದು ಸರ್ಕಾರ ಸೂಚನೆ ನೀಡಿದೆ.

ನಗರಗಳ ನಡುವೆ ಜನ ಮತ್ತು ವಾಹನಗಳ ಸಂಚಾರದ ಮೇಲೆ ವಿಧಿಸಲಾಗಿರುವ ನಿರ್ಬಂಧ 56 ನಗರಗಳಲ್ಲಿ ಮುಂದುವರಿದಿದೆ. ಜತೆಗೆ, ಗುಂಪು ಪ್ರವಾಸಗಳನ್ನು ಸ್ಥಗಿತಗೊಳಿಸಲಾಗಿದೆ.

ಆಸ್ಟ್ರೇಲಿಯಾ, ಫ್ರಾನ್ಸ್‌, ಅಮೆರಿಕದಲ್ಲಿ ಪತ್ತೆ: ಚೀನಾದ ವುಹಾನ್‌ ನಗರದಿಂದ ಈಚೆಗೆ ಬಂದಿದ್ದ ವ್ಯಕ್ತಿ ಸೇರಿ ನಾಲ್ವರಿಗೆ ಸೋಂಕು ತಗುಲಿರುವುದನ್ನು ಆಸ್ಟ್ರೇಲಿಯಾ ದೃಢಪಡಿಸಿದೆ.

ಫ್ರಾನ್ಸ್‌ನಲ್ಲಿ ಮೂವರಿಗೆ ಸೋಂಕು ತಗುಲಿರುವುದು ದೃಢಪಟ್ಟಿದೆ ಎಂದು ಆರೋಗ್ಯ ಸಚಿವ ಆ್ಯಗ್ನೆಸ್ ಬುಜಿನ್‌ ಅವರು ತಿಳಿಸಿದ್ದಾರೆ. ಮೂವರು ಈಚೆಗೆ ಚೀನಾಗೆ ಭೇಟಿ ನೀಡಿದ್ದರು.

ಅಮೆರಿಕದಲ್ಲಿ ಮತ್ತೊಂದು ಪ್ರಕರಣ ದೃಢಪಟ್ಟಿದ್ದು, ಇದುವರೆಗೂ ಇಬ್ಬರು ಸೋಂಕು ಪೀಡಿತರಾಗಿದ್ದಾರೆ.

ಆತಂಕ: ತಪಾಸಣೆ ಚುರುಕು

ನವದೆಹಲಿ/ಮುಂಬೈ: ಕೊರೊನಾ ಸೋಂಕು ಭಾರತದಲ್ಲೂ ಆತಂಕ ಹೆಚ್ಚಿಸಿದೆ ಮುಂಬೈನಲ್ಲಿ ವೈರಸ್‌ ಸೋಂಕಿನ ಶಂಕೆಯ ಮೇಲೆ ಮೂವರಿಗೆ ಚಿಕಿತ್ಸೆ ಒದಗಿಸಿದ್ದು, ರಕ್ತದ ಮಾದರಿ ಪರೀಕ್ಷೆಯ ಬಳಿಕ ಇಬ್ಬರಿಗೆ ಸೋಂಕು ತಗುಲಿಲ್ಲ ಎಂಬುದು ದೃಢವಾಗಿಲ್ಲ.

ಇನ್ನೊಬ್ಬರ ರಕ್ತದ ಮಾದರಿಯನ್ನು ಪುಣೆಯ ರೋಗಸೂಕ್ಷ್ಮಾಣುಗಳ ರಾಷ್ಟ್ರೀಯ ಸಂಸ್ಥೆಗೆ (ಎನ್‌ಐವಿ) ಕಳುಹಿಸಿದ್ದು, ವರದಿ ನಿರೀಕ್ಷಿಸಲಾಗಿದೆ. ಮೂವರಲ್ಲಿ ಇಬ್ಬರು ಚೀನಾಗೆ ಭೇಟಿ ನೀಡಿದ್ದರು. ಮತ್ತೊಬ್ಬರು ಹಾಂಗ್‌ಕಾಂಗ್‌ನಿಂದ ಮರಳಿದ್ದರು. ಅಧಿಕಾರಿಗಳ ಪ್ರಕಾರ, ಮುಂಬೈನ ವಿಮಾನನಿಲ್ದಾಣದಲ್ಲಿಯೇ 2,056 ಪ್ರಯಾಣಿಕರು ಥರ್ಮಲ್‌ ಸ್ಕ್ಯಾನರ್ ತಪಾಸಣೆಗೆ ಒಳಪಟ್ಟಿದ್ದಾರೆ.

ಪ್ರಧಾನಿ ಕಚೇರಿ ಪರಾಮರ್ಶೆ: ಕೊರೊನಾ ವೈರಸ್‌ ತಡೆಗಟ್ಟುವ ಕುರಿತು ಕೈಗೊಂಡಿರುವ ಸಿದ್ಧತೆಗಳ ಬಗ್ಗೆ ಪ್ರಧಾನಿ ಕಚೇರಿಯ ಪ್ರಧಾನ ಕಾರ್ಯದರ್ಶಿ ಪಿ.ಕೆ. ಮಿಶ್ರಾ ಅವರು ಶನಿವಾರ ಪರಾಮರ್ಶೆ ನಡೆಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT